Saturday 19 September 2015

ಧಾವಂತ

ಧಾವಂತ

"ವಿನ್ಯಾಸವಿಲ್ಲ.....ಬರೀ ಧಾವಂತ.....ಕ್ಷಣದಲ್ಲಿ ಬದುಕು ಕಟ್ಟಿಕೊಳ್ಳಬೇಕು......" ಪ್ರಜ್ಞಾನಂದರಾಯರು ಹೇಳುತ್ತಲೇ ಒಳಗೆ ಬಂದರು."ನಗರದ ಬದುಕು....ನಾಗರೀಕರ ಬದುಕು....."  
    "ಶುರುವಾಯ್ತಾ ಅಪ್ಪಾ ನಿಂದು...."ಮಗಳು ಕ್ಷಿಪ್ರ ಗುಡುಗಿದಳು.ಅಪ್ಪನ ಪ್ರಜ್ಞೆಯ ಮಾತುಗಳು ಆಕೆಗೆ ಅಜೀರ್ಣ.ಅಲ್ಲದೆ ಪ್ರಜ್ಞಾನಂದರಾಯರು ಯಾವಾಗಲೂ ಇಂತಹ ಏನಾದರೂ ವಿಷಯವನ್ನು ಹೇಳುತ್ತಲೇ ಇರುತ್ತಾರೆ.ಯಾಕೋ ರಾಯರು ಮುಖ ಸಣ್ಣಗೆ ಮಾಡಿದರು.ಮಗಳಿಗೆ ಸ್ವಲ್ಪ ಇರುಸುಮುರುಸಾಗಿ "ಯಾಕಪ್ಪ....ಏನಾಯ್ತು??"
"ಏನಿಲ್ಲ ಪುಟ್ಟಾ....ಯಾಕೋ ಹೀಗೆ ಅನ್ನಿಸ್ತು...ನಿನ್ನ ಬದುಕು ಹಾಗೆ ಅಲ್ವ??"
"ಹೌದು ಅಪ್ಪಾ...ಇಲ್ಲಿ ಎಲ್ಲರ ಬದುಕು ಹಾಗೆ....ಇಲ್ಲಿ ಎಲ್ಲಾ ಫಾಸ್ಟ್ ಆಗಿ ಆಗಬೇಕು....ನಾವು ಹೊಂದಿಕೊಳ್ಳಲೇ ಬೇಕು..."
    "ಮಿತಿಯಿಲ್ಲದ ವೇಗ....ಅದೇ ಸಮಸ್ಯೆ...."ರಾಯರ ಮುಖದಲ್ಲಿ ನಗು.
"ಫಾಸ್ಟ್ ಪುಡ್ ಕಾಲ ಅಪ್ಪಾ ಇದು....ಇಲ್ಲಿ ನಿನಗೆ ಏನು ಬೇಕೋ ಅದು ಕ್ಷಣದಲ್ಲಿ ಸಿಗುತ್ತೆ..." ಕ್ಷಿಪ್ರ ಉತ್ತರಿಸಿದಳು.
"ಸುಖಕ್ಕೆ ಬರವಿಲ್ಲ.....ಆದರೆ ಸೌಖ್ಯಕ್ಕೆ...." ಮತ್ತೆ ನಕ್ಕರು ರಾಯರು.
    ಅಪ್ಪನ ಮಾತುಗಳು ಪುರಾಣ ಎನಿಸುತ್ತಿದ್ದ ಕ್ಷಿಪ್ರಾಳಿಗೆ ಅದೇಕೋ ಅಪ್ಪನ ಮಾತುಗಳು ಸರಿಯೆನಿಸತೊಡಗಿತು.ಹಾಗೆಯೇ ಅಪ್ಪನ ಮಾತು ಕೇಳುತ್ತಾ ಕುಳಿತುಬಿಟ್ಟಳು.
"ಬದುಕಿನಲ್ಲಿ ಯಾಂತ್ರಿಕತೆ ಬೇಕು...ಆದರೆ ಬದುಕೇ ಯಂತ್ರಿಕವಾದರೆ??ಅರ್ಥವಿರೋಲ್ಲ ಅಲ್ವ....."
ಕ್ಷಿಪ್ರಳಿಗೆ ಉತ್ತರ ತೋಚಲಿಲ್ಲ.ಮನಸ್ಸಿನಲ್ಲಿ ಏನೋ ತಳಮಳ.ತಿಂಗಳಿಗೆ ಆರಂಕಿಯ ಸಂಬಳ,ವಾಸಕ್ಕೆ ಒಂದು ಪ್ಲಾಟ್,ಆದರೂ ಬದುಕು ತುಂಬ ಸಣ್ಣದು ಎಂಬ ವಿಚಾರ ಅವಳನ್ನು ಸದಾ ಕಾಡುತ್ತಿತ್ತು.
"ಆದರೆ ಈಗಿನ ಬದುಕೇ ಹೀಗೆ ಅಪ್ಪ....ಯಾವಾಗಲೂ ಚುರುಕಾಗಿ ಇರಬೇಕು....ಸ್ವಲ್ಪ ನಿಧಾನವಾದರೂ ಹಿಂದೆ ಉಳಿದು ಬಿಡುತ್ತೇವೆ...." ಮಗಳ ಸಮರ್ಥನೆ.
"ಎಲ್ಲರಿಗೂ ತಾವೇ ಶ್ರೇಷ್ಠ ಅನ್ನೋ ಭಾವನೆ.....ಬೇರೆಯವರ ಭಾವನೆಗಳನ್ನು ಗೌರವಿಸಬೇಕು ಅನ್ನೋ ಕನಿಷ್ಠ ಸೌಜನ್ಯವು ಇಲ್ಲದವರು....ನಗರದ ಬದುಕು ನಾಗರೀಕರ ಬದುಕು" ಮತ್ತೆ ನಕ್ಕರು ರಾಯರು. "ನಮ್ಮಲ್ಲಿ ಇರುವ ಜ್ಞಾನ ಬೇರೆಯವರಲ್ಲಿ ಅಜ್ಞಾನ ಇದೆ ಅನ್ನೋದಕ್ಕೆ ಉಪಯೋಗವಾಗಬಾರದು....ಬದಲಿಗೆ ಅವರಲ್ಲಿ ಇರುವ ಅಜ್ಞಾನದ ಪೊರೆ ಕಳಚುವುದಕ್ಕೆ ಉಪಯೋಗವಾಗಬೇಕು...."
ಅಪ್ಪನ ಈ ಮತುಗಳು ಮಗಳಿಗೆ ತಪ್ಪು ಎನ್ನಲಾಗಲಿಲ್ಲ."ಆದರೆ....." ಸಮರ್ಥಿಸಿಕೊಳ್ಳಬೇಕು ಎಂದೆನಿಸಿದರು ಮಾತುಗಳು ಬರಲಿಲ್ಲ.
"ಒಂದೇ ಅಪಾರ್ಟ್‍ಮೆಂಟಿನಲ್ಲಿ ಇದ್ದರೂ ಪಕ್ಕದಲ್ಲಿ ಯಾರು ಇದ್ದಾರೆ ಅಂತಾನೆ ಗೊತ್ತಿರಲ್ಲ.....ಜಾಗತೀಕರಣದ ಮಾತು ಆಡುತ್ತೇವೆ.....ಆದರೆ ಜೀವನ ಎಷ್ಟು ಸಂಕುಚಿತವಾಗಿದೆ ಅಲ್ವ.....ಮನಸ್ಸಿನ ಭಾವನೆಗಳನ್ನು ಭಿತ್ತರಿಸುವುದಕ್ಕೆ ನೆರವಾಗುವ ಸಾಮಾಜಿಕ ಜಾಲತಾಣಗಳು,ಅದರ ಮೂಲಕವೇ ಆ ಭಾವನೆಗಳಿಗೆ ಪ್ರತಿಕ್ರಿಯೆಯೂ ಬಂದುಬಿಡುತ್ತದೆ....ಎಂತಹ ಸೋಜಿಗ ಅಲ್ಲವಾ..??" ಪ್ರಜ್ಞಾನಂದರಾಯರ ಪ್ರಜ್ಞೆಯ ಮಾತುಗಳು ಧಾವಂತದ ಬದುಕಿನಲ್ಲಿ ವಿಲೀನಳಾಗಿದ್ದ ಕ್ಷಿಪ್ರಳಿಗೆ ಯೋಚಿಸುವಂತೆ ಮಾಡಿತ್ತು.
"ಹೌದು ಅಪ್ಪಾ ಇಲ್ಲಿ ಎಲ್ಲಾ ಹೀಗೆ.....ಯಾರಿಗೂ ಸಮಯ ಇಲ್ಲ ಇದ್ದರೂ ತಾಳ್ಮೆ ಇಲ್ಲ..ತಂತ್ರಜ್ಞಾನ ಇಷ್ಟು ಮುಂದುವರಿದಿದೆ...ಹಾಗಾಗಿ ಆ ತಂತ್ರಜ್ಞಾನದ ಉಪಯೋಗ ಆಗುತ್ತಾ ಇದೆ ಅಷ್ಟೇ...." ಮಗಳ ಸಮರ್ಥನೆ.
"ಬರೀ ನಾಗರೀಕತೆ...ವಿಕಾಸ ಇಲ್ಲ.....ನಮ್ಮ ಹೊರಗೆ ಆಗುವುದು ನಾಗರೀಕತೆ....ಅದೇ ನಮ್ಮ ಒಳಗೆ ಆಗುವುದು ವಿಕಾಸ....ಹೊರಗೆ ಎಷ್ಟೇ ಝಗಮಗಿಸುವ ಬೆಳಕು ಇದ್ದರೂ ಮನಸ್ಸಲ್ಲಿ ಕತ್ತಲೆ ಇದ್ದರೆ ಅದು ಹಾಗೆ ಉಳಿದುಬಿಡುತ್ತೆ....ಅದೇ ಮನಸ್ಸು ಬೆಳಕಿನಲ್ಲಿ ಇದ್ದರೆ ಹೊರಗೆ ಕತ್ತಲಿದ್ದರೂ ಅಳಿಸುವ ಪ್ರಯತ್ನ ಮಾಡಬಹುದು....." ಉತ್ತರ ಕೊಡಲು ಕಷ್ಟವಾಗುವ ಪ್ರಶ್ನೆಗಳಿಗೆ ಕ್ಷಿಪ್ರಾಳ ಬಳಿ ಉತ್ತರವಿಲ್ಲ.
"ಆದರೆ ಇದಕ್ಕೆಲ್ಲಾ ಏನು ಪರಿಹಾರ ಅಪ್ಪ...ಬದಲಾವಣೆ ಆಗುವುದಾದರೂ ಹೇಗೆ??" ಏನೂ ತೋಚದ ಮಗಳು ಅಪ್ಪನ ಮಾತುಗಳು ಸರಿಯೆನಿಸಿ ಉತ್ತರದ ಮೊರೆ ಹೋದಳು.
"ಗೊತ್ತಿಲ್ಲ ಪುಟ್ಟಾ....ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ.....ಜಗಳವಾದರೆ ಅದನ್ನು ಚಿತ್ರೀಕರಿಸಿ ನಾಲ್ಕು ಜನರಿಗೆ ತೋರಿಸಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮನೋಭಾವ ಹೋಗಬೇಕು....ವಿಕೃತಿ ಹೋಗಬೇಕು.....ವಿಕಾಸವಾಗಬೇಕು.....ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು....ಯಂತ್ರಗಳನ್ನು ತಯಾರು ಮಾಡುವ ಭರದಲ್ಲಿ ಮನುಷ್ಯನೇ ಯಂತ್ರವಾದರೆ ಕಷ್ಟ....ಬಹಳ ಕಷ್ಟ.......ನಗರದ ಬದುಕು...ನಾಗರೀಕರ ಬದುಕು" ಎಂದು ನಗುತ್ತಾ ರಾಯರು ನಿಟ್ಟುಸಿರುಬಿಟ್ಟರು.
ಆದರೆ ಕ್ಷಿಪ್ರಾಳ ತಳಮಳ ಹಾಗೆಯೇ ಉಳಿದುಬಿಟ್ಟಿತು.

Tuesday 8 September 2015

ಮಹಾ-ಮಳೆ

ಮಹಾ-ಮಳೆ

ಮಳೆ-ಮಹಾನಗರಗಳಲ್ಲಿ ವಾಸಿಸುವ ಬಹುತೇಕರಿಗೆ ಭಯ ಹುಟ್ಟಿಸುವ ಪದ.ಮಳೆ ಬಂತೆಂದರೆ ನೋಡಿದಲ್ಲೆಲ್ಲಾ ನೀರು.ನೀರು ಸಂಗ್ರಹವಾಗಲು ರಸ್ತೆಯ ಹೊಂಡಗಳು ಸಹಕಾರಿ.ತಗ್ಗು ಪ್ರದೇಶದ ಮನೆಗಳಿಗೆ ನೀರು ಕರೆಯದೆ ಬಂದ ಅತಿಥಿಗಳಂತೆ.ಕತ್ತಲಾದ ಮೇಲೆ ಮಳೆ ಬಂದರಂತೂ ರಾತ್ರಿ ಇಡೀ ನೀರು ಹೊರಗೆ ಹಾಕುವುದರಲ್ಲಿಯೇ ಕಳೆದುಹೋಗುತ್ತದೆ.ಕಾಂಕ್ರೀಟ್ ಕಾಡಿನಲ್ಲಿ ನೀರು ಹೋಗಲು ಜಾಗವಾದರೂ ಹೇಗೆ ಬರಬೇಕು?!.
ಮಹಾನಗರಗಳಲ್ಲಿ ಮಳೆಯ ಜೊತೆಗೆ ಬಳುವಳಿಯಾಗಿ ಸಿಗುವುದು ಟ್ರಾಫಿಕ್ ಜಾಮ್.ಮಳೆಯಾದಾಗ ಒಂದು ಮೈಲಿ ಹೋಗಲು ಒಂದು ಗಂಟೆ ಬೇಕಾಗುವ ಹಲವಾರು ಉದಾಹರಣೆಗಳು ಸಿಗುತ್ತವೆ.ಟ್ರಾಫಿಕ್ ಜಾಮ್‍ನಿಂದ ಎಲ್ಲಾ ರೀತಿಯ ಜನರೂ ಪೇಚಿಗೆ ಸಿಲುಕುತ್ತಾರೆ.ಆದರೆ ತುಂಬಾ ಒದ್ದಾಟ ನೆಡೆಸುವವರು ಕಾರಿನಲ್ಲಿ ಹೋಗುವವರು.ಟ್ರಾಫಿಕ್ ಜಾಮ್‍ಗಳು ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿ.ಆಮೆಗತಿಯಲ್ಲಿ ಸಾಗುವ ವಾಹನಗಳ ಸಾಲು ಮಳೆ ಬಂದಾಗ ಬಸವನ ಹುಳುವಿನಂತೆ ಸಾಗುತ್ತವೆ.
     ಬಸ್ಸಿನಲ್ಲಿ ಚಲಿಸುವ ಜನರಿಗೆ ಮಳೆ ಬಂದರೆ ಬೆಚ್ಚಗಿನ ಅನುಭವ.ತುಂಬಿದ ಬಸ್ಸುಗಳು ಬೇರೆ ದಿನಗಳಲ್ಲಿ ಕಿರಿಕಿರಿ ಉಂಟುಮಾಡಿದರೂ ಮಳೆ ಬಂದಾಗ ಬೆಚ್ಚಗಿನ ಅನುಭವ ನೀಡುವುದಂತೂ ಸತ್ಯ.ಎಂದಿನಂತೆ ಕೂರಲು ಸೀಟ್ ಸಿಕ್ಕಿದವರು ಆರಾಮಾಗಿ ಮಳೆಯ ಮಜಾವನ್ನು ಅನುಭವಿಸಿದರೆ,ನಿಂತ ಕೆಲವರು ಹಸಿದ ತೋಳಗಳು ಉಳಿದ ಮಾಂಸಕ್ಕೆ ಕಾಯುವಂತೆ,ಯಾರದರೂ ಸೀಟಿನಲ್ಲಿ ಕುಳಿತವರು ಏಳುತ್ತಾರಾ ಎಂದು ಕಾಯುತ್ತಾರೆ.ಮತ್ತೆ ಕೆಲವರು ಇಯರ್ ಪೋನನ್ನು ಕಿವಿಗೆ ಇರಿಸಿಕೊಂಡು ತಮ್ಮಿಷ್ಟದ ಹಾಡುಗಳನ್ನೋ,ಎಫ್‍ಎಂ ಸ್ಟೇಷನ್ ಕೇಳಿಕೊಂಡು ಮಳೆಯ ಪರಿಯೇ ಇಲ್ಲದಂತೆ ಪ್ರಯಾಣಿಸುತ್ತಾರೆ.ಎಲ್ಲಾದರೂ ತುಂಬಾ ಟ್ರಾಫಿಕ್ ಜಾಮ್ ಎನಿಸಿದರೆ,ಬಸ್ಸಿನಿಂದ ಇಳಿದು ಆರಾಮಾಗಿ ಮಳೆಯಲ್ಲಿ ನೆನೆದುಕೊಂಡು ಅಥವಾ ಓಡಿಕೊಂಡು ಬಸ್ಸಿಗಿಂತ ಮುಂಚೆಯೇ ತಮ್ಮ ಮನೆ ಸೇರಿರುತ್ತಾರೆ.
ಬೈಕ್ ಅಥವಾ ಟೂ ವೀಲರ್ ಇಟ್ಟುಕೊಂಡಿರುವವರು ಸಂದಿಗಳಲ್ಲಿ ನುಸುಳಿ ಹೇಗೋ ಬಸ್ಸಿಗಿಂತಾ ಮೊದಲೇ ತಮ್ಮ ಮನೆಗಳನ್ನು ತಲುಪುತ್ತಾರೆ.ಮಳೆಯು ವಿಪರೀತವಾಗಿ ತಾಳ್ಮೆ ಕೆದಕಿದರೆ ಗಾಡಿಯನ್ನು ಬದಿಗೆ ಹಾಕಿ ಸ್ವಲ್ಪ ತಾಳ್ಮೆ ತಂದುಕೊಂಡು ಮಳೆ ಕೊಂಚ ಕಡಿಮೆಯಾದ ನಂತರ ತಮ್ಮ ಗಾಡಿಗಳನ್ನು ಏರಿ ಮತ್ತೆ ಪಯಣ ಮುಂದುವರಿಸುತ್ತಾರೆ.
ಬಸ್ಸು ಮತ್ತು ಬೈಕ್‍ಗಳಲ್ಲಿ ಹೋಗುವವರು ಮಳೆ ಬಂದಾಗ ಮಾತ್ರ ಕಾರು ಹೊಂದಿದವರಿಗಿಂತಾ ಅದೃಷ್ಟವಂತರಾಗಿರುತ್ತಾರೆ.ಕಾರು ಹೊಂದಿದವರು ಟ್ರಾಫಿಕ್ ಜಾಮ್‍ಗಳಲ್ಲಿ ಸಿಕ್ಕಿಬಿದ್ದರೆ ಕಥೆ ಮುಗಿದಂತೆಯೇ.ಕಾರಿನಲ್ಲಿಯೇ ಕುಳಿತು ಸಿಗ್ನಲ್ ಗ್ರೀನ್ ಆಗುವವರೆಗೆ ಕಾಯುವುದು.ಸ್ವಲ್ಪ ಮುಂದೆ ಹೋದ ನಂತರ ಮತ್ತೊಂದು ವಾಹನಗಳ ಸರತಿಯಲ್ಲಿ ಹೋಗಿ ನಿಲ್ಲುವುದು.ಆಗ ಇವರ ಸಹಾಯಕ್ಕೆ ಬರುವುದು ರೇಡಿಯೋ ಜಾಕಿಗಳ ಮಾತುಗಳು.ತಮಗಿಷ್ಟದ ರೇಡಿಯೋ ಚಾನೆಲ್ ಅನ್ನು ಟ್ಯೂನ್ ಮಾಡಿ ರೇಡಿಯೋ ಜಾಕಿಗಳ ಮಾತುಗಳನ್ನು ಕೇಳಿಕೊಂಡು ಹೇಗೋ ಕಾಲ ಕಳೆಯುತ್ತಾರೆ,ಆರ್‍ಜೆಗಳು ಕೊಡುವ ಟ್ರಾಫಿಕ್ ಅಪ್‍ಡೇಟ್‍ಗಳನ್ನು ಕೇಳಿದಾಗ ಮನಸ್ಸಿಗೆ ಏನೋ ಸಮಾಧಾನ,ಮಳೆಯ ಅವಾಂತರದಿಂದ ಉಂಟಾದ ಟ್ರಾಫಿಕ್ ಜಾಮ್‍ನಲ್ಲಿ ಪೇಚಿಗೆ ಸಿಲುಕಿದವರು ತಮ್ಮಂತೆಯೇ ಅನೇಕರು ಇದ್ದಾರೆ ಎಂಬುದೇ ಆ ಸಮಾಧಾನಕ್ಕೆ ಕಾರಣ.ಕಾರು ಚಲಾಯಿಸಿಕೊಂಡು ಮನೆ ತಲುಪುವುದರಲ್ಲಿ ಸಾಕುಸಾಕಾಗಿ ಹೋಗುತ್ತದೆ.
ಮುಂದೆ ಇರುವ ವಾಹನಗಳನ್ನು ಎಚ್ಚರಿಸಲು ಕೆಲವು ವಾಹನ ಸವಾರರು ರಣಕಹಳೆಯನ್ನು ಊದುತ್ತಾರೆ.ಕರ್ಕಶವಾದ ಸದ್ದು ಹಲವರಿಗೆ ಕಿರಿಕಿರಿ ಉಂಟುಮಾಡುವುದಂತೂ ಸತ್ಯ.ಇನ್ನು ಪಾದಚಾರಿಗಳ ಮೇಲೆ ನೀರನ್ನು ಹಾರಿಸಿಕೊಂಡು ಹೋಗುವ ವಾಹನಗಳು ಯಾವುದೋ ಅಮ್ಯುಸ್‍ಮೆಂಟ್ ಪಾರ್ಕಿನ ಅನುಭವ ಕೊಡುವುದು ಖಂಡಿತ.ಮನೆಗೆ ತಲುಪಿದ ಕೂಡಲೇ ಸ್ನಾನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಬಹುದು.ಇನ್ನು ರಸ್ತೆಗಳಲ್ಲಿ ನಿಂತ ರಾಶಿ ನೀರಿನ ಮೇಲೆ ವಾಹನಗಳು ಹೋದರೆ ಆ ನೀರು ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಮತ್ತೆ ಹಿಂದಕ್ಕೆ ಹೋಗುವಂತೆ,ಪುಟ್‍ಪಾತ್‍ನ ಕಂಪೌಂಡ್‍ಗಳಿಗೆ ತಾಗಿ ಮತ್ತೆ ವಾಪಸ್ ಬರುತ್ತವೆ.
ಜನರೇ ಓಡಾಡಲು ಕಷ್ಟವಾಗುವ ಮಹಾನಗರಗಳಲ್ಲಿ ನೀರು ಎಲ್ಲಿ ತಾನೇ ಹೋಗಲು ಸಾಧ್ಯ?ಸಿಕ್ಕ ಸಿಕ್ಕ ಸಂದಿಗಳಲ್ಲಿ ತೋರಲು ಮಳೆಯ ನೀರಿಗೂ ಸ್ವಲ್ಪ ಸಮಯ ಬೇಕಾಗುವುದು ಸತ್ಯವೇ ಸರಿ.ಒಟ್ಟಿನಲ್ಲಿ ಮಹಾ-ಮಳೆ(ಮಹಾನಗರಗಳಲ್ಲಿ ಬೀಳುವ ಮಳೆ)ಸೃಷ್ಟಿಸುವ ಅವಾಂತರ ಅದನ್ನು ಅನುಭವಿಸಿದವರಿಗೆ ಗೊತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕುವ ನಾಗರೀಕರಿಗೆ ಮಳೆ ಎಂದರೆ ಸಣ್ಣಗೆ ನಡುಕ ಬರುವುದಂತೂ ಸತ್ಯ.

Saturday 30 May 2015

ಸನ್ನಿಧಾನ

ಸನ್ನಿಧಾನ
"ಮತ್ತೊಂದು ಹಲಸಿನ ಮರದಲ್ಲಿ ಕಾಯಿ ಬಿಟ್ಟಿದೆ...." ಎಂದುಕೊಂಡು ರಾಜೇಶ್ವರಿ ಚಾವಡಿಯಿಂದಲೇ ಕೂಗಿಕೊಂಡು ಬಂದಳು. "ನೀನು ಕಿರುಚುವುದು ಇಡೀ ಊರಿಗೆ ಕೇಳಿಸುತ್ತೆ...ಸ್ವಲ್ಪ ಮೆತ್ತಗೆ ಹೇಳು...ನಂಗೆ ಕೇಳಿದ್ರೆ ಸಾಕು..." ಗೋಪಿನಾಮವನ್ನು ಹಣೆಗೆ ತಿಕ್ಕಿಕೊಳ್ಳುತ್ತಾ ವೆಂಕಣ್ಣ ಹೆಂಡತಿಯ ಮೇಲೆ ರೇಗಿದನು.ಗಂಡನ ಮಾತು ಕೇಳಿ ರಾಜೇಶ್ವರಿ ಮುಖ ತಿರುವಿದಳು."ಅಲ್ಲಾ ಮೊನ್ನೆ ತಾನೆ 100 ಹಲಸಿನ ಹಣ್ಣು ಮಾರಿ ಬಂದದ್ದು ಅಲ್ವಾ...ಇದನ್ನು ಎಂಥ ಮಾಡುದು"ರಾಜೇಶ್ವರಿ ಗಂಡನ ಮುಂದೆ ಪ್ರಶ್ನೆಯೊಂದನ್ನು ಇಟ್ಟಳು."ಜನ ಇದ್ದಾರೆ ಮಾರಾಯ್ತಿ ತಗೋತಾರೆ" ಸಂಕಲ್ಪ ಮಾಡುತ್ತಿದ್ದ ವೆಂಕಣ್ಣ ರೇಗಿದನು.
"ವೆಂಕಣ್ಣಯ್ಯ....ವೆಂಕಣ್ಣಯ್ಯ...." ಹೊರಗಿನಿಂದ ಯಾವುದೋ ಪರಿಚಿತ ಸ್ವರ ಕೇಳಿಬಂತು.ಯಾರು ನೋಡು ಎಂಬಂತೆ ಹೆಂಡತಿಗೆ ಕಣ್ಣು ಸನ್ನೆ ಮಾಡಿದ ವೆಂಕಣ್ಣ."ವೆಂಕಣ್ಣಯ್ಯ ಇಲ್ವಾ ರಾಜಕ್ಕ??" ರಾಜೇಶ್ವರಿ ದೇವರ ಕೋಣೆಯಿಂದ ಹೊರಗೆ ಬರುತ್ತಲೇ ಕೇಳಿದನು ಶ್ರೀನಿವಾಸ. "ಓ...ಸೀನಣ್ಣ ಬನ್ನಿ ಕೂತುಕೊಳ್ಳಿ.." ಎನ್ನುತ್ತಾ ಕುರ್ಚಿಯೊಂದನ್ನು ಶ್ರೀನಿವಾಸನ ಬಳಿಗೆ ಎಳೆದಳು ರಾಜಕ್ಕ. "ಇರಲಿ ರಾಜಕ್ಕ ಕೆಳಗೆ ಕೂರುತ್ತೇನೆ" ಎನ್ನುತ್ತಾ ತಣ್ಣಗಿನ ಕೆಂಪು ಹಾಸಿನ ನೆಲದ ಮೇಲೆ ಕುಳಿತನು ಶ್ರೀನಿವಾಸ.
"ಏನು ಶೆಕೆ ಅಕ್ಕಾ....ತಡೀಲಿಕ್ಕೆ ಸಾಧ್ಯವಿಲ್ಲ....ವೆಂಕಣ್ಣಯ್ಯ ಇಲ್ವಾ...??" ಎಂದನು.ತನ್ನ ಕೈಯಲ್ಲಿದ್ದ ತಣ್ಣಗಿನ ನೀರನ್ನು ಶ್ರೀನಿವಾಸನಿಗೆ ಕೊಡುತ್ತಾ,ಚಿಕ್ಕ ತಟ್ಟೆಯಲ್ಲಿದ್ದ ಬೆಲ್ಲವನ್ನು ಅವನೆಡೆಗೆ ಸರಿಸುತ್ತಾ"ಪೂಜೆಗೆ ಕೂತಿದ್ದಾರೆ...ಇನ್ನೇನು ಮಂಗಳಾರತಿಗೆ ಸಮಯ ಆಯ್ತು..."ಎನ್ನುತ್ತಿದ್ದಂತೆ "ಘಂಟೆ" ಎಂದು ವೆಂಕಣ್ಣನ ಸ್ವರ ಬಂದಿತು.ಚಾವಡಿಯಿಂದ ದೇವರ ಕೋಣೆಗೆ ಬಂದು ಜಾಗಟೆಯನ್ನು ಬಾರಿಸಿದಳು.ತೋಟದಲ್ಲಿ ಆಡುತ್ತಿದ್ದ ಮಕ್ಕಳಿಬ್ಬರು ನೈವೇದ್ಯಕ್ಕೆ ಇಟ್ಟಿದ್ದ ಬೆಲ್ಲದ ಆಸೆಗೆ ಒಳಗೆ ಓಡಿ ಬಂದವು, 
"ಏನೋ ಸೀನ...ಆರಾಮಾಗಿ ಇದ್ದೀಯಾ..." ಕೈಯಲ್ಲಿ ತಂಬಿಗೆಯನ್ನು ಹಿಡಿದು ತುಳಸಿಕಟ್ಟೆಯ ಬಳಿ ಓಡುತ್ತಾ ವೆಂಕಣ್ಣ ಕೇಳಿದ."ಆರಾಮ್ ಇದ್ದೇನೆ ವೆಂಕಣ್ಣ,,,ನೀವು??"ಎಂದು ಉತ್ತರದ ಜೊತೆಗೊಂದು ಪ್ರಶ್ನೆ. "ಏನೋ ಮಾರಾಯ..ದೇವರು ನೆಡೆಸಿ ಹೀಗಿದ್ದೇನೆ ನೋಡು.." ಎಂದು ತನ್ನ ಸುಖದ ಜೀವನಕ್ಕೆ ದೇವರ ಕೃಪೆ ಕಾರಣ ಎಂದು ತಿಳಿಸಿದನು ವೆಂಕಣ್ಣ. "ಯಾವಾಗ ಬಂದದ್ದು ಸೀನಣ್ಣ...ಎಂತ ಆದ್ರು ವಿಶೇಷ ಉಂಟಾ??ಅಲ್ಲಾ ನೀವು ಹಾಗೆಲ್ಲಾ ಸುಮ್ಮನೆ ಊರಿಗೆ ಬರುವವರಲ್ಲ ಅಲ್ಲವಾ ಹಾಗಾಗಿ ಕೇಳುತ್ತಿದ್ದೇನೆ" ಸೀನನ ಆಗಮನದ ಕಾರಣವನ್ನು ತಿಳಿದುಕೊಳ್ಳಲು ಮಾರ್ಮಿಕವಾಗಿ ಕೇಳಿದಳು ರಾಜಕ್ಕ.
ಶ್ರೀನಿವಾಸ ನಸುನಕ್ಕು "ಹೌದು ರಾಜಕ್ಕ....ನಾಡಿದ್ದು ಅಪ್ಪಯ್ಯನ ಶ್ರಾದ್ದ ಹಾಗೆ ಅದರ ಮರುದಿನ ರಾತ್ರಿ ದುರ್ಗಾನಮಸ್ಕಾರ ಪೂಜೆ..ಹೇಳಿಕೆ ಕೊಟ್ಟು ಹಾಗೆ 10 ಹಲಸಿನ ಹಣ್ಣು ಬೇಕಿತ್ತು,ಅದನ್ನು ಹೇಳಿ ಹೋಗುವ ಅಂತ ಬಂದದ್ದು".
"ಈ ಹಲಸಿನ ತೋಟಕ್ಕೆ ನಿನ್ನ ಅಪ್ಪನೆ ಒಂದು ರೀತಿ ಕಾರಣ...10 ಅಲ್ಲ 15 ಬೇಕಾದರು ಕೊಂಡು ಹೋಗು.."ಕುಹಕ ನುಡಿದನು ವೆಂಕಣ್ಣ."ಮತ್ತೆ ಬೊಂಬಾಯಿ ಬದುಕು ಹೇಗೆ ಉಂಟು??" ಎಂದು ವೆಂಕಣ್ಣನ ಪ್ರಶ್ನೆ.
"ಪರವಾಗಿಲ್ಲ ವೆಂಕಣ್ಣ...ನೆಮ್ಮದಿ ಇದೆ...ಆದರೆ ತೃಪ್ತಿ ಇಲ್ಲ..." ಹೀಗೆ ಒಂದಿಷ್ಟು ಹೊತ್ತು ಮಾತುಕತೆಯ ನಂತರ ಶ್ರೀನಿವಾಸ ಹೊರಟ."ಅಣ್ಣ ನಾಡಿದ್ದು ತಪ್ಪಿಸಬೇಡಿ ಬನ್ನಿ.." ಊಟಕ್ಕೆ ಮತ್ತೊಮ್ಮೆ ಆಹ್ವಾನ ಕೊಟ್ಟನು ಶ್ರೀನಿವಾಸ.ಅವನನ್ನು ಕಳುಹಿಸಿಕೊಟ್ಟು ವೆಂಕಣ್ಣ ಚಾವಡಿಯ ಕಂಬಕ್ಕೆ ಒರಗಿ ಕುಳಿತನು.ಹಿಂದಿನದೆಲ್ಲಾ ನೆನಪಿಗೆ ಬಂದಂತೆ ಆಯಿತು.ಸಾಮಾನ್ಯನಾಗಿದ್ದ ವೆಂಕಣ್ಣ ಹಲಸಿನ ವೆಂಕಣ್ಣ ಆದ ಕಥೆ ಅದು.
                       *********************************************************
ಆಗ ವೆಂಕಣ್ಣನಿಗೆ ಸುಮಾರು 18ವರ್ಷ ಬದುಕಿನಲ್ಲಿ ನಷ್ಟ ತುಂಬಿ ಹೋಗಿತ್ತು.ಓದುವ ಮನಸ್ಸಿದ್ದರು ಓದಲು ಹಣವಿಲ್ಲದ ಕಾರಣ ಏಳನೇ ತರಗತಿಗೆ ಓದು ಮೊಟಕುಗೊಂಡಿತ್ತು.ಅಸ್ತಮಾದ ಕಾರಣದಿಂದ ವೆಂಕಣ್ಣನ ಅಪ್ಪ ಬೇಗನೆ ತೀರಿಕೊಂಡಿದ್ದರು.ಎರಡು ತಂಗಿಯರ ಜವಾಬ್ದಾರಿ ಹೊತ್ತ ವೆಂಕಣ್ಣ ಅದು ಇದು ಕೆಲಸ ಮಾಡಿಕೊಂಡು ಕುಟುಂಬದ ಪಾಲನೆ ಮಾಡುತ್ತಿದ್ದನು.ಅದು ಯಾಕೋ ಒಂದು ದಿನ ಹಲಸಿನ ಹಣ್ಣಿನ ಕಡುಬು ತಿನ್ನುವ ಆಸೆಯಾಯಿತು.ತನ್ನ ಮನೆಯಲ್ಲಿಹಲಸಿನ ಮರ ಇಲ್ಲದ ಕಾರಣ ಆ ಪ್ರಾಂತ್ಯದಲ್ಲಿ ಹಲಸಿನ ಹಣ್ಣು ರುಚಿಯಾಗಿದ್ದ ಕೃಷ್ಣಣ್ಣರ ಮನೆಗೆ ಹೋಗಿ ಕೇಳಿದನು.ಆದರೆ ಕೃಷ್ಣಣ್ಣ ಹಣ್ಣು ಕೊಡದೆ,ಅವಮಾನ ಮಾಡಿ ಕಳುಹಿಸಿದ್ದ.ಮೊದಲಿನಿಂದಲೂ ಕೃಷ್ಣಣ್ಣನಿಗೆ ಬಡವರನ್ನು ಕಂಡರೆ ತಾತ್ಸರ.ಆದೇ ಕೃಷ್ಣಣ್ಣನ ಮೇಲಿನ ಹಗೆಗೆ ಬಿಸಿ ರಕ್ತದ ವೆಂಕಣ್ಣ ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ದುಡಿದು ಹಲಸಿನ ತೋಟ ಮಾಡಿದ್ದ.ಆತನ ತೋಟದ ಹಲಸು ಅದೆಷ್ಟು ಜನಜನಿತವಾಯಿತು ಎಂದರೆ,ಆ ಪ್ರಾಂತ್ಯದಲ್ಲಿ ಹಲಸಿನ ವೆಂಕಣ್ಣ ಎಂದೆ ಹೆಸರುವಾಸಿಯಾಗಿದ್ದ.ಯಾರ ಮನೆಯಲ್ಲಿ ವಿಶೇಷವಾದರು ಈತನ ಮನೆಯ ಹಲಸಿನಿಂದ ಮಾಡಿದ ಖಾದ್ಯ ಇದ್ದೇ ಇರುತ್ತಿತ್ತು.ಮದುವೆ,ಸೀಮಂತ,ಉಪನಯನದಿಂದ ಹಿಡಿದು ವೈಕುಂಠ,ಶ್ರಾದ್ದ ಮುಂತಾದ ಸಮಾರಂಭಗಳಿಗೂ ವೆಂಕಣ್ಣನ ಹಲಸು ಇರಲೇಬೇಕು ಎಂಬಂತೆ ಆಯಿತು.ಹಲಸಿನ ತೋಟದಿಂದಲೇ ವೆಂಕಣ್ಣನ ಸುಖ,ನೆಮ್ಮದಿ ಶ್ರೀಮಂತಿಕೆ.ಅದಕ್ಕಾಗಿಯೇ ಆ ತೋಟವನ್ನು ವೆಂಕಣ್ಣ ಸನ್ನಿಧಾನ ಎನ್ನುತ್ತಿದ್ದನು.ಅದೇ ಕೃಷ್ಣಣ್ಣರ ಮಗ ಶ್ರೀನಿವಾಸ.ಕೃಷ್ಣಣ್ಣ ಸತ್ತು ಸುಮಾರು ಐದು ವರ್ಷಗಳಾಗಿತ್ತು.
"ಊಟಕ್ಕೆ ಬನ್ನಿ....ತಟ್ಟೆ ಇಟ್ಟಿದ್ದೇನೆ...." ರಾಜೇಶ್ವರಿ ಸ್ವರ ಬಂದಾಗಲೇ ಕಂಬಕ್ಕೆ ಒರಗಿ ಕುಳಿತ ವೆಂಕಣ್ಣನಿಗೆ ಎಚ್ಚರವಾದಂತಾಗಿ ಅಡುಗೆ ಮನೆಯೆಡೆಗೆ ಊಟ ಮಾಡಲು ಹೆಜ್ಜೆ ಹಾಕಿದನು.
  ***********************************************************
ವೆಂಕಣ್ಣನಿಗೆ ಮುಪ್ಪು ಬಂದಿತು.ಹೆಂಡತಿಯ ವಿಯೋಗವಾಗಿ ನಾಲ್ಕು ವರ್ಷಗಳಾಗಿತ್ತು.ಮಕ್ಕಳಿಬ್ಬರು ಮದುವೆಯಾಗಿ ವಿದೇಶದಲ್ಲಿ ಒಳ್ಳೆಯ ಉದ್ಯೋಗದಲ್ಲಿದ್ದರು.ಆದ್ದರಿಂದ ಮನೆಯಲ್ಲಿ ವೆಂಕಣ್ಣನೊಬ್ಬನೆ ಇದ್ದನು.ಇತ್ತೀಚೆಗೆ ಆತನಿಗೂ ವಯಸ್ಸಿನ ಕಾಯಿಲೆ ಭಾಧಿಸುತ್ತಿತ್ತು.ಒಬ್ಬನೇ ಮಗನ ಹೆಸರಿಗೆ ಎಲ್ಲಾ ಆಸ್ತಿಯನ್ನು ಮಗ ಊರಿಗೆ ಬಂದು ತನ್ನೊಡನೆ ಇರಬಹುದು ಎಂಬ ಕಾರಣದಿಂದ ಮಗನ ಹೆಸರಿಗೆ ಬರೆದು ಹಾಕಿದ್ದ.ಆದರೆ ಮಗನ ವಿದೇಶದ ವ್ಯಾಮೋಹ ಅವನನ್ನು ಊರಿಗೆ ಬರುಲು ಬಿಡಲಿಲ್ಲ.ಮಗಳನ್ನಂತು ಕರೆಯುವ ಹಾಗೆ ಇಲ್ಲ.ಹೇಗೋ ಇದ್ದಷ್ಟು ದಿನ ಈ ನನ್ನ ಸನ್ನಿಧಾನದಲ್ಲಿಯೇ ಕಳೆಯುತ್ತೇನೆ ಎಂದು ಯಾರದರೂ ಕೇಳಿದರೆ ಹೇಳುತ್ತಿದ್ದನು.
ಮಗನಿಗಂತೂ ತಂದೆ ಒಬ್ಬರೇ ಇರುವುದು ಸುತಾರಂ ಇಷ್ಟವಿರಲಿಲ್ಲ.ತಾಯಿಯ ವರ್ಷದ ಕಾರ್ಯಕ್ಕೆ ಬಂದವನೇ ಅಪ್ಪನನ್ನು ತನ್ನೊಡನೆ ವಿದೇಶಕ್ಕೆ ಕರೆದುಕೊಂಡು ಹೋಗಲು ನಿರ್ಧರಿಸಿದ್ದನು.ಆದರೆ ತಂದೆಗೆ ಒಪ್ಪಿಗೆ ಇರಲಿಲ್ಲ.ಪ್ರತಿ ಸಲ ಬಂದಾಗಲೂ ತಂದೆಯನ್ನು ಒಪ್ಪಿಸಲು ಎಲ್ಲಾ ಪ್ರಯತ್ನ ಮಾಡಿ ವಿಫಲನಾಗುತ್ತಿದ್ದನು.ತಾನು ಬೆಳಸಿದ ಹಲಸಿನ ಮರಗಳ ನಡುವೆಯೇ ಇದ್ದು ಸಾಯಬೇಕು ಎಂಬುದೊಂದೇ ವೆಂಕಣ್ಣನ ಹಠ.ಆದರೆ ಈ ಬಾರಿ ವೆಂಕಣ್ಣನ ಮಗ ತಾಯಿಯ ಶ್ರಾದ್ದಕ್ಕೆ ಬಂದವನು ತಂದೆಗೆ ತಿಳಿಯದಂತೆ ಮಾರಿಬಿಟ್ಟಿದ್ದ.ಅದು ಯಾವುದೋ ರಿಯಲ್ ಎಸ್ಟೇಟ್ ಕಂಪನಿಗೆ.ಹಾಗಾದರೂ ಅಪ್ಪ ತನ್ನೊಡನೆ ಬರುತ್ತಾನೆ ಎಂಬುದು ಮಗನ ಆಲೋಚನೆಯಾಗಿತ್ತು.ಆದರೆ ಇದನ್ನು ಅಪ್ಪನಿಗೆ ತಿಳಿಸುವ ಧೈರ್ಯ ಬರಲಿಲ್ಲ.ತಾನು ವಾಪಸ್ಸು ಹೋಗುವ ಒಂದೆರಡು ದಿನಗಳ ಹಿಂದೆ ತಿಳಿಸಿ ಅಪ್ಪನನ್ನು ಒಪ್ಪಿಸುವ ವಿಚಾರ ಮಾಡಿದ್ದನು.ಆದರೆ ಒಂದು ದಿನ ತೋಟದೊಳಕ್ಕೆ ದೊಡ್ಡ ದೊಡ್ಡ ಮರ ಕೊರೆಯುವ ಮಿಷನ್‍ಗಳು ಬಂದವು.ಕಣ್ಣಿಗೆ ಅಡ್ಡವಾಗಿ ಕೈಯನ್ನು ಇಟ್ಟುಕೊಳ್ಳುತ್ತಾ ಹಲಸಿನ ವೆಂಕಣ್ಣ ಅಂಗಳಕ್ಕೆ ಬಂದು ನೋಡಿದನು.
"ಪುಟ್ಟ....ಓ ಪುಟ್ಟ...ಯಾರೋ ನಮ್ಮ ತೋಟದೊಳಗೆ ಮಿಷನ್ನು ತಂದಿದ್ದಾರೆ....ಪುಟ್ಟ...ಓ ಪುಟ್ಟ...." ವೆಂಕಣ್ಣ ಆತಂಕದಿಂದ ತನ್ನ ಮಗನನ್ನು ಕರೆದನು.ಮಗನಿಗೆ ಹೀಗೆ ಆಗುವುದೆಂಬ ನಿರೀಕ್ಷೆ ಇತ್ತು ಆದರೂ ಇಷ್ಟು ಬೇಗ ಆ ರಿಯಲ್ ಎಸ್ಟೇಟ್‍ನವರು ಸೈಟ್ ಮಾಡಲು ಮುಂದಾಗುತ್ತಾರೆ ಎಂದು ತಿಳಿದಿರಲಿಲ್ಲ.ತಂದೆಗೆ ಇರುವ ವಿಷಯವನ್ನು ತಿಳಿಸಿ,ಅದರ ಕಾರಣವನ್ನು ತಿಳಿಸಿದನು.
"ಪುಟ್ಟ...ನೀನು ನನ್ನನ್ನು ಕೇಳಬೇಕಿತ್ತು...ಅದು ಇಂತಹ ಅವರಿಗೆ ಮಾರಿದ್ದಿ..."ವೆಂಕಣ್ಣ ಮಗನ ಮೇಲೆ ಮೃದುವಾಗಿಯೇ ರೇಗಿದ್ದ.ಮಗನಿಗೆ ತನ್ನ ಮೇಲೆ ಇದ್ದ ಅತಿಯಾದ ವ್ಯಾಮೋಹವೇ ಇದಕ್ಕೆಲ್ಲಾ ಕಾರಣ ಎಂದು ಆತನಿಗೆ ತಿಳಿಯಿತು.ಮತ್ತೇನನ್ನು ಹೇಳದೆ ವೆಂಕಣ್ಣ ತನ್ನ ಹಲಸಿನ ತೋಟದ ಕಡೆಯೇ ನೋಡತೊಡಗಿದ.ಒಂದೊಂದೇ ಮರಗಳು ಮಿಷಿನಿನ ಆರ್ಭಟಕ್ಕೆ ಸರದಿಯಲ್ಲಿ ಧರೆಗುರುಳ ತೊಡಗಿತು.ತಾನು ಅದೆಷ್ಟೋ ಕಷ್ಟ ಪಟ್ಟು ಬೆಳಸಿದ ತೋಟ ತನ್ನ ಕಣ್ಣೆದುರೇ ಸಮಾಧಿಯಾಗುತಿದ್ದದ್ದು ವೆಂಕಣ್ಣನಿಗೆ ನುಂಗಲಾರದ ತುತ್ತಾಯಿತು.ಆತನ ಹೆಸರಿನೊಡನೆ ಮಾತ್ರವಲ್ಲ ಆತನ ರೋಮ ರೋಮದಲ್ಲಿಯೂ ಹಲಸು ಬೆರೆತು ಹೋಗಿತ್ತು.ಯಾಕೋ ಮೈ ಬೆವರಿದಂತಾಯಿತು.ಚಾವಡಿಯಲ್ಲಿದ್ದ ಕಂಬಕ್ಕೆ ಒರಗಿ ಹಾಗೆ ವಿನಾಶವಾಗುತ್ತಿದ್ದ ತನ್ನ ಸನ್ನಿಧಾನವನ್ನು ನೋಡುತ್ತಾ ಕುಳಿತನು.ಕುಳಿತವನು ಮತ್ತೆ ಏಳಲೇ ಇಲ್ಲ.
ಹಲಸಿನ ತೋಟದಲ್ಲಿ ವೆಂಕಣ್ಣನ ಚಿತೆಯ ಬೆಂಕಿ ಉರಿಯುತ್ತಿತ್ತು.ಆ ಚಿತೆಯು ಹಲಸಿನ ಕಟ್ಟಿಗೆಯಿಂದಲೇ ಮಾಡಿದುದಾಗಿತ್ತು.ತಂದೆಯನ್ನು ಕರೆದುಕೊಂಡು ಹೋಗಲೇಬೇಕು ಎಂದು ಬಂದಿದ್ದ ಮಗನಿಗೆ ಆ ಭಾಗ್ಯ ದಕ್ಕಲಿಲ್ಲ.ಹಲಸಿನ ತೋಟದೊಡನೆಯೇ ಹಲಸಿನ ವೆಂಕಣ್ಣನು ನಾಶವಾಗಿದ್ದು ವಿಚಿತ್ರವಾದರು ಸತ್ಯವಾಗಿತ್ತು.

Sunday 19 April 2015

ತಲ್ಲಣಿಸದಿರು ಕಂಡ್ಯ ತಾಳು ಮನವೆ

ತಲ್ಲಣಿಸದಿರು ಕಂಡ್ಯ ತಾಳು ಮನವೆ
ಸೂರ್ಯ ಆಗ ತಾನೇ ಜಗವನ್ನು ಬೆಳಗಲು ಸಜ್ಜಾಗಿದ್ದ.ಮೊಬೈಲ್‍ನಲ್ಲಿ ಇಟ್ಟಿದ್ದ ಅಲಾರಂ ಬಡಿದುಕೊಳ್ಳತೊಡಗಿತು.ಇದು ಮೂರನೇ ಸಲ ಅದು ಬಡಿದುಕೊಳ್ಳುತ್ತಿರುವುದು.ಆದರೆ ಈ ಬಾರಿ ಹಿಂದಿನ ಎರಡು ಸಲದಂತೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಒಲ್ಲದ ಮನಸ್ಸಿನಿಂದ ತಾನು ಮಲಗಿದ್ದ ಹಾಸಿಗೆಯಿಂದ ಎದ್ದ ಸುಪ್ರೀತ್.ಎಷ್ಟು ಮಲಗಿದರು ಸುಸ್ತು ಹೋಗುವುದೇ ಇಲ್ಲ.ದೈಹಿಕವಾಗಿ ಬಳಲಿದರೆ ಒಂದಿಷ್ಟು ನಿದ್ದೆ ಸಾಕು,ಆದರೆ ಬುದ್ದಿಯನ್ನು ಖರ್ಚು ಮಾಡಿ ಕೆಲಸ ಮಾಡುವ ಸಾಪ್ಟವೇರ್ ಇಂಜಿನಿಯರ್ ಸುಪ್ರೀತ್‍ಗೆ ಅಷ್ಟು ಬೇಗ ಹೋಗುವಂತಹ ಸುಸ್ತಲ್ಲ.ಬೇಗಬೇಗನೆ ನಿತ್ಯಕರ್ಮಗಳನ್ನು ಮುಗಿಸಿ ಮನೆಯಿಂದ ಹೊರಗೆ ಬರುವಷ್ಟರಲ್ಲಿ ಅದಾಗಲೇ ಏಳುವರೆ ಗಂಟೆ.ಒಂಬತ್ತು ಗಂಟೆಗೆ ಲಾಗಿನ್ ಆಗಬೇಕು ಎಂದುಕೊಂಡು ಬಸ್ಸು ನಿಲ್ದಾಣದ ಕಡೆಗೆ ಓಡತೊಡಗಿದನು ಸುಪ್ರೀತ್.ಬಸ್ಸು ಹಿಡಿದು ಒಂದಿಷ್ಟು ಜಾಗ ಮಾಡಿಕೊಂಡು ಬಸ್ಸಿನೊಳಗೆ ಹೋದನು.ಸಾರಿಗೆ ವ್ಯವಸ್ಥೆ ಮಾಡದ ತನ್ನ ಕಂಪನಿಯವರನ್ನು ಹಾಗು ಹೆಚ್ಚು ಬಸ್ಸುಗಳನ್ನು ಬಿಡದ ಸರ್ಕಾರವನ್ನು ಬೈದುಕ್ಕೊಳ್ಳುತ್ತಾ ನಿಂತನು.ತನ್ನ ಸ್ಟಾಪ್‍ನಲ್ಲಿ ಇಳಿದು ಬರಬರನೆ ತನ್ನ ಟೆಕ್‍ಪಾರ್ಕ್‍ನ ಕಡೆಗೆ ನೆಡೆದನು.ಅಂತು ಸರಿಯಾದ ಸಮಯಕ್ಕೆ ಲಾಗಿನ್ ಮಾಡಿ ಒಳಗೆ ಹೋಗಿ ಎದುರಿಗೆ ಸಿಕ್ಕವರಿಗೆಲ್ಲ ಒಂದು ಪ್ಲಾಸ್ಟಿಕ್ ನಗುವನ್ನು ಬೀರಿ,ತನ್ನ ಸ್ಥಳದಲ್ಲಿ ಕುಳಿತಾಗ ಏನೋ ಆನಂದ. ಮನಸ್ಸಿಗೆ ಏನನ್ನೋ ಸಾಧಿಸಿದ ಖುಷಿ.
ಇದು ಸುಪ್ರೀತ್‍ನೊಬ್ಬನ ಕಥೆ ಅಲ್ಲ.ನಾಲ್ಕು ಕಾಸಿನ ಸಂಪಾದನೆಗಾಗಿ ಮಹಾನಗರಗಳಿಗೆ ವಲಸೆ ಬಂದ ಅದೆಷ್ಟೋ ಐಟಿ ಹಕ್ಕಿಗಳ ಮುಂಜಾವು ಪ್ರಾರಂಭವಾಗುವುದು ಹೀಗೆ.ವಾರದ ಐದು ದಿನ ಕೆಲಸ.ವೀಕೆಂಡ್ ರಜೆ.ರಜೆಯ ದಿನಗಳಲ್ಲಿ ಸೂರ್ಯ ನೆತ್ತಿಗೆ ಬಂದ ಮೇಲೆ ಎಚ್ಚರ.ತಿಂಗಳ ಕೊನೆಯಲ್ಲಿ ಸಂಬಳ.ಸಿಕ್ಕ ಸಿಕ್ಕ ಕಡೆಯಲ್ಲಿ ಡೆಬಿಟ್ ಕಾರ್ಡಅನ್ನು ಉಜ್ಜಿ ಬೇಕು ಬೇಕಾದ್ದನೆಲ್ಲ ಕೊಂಡುಕೊಳ್ಳುವ ಭರಾಟೆಯಲ್ಲಿ ಈಗ ಸುಪ್ರೀತ್‍ನದ್ದು ಒಂದು ಪಾಲು.ಮೊದಮೊದಲು ಇದು ರುಚಿಸಿದರೂ,ಇತ್ತೀಚೆಗೆ ಆತನಿಗೆ ಏನೋ ಬೇಜಾರು.ಪ್ರತಿ ಸಲವು ಆತನಿಗೆ ತನ್ನ ಗುರುಗಳು ಹೇಳಿದ ಮಾತು ನೆನಪಾಗುತ್ತಿತ್ತು. 
ಸುಪ್ರೀತ್ ತನ್ನ ಕ್ಯಾಂಪಸ್ ಆದ ನಂತರ ಆ ವಿಷಯ ತಿಳಿಸಲು ತಾನು ಬಹಳ ಗೌರವಿಸುತ್ತಿದ್ದ ಹೈಸ್ಕೂಲ್ ಮೇಷ್ಟ್ರ ಮನೆಗೆ ಹೋಗಿದ್ದ.ತನ್ನ ಪ್ರಿಯ ವಿದ್ಯಾರ್ಥಿಗೆ ಕೆಲಸ ಸಿಕ್ಕ ವಿಷಯ ಕೇಳಿ ಖುಷಿ ಪಟ್ಟಿದ್ದರು.ಆದರೆ ಒಂದು ಕಿವಿ ಮಾತನ್ನು ಹೇಳಿದ್ದರು."ಸುಪ್ರೀತ್,ಧಾವಂತದ ಬದುಕು.ಓಟಕ್ಕೆ ಬಿದ್ದಿದ್ದೀಯಾ,ಜೀವನ ಚಿಕ್ಕದಾಗುತ್ತಾ ಹೋಗುತ್ತೆ." ಹೌದು ಆ ಮಾತು ಸುಪ್ರೀತ್‍ನ ವರ್ತಮಾನದ ಬದುಕಿಗೆ ಪ್ರಸ್ತುತವಾಗಿತ್ತು.
ಆಫೀಸಿನ ತನ್ನ ಚೇರ್‍ನಲ್ಲಿ ಆರಾಮವಾಗಿ ಕುಳಿತು ಕಂಪ್ಯೂಟರ್‍ನಲ್ಲಿ ನ್ಯೂಸ್ ಪೇಪರ್ ಓದುತ್ತಿದ್ದ ಸುಪ್ರೀತ್ ಇದ್ದಕ್ಕಿದ್ದ ಹಾಗೆ ಬೆಚ್ಚಿಬಿದ್ದನು.ಹೌದು ಅದಕ್ಕೆ ಕಾರಣ ಆತನ ಕಣ್ಣಿಗೆ ಬಿದ್ದ ಒಂದು ವಾರ್ತೆ.ಅದು ಸಾಪ್ಟವೇರ್ ಸಾಮ್ರಾಜ್ಯವನ್ನು ಹೊಕ್ಕಿದ್ದ ಲೇಆಫ್ ಎಂಬ ಅಸ್ಥಿರತೆ.ಅವಶ್ಯಕತೆ ಇಲ್ಲದವರನ್ನು ಮುಲಾಜಿಲ್ಲದೆ ಕಿತ್ತೆಸೆಯುವ ವ್ಯವಸ್ಥೆ ಅದು.ಯಾವುದೋ ಒಂದು ದೊಡ್ಡ ಕಂಪನಿಯಲ್ಲಿ ಅದೆಷ್ಟೋ ಜನರನ್ನು ಒಮ್ಮೆಲೇ ತೆಗೆದು ಹಾಕಿದ ಸುದ್ದಿ ನೋಡಿ ಬೆಚ್ಚಿಬಿದ್ದ.ಆ ಕಂಪನಿಯಲ್ಲಿ ತಾನು ಕೆಲಸ ಮಾಡದಿದ್ದರು ತಾನು ಅದೇ ಕ್ಷೇತ್ರದಲ್ಲಿ ಇದ್ದದ್ದೇ ಆತನ ಭಯಕ್ಕೆ ಕಾರಣ.ಇಡೀ ದಿನ ತನ್ನ ಕಂಪನಿಯವರು ಆ ರೀತಿ ತನ್ನನ್ನು ತೆಗೆದು ಹಾಕಿದರೆ ಏನಪ್ಪಾ ಗತಿ ಎಂದು ಮನಸ್ಸು ಒದ್ದಾಡುತ್ತಿತ್ತು.ಆ ದಿನ ಶುಕ್ರವಾರ.ಮೊದಲೇ ಮರುದಿನದ ವೀಕೆಂಡ್‍ಗೆ ಮನಸ್ಸು ಹಾತೊರೆಯುವುದರಿಂದ ಆ ದಿನ ಕೆಲಸವಾಗುವುದು ಅಷ್ಟಕಷ್ಟೆ.ಇದರ ಮಧ್ಯೆ ಈ ಲೇಆಫ್ ಭೀತಿ ಬೇರೆ,ಸುಪ್ರೀತ್ ಹೇಗೆ ತಾನೆ ಕೆಲಸ ಮಾಡಿಯಾನು.ಆರು ಗಂಟೆ ಆಗುವುದನ್ನೆ ಕಾಯುತ್ತಿದ್ದ.ಆರು ಗಂಟೆ ಆದೊಡನೇ ಕಂಪನಿಯಿಂದ ಹೊರಬಂದ.ಆದರೆ ಚಿಂತೆಯಿಂದ ಹೊರಬರಲು ಸಾಧ್ಯವಾಗಲಿಲ್ಲ.
ಮರುದಿನ ಎಚ್ಚರವಾದಾಗ ಅದಾಗಲೇ ಹನ್ನೆರಡು ಗಂಟೆಯಾಗಿತ್ತು.ಮಲಗಿಕೊಂಡೆ ಫಿಜಾದವರಿಗೆ ಕರೆ ಮಾಡಿ ಆರ್ಡರ್ ಮಾಡಿದನು.ಹಾಗೇ ಮಲಗಿದ್ದ ಅವನಿಗೆ ಮತ್ತೆ ಎಚ್ಚರವಾದದ್ದು ಫಿಜಾ ಡೆಲಿವರಿಯವನು ತನ್ನ ಮನೆಯ ಬಾಗಿಲು ತಟ್ಟಿದಾಗಲೇ.ಆತನಿಗೆ ದುಡ್ಡು ಕೊಟ್ಟು ಆತನ ಕೃತಕ ನಗುವಿಗೊಂದು ಪ್ಲಾಸ್ಟಿಕ್ ನಗುವನ್ನು ಬೀರಿದನು.
ಫಿಜಾ ತುಂಡೊಂದನ್ನು ಕೈಯಲ್ಲಿ ಹಿಡಿದುಕೊಂಡು ಮೊಬೈಲ್‍ನಲ್ಲಿ ಇದ್ದ ನ್ಯೂಸ್ ತಂತ್ರಾಂಶವನ್ನು  ತೆಗೆದು ನೋಡುತ್ತಿದ್ದನು.ಮತ್ತೆ ಅದೇ ಸುದ್ದಿ.ಮತ್ತೆ ಯಾವುದೋ ದೊಡ್ಡ ಕಂಪನಿಯಲ್ಲಿ ಅದೆಷ್ಟೋ ಜನರಿಗೆ ಪಿಂಕ್ ಸ್ಲಿಪ್.ಯಾಕೋ ಫಿಜಾವನ್ನು ಪೂರ್ತಿ ತಿನ್ನುವ ಮನಸ್ಸಾಗದೆ ಅರ್ಧಕ್ಕೆ ಬಿಟ್ಟುಬಿಟ್ಟನು ಸುಪ್ರೀತ್.
ಸೋಮವಾರ ಮತ್ತೆ ತನ್ನ ದಿನಚರಿ.ಆಫೀಸಿಗೆ ಹೋದವನಿಗೆ ಒಂದು ಆಶ್ಚರ್ಯ ಕಾದಿತ್ತು.ಈ ಬಾರಿ ನ್ಯೂಸ್‍ನಲ್ಲಿ ಬರುವುದು ತನ್ನ ಕಂಪನಿ.ಹೌದು ಈ ಸಲ ತಾನು ಕೆಲಸ ಮಾಡುತ್ತಿದ್ದ ಕಂಪನಿ ಕೆಲವು ಇಂಜಿನಿಯರ್‍ಗಳನ್ನು ತೆಗೆಯುವ ನಿರ್ಧಾರ ಮಾಡಿತ್ತು.ಕೆಲಸದಿಂದ ವಜಾ ಆದವರ ಇನ್‍ಬಾಕ್ಸಗೆ ಒಂದು ಮೇಲ್ ಬಂದಿದೆ ಎಂದು ಕೆಲವು ಸಹೋದ್ಯೋಗಿಗಳು ಮಾತನಾಡುತ್ತಿದ್ದರು.ಬೇಗಬೇಗನೆ ತನ್ನ ಕ್ಯಾಬಿನ್ ಕಡೆಗೆ ಓಡಿದನು.ತನ್ನ ಮೇಲ್‍ಬಾಕ್ಸ ತೆಗೆದನು.ಆ ತಣ್ಣಗಿನ ಎಸಿ ವಾತಾವರಣದಲ್ಲೂ ಮೈ ಬೆವರುತ್ತಿತ್ತು.
"ಓ ಮೈ ಗಾಡ್....ಇಟ್ ಹ್ಯಾಪನ್ಡ...." ಎಂದುಕ್ಕೊಳ್ಳುತ್ತಾ ಹಾಗೆಯೇ ಕುಳಿತುಬಿಟ್ಟನು ಸುಪ್ರೀತ್.ಲೇಆಫ್‍ನ ಗಾಳಿಗೆ ತತ್ತರಿಸಿದ ತರಗೆಲೆಗಳಲ್ಲಿ ಇವನೂ ಒಬ್ಬನಾಗಿದ್ದನು.ಸುಪ್ರೀತ್‍ಗೆ ತಲೆ ಸುತ್ತಿದಂತಾಯಿತು.ಮುಂದೇನು ಎಂಬ ಚಿಂತೆ ಕಾಡತೊಡಗಿತು.ಕಂಪನಿಯಿಂದ ಹೊರಬರುವ ಮುಂಚೆ ಎಲ್ಲಾ ಫಾರ್‍ಮಾಲಿಟಿಗಳನ್ನು ಮುಗಿಸಿ ಹೊರಬಂದನು.
ಹೊರಬಂದು ಸುತ್ತಲೂ ನೋಡಿದನು.ಎಲ್ಲರೂ ತನ್ನನ್ನೇ ನೋಡುತ್ತಿದ್ದಾರೆ ಎಂಬಂತೆ ಭಾಸವಾಯಿತು.ಬಸ್ಸಿನೊಳಗೆ ಕುಳಿತವನಿಗೆ ಈ ದಿನ ಸೀಟ್ ಸಿಕ್ಕಿದರೂ ಯಾಕೋ ಪ್ರತಿದಿನ ನಿಂತಾಗಲೇ ಬರುತ್ತಿದ್ದ ಮಂಪರು ಬರಲಿಲ್ಲ.ಏನು ಮಾಡಬೇಕೋ ತಿಳಿಯಲಿಲ್ಲ.ಇಷ್ಟು ದಿನ ಸ್ವರ್ಗದಂತ್ತಿದ್ದ ಬದುಕು ಈಗ ಬವಣೆಯಾಗಿತ್ತು.ಯಾಕೋ ದೇವಸ್ಥಾನಕ್ಕೆ ಹೋಗುವ ಮನಸ್ಸಾಯಿತು.ಬಸ್ಸಿನಿಂದ ಇಳಿದು ಹತ್ತಿರದಲ್ಲೇ ಇದ್ದ ರಾಯರ ಮಠಕ್ಕೆ ಹೋದನು.
ಮನಸ್ಸಿನಲ್ಲಿ ಭಕ್ತಿಯ ಬದಲು ಭಯ ತುಂಬಿತ್ತು.ಒಂದೆರಡು ಪ್ರದಕ್ಷಿಣೆ ಹಾಕಿ ಹಾಗೆಯೇ ಒಂದು ಕಡೆ ಕುಳಿತುಬಿಟ್ಟನು.ಮನಸ್ಸಿನ ಬೇಗೆಗೆ ರಾಯರ ಬಳಿಯೂ ಪರಿಹಾರವಿಲ್ಲ.ಮಠದಿಂದ ಹೊರಗಡೆ ಬಂದವನು,ತನ್ನ ಸುತ್ತಲೂ ಒಮ್ಮೆ ನೋಡಿದ.ಹೌದು ಅದೆಷ್ಟು ಜನ.ಅದೆಷ್ಟು ರೀತಿಯ ಬದುಕು.ಹಣವಿಲ್ಲದವರು,ವಿದ್ಯೆಯಿಲ್ಲದವರು,ಕೆಲವರು ಕೆಲವು ಅಂಗವೇ ಇಲ್ಲದವರು,ಎಲ್ಲರೂ ಬದುಕುತ್ತಿದ್ದರು.ಅದೇ ತನ್ನಲ್ಲಿ ಸ್ವಲ್ಪ ಗಳಿಕೆಯಿದೆ,ವಿದ್ಯೆ ಇದೆ,ಎಲ್ಲಾ ಅಂಗಗಳು ಸರಿ ಇದೆ.ತಾನು ಹೇಗಾದರೂ ಬದುಕುತ್ತೇನೆ ಎಂಬ ವಿಚಾರ ತಲೆಗೆ ಬಂದು ಬೇರೆ ಕೆಲಸ ಹುಡುಕುವ ನಿರ್ಧಾರ ಮಾಡಿದನು.ಈಗ ಮನಸ್ಸು ಸ್ವಲ್ಪ ತಣ್ಣಗಾಯಿತು.ಅದೇ ಹೊತ್ತಿಗೆ ರಾಯರ ಮಠದಿಂದ "ತಲ್ಲಣಿಸದಿರು ಕಂಡ್ಯ ತಾಳು ಮನವೇ....ಎಲ್ಲರನು ರಕ್ಷಿಪನು ಇದಕೆ ಸಂಶಯವೇ?........." ಎಂಬ ದಾಸವಾಣಿ ಕೇಳಿ ಮನಸ್ಸು ಹಗುರಾಯಿತು. 

Wednesday 8 April 2015

ಮಿಠಾಯಿ ಯುದ್ದ

ಮಿಠಾಯಿ ಯುದ್ದ
"ಅಮ್ಮಾ...ಅಮ್ಮಾ...." ಒಳಗೆ ಬರುತ್ತಲೇ ಪ್ರಮೋದ್ ಅಮ್ಮನನ್ನು ಕೂಗಿದ."ತುಂಬಾ ಬಾಯಾರಿಕೆ ಆಗ್ತಾ ಇದೆ...ನೀರು ಬೇಕು" ಪ್ರಥಮ್ ಕೂಗಿದ.ಅಡಿಗೆ ಮನೆಯಲ್ಲಿ ಏನೋ ಕೆಲಸದಲ್ಲಿದ್ದ ವಸುಂಧರೆಗೆ ಮಕ್ಕಳ ಆಗಮನದ ಅರಿವಾಯಿತು.ಅದಾಗಲೇ ಏಪ್ರಿಲ್ ತಿಂಗಳ ನಡುಭಾಗವಾಗಿತ್ತು.ಬೇಸಿಗೆ ರಜೆಯ ಮಜಾದಲ್ಲಿ ಸಹೋದರರಾದ ಪ್ರಮೋದ್,ಪ್ರಥಮ್ ತೇಲುತ್ತಿದ್ದರು.ಮಟ ಮಟ ಮಧ್ಯಾಹ್ನದ ಉರಿಬಿಸಿಲಲ್ಲಿ ಆಟ ಆಡಿ ಬಂದ ಮಕ್ಕಳಿಗೆ ಅದಾಗಲೇ ಮಾಡಿದ ನಿಂಬೆಹಣ್ಣಿನ ಪಾನಕವನ್ನು ಫ್ರಿಡ್ಜನಿಂದ ತೆಗೆದು ಎರಡು ಲೋಟಕ್ಕೆ ಹಾಕಿ ಮಕ್ಕಳಿಗೆ ತಂದು ಕೊಟ್ಟಳು ವಸುಂಧರ ಶ್ರೀಧರ್.ಪಾನಕವನ್ನು ಗಟಗಟನೆ ಕುಡಿದ ಮಕ್ಕಳು "ಅಮ್ಮಾ....." ಎಂದು ರಾಗ ಎಳೆದರು. "ಅಷ್ಟೇ ಮಾಡಿದ್ದು....ಇನ್ನು ಕುಡಿದರೆ ಊಟ ಯಾರು ಮಾಡದು.." ಎಂದು ಗದರಿಸಿದಳು.ಪ್ರಮೋದ್,ಪ್ರಥಮ್ ಒಬ್ಬರನೊಬ್ಬರ ಮುಖ ನೋಡಿಕೊಂಡು ಸುಮ್ಮನಾದರು. "ಅಪ್ಪ ಪೋನ್ ಮಾಡಿದ್ರು...ಈ ಶನಿವಾರ ನಾವು ಧರ್ಮಸ್ಥಳಕ್ಕೆ ಹೋಗುತ್ತಿದ್ದೀವಿ....ಶನಿವಾರ ಹೋಗಿ ಭಾನುವಾರ ಬರೋದು...ನೀವು ಬರ್ತಿರೋ ಇಲ್ವೋ??" ಮಕ್ಕಳು ಬಂದೇ ಬರುತ್ತಾರೆ ಎಂದು ಗೊತ್ತಿದ್ದರೂ ಪ್ರಶ್ನೆಯೊಂದನ್ನು ಇಟ್ಟಿದ್ದಳು ತಾಯಿ."ಅಯ್ಯೋ...ಬರ್ತೀವಿ ಅಮ್ಮ" ಎಂಬ ಒಕ್ಕೊರಲ ಧ್ವನಿ ಮಕ್ಕಳಿಂದ ಬಂತು.ಅಂದಿನಿಂದಲೇ ಪ್ರಮೋದ್ ಮತ್ತು ಪ್ರಥಮ್‍ರ ಪ್ರವಾಸದ ತಯಾರಿ ಪ್ರಾರಂಭವಾಯಿತು. ಶುಕ್ರವಾರ ರಾತ್ರಿ ಸೋದರರಿಬ್ಬರಿಗೂ ಸರಿಯಾಗಿ ನಿದ್ದೆಯೇ ಬರಲಿಲ್ಲ.ಮರುದಿನ ಬಸ್ಸಿನಲ್ಲಿ ಹೋಗುವ ಮಜಾವನ್ನು ನೆನೆದು ಮನಸ್ಸಿನಲ್ಲಿ ಏನೋ ಖುಷಿ.ಅಂತು ಬೆಳಕು ಹರಿಯಿತು.ಬಸ್ ಸ್ಟಾಂಡಿನಲ್ಲಿ ಬಸ್ಸು ಬಂದೊಡನೆ ಪ್ರಮೋದ್ ಮತ್ತು ಪ್ರಥಮ್ ಬಸ್ಸಿನ ಒಳಗೆ ಎಲ್ಲರಿಗಿಂತ ಮೊದಲು ಓಡಿ ಹೋಗಿ ಅಪ್ಪ ಹೇಳಿದಂತೆ ಬಸ್ಸಿನ ಮಧ್ಯಭಾಗದ ಎರಡು ಸೀಟುಗಳನ್ನು ಹಿಡಿದು ಕುಳಿತರು.ವಸುಂಧರ ಮತ್ತು ಶ್ರೀಧರ ಒಳಗೆ ಬರುತ್ತಿದ್ದಂತೆ "ಅಪ್ಪ...ಅಮ್ಮ..."ಎಂದು ಕೂಗುತ್ತಾ ತಮ್ಮ ಇರುವಿಕೆಯ ಸೀಟನ್ನು ತಿಳಿಯುವಂತೆ ಮಾಡಿದರು.ಮಕ್ಕಳಿಬ್ಬರು ಕಿಟಕಿ ಬದಿಯ ಸೀಟಿನಲ್ಲಿ ಕುಳಿತುಕೊಂಡರು.ಅಂತೆಯೇ ವಸುಂಧರ ಪ್ರಮೋದ್‍ನ ಪಕ್ಕ,ಶ್ರೀಧರ್ ಪ್ರಥಮ್‍ನ ಪಕ್ಕ ಕುಳಿತರು.ಬಸ್ಸು ಹೊರಟಿತು.ಸಹೋದರರಿಬ್ಬರ ಮನಸ್ಸಿನಲ್ಲಿ ಅದೇನೋ ಸಂತೋಷ.ಕಿಟಕಿಯ ಹೊರಗೆ ಹಿಂದಕ್ಕೆ ಸರಿಯುತ್ತಿರುವ ಮರಗಳನ್ನು,ಲೈಟಕಂಬಗಳನ್ನು ಕಂಡು ಅದೇನೋ ಖುಷಿ.ತಾವು ಚಲಿಸುತ್ತಿರುವ ಬಸ್ಸು ಯಾವುದಾದರು ವಾಹನವನ್ನು ಹಿಂದಕ್ಕೆ ಹಾಕಿದರಂತೂ ಸಂತೋಷವೋ ಸಂತೋಷ.ಅದೆಷ್ಟೋ ಸಲ ತಲೆ ಹೊರಗೆ ಹಾಕಿ ಹಿಂದಿನ ವಾಹನದವರಿಗೆ ಟಾಟಾ ಮಾಡಲು ತಂದೆ-ತಾಯಿಯರ ಬಳಿ ಬೈಸಿಕೊಂಡಿದ್ದೂ ಆಯಿತು.ಕೈಯಲ್ಲಿ ಚಿಪ್ಸ ಪ್ಯಾಕೆಟ್ ತಿನ್ನುತ್ತಾ ಅಣ್ಣ-ತಮ್ಮರಿಬ್ಬರು ಪ್ರಯಾಣವನ್ನು ಅನುಭವಿಸುತ್ತಿದ್ದರು.ಬಸ್ಸು ಮಧ್ಯದಲ್ಲಿ ತಿಂಡಿಗೆಂದು ನಿಲ್ಲಿಸಿದರು.ಶ್ರೀಧರ ತನ್ನ ಚಿಕ್ಕ ಮಗ ಪ್ರಥಮ್‍ನನ್ನು ಕರೆದುಕೊಂಡು ಕೆಳಗೆ ಇಳಿದನು.ಪ್ರಮೋದ್ ಬರಲು ನಿರಾಕರಿಸಿದ್ದರಿಂದ ಆತನಿಗೆ ಬೇಕಾದ ತಿಂಡಿಗಳನ್ನು,ಆತ ಹೇಳಿದ ಜ್ಯೂಸನ್ನು ತೆಗೆದುಕೊಂಡರು.ಕಡೆಯಲ್ಲಿ ಚಿಲ್ಲರೆ ಸರಿಮಾಡಲು ಅಂಗಡಿಯವನು ಕಡಲೆ ಮಿಠಾಯಿಯೊಂದನ್ನು ಕೊಟ್ಟನು.ಅದನ್ನು ಶ್ರೀಧರ ತನ್ನ ಜೊತೆಗಿದ್ದ ಪ್ರಥಮನಿಗೆ ಕೊಟ್ಟನು.ಆತ ಅದನ್ನು ಬಾಯಲ್ಲಿ ಇಟ್ಟುಕೊಂಡು ಬಸ್ಸು ಹತ್ತಿದನು.ಬಸ್ಸು ಅದಾಗಲೇ ಹೊರಟಿತ್ತು. ಅಣ್ಣ ಹೇಳಿದ ತಿಂಡಿಗಳನ್ನೆಲ್ಲ ಆತನಿಗೆ ಕೊಟ್ಟ ಪ್ರಥಮ್.ಆದರೆ ಪ್ರಮೋದನ ಕಣ್ಣು ಮಾತ್ರ ತಮ್ಮನ ಕೈಯಲ್ಲಿದ್ದ ಕಡ್ಲೆ ಮಿಠಾಯಿಯ ಮೇಲೆ ಬಿತ್ತು."ನಂಗೆ ಕಡ್ಲೆ ಮಿಠಾಯಿ...." ಪ್ರಮೋದನ ರಾಗ."ಒಂದೆ ಇದ್ದಿದ್ದು...ಅದಕ್ಕೆ ಅವನಿಗೆ ಕೊಟ್ಟೆ..." ಶ್ರೀಧರ ಹೇಳಿದ. "ಇನ್ನೊಂದು ತರಬಾರದ್ದಿತೇನ್ರಿ....."ಹೆಂಡತಿಯ ರಾಗ.ಅದಕ್ಕೆ ಚಿಲ್ಲರೆ ಸಿಗದಿದ್ದ ಕಾರಣದಿಂದ ಆ ಮಿಠಾಯಿ ತಂದದ್ದಾಗಿ ಹೇಳಿದನು.ಇದನ್ನು ಕೇಳಿದರು ಪ್ರಮೋದನಿಗೆ ಸಂತೋಷವಾಗಲಿಲ್ಲ."ನಂಗೂ ಕಡ್ಲೆ ಮಿಠಾಯಿ ಬೇಕು..." ಎಂದು ಹಠ ಹಿಡಿದಿದ್ದ. "ಆಯ್ತು ಮುಂದಿನ ಸ್ಟಾಪ್ ಬಂದಾಗ ಕೊಡಿಸ್ತೀನಿ" ಎಂದ ಶ್ರೀಧರ. "ಇಲ್ಲ..ನನಗೆ ಈಗಲೇ ಬೇಕು..." ಎಂದು ಕೆಟ್ಟ ಹಠ ಹಿಡಿದಿದ್ದ ಪ್ರಮೋದ್.ಬಸ್ಸು ಅದಾಗಲೇ ಹೊರಟಾಗಿತ್ತು.ಶ್ರೀಧರನಿಗೆ ಕೆಟ್ಟ ಕೋಪ ಬಂತು.ಪ್ರಮೋದ್‍ನ ಬೆನ್ನಿಗೆ ಎರಡು ಬಾರಿಸಿದ.ಬೆನ್ನಿಗೆ ಬಿದ್ದದ್ದೇ ತಡ ಜೋರಾಗಿ ಅಳತೊಡಗಿದ.ಮತ್ತೊಮ್ಮೆ ಶ್ರೀಧರ ತನ್ನ ತೋರುಬೆರಳನ್ನು ಮಗನೆಡೆಗೆ ತೋರಿಸುತ್ತಾ "ಬಾಯಿ ಮುಚ್ಚು...ಉಸಿರು ಹೊರಗೆ ಬರಬಾರದು" ಎಂದ.ಪೆಟ್ಟಿನ ಭಯಕ್ಕೆ ಪ್ರಮೋದ್ ತನ್ನ ಕೈಯಿಂದ ಬಾಯನ್ನು ಮುಚ್ಚಿಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ.ಒಂದು ಕ್ಷಣ ಇಡೀ ಬಸ್ಸಿನ ಜನ ಇವರನ್ನೇ ನೋಡುತ್ತಿದ್ದರು. ಇದನ್ನೆಲ್ಲ ತದೇಕಚಿತ್ತದಿಂದ ನೋಡುತ್ತಿದ್ದ ಪ್ರಥಮ್‍ಗೆ ಏನೋ ಒಂದು ರೀತಿಯ ಭಯ ಉಂಟಾಯಿತು.ಅಳುತ್ತಿದ್ದ ಅಣ್ನನ ಮುಖವನ್ನೊಮ್ಮೆ ನೋಡಿದ.ಅಣ್ಣ ಅಳುತ್ತಲೇ ಇದ್ದ.ಬಿಕ್ಕಿ ಬಿಕ್ಕಿ ಅಳುತ್ತಿದ್ದ.ಪ್ರಥಮ್ ತನ್ನ ಕೈಯಲ್ಲಿದ್ದ ಅರ್ಧ ತಿಂದ್ದಿದ್ದ ಕಡ್ಲೆ ಮಿಠಾಯನ್ನು ಪೂರ್ತಿ ತಿನ್ನುವ ಮನಸ್ಸು ಮಾಡದೆ ಹೊರಗೆ ಬಿಸಾಕಿದ.ಅಳುತ್ತಿದ್ದ ಮಗನನ್ನು ತಾಯಿ ಅದೆಷ್ಟೋ ಬಾರಿ ಸಮಾಧಾನ ಮಾಡಲು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ.ಪ್ರಮೋದ್‍ನಿಗೆ ಅಮ್ಮ,ಅಪ್ಪ,ತಮ್ಮ ಮೂವರ ಮೇಲೂ ಕೋಪ ಬಂದಿತ್ತು. ಬಸ್ಸು ಧರ್ಮಸ್ಥಳ ಬಂದಿತು.ಆದರೂ ಪ್ರಮೋದನ ಕೋಪ ಮಾತ್ರ ಕಡಿಮೆಯಾಗಿರಲಿಲ್ಲ.ಮೊದಲೇ ಕಾಯ್ದಿರಿಸಿದ್ದ ರೂಮಿಗೆ ನಾಲ್ವರೂ ತೆರಳಿ ಪ್ರಯಾಣದ ಆಯಾಸವನ್ನೆಲ್ಲಾ ತಣಿಸಿಕೊಂಡು ದೇವರ ದರ್ಶನಕ್ಕೆ ಹೊರಟರು.ಆದರೆ ಪ್ರಮೋದ್ ಮಾತ್ರ ಸಿಟ್ಟು ಕಡಿಮೆಯಾಗದೆ ಮುಖ ಗಂಟು ಹಾಕಿಕೊಂಡಿದ್ದ.ಸಿಟ್ಟು ಹೋದ ಮೇಲೆ ಅವನೆ ತಣ್ಣಗಾಗುತ್ತಾನೆ ಎಂದು ವಸುಂಧರ,ಶ್ರೀಧರ್ ಸುಮ್ಮನಾದರು.ಆದರೆ ಪ್ರಥಮ್ ಮಾತ್ರ ಪ್ರತಿ ಸಲ ಅಣ್ಣ ಎಂದು ಮಾತನಾಡಿಸಲು ಹೋಗಿ ವಿಫಲನಾಗುತ್ತಿದ್ದ. ಬಹಳ ಹೊತ್ತು ಸರದಿಯಲ್ಲಿ ನಿಂತ ಮೇಲೆ ಮಂಜುನಾಥ ಸ್ವಾಮಿ ಹಾಗೂ ಪರಿವಾರ ದೇವರ ದರುಶನವಾಯಿತು.ಅದಾಗಲೇ ಸಮಯ ರಾತ್ರಿ ಸುಮಾರು ಏಳು ಗಂಟೆ. ನಾಲ್ವರು ರಥಬೀದಿಯಲ್ಲಿ ತಿರುಗುತ್ತಿದ್ದರು.ಬಹಳ ದೊಡ್ಡ ಜನಸಂದಣಿ ಇದ್ದದ್ದರಿಂದ ಪ್ರಮೋದ್‍ನ ಕೈಯನ್ನು ವಸುಂಧರ,ಪ್ರಥಮ್‍ನ ಕೈಯನ್ನು ಶ್ರೀಧರ್ ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಿದ್ದರು.ಪ್ರಥಮ್ ಅಪ್ಪನ ಬಳಿ ಅದು ಇದು ಪ್ರಶ್ನೆ ಕೇಳಿಕೊಂಡು ಮುಂದೆ ಹೋಗುತ್ತಿದ್ದರೆ ತಾಯಿ-ಮಗ ಹಿಂದೆ ಹೋಗುತ್ತಿದ್ದರು.ಪ್ರಮೋದ್‍ಗೆ ಅಮ್ಮನ ಕೈ ಹಿಡಿದುಕೊಂಡು ನಡೆಯಲು ಸುತರಾಂ ಇಷ್ಟವಿರಲಿಲ್ಲ.ಅದಕ್ಕೆ ಕಾರಣ ಅವನ ಸಿಟ್ಟು.ಒಂದೆರಡು ಸಲ ಬಿಡಿಸಿಕೊಂಡ.ಆದರೂ ಅಮ್ಮನಿಗೆ ಅದರ ಅರಿವಾಗಿ ಅವನ ಕೈಯನ್ನು ಮತ್ತೆ ಹಿಡಿದುಕೊಳ್ಳುತ್ತಿದ್ದಳು.ಆದರೆ ಈ ಬಾರಿ ಅವನು ಕೈ ಬಿಡಿಸಿಕೊಂಡಿದ್ದಾಗ ಅದು ಅವಳ ಅರಿವಿಗೆ ಬರಲಿಲ್ಲ.ಆದರೂ ಅವನು ಅವರನ್ನೇ ಹಿಂಬಾಲಿಸುತ್ತಿದ್ದ. ಯಾವುದೋ ಅಂಗಡಿಯಲ್ಲಿ ಆಟಿಕೆಯೊಂದನ್ನು ನೋಡುತ್ತಾ ಪ್ರಮೋದ್ ಅಲ್ಲಿಯೇ ನಿಂತುಬಿಟ್ಟಿದ್ದ.ಇದರ ಅರಿವಿಲ್ಲದ ಅವನ ಅಪ್ಪ,ಅಮ್ಮ,ತಮ್ಮ ಮುಂದೆ ಸಾಗಿದರು.ಆ ಆಟಿಕೆಯ ಸೌಂದರ್ಯವನ್ನು ಕಣ್ತುಂಬಿಕೊಂಡ ಮೇಲೆ ಮುಂದೆ ಹೋಗಲು ನೋಡಿದ.ಆದರೆ ಈತನ ಕಡೆಯವರು ಯಾರು ಕಾಣಲಿಲ್ಲ.ಪ್ರಮೋದ್‍ನ ಎದೆಯ ಬಡಿತ ಜೋರಾಯಿತು.ಸುತ್ತಲೂ ನೋಡಿದ.ಎಲ್ಲೆಲ್ಲೂ ಜನ,ಆದರೆ ಯಾರು ತನ್ನವರಲ್ಲ.ಮನಸ್ಸು ಬಂದ ಕಡೆ ಅಳುತ್ತಾ ಓಡಿದ."ಅಪ್ಪ...ಅಮ್ಮ....ಪ್ರಥು.." ಎಂದು ಕೂಗುತ್ತಾ ಓಡಿದ.ಮನಸ್ಸಿನಲ್ಲಿ ಭಯ ಆವರಿಸಿತು.ಏನು ಮಾಡಬೇಕೋ ತಿಳಿಯದೆ ಅಲ್ಲೇ ನಿಂತುಬಿಟ್ಟ.ಹೌದು ಏಳು ವರ್ಷದ ಪ್ರಮೋದ್ ಕಳೆದುಹೋಗಿಬಿಟ್ಟಿದ್ದ.ಅಲ್ಲೇ ನಿಂತಿದ್ದ ಪೋಲಿಸಿಗೆ ಈ ಅಳುವ ಹುಡುಗ ಕಂಡು ಹತ್ತಿರ ಬಂದ.ವಿಷಯದ ಅರಿವಾಗಲು ಪೋಲಿಸಿಗೆ ಹೆಚ್ಚು ಹೊತ್ತು ಬೇಕಾಗಲಿಲ್ಲ.ಪ್ರಮೋದನನ್ನು ಅವನ ಅಪ್ಪ-ಅಮ್ಮನ ಬಳಿ ಸೇರಿಸುವುದಾಗಿ ಹೇಳಿ ಸ್ಟೇಷನ್‍ಗೆ ಕರೆದುಕೊಂಡು ಹೋದ. ಇತ್ತ ವಸುಂಧರ,ಶ್ರೀಧರ ಮತ್ತು ಪ್ರಥಮ್‍ಗೆ ಪ್ರಮೋದ್ ತಪ್ಪಿಸಿಕೊಂಡನೆಂದು ತಿಳಿಯಿತು.ಸಿಕ್ಕ ಸಿಕ್ಕ ಕಡೆಯಲ್ಲೆಲ್ಲಾ ಹುಡುಕಿದರು.ಸಿಕ್ಕ ಸಿಕ್ಕವರೆಲ್ಲರನ್ನೆಲ್ಲ ಕೇಳಿದರು.ಏನೂ ಪ್ರಯೋಜನವಾಗಲಿಲ್ಲ.ವಸುಂಧರಳಂತೂ ಮಗ ಕ್ಷೇಮವಾಗಿ ಸಿಕ್ಕರೆ ಅದು ಮಾಡಿಸುತ್ತೇನೆ,ಇದು ಮಾಡಿಸುತ್ತೇನೆ ಎಂದು ದೇವರಿಗೆ ಹರಕೆ ಹೊರಲು ಪ್ರಾರಂಭಿಸಿದಳು.ಇನ್ನು ಹುಡುಕಿ ಪ್ರಯೋಜನ ಇಲ್ಲ ಎಂದು ವಸುಂಧರ ಮತ್ತು ಪ್ರಥಮ್‍ರನ್ನು ರೂಮಿಗೆ ಕಳುಹಿಸಿ ತಾನು ಕಂಪ್ಲೇಂಟ್ ಕೊಟ್ಟು ಬರುವುದಾಗಿ ತಿಳಿಸಿದ. ರಥಬೀದಿಯಿಂದ ಪೋಲಿಸ್ ಸ್ಟೇಷನ್‍ಗೆ ಹೋಗುವ ದಾರಿಯುದ್ದಕ್ಕೂ ತನ್ನ ಮಗನಿಗೆ ಏನೂ ಆಗದಿದ್ದರೆ ಸಾಕು ಎಂದುಕೊಂಡೆ ತನ್ನ ನಡಿಗೆಯ ವೇಗ ಹೆಚ್ಚಿಸಿದ.ಸ್ಟೇಷನ್‍ಗೆ ಕಾಲಿಡುತ್ತಿದ್ದಂತೆ ಅಳುತ್ತಾ ಕುಳಿತಿದ್ದ ಪ್ರಮೋದ್ "ಅಪ್ಪಾ......" ಎನ್ನುತ್ತಾ ಓಡಿ ಬಂದು ಅಪ್ಪನನ್ನು ಬಳಸಿದನು.ಶ್ರೀಧರನಿಗೆ ಹೋದ ಜೀವ ಬಂದಂತಾಯಿತು.ಪೋಲಿಸರಿಗೆ ವಂದನೆಗಳನ್ನು ಹೇಳಿ ಮಗನನ್ನು ಕರೆದುಕೊಂಡು ರೂಮಿಗೆ ಹೋದನು. ಇತ್ತ ಶ್ರೀಧರನಿಗಾಗಿ ಕಾಯುತ್ತಿದ್ದ ತಾಯಿ,ಮಗನಿಗೆ ಮಗನೊಡನೆ ಬಂದ ಶ್ರೀಧರನನ್ನು ಕಂಡು ಸಂತೋಷವಾಯಿತು.ಒಳಗೆ ಬಂದವನೆ ಪ್ರಮೋದ್ ಅಪ್ಪ ಎಲ್ಲಿ ಹೊಡೆಯುತ್ತಾರೋ ಎಂಬ ಭಯದಿಂದ "ಅಪ್ಪ...ಪ್ಲೀಸ್ ಹೊಡಿಬೇಡಪ್ಪ...ಇನ್ನೊಂದು ಸಲ ಹೀಗೆ ಮಾಡಲ್ಲ....ಇನ್ನು ಎಲ್ಲಿ ಹೋಗೋದಿದ್ರು ನಿಮ್ಮ ಅಥವಾ ಅಮ್ಮನ ಕೈ ಹಿಡಿದುಕೊಂಡೆ ಇರ್ತೀನಿ...ಇನ್ನು ಯಾವತ್ತೂ ಸಿಟ್ಟು ಮಾಡಿಕ್ಕೊಳಲ್ಲ.." ಎಂದು ತನ್ನ ಕೈ ಮುಗಿದುಕೊಂಡು ಅಳಲಾರಂಭಿಸಿದನು.ಅವನ ಕೈ ಕಾಲುಗಳು ನಡುಗುತ್ತಿದ್ದವು.ಅಪ್ಪನಿಗೆ ಪರಿಸ್ಥತಿಯ ಅರಿವಾಯಿತು."ಪುಟ್ಟ...ಅಳಬೇಡ....ನಾನು ನಿಂಗೆ ಹೊಡಿಯಲ್ಲಾ...ಅಲ್ಲಾ ನೀನು ಎಲ್ಲಾದ್ರು ತಪ್ಪಿಸಿಕೊಂಡು ಬಿಟ್ಟಿದ್ರೆ ನಾನು,ಅಮ್ಮ,ಪ್ರಥು ಏನು ಮಾಡಬೇಕಿತ್ತು...ಇರಲಿ ಬಿಡು...ಅಳಬೇಡ" ಎಂದು ಅವನ ಕಣ್ಣೀರು ಒರೆಸುತ್ತಾ ಸಮಾಧಾನ ಮಾಡಿದನು. ಇದನ್ನೆಲ್ಲಾ ನೋಡುತ್ತಿದ್ದ ಪ್ರಥಮ್‍ನಿಗೆ ತಾನೇ ಇದಕ್ಕೆಲ್ಲ ಕಾರಣ ಎಂದು ಭಾಸವಾಗಿ ಅಣ್ಣನ ಬಳಿ ಬಂದು "ಅಣ್ಣಾ....ನಾನು ಇನ್ನು ಯಾವತ್ತೂ ನಿನಗೆ ಕೊಡದೆ ಏನೂ ತಿನ್ನಲ್ಲ....ನನಗೆ ಏನಾದರು ಸಿಕ್ಕಿದ್ರು ಅದು ನಿನಗೆ ಬೇಡ ಅಂದ್ರೆ ಮಾತ್ರ ನಾನು ತಿನ್ನುತ್ತೀನಿ...ಪ್ಲೀಸ್ ನಮ್ಮನ್ನು ಬಿಟ್ಟು ಹೋಗಬೇಡ" ಎಂದು ಹೇಳಿದನು.ಪ್ರಮೋದನಿಗೆ ತನ್ನ ಪುಟ್ಟ ತಮ್ಮನ ಮಾತುಗಳನ್ನು ಕೆಳಿ ಏನು ಹೇಳಬೇಕೋ ತಿಳಿಯಲ್ಲಿಲ್ಲ.ತನ್ನ ತಮ್ಮನ ತಲೆಯನ್ನು ತನ್ನ ಎದೆಗೆ ಒರಗಿಸಿ "ಐ ಯಾಮ್ ಸಾರಿ ಪ್ರಥು....ಇನ್ನು ಯಾವತ್ತೂ ಹೀಗೆ ಮಾಡಲ್ಲ....ಐ ಯಾಮ್ ಸಾರಿ...."ಎಂದು ಹೇಳಿದನು.ಕಣ್ಣಿನಿಂದ ನೀರು ಧಾರಾಕಾರವಾಗಿ ಹರಿಯುತ್ತಿತ್ತು.ಈ ದೃಶ್ಯವನ್ನು ನೋಡುತ್ತಿದ್ದ ವಸುಂಧರ ಶ್ರೀಧರ್‍ರ ಕಣ್ಣುಗಳು ಒದ್ದೆಯಾಗಿದ್ದವು.

Saturday 28 March 2015

ಪ್ರಣತಿ

ಪ್ರಣತಿ
ಎಲ್ಲಿ ನೋಡಿದರಲ್ಲಿ ಜನ.ಅವರಲ್ಲಿ ಅನೇಕರು ವಿದ್ಯಾರ್ಥಿಗಳು,ಇನ್ನು ಕೆಲವರು ಅವರ ಪೋಷಕರು,ಮತ್ತೆ ಕೆಲವರು ಶಿಕ್ಷಕರು,ವಿಶೇಷ ಅತಿಥಿಗಳಾಗಿ ಬಂದವರು ಸುಮಾರು ಜನ.ಅದು ಒಂದು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ.ಅದೆಷ್ಟೋ ಪದವಿಧರರಿಗೆ ಪದವಿ ನೀಡುವ ಶುಭ ಘಳಿಗೆ ಅದಾಗಿತ್ತು.ಅದೆಷ್ಟೋ ತಂದೆ-ತಾಯಿಯರ ಕಣ್ಣುಗಳಲ್ಲಿ ತಮ್ಮ ಮಕ್ಕಳ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡ ಆನಂದ ಕಾಣುತ್ತಿತ್ತು.
ಕಾರ್ಯಕ್ರಮ ಪ್ರಾರಂಭವಾಯಿತು.ಅಷ್ಟು ಹೊತ್ತು ಗಿಜುಗುಡುತ್ತಿದ್ದ ಸಭೆ ಸ್ವಲ್ಪ ಶಾಂತವಾಯಿತು.ಕಾರ್ಯಕ್ರಮ ನಿರೂಪಕರು ಅದೊಂದು ದಾಖಲೆಯ ಘಟಿಕೋತ್ಸವ ಏಕೆಂದರೆ ಒಬ್ಬ ವಿದ್ಯಾರ್ಥಿ 22 ಚಿನ್ನದ ಪದಕಗಳನ್ನು ಪಡೆದ್ದಿದ್ದಳು ಎಂದರು.ಈ ವಿಷಯ ಸಭೀಕರಲ್ಲಿ ಆಶ್ಚರ್ಯ ಮೂಡಿಸಿತು.ಅಕೆ ಯಾರು ಎಂದು ನೋಡುವ ತವಕ ಶುರುವಾಯಿತು.ಸಭೆ ಮತ್ತೆ ಧ್ವನಿಯೆದ್ದಿತು.ಆಕೆಯ ಹೆಸರನ್ನು ಘೋಷಿಸಲಾಯಿತು 
"ಸುಕೃತಿ ಆಚಾರ್ಯ.ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ದಾಖಲೆಯ ಪದಕಗಳನ್ನು ಪಡೆದ ಚಿನ್ನದ ಹುಡುಗಿ" ಎಂದು ಹೇಳುವಾಗಲೇ ಚಪ್ಪಾಳೆಯ ಸದ್ದು ಕಿವಿಗೆ ಬಡಿಯುತ್ತಿತ್ತು.ವೇದಿಕೆಯ ಕಡೆಗೆ ಸಭೀಕರೆಲ್ಲರ ಗಮನ.
ಕಾಲಿಲ್ಲದ ಯುವತಿಯೊಬ್ಬಳು ತನ್ನ ವೀಲ್‍ಚೇರ್‍ನ ಚಕ್ರಗಳನ್ನು ತಿರುಗಿಸುತ್ತ ವೇದಿಕೆಯ ಮಧ್ಯಭಾಗಕ್ಕೆ ಬಂದಳು.ಎಲ್ಲರಿಗೂ ಆಶ್ಚರ್ಯ.ಹೌದು 22 ಪದಕಗಳನ್ನು ಗೆದ್ದ ಸುಕೃತಿ ಕಾಲಿಲ್ಲದ ಹುಡುಗಿ.
ಸುಕೃತಿ ಹುಟ್ಟುತ್ತಲೇ ಕುಂಟಿ ಅಲ್ಲ.ಅವಳಿಗೆ ಸುಮಾರು ಆರು ವರ್ಷ ಇರುವಾಗ ಯಾವುದೋ ಜ್ವರ ಬಂದು ಕಾಲು ಮರಗಟ್ಟಿ ಹೋಗಿತ್ತು.ಆರ್ಯುವೇದ,ಹೋಮಿಯೋಪತಿ,ಅಲೋಪತಿ ಯಾವ ಚಿಕಿತ್ಸೆ ಮಾಡಿದರೂ ಫಲಕಾರಿ ಆಗಲ್ಲಿಲ್ಲ.ದೇವರಲ್ಲಿ ಹರಕೆ ಹೊತ್ತು ನೋಡಿದ್ದೂ ಆಯಿತು ಆದರೂ ಪ್ರಯೋಜನವಿಲ್ಲ.ಆಕೆಯ ಮನೆಯಲ್ಲಿ ಬಡತನ ಇರಲಿಲ್ಲ.ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹವಣಿಸುವ ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಅವರದು.ಒಬ್ಬಳೇ ಮಗಳಿಗೆ ಒದಗಿದ ಪರಿಸ್ಥಿತಿ ತಂದೆ-ತಾಯಿಯರಿಗೆ ನುಂಗಲಾರದ ನೋವಾಗಿತ್ತು.ತನ್ನ ವಯಸ್ಸಿನವರಂತೆ ಆಡುತ್ತಾ,ಕುಣಿಯುತ್ತಾ ಇರಬೇಕಾದ ಮಗಳು ಕೂತಲ್ಲೆ ಕೂರಬೇಕಾದಾಗ ಅವರ ಬವಣೆ ಹೇಳತೀರದ್ದಾಗಿತ್ತು.
"ಕುಂಟಿಗೆ ಕರುಣೆ ಬೇಕು...ಅವಳ ಬದುಕು ಕಷ್ಟ...ಅವಳಿಗಷ್ಟೆ ಅಲ್ಲ ನಿಮಗೂ ಕಷ್ಟ..." ಎಂದು ಹಲವರು ಮಾತನಾಡಿದ್ದು ಕಿವಿಗೆ ಬಿದ್ದಾಗ ಸುಕೃತಿಗೆ ಬದುಕೇ ಬೇಡವೆನಿಸುತ್ತಿತ್ತು.ಆದರೂ ಏನಾದರೂ ಸಾಧಿಸಬೇಕೆಂದು ಪಣ ತೊಟ್ಟವಳು ಸುಕೃತಿ ಆಚಾರ್ಯ.ತನ್ನ ಜೀವನವನ್ನು ವಿದ್ಯೆ ಬೆಳಗುತ್ತದೆ ಎಂದು ಒದಲು ಮನಸ್ಸು ಮಾಡಿದ್ದಳು.ಅದಕ್ಕೆ ಬೆನ್ನೆಲುಬಾಗಿ ನಿಂತವರು ಆಕೆಯ ಪೋಷಕರು.
ಕೆಲವೊಮ್ಮೆ ಆಕೆಯ ಬಲಹೀನ ಕಾಲುಗಳು ವಿಪರೀತ ನೋವು ಕೊಡುತ್ತಿದ್ದವು.ಇದರಿಂದಾಗಿ ಅದೆಷ್ಟೋ ನೋವು ನಿವಾರಕ ಗುಳಿಗೆಗಳು ಆಕೆಯ ಹೊಟ್ಟೆ ಸೇರಿದ್ದವು.ಕೆಲವೊಮ್ಮೆ ಓದೇ ಬೇಡ ಕರುಣೆಯಲ್ಲಿಯೇ ಬದುಕುತ್ತೇನೆ ಎಂದು ಎಣಿಸಿದ್ದು ಉಂಟು ಅವಳಿಗೆ,ಆದರೂ  ಸಾಧಿಸುವ ಛಲ ಬಿಡಲಿಲ್ಲ.ಅವಳ ಆ ಎಲ್ಲ ನೋವಿನ ಫಲವೇ ಅಂದಿನ ಆ ಸಮಾರಂಭದಲ್ಲಿ ಆಕೆ ಗೆದ್ದ ಪದಕಗಳು.ಅಷ್ಟೆ ಅಲ್ಲ ಎಷ್ಟೋ ವಿದೇಶಿ ವಿಶ್ವವಿದ್ಯಾಲಯಗಳು ಅವಳನ್ನು ತಮ್ಮ ವಿದ್ಯಾರ್ಥಿಯನ್ನಾಗಿ ಮಾಡಿಕ್ಕೊಳ್ಳಲು ಸ್ಪರ್ಧೆಯಲ್ಲಿದ್ದವು.
ಮುಖ್ಯ ಅತಿಥಿಗಳು ಪದಕಗಳನ್ನು ನೀಡುವಾಗ ಬಹುತೇಕರು ಎದ್ದು ನಿಂತು ಆಕೆಯ ಛಲಕ್ಕೆ,ಆಕೆಗೆ ಸಲಾಂ ಹೇಳಿದ್ದರು.
"ವಿಕಲಚೇತನೆಯಾದರು ಸಾಧನೆ ಮಾಡಿದ ಸುಕೃತಿ ಆಚಾರ್ಯ ಈಗ ತಮ್ಮ ಅನಿಸಿಕೆಗಳನ್ನು ಹೇಳಲು ಕೇಳಿಕ್ಕೊಳ್ಳುತ್ತೇನೆ" ಕಾರ್ಯಕ್ರಮದ ನಿರೂಪಕರು ಕೇಳಿಕೊಂಡರು.ಮೈಕನ್ನು ಅವಳ ಸಮೀಪಕ್ಕೆ ಕೊಡಲಾಯಿತು.
  "ಎಲ್ಲರಿಗೂ ನಮಸ್ಕಾರ...ಇದು ನನ್ನೊಬ್ಬಳ ಸಾಧನೆ ಅಲ್ಲ..ಈ ಸಾಧನೆಯಲ್ಲಿ ನನ್ನ ತಂದೆ-ತಾಯಿಯ ಪಾಲೂ ಇದೆ...ಇದು ನಮ್ಮ ಮೂವರ ಸಾಧನೆ ಅಪ್ಪ-ಅಮ್ಮ ಇದರಲ್ಲಿ ನಿಮ್ಮ ಪಾಲೂ ಇದೆ" ಎಂದಾಗ ಆ ತಂದೆ ತಾಯಿಯರ ಕಣ್ಣುಗಳಲ್ಲಿ ಸಾರ್ಥಕ ಭಾವನೆ ಕಂಡಿತು. "ಎಲ್ಲರೂ ಹೇಳ್ತಾರೆ ನನ್ನ ತಂದೆ-ತಾಯಿ ನನ್ನಂತಹ ಮಗಳನ್ನು ಪಡೆಯಲು ಪುಣ್ಯ ಮಾಡಿದ್ದರು ಅಂತ..ಆದರೆ ಪುಣ್ಯವಂತೆ ನಾನು...ನನ್ನ ಅಪ್ಪ-ಅಮ್ಮ ಯಾವಾಗಲೂ ಹೇಳುತ್ತಾರೆ ನನ್ನ ಮಗಳು ವಿಕಲಚೇತನೆಯಲ್ಲ ವಿಶೇಷಚೈತನ್ಯದವಳು ಅಂತ...ಯಾರಿಗೆ ಸಿಗ್ತಾರೆ ಇಂತಹ ತಂದೆ-ತಾಯಿ" ಎಂದಾಗ ಮತ್ತೊಮ್ಮೆ ಜೋರಾದ ಚಪ್ಪಾಳೆ.ಆದರೆ ಈ ಬಾರಿ ಆಕೆಯ ಪೋಷಕರಿಗೆ.ಅಲ್ಲಿ ಕುಳಿತವರ ಕಣ್ಣಾಲಿಗಳು ಅದಾಗಲೇ ಒದ್ದೆಯಾಗಿದ್ದವು.
"ಕಡೆಯಲ್ಲಿ ಒಂದು ಮಾತು..."ಸುಕೃತಿ ಆಚಾರ್ಯ ಮತ್ತೆ ತನ್ನ ಮಾತು ಪ್ರಾರಂಭಿಸಿದಳು."ನನ್ನನ್ನು ವಿಕಲಚೇತನೆ ಅಂತ ಎಲ್ಲರೂ ಕರೀತಾರೆ...ಆದರೆ ಯಾರ ಚೇತನದಲ್ಲಿ ಬಲ ಇರುವುದಿಲ್ಲವೋ,ಯಾರಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ ಅವರು ನಿಜವಾದ ವಿಕಲಚೇತನರು...ನನ್ನ ಕಾಲಲ್ಲಿ ಬಲ ಇಲ್ಲ ಅಷ್ಟೆ...ಆದರೆ ಮನಸ್ಸಿನಲ್ಲಿ ಬಲ ಇದೆ...ನನ್ನಲ್ಲಿ ಆತ್ಮವಿಶ್ವಾಸ ಇನ್ನೂ ಸತ್ತಿಲ್ಲ..ಆದ್ದರಿಂದ ನಾನು ವಿಕಲಚೇತನೆ ಅಲ್ಲ....ನನ್ನನ್ನು ವಿಕಲಚೇತನೆ ಅಂತ ಕರೆಯಬೇಡಿ..." ಎಂದಾಗ ಆ ಸಭೆಯಲ್ಲಿ ಜೋರಾದ ಚಪ್ಪಾಳೆಯ ಸದ್ದು ಬಿಟ್ಟು ಬೇರೆ ಏನೂ ಕೇಳಲಿಲ್ಲ.   

Sunday 22 March 2015

ಘಟಪ್ರೇತ

ಘಟಪ್ರೇತ
"ಅಮ್ಮ ಹೊಟ್ಟೆ ಹಸೀತಿದೆ.....ಊಟ ಹಾಕು..." ಶಾಲೆಯಿಂದ ಬರುತ್ತಲೆ ಪುಟ್ಟ ತನ್ನ ಹರಿದ ಬ್ಯಾಗನ್ನು ನೆಲದ ಮೇಲೆ ಇಡುತ್ತಾ ಹೇಳಿದ.ವಾಸ್ತವವಾಗಿ ಅವನ ಹೆಸರು ಪುಟ್ಟ ಅಲ್ಲ.ತಂದೆ ಇಲ್ಲದ ಅವನಿಗೆ ತಾಯಿ ಇಟ್ಟ ಹೆಸರು ನಿಂಗ.ಆದರೆ ಶಾಲೆಗೆ ಸೇರುವಾಗ ಅಮ್ಮನೊಡನೆ ಹಠಮಾಡಿ ಹೆಸರು ಬದಲಾಯಿಸಿಕೊಂಡಿದ್ದ.ಅದಕ್ಕೂ ಒಂದು ಕಾರಣ ಇತ್ತು.ಅದೇನೆಂದರೆ ಆತನಿಗೆ ಅವನ ಅಮ್ಮ ಹೇಳುತ್ತಿದ್ದ ಬಹುತೇಕ ಕತೆಗಳಲ್ಲಿ ಪುಟ್ಟನೇ ನಾಯಕ.ಆದ್ದರಿಂದ ನಿಂಗನಿಗೆ ಪುಟ್ಟನೆಂದರೆ ಸೂಪರ್‍ಮ್ಯಾನ್,ಬ್ಯಾಟ್‍ಮ್ಯಾನ್ ತರಹದ ಹೀರೋ.
"ಯಾಕೋ ಬಿಸಿಯೂಟ ತಿನ್ನಲ್ಲಿಲ್ಲವೇನೋ ಇವತ್ತು.....ಆರು ಗಂಟೆಗೆ ಊಟ ಕೇಳುತ್ತಾ ಇದ್ದೀಯಾ....ಎಂಟು ಗಂಟೆಗೇ ಊಟ..." ಅಮ್ಮನ ಉತ್ತರ.ಅಮ್ಮನಿಗೇನೋ ಮಗನಿಗೆ ಊಟ ಹಾಕುವ ಮನಸ್ಸಿದೆ.ಆದರೆ ಮಗ ರಾತ್ರಿ ಎದ್ದು ಹಸಿವು ಎಂದರೆ ಕೊಡಲು ಏನೂ ಇಲ್ಲ.ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ."ಅಮ್ಮ...." ಎಂದು ಪುಟ್ಟ ಮತ್ತೊಮ್ಮೆ ಕೇಳಿದಾಗ ತಾಯಿಯ ಕರುಳು ಚುರ್ ಎಂದಿತು."ಸರಿ...ಏಳು ಗಂಟೆಗೆ ಹಾಕುತ್ತೇನೆ".ಪುಟ್ಟನ ಪುಟ್ಟ ಹೊಟ್ಟೆಯಲ್ಲಿ ದೊಡ್ಡ ಸದ್ದು.ಪುಟ್ಟನ ಗಮನವೆಲ್ಲಾ ಏಳು ಗಂಟೆಯ ಕಡೆಗೆ.
"ಅಮ್ಮ ಏಳು ಗಂಟೆ ಆಯ್ತು"ಪುಟ್ಟನ ಧ್ವನಿ."ತಟ್ಡೆ ಇಟ್ಟಿದ್ದೀನಿ..ಬಾ...." ಅಮ್ಮನ ಪ್ರತಿಧ್ವನಿ.ಸಮಯ ಏಳು ಆಗಿತ್ತೋ ಇಲ್ಲವೋ ಆದರೆ ಈ ಸಲ ಪುಟ್ಟನ ಕೂಗಿಗೆ ಅಮ್ಮನಿಗೆ ಇಲ್ಲವೆನ್ನಲಾಗಲ್ಲಿಲ್ಲ.
     ತಾಯಿ ಇದ್ದ ಅನ್ನದಲ್ಲಿ ಸ್ವಲ್ಪವನ್ನು ಪುಟ್ಟನಿಗೆ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ."ಅಮ್ಮ..." ಎಂದು ರಾಗ ಎಳೆದನು.ತಾಯಿ ಇದ್ದ ಅನ್ನವನ್ನೆಲ್ಲ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ.ಮತ್ತೊಮ್ಮೆ ಕೇಳಿದಾಗ ತಾಯಿ "ಇವತ್ತು ಇಷ್ಟೇ....ಇನ್ನು ನಾಳೆ ರಾತ್ರಿನೇ ಊಟ..."
ಪುಟ್ಟನಿಗೆ ರೇಗಿತು "ಏನಮ್ಮಾ....ಹೊಟ್ಟೆ ತುಂಬಾ ಊಟನೂ ಇಲ್ಲವಾ...ಬೆಳಿಗ್ಗೆ ತಿಂಡಿಯಂತೂ ಇಲ್ಲ...ರಾತ್ರಿ ಊಟನೂ ಇಲ್ವಾ...??" ಎಂದು ಜೋರಾಗಿಯೇ ಕೂಗಿದ.ಅಮ್ಮನಿಗೆ ನೋವಾಯಿತು.ಹೌದು ಒಂದು ಹೊತ್ತಿನ ಊಟಕ್ಕೂ ಕಷ್ಟ ಇತ್ತು ಆ ಮನೆಯಲ್ಲಿ.
ಪುಟ್ಟನಿಗೆ ಒಂದು ವರ್ಷ ಇರುವಾಗ ಆತನ ತಂದೆ ಕಾಲವಾಗಿದ್ದ.ಮೊದಲೇ ಬಡತನ,ಜೊತೆಗೆ ಗಂಡನ ಸಾವು,ಕೈಯಲ್ಲಿ ಒಂದು ಕೂಸು.ಅದರೂ ಅಲ್ಲಿ ಇಲ್ಲಿ ಕೆಲಸ ಮಾಡಿ ಹೇಗೋ ತಾಯಿ-ಮಗ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.ಆದರೆ ಇತ್ತೀಚೆಗೆ ಆಕೆಗೆ ಎಲ್ಲೂ ಕೆಲಸ ಇಲ್ಲ.ಇದನ್ನೆಲ್ಲಾ ಮಗನಿಗೆ ಹೇಳುವುದು ಹೇಗೆ?ಹೇಳಿದರೂ ಅವನಿಗೆ ಅರ್ಥ ಆಗುವುದು ಕಷ್ಟ.ಆದರೇ ಈಗ ಹೇಳಲೇ ಬೇಕು.ಏಕೆಂದರೆ ಪುಟ್ಟ ಉತ್ತರ ಕೇಳದೇ ಬಿಡುವವನಲ್ಲ.
"ಪುಟ್ಟ..ಇಲ್ಲಿ ನೋಡು..." ಎನ್ನುತ್ತಾ ಅನ್ನದ ಪಾತ್ರೆಯನ್ನು ಕೈಯಲ್ಲಿ ಹಿಡಿದು ಪುಟ್ಟನ ಕಡೆ ತೋರಿದಳು."ಇದರ ತುಂಬಾ ಅನ್ನ ಮಾಡಿದ್ದೆ...ಆದರೆ ಅದನ್ನು ಘಟಪ್ರೇತ ತಿಂದಿದೆ.ನಾನೇನು ಮಾಡಲಿ ಕಂದಾ..." ಪುಟ್ಟ ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ ಪಾತ್ರೆಯನ್ನು ನೋಡಿದ."
"ಯಾರಮ್ಮ ಅದು...!!" ಪುಟ್ಟನ ಪ್ರಶ್ನೆ.
"ಅದು ಒಂದು ದೆವ್ವ....ಈ ಪಾತ್ರೆಯಲ್ಲಿ ಬಂದು ಸೇರಿದೆ..ಅದಕ್ಕೆ ಸಿಟ್ಟು ಬಂದರೆ ನನ್ನನ್ನು ತಿಂದು ಬಿಡುತ್ತದೆ..." ವಿಧಿಯಿಲ್ಲದೆ ಸುಳ್ಳಿನ ಕಥೆ ಹೇಳುತ್ತಿದ್ದಾಳೆ ತಾಯಿ.
ದೆವ್ವ ಎಂದ ಕೂಡಲೇ ಪುಟ್ಟನಿಗೆ ಭಯವಾಯಿತು.ಅದರಲ್ಲೂ ಅದು ಅಮ್ಮನನ್ನು ತಿಂದು ಬಿಟ್ಟರೇ.ಅಯ್ಯೋ ಬೇಡಪ್ಪಾ ಎಂದುಕೊಂಡು ಅಮ್ಮನಿಗೆ ಹೇಳಿದ "ಅಮ್ಮ...ಆ ದೆವ್ವಕ್ಕೇ ಎಷ್ಟು ಬೇಕೋ ಅಷ್ಟು ತಿನ್ನಲಿ...ಉಳಿದದ್ದು ನಮಗೆ ಸಾಕು" 
ತಾಯಿಗೆ ನೋವಾಯಿತು.ಆದರೂ ವಿಧಿ ಇಲ್ಲ.ಅಂದಿನಿಂದ ಪುಟ್ಟ ಶಾಲೆಯಿಂದ ಬಂದೊಡನೆ ಪಾತ್ರೆ ಇಣುಕಿ ನೋಡುತ್ತಿದ್ದ.ಘಟಪ್ರೇತಕ್ಕೆ ಶಾಪ ಹಾಕುತ್ತಿದ್ದ.ಹೀಗೆ ಕೆಲ ದಿನಗಳು ಕಳೆದವು.ಒಂದು ದಿನ ಪುಟ್ಟನ ಅಮ್ಮನಿಗೆ ಒಳ್ಳೆಯ ಸಂಬಳ ಸಿಕ್ಕಿತು.ಅಂದು ಆಕೆ ಮಗನಿಗೆ ಹೊಟ್ಟೆ ತುಂಬಾ ಊಟ ಹಾಕಲು ನಿರ್ಧರಿಸಿದಳು.
ಪುಟ್ಟ ಅಂದು ತಡವಾಗಿ ಬಂದ.ಬಂದವನೇ ಊಟಕ್ಕೆ ಕುಳಿತ.ಅಮ್ಮ ಊಟ ಹಾಕಿದಳು."ಅಮ್ಮ....ಕಿಚಡಿ....!!!" ಪುಟ್ಟನ ಸಂತೋಷಕ್ಕೇ ಪಾರವೇ ಇಲ್ಲ."ಹೌದು..ನಿಂಗಿಷ್ಟ ಅಲ್ವ...ಹೊಟ್ಟೆ ತುಂಬಾ ಊಟ ಮಾಡು...ಇವತ್ತು ಎಷ್ಟು ಬೇಕಾದರು ತಿನ್ನು..."ತಾಯಿ ಹೇಳಿದಳು,
ಪುಟ್ಟ ಪಾತ್ರೆಯನ್ನು ನೋಡಿದ.ಪಾತ್ರೆ ತುಂಬಾ ಕಿಚಡಿ ಇತ್ತು.ಪುಟ್ಟ ತನ್ನ ಮುಖ ಅರಳಿಸಿ "ಅಮ್ಮ....ಹಾಗದ್ರೆ ದೆವ್ವ ಹೋಯ್ತು...ಇನ್ನು ಮೇಲೆ ಹೊಟ್ಟೆ ತುಂಬಾ ಊಟ ಮಾಡಬಹುದು" ಎನ್ನುತ್ತಾ ತನ್ನ ತಟ್ಟೆಗೆ ಕೈ ಹಾಕಿ ಗಬಗಬನೆ ತಿನ್ನಲು ಪ್ರಾರಂಭಿಸಿದ.
ಪುಟ್ಟನ ಮಾತು ಕೇಳಿ ತಾಯಿಗೆ ಏನು ಹೇಳಬೇಕೋ ತಿಳಿಯಲಿಲ್ಲ ಏಕೆಂದರೆ ಆಕೆಗೆ ಇನ್ನು ಮುಂದೆ ಪ್ರತಿದಿನವು ಪುಟ್ಟನ ಹಸಿವು ತೀರಿಸುವ ನಂಬಿಕೆ ಇರಲಿಲ್ಲ.ಕಣ್ಣನ್ನು ಸೀಳಿಕೊಂಡು ಬಂದ ನೀರನ್ನು ತನ್ನ ಹರಿದ ಸೆರಗಿನ ತುದಿಯಿಂದ ಒರೆಸಿಕ್ಕೊಳ್ಳುತ್ತಾ ಮಗನ ತಲೆ ನೇವರಿಸಿದಳು.