Saturday 28 March 2015

ಪ್ರಣತಿ

ಪ್ರಣತಿ
ಎಲ್ಲಿ ನೋಡಿದರಲ್ಲಿ ಜನ.ಅವರಲ್ಲಿ ಅನೇಕರು ವಿದ್ಯಾರ್ಥಿಗಳು,ಇನ್ನು ಕೆಲವರು ಅವರ ಪೋಷಕರು,ಮತ್ತೆ ಕೆಲವರು ಶಿಕ್ಷಕರು,ವಿಶೇಷ ಅತಿಥಿಗಳಾಗಿ ಬಂದವರು ಸುಮಾರು ಜನ.ಅದು ಒಂದು ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭ.ಅದೆಷ್ಟೋ ಪದವಿಧರರಿಗೆ ಪದವಿ ನೀಡುವ ಶುಭ ಘಳಿಗೆ ಅದಾಗಿತ್ತು.ಅದೆಷ್ಟೋ ತಂದೆ-ತಾಯಿಯರ ಕಣ್ಣುಗಳಲ್ಲಿ ತಮ್ಮ ಮಕ್ಕಳ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಂಡ ಆನಂದ ಕಾಣುತ್ತಿತ್ತು.
ಕಾರ್ಯಕ್ರಮ ಪ್ರಾರಂಭವಾಯಿತು.ಅಷ್ಟು ಹೊತ್ತು ಗಿಜುಗುಡುತ್ತಿದ್ದ ಸಭೆ ಸ್ವಲ್ಪ ಶಾಂತವಾಯಿತು.ಕಾರ್ಯಕ್ರಮ ನಿರೂಪಕರು ಅದೊಂದು ದಾಖಲೆಯ ಘಟಿಕೋತ್ಸವ ಏಕೆಂದರೆ ಒಬ್ಬ ವಿದ್ಯಾರ್ಥಿ 22 ಚಿನ್ನದ ಪದಕಗಳನ್ನು ಪಡೆದ್ದಿದ್ದಳು ಎಂದರು.ಈ ವಿಷಯ ಸಭೀಕರಲ್ಲಿ ಆಶ್ಚರ್ಯ ಮೂಡಿಸಿತು.ಅಕೆ ಯಾರು ಎಂದು ನೋಡುವ ತವಕ ಶುರುವಾಯಿತು.ಸಭೆ ಮತ್ತೆ ಧ್ವನಿಯೆದ್ದಿತು.ಆಕೆಯ ಹೆಸರನ್ನು ಘೋಷಿಸಲಾಯಿತು 
"ಸುಕೃತಿ ಆಚಾರ್ಯ.ವಿಶ್ವವಿದ್ಯಾಲಯದ ಇತಿಹಾಸದಲ್ಲಿಯೇ ದಾಖಲೆಯ ಪದಕಗಳನ್ನು ಪಡೆದ ಚಿನ್ನದ ಹುಡುಗಿ" ಎಂದು ಹೇಳುವಾಗಲೇ ಚಪ್ಪಾಳೆಯ ಸದ್ದು ಕಿವಿಗೆ ಬಡಿಯುತ್ತಿತ್ತು.ವೇದಿಕೆಯ ಕಡೆಗೆ ಸಭೀಕರೆಲ್ಲರ ಗಮನ.
ಕಾಲಿಲ್ಲದ ಯುವತಿಯೊಬ್ಬಳು ತನ್ನ ವೀಲ್‍ಚೇರ್‍ನ ಚಕ್ರಗಳನ್ನು ತಿರುಗಿಸುತ್ತ ವೇದಿಕೆಯ ಮಧ್ಯಭಾಗಕ್ಕೆ ಬಂದಳು.ಎಲ್ಲರಿಗೂ ಆಶ್ಚರ್ಯ.ಹೌದು 22 ಪದಕಗಳನ್ನು ಗೆದ್ದ ಸುಕೃತಿ ಕಾಲಿಲ್ಲದ ಹುಡುಗಿ.
ಸುಕೃತಿ ಹುಟ್ಟುತ್ತಲೇ ಕುಂಟಿ ಅಲ್ಲ.ಅವಳಿಗೆ ಸುಮಾರು ಆರು ವರ್ಷ ಇರುವಾಗ ಯಾವುದೋ ಜ್ವರ ಬಂದು ಕಾಲು ಮರಗಟ್ಟಿ ಹೋಗಿತ್ತು.ಆರ್ಯುವೇದ,ಹೋಮಿಯೋಪತಿ,ಅಲೋಪತಿ ಯಾವ ಚಿಕಿತ್ಸೆ ಮಾಡಿದರೂ ಫಲಕಾರಿ ಆಗಲ್ಲಿಲ್ಲ.ದೇವರಲ್ಲಿ ಹರಕೆ ಹೊತ್ತು ನೋಡಿದ್ದೂ ಆಯಿತು ಆದರೂ ಪ್ರಯೋಜನವಿಲ್ಲ.ಆಕೆಯ ಮನೆಯಲ್ಲಿ ಬಡತನ ಇರಲಿಲ್ಲ.ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಹವಣಿಸುವ ಸಾಮಾನ್ಯ ಮಧ್ಯಮ ವರ್ಗದ ಕುಟುಂಬ ಅವರದು.ಒಬ್ಬಳೇ ಮಗಳಿಗೆ ಒದಗಿದ ಪರಿಸ್ಥಿತಿ ತಂದೆ-ತಾಯಿಯರಿಗೆ ನುಂಗಲಾರದ ನೋವಾಗಿತ್ತು.ತನ್ನ ವಯಸ್ಸಿನವರಂತೆ ಆಡುತ್ತಾ,ಕುಣಿಯುತ್ತಾ ಇರಬೇಕಾದ ಮಗಳು ಕೂತಲ್ಲೆ ಕೂರಬೇಕಾದಾಗ ಅವರ ಬವಣೆ ಹೇಳತೀರದ್ದಾಗಿತ್ತು.
"ಕುಂಟಿಗೆ ಕರುಣೆ ಬೇಕು...ಅವಳ ಬದುಕು ಕಷ್ಟ...ಅವಳಿಗಷ್ಟೆ ಅಲ್ಲ ನಿಮಗೂ ಕಷ್ಟ..." ಎಂದು ಹಲವರು ಮಾತನಾಡಿದ್ದು ಕಿವಿಗೆ ಬಿದ್ದಾಗ ಸುಕೃತಿಗೆ ಬದುಕೇ ಬೇಡವೆನಿಸುತ್ತಿತ್ತು.ಆದರೂ ಏನಾದರೂ ಸಾಧಿಸಬೇಕೆಂದು ಪಣ ತೊಟ್ಟವಳು ಸುಕೃತಿ ಆಚಾರ್ಯ.ತನ್ನ ಜೀವನವನ್ನು ವಿದ್ಯೆ ಬೆಳಗುತ್ತದೆ ಎಂದು ಒದಲು ಮನಸ್ಸು ಮಾಡಿದ್ದಳು.ಅದಕ್ಕೆ ಬೆನ್ನೆಲುಬಾಗಿ ನಿಂತವರು ಆಕೆಯ ಪೋಷಕರು.
ಕೆಲವೊಮ್ಮೆ ಆಕೆಯ ಬಲಹೀನ ಕಾಲುಗಳು ವಿಪರೀತ ನೋವು ಕೊಡುತ್ತಿದ್ದವು.ಇದರಿಂದಾಗಿ ಅದೆಷ್ಟೋ ನೋವು ನಿವಾರಕ ಗುಳಿಗೆಗಳು ಆಕೆಯ ಹೊಟ್ಟೆ ಸೇರಿದ್ದವು.ಕೆಲವೊಮ್ಮೆ ಓದೇ ಬೇಡ ಕರುಣೆಯಲ್ಲಿಯೇ ಬದುಕುತ್ತೇನೆ ಎಂದು ಎಣಿಸಿದ್ದು ಉಂಟು ಅವಳಿಗೆ,ಆದರೂ  ಸಾಧಿಸುವ ಛಲ ಬಿಡಲಿಲ್ಲ.ಅವಳ ಆ ಎಲ್ಲ ನೋವಿನ ಫಲವೇ ಅಂದಿನ ಆ ಸಮಾರಂಭದಲ್ಲಿ ಆಕೆ ಗೆದ್ದ ಪದಕಗಳು.ಅಷ್ಟೆ ಅಲ್ಲ ಎಷ್ಟೋ ವಿದೇಶಿ ವಿಶ್ವವಿದ್ಯಾಲಯಗಳು ಅವಳನ್ನು ತಮ್ಮ ವಿದ್ಯಾರ್ಥಿಯನ್ನಾಗಿ ಮಾಡಿಕ್ಕೊಳ್ಳಲು ಸ್ಪರ್ಧೆಯಲ್ಲಿದ್ದವು.
ಮುಖ್ಯ ಅತಿಥಿಗಳು ಪದಕಗಳನ್ನು ನೀಡುವಾಗ ಬಹುತೇಕರು ಎದ್ದು ನಿಂತು ಆಕೆಯ ಛಲಕ್ಕೆ,ಆಕೆಗೆ ಸಲಾಂ ಹೇಳಿದ್ದರು.
"ವಿಕಲಚೇತನೆಯಾದರು ಸಾಧನೆ ಮಾಡಿದ ಸುಕೃತಿ ಆಚಾರ್ಯ ಈಗ ತಮ್ಮ ಅನಿಸಿಕೆಗಳನ್ನು ಹೇಳಲು ಕೇಳಿಕ್ಕೊಳ್ಳುತ್ತೇನೆ" ಕಾರ್ಯಕ್ರಮದ ನಿರೂಪಕರು ಕೇಳಿಕೊಂಡರು.ಮೈಕನ್ನು ಅವಳ ಸಮೀಪಕ್ಕೆ ಕೊಡಲಾಯಿತು.
  "ಎಲ್ಲರಿಗೂ ನಮಸ್ಕಾರ...ಇದು ನನ್ನೊಬ್ಬಳ ಸಾಧನೆ ಅಲ್ಲ..ಈ ಸಾಧನೆಯಲ್ಲಿ ನನ್ನ ತಂದೆ-ತಾಯಿಯ ಪಾಲೂ ಇದೆ...ಇದು ನಮ್ಮ ಮೂವರ ಸಾಧನೆ ಅಪ್ಪ-ಅಮ್ಮ ಇದರಲ್ಲಿ ನಿಮ್ಮ ಪಾಲೂ ಇದೆ" ಎಂದಾಗ ಆ ತಂದೆ ತಾಯಿಯರ ಕಣ್ಣುಗಳಲ್ಲಿ ಸಾರ್ಥಕ ಭಾವನೆ ಕಂಡಿತು. "ಎಲ್ಲರೂ ಹೇಳ್ತಾರೆ ನನ್ನ ತಂದೆ-ತಾಯಿ ನನ್ನಂತಹ ಮಗಳನ್ನು ಪಡೆಯಲು ಪುಣ್ಯ ಮಾಡಿದ್ದರು ಅಂತ..ಆದರೆ ಪುಣ್ಯವಂತೆ ನಾನು...ನನ್ನ ಅಪ್ಪ-ಅಮ್ಮ ಯಾವಾಗಲೂ ಹೇಳುತ್ತಾರೆ ನನ್ನ ಮಗಳು ವಿಕಲಚೇತನೆಯಲ್ಲ ವಿಶೇಷಚೈತನ್ಯದವಳು ಅಂತ...ಯಾರಿಗೆ ಸಿಗ್ತಾರೆ ಇಂತಹ ತಂದೆ-ತಾಯಿ" ಎಂದಾಗ ಮತ್ತೊಮ್ಮೆ ಜೋರಾದ ಚಪ್ಪಾಳೆ.ಆದರೆ ಈ ಬಾರಿ ಆಕೆಯ ಪೋಷಕರಿಗೆ.ಅಲ್ಲಿ ಕುಳಿತವರ ಕಣ್ಣಾಲಿಗಳು ಅದಾಗಲೇ ಒದ್ದೆಯಾಗಿದ್ದವು.
"ಕಡೆಯಲ್ಲಿ ಒಂದು ಮಾತು..."ಸುಕೃತಿ ಆಚಾರ್ಯ ಮತ್ತೆ ತನ್ನ ಮಾತು ಪ್ರಾರಂಭಿಸಿದಳು."ನನ್ನನ್ನು ವಿಕಲಚೇತನೆ ಅಂತ ಎಲ್ಲರೂ ಕರೀತಾರೆ...ಆದರೆ ಯಾರ ಚೇತನದಲ್ಲಿ ಬಲ ಇರುವುದಿಲ್ಲವೋ,ಯಾರಲ್ಲಿ ಆತ್ಮವಿಶ್ವಾಸ ಇರುವುದಿಲ್ಲವೋ ಅವರು ನಿಜವಾದ ವಿಕಲಚೇತನರು...ನನ್ನ ಕಾಲಲ್ಲಿ ಬಲ ಇಲ್ಲ ಅಷ್ಟೆ...ಆದರೆ ಮನಸ್ಸಿನಲ್ಲಿ ಬಲ ಇದೆ...ನನ್ನಲ್ಲಿ ಆತ್ಮವಿಶ್ವಾಸ ಇನ್ನೂ ಸತ್ತಿಲ್ಲ..ಆದ್ದರಿಂದ ನಾನು ವಿಕಲಚೇತನೆ ಅಲ್ಲ....ನನ್ನನ್ನು ವಿಕಲಚೇತನೆ ಅಂತ ಕರೆಯಬೇಡಿ..." ಎಂದಾಗ ಆ ಸಭೆಯಲ್ಲಿ ಜೋರಾದ ಚಪ್ಪಾಳೆಯ ಸದ್ದು ಬಿಟ್ಟು ಬೇರೆ ಏನೂ ಕೇಳಲಿಲ್ಲ.   

Sunday 22 March 2015

ಘಟಪ್ರೇತ

ಘಟಪ್ರೇತ
"ಅಮ್ಮ ಹೊಟ್ಟೆ ಹಸೀತಿದೆ.....ಊಟ ಹಾಕು..." ಶಾಲೆಯಿಂದ ಬರುತ್ತಲೆ ಪುಟ್ಟ ತನ್ನ ಹರಿದ ಬ್ಯಾಗನ್ನು ನೆಲದ ಮೇಲೆ ಇಡುತ್ತಾ ಹೇಳಿದ.ವಾಸ್ತವವಾಗಿ ಅವನ ಹೆಸರು ಪುಟ್ಟ ಅಲ್ಲ.ತಂದೆ ಇಲ್ಲದ ಅವನಿಗೆ ತಾಯಿ ಇಟ್ಟ ಹೆಸರು ನಿಂಗ.ಆದರೆ ಶಾಲೆಗೆ ಸೇರುವಾಗ ಅಮ್ಮನೊಡನೆ ಹಠಮಾಡಿ ಹೆಸರು ಬದಲಾಯಿಸಿಕೊಂಡಿದ್ದ.ಅದಕ್ಕೂ ಒಂದು ಕಾರಣ ಇತ್ತು.ಅದೇನೆಂದರೆ ಆತನಿಗೆ ಅವನ ಅಮ್ಮ ಹೇಳುತ್ತಿದ್ದ ಬಹುತೇಕ ಕತೆಗಳಲ್ಲಿ ಪುಟ್ಟನೇ ನಾಯಕ.ಆದ್ದರಿಂದ ನಿಂಗನಿಗೆ ಪುಟ್ಟನೆಂದರೆ ಸೂಪರ್‍ಮ್ಯಾನ್,ಬ್ಯಾಟ್‍ಮ್ಯಾನ್ ತರಹದ ಹೀರೋ.
"ಯಾಕೋ ಬಿಸಿಯೂಟ ತಿನ್ನಲ್ಲಿಲ್ಲವೇನೋ ಇವತ್ತು.....ಆರು ಗಂಟೆಗೆ ಊಟ ಕೇಳುತ್ತಾ ಇದ್ದೀಯಾ....ಎಂಟು ಗಂಟೆಗೇ ಊಟ..." ಅಮ್ಮನ ಉತ್ತರ.ಅಮ್ಮನಿಗೇನೋ ಮಗನಿಗೆ ಊಟ ಹಾಕುವ ಮನಸ್ಸಿದೆ.ಆದರೆ ಮಗ ರಾತ್ರಿ ಎದ್ದು ಹಸಿವು ಎಂದರೆ ಕೊಡಲು ಏನೂ ಇಲ್ಲ.ಎರಡು ಹೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ."ಅಮ್ಮ...." ಎಂದು ಪುಟ್ಟ ಮತ್ತೊಮ್ಮೆ ಕೇಳಿದಾಗ ತಾಯಿಯ ಕರುಳು ಚುರ್ ಎಂದಿತು."ಸರಿ...ಏಳು ಗಂಟೆಗೆ ಹಾಕುತ್ತೇನೆ".ಪುಟ್ಟನ ಪುಟ್ಟ ಹೊಟ್ಟೆಯಲ್ಲಿ ದೊಡ್ಡ ಸದ್ದು.ಪುಟ್ಟನ ಗಮನವೆಲ್ಲಾ ಏಳು ಗಂಟೆಯ ಕಡೆಗೆ.
"ಅಮ್ಮ ಏಳು ಗಂಟೆ ಆಯ್ತು"ಪುಟ್ಟನ ಧ್ವನಿ."ತಟ್ಡೆ ಇಟ್ಟಿದ್ದೀನಿ..ಬಾ...." ಅಮ್ಮನ ಪ್ರತಿಧ್ವನಿ.ಸಮಯ ಏಳು ಆಗಿತ್ತೋ ಇಲ್ಲವೋ ಆದರೆ ಈ ಸಲ ಪುಟ್ಟನ ಕೂಗಿಗೆ ಅಮ್ಮನಿಗೆ ಇಲ್ಲವೆನ್ನಲಾಗಲ್ಲಿಲ್ಲ.
     ತಾಯಿ ಇದ್ದ ಅನ್ನದಲ್ಲಿ ಸ್ವಲ್ಪವನ್ನು ಪುಟ್ಟನಿಗೆ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ."ಅಮ್ಮ..." ಎಂದು ರಾಗ ಎಳೆದನು.ತಾಯಿ ಇದ್ದ ಅನ್ನವನ್ನೆಲ್ಲ ಹಾಕಿದಳು.ಹಸಿದ ಪುಟ್ಟನಿಗೆ ಅದು ಸಾಲಲಿಲ್ಲ.ಮತ್ತೊಮ್ಮೆ ಕೇಳಿದಾಗ ತಾಯಿ "ಇವತ್ತು ಇಷ್ಟೇ....ಇನ್ನು ನಾಳೆ ರಾತ್ರಿನೇ ಊಟ..."
ಪುಟ್ಟನಿಗೆ ರೇಗಿತು "ಏನಮ್ಮಾ....ಹೊಟ್ಟೆ ತುಂಬಾ ಊಟನೂ ಇಲ್ಲವಾ...ಬೆಳಿಗ್ಗೆ ತಿಂಡಿಯಂತೂ ಇಲ್ಲ...ರಾತ್ರಿ ಊಟನೂ ಇಲ್ವಾ...??" ಎಂದು ಜೋರಾಗಿಯೇ ಕೂಗಿದ.ಅಮ್ಮನಿಗೆ ನೋವಾಯಿತು.ಹೌದು ಒಂದು ಹೊತ್ತಿನ ಊಟಕ್ಕೂ ಕಷ್ಟ ಇತ್ತು ಆ ಮನೆಯಲ್ಲಿ.
ಪುಟ್ಟನಿಗೆ ಒಂದು ವರ್ಷ ಇರುವಾಗ ಆತನ ತಂದೆ ಕಾಲವಾಗಿದ್ದ.ಮೊದಲೇ ಬಡತನ,ಜೊತೆಗೆ ಗಂಡನ ಸಾವು,ಕೈಯಲ್ಲಿ ಒಂದು ಕೂಸು.ಅದರೂ ಅಲ್ಲಿ ಇಲ್ಲಿ ಕೆಲಸ ಮಾಡಿ ಹೇಗೋ ತಾಯಿ-ಮಗ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು.ಆದರೆ ಇತ್ತೀಚೆಗೆ ಆಕೆಗೆ ಎಲ್ಲೂ ಕೆಲಸ ಇಲ್ಲ.ಇದನ್ನೆಲ್ಲಾ ಮಗನಿಗೆ ಹೇಳುವುದು ಹೇಗೆ?ಹೇಳಿದರೂ ಅವನಿಗೆ ಅರ್ಥ ಆಗುವುದು ಕಷ್ಟ.ಆದರೇ ಈಗ ಹೇಳಲೇ ಬೇಕು.ಏಕೆಂದರೆ ಪುಟ್ಟ ಉತ್ತರ ಕೇಳದೇ ಬಿಡುವವನಲ್ಲ.
"ಪುಟ್ಟ..ಇಲ್ಲಿ ನೋಡು..." ಎನ್ನುತ್ತಾ ಅನ್ನದ ಪಾತ್ರೆಯನ್ನು ಕೈಯಲ್ಲಿ ಹಿಡಿದು ಪುಟ್ಟನ ಕಡೆ ತೋರಿದಳು."ಇದರ ತುಂಬಾ ಅನ್ನ ಮಾಡಿದ್ದೆ...ಆದರೆ ಅದನ್ನು ಘಟಪ್ರೇತ ತಿಂದಿದೆ.ನಾನೇನು ಮಾಡಲಿ ಕಂದಾ..." ಪುಟ್ಟ ತನ್ನ ಬಟ್ಟಲು ಕಣ್ಣುಗಳನ್ನು ಅರಳಿಸಿ ಪಾತ್ರೆಯನ್ನು ನೋಡಿದ."
"ಯಾರಮ್ಮ ಅದು...!!" ಪುಟ್ಟನ ಪ್ರಶ್ನೆ.
"ಅದು ಒಂದು ದೆವ್ವ....ಈ ಪಾತ್ರೆಯಲ್ಲಿ ಬಂದು ಸೇರಿದೆ..ಅದಕ್ಕೆ ಸಿಟ್ಟು ಬಂದರೆ ನನ್ನನ್ನು ತಿಂದು ಬಿಡುತ್ತದೆ..." ವಿಧಿಯಿಲ್ಲದೆ ಸುಳ್ಳಿನ ಕಥೆ ಹೇಳುತ್ತಿದ್ದಾಳೆ ತಾಯಿ.
ದೆವ್ವ ಎಂದ ಕೂಡಲೇ ಪುಟ್ಟನಿಗೆ ಭಯವಾಯಿತು.ಅದರಲ್ಲೂ ಅದು ಅಮ್ಮನನ್ನು ತಿಂದು ಬಿಟ್ಟರೇ.ಅಯ್ಯೋ ಬೇಡಪ್ಪಾ ಎಂದುಕೊಂಡು ಅಮ್ಮನಿಗೆ ಹೇಳಿದ "ಅಮ್ಮ...ಆ ದೆವ್ವಕ್ಕೇ ಎಷ್ಟು ಬೇಕೋ ಅಷ್ಟು ತಿನ್ನಲಿ...ಉಳಿದದ್ದು ನಮಗೆ ಸಾಕು" 
ತಾಯಿಗೆ ನೋವಾಯಿತು.ಆದರೂ ವಿಧಿ ಇಲ್ಲ.ಅಂದಿನಿಂದ ಪುಟ್ಟ ಶಾಲೆಯಿಂದ ಬಂದೊಡನೆ ಪಾತ್ರೆ ಇಣುಕಿ ನೋಡುತ್ತಿದ್ದ.ಘಟಪ್ರೇತಕ್ಕೆ ಶಾಪ ಹಾಕುತ್ತಿದ್ದ.ಹೀಗೆ ಕೆಲ ದಿನಗಳು ಕಳೆದವು.ಒಂದು ದಿನ ಪುಟ್ಟನ ಅಮ್ಮನಿಗೆ ಒಳ್ಳೆಯ ಸಂಬಳ ಸಿಕ್ಕಿತು.ಅಂದು ಆಕೆ ಮಗನಿಗೆ ಹೊಟ್ಟೆ ತುಂಬಾ ಊಟ ಹಾಕಲು ನಿರ್ಧರಿಸಿದಳು.
ಪುಟ್ಟ ಅಂದು ತಡವಾಗಿ ಬಂದ.ಬಂದವನೇ ಊಟಕ್ಕೆ ಕುಳಿತ.ಅಮ್ಮ ಊಟ ಹಾಕಿದಳು."ಅಮ್ಮ....ಕಿಚಡಿ....!!!" ಪುಟ್ಟನ ಸಂತೋಷಕ್ಕೇ ಪಾರವೇ ಇಲ್ಲ."ಹೌದು..ನಿಂಗಿಷ್ಟ ಅಲ್ವ...ಹೊಟ್ಟೆ ತುಂಬಾ ಊಟ ಮಾಡು...ಇವತ್ತು ಎಷ್ಟು ಬೇಕಾದರು ತಿನ್ನು..."ತಾಯಿ ಹೇಳಿದಳು,
ಪುಟ್ಟ ಪಾತ್ರೆಯನ್ನು ನೋಡಿದ.ಪಾತ್ರೆ ತುಂಬಾ ಕಿಚಡಿ ಇತ್ತು.ಪುಟ್ಟ ತನ್ನ ಮುಖ ಅರಳಿಸಿ "ಅಮ್ಮ....ಹಾಗದ್ರೆ ದೆವ್ವ ಹೋಯ್ತು...ಇನ್ನು ಮೇಲೆ ಹೊಟ್ಟೆ ತುಂಬಾ ಊಟ ಮಾಡಬಹುದು" ಎನ್ನುತ್ತಾ ತನ್ನ ತಟ್ಟೆಗೆ ಕೈ ಹಾಕಿ ಗಬಗಬನೆ ತಿನ್ನಲು ಪ್ರಾರಂಭಿಸಿದ.
ಪುಟ್ಟನ ಮಾತು ಕೇಳಿ ತಾಯಿಗೆ ಏನು ಹೇಳಬೇಕೋ ತಿಳಿಯಲಿಲ್ಲ ಏಕೆಂದರೆ ಆಕೆಗೆ ಇನ್ನು ಮುಂದೆ ಪ್ರತಿದಿನವು ಪುಟ್ಟನ ಹಸಿವು ತೀರಿಸುವ ನಂಬಿಕೆ ಇರಲಿಲ್ಲ.ಕಣ್ಣನ್ನು ಸೀಳಿಕೊಂಡು ಬಂದ ನೀರನ್ನು ತನ್ನ ಹರಿದ ಸೆರಗಿನ ತುದಿಯಿಂದ ಒರೆಸಿಕ್ಕೊಳ್ಳುತ್ತಾ ಮಗನ ತಲೆ ನೇವರಿಸಿದಳು.