Saturday 19 September 2015

ಧಾವಂತ

ಧಾವಂತ

"ವಿನ್ಯಾಸವಿಲ್ಲ.....ಬರೀ ಧಾವಂತ.....ಕ್ಷಣದಲ್ಲಿ ಬದುಕು ಕಟ್ಟಿಕೊಳ್ಳಬೇಕು......" ಪ್ರಜ್ಞಾನಂದರಾಯರು ಹೇಳುತ್ತಲೇ ಒಳಗೆ ಬಂದರು."ನಗರದ ಬದುಕು....ನಾಗರೀಕರ ಬದುಕು....."  
    "ಶುರುವಾಯ್ತಾ ಅಪ್ಪಾ ನಿಂದು...."ಮಗಳು ಕ್ಷಿಪ್ರ ಗುಡುಗಿದಳು.ಅಪ್ಪನ ಪ್ರಜ್ಞೆಯ ಮಾತುಗಳು ಆಕೆಗೆ ಅಜೀರ್ಣ.ಅಲ್ಲದೆ ಪ್ರಜ್ಞಾನಂದರಾಯರು ಯಾವಾಗಲೂ ಇಂತಹ ಏನಾದರೂ ವಿಷಯವನ್ನು ಹೇಳುತ್ತಲೇ ಇರುತ್ತಾರೆ.ಯಾಕೋ ರಾಯರು ಮುಖ ಸಣ್ಣಗೆ ಮಾಡಿದರು.ಮಗಳಿಗೆ ಸ್ವಲ್ಪ ಇರುಸುಮುರುಸಾಗಿ "ಯಾಕಪ್ಪ....ಏನಾಯ್ತು??"
"ಏನಿಲ್ಲ ಪುಟ್ಟಾ....ಯಾಕೋ ಹೀಗೆ ಅನ್ನಿಸ್ತು...ನಿನ್ನ ಬದುಕು ಹಾಗೆ ಅಲ್ವ??"
"ಹೌದು ಅಪ್ಪಾ...ಇಲ್ಲಿ ಎಲ್ಲರ ಬದುಕು ಹಾಗೆ....ಇಲ್ಲಿ ಎಲ್ಲಾ ಫಾಸ್ಟ್ ಆಗಿ ಆಗಬೇಕು....ನಾವು ಹೊಂದಿಕೊಳ್ಳಲೇ ಬೇಕು..."
    "ಮಿತಿಯಿಲ್ಲದ ವೇಗ....ಅದೇ ಸಮಸ್ಯೆ...."ರಾಯರ ಮುಖದಲ್ಲಿ ನಗು.
"ಫಾಸ್ಟ್ ಪುಡ್ ಕಾಲ ಅಪ್ಪಾ ಇದು....ಇಲ್ಲಿ ನಿನಗೆ ಏನು ಬೇಕೋ ಅದು ಕ್ಷಣದಲ್ಲಿ ಸಿಗುತ್ತೆ..." ಕ್ಷಿಪ್ರ ಉತ್ತರಿಸಿದಳು.
"ಸುಖಕ್ಕೆ ಬರವಿಲ್ಲ.....ಆದರೆ ಸೌಖ್ಯಕ್ಕೆ...." ಮತ್ತೆ ನಕ್ಕರು ರಾಯರು.
    ಅಪ್ಪನ ಮಾತುಗಳು ಪುರಾಣ ಎನಿಸುತ್ತಿದ್ದ ಕ್ಷಿಪ್ರಾಳಿಗೆ ಅದೇಕೋ ಅಪ್ಪನ ಮಾತುಗಳು ಸರಿಯೆನಿಸತೊಡಗಿತು.ಹಾಗೆಯೇ ಅಪ್ಪನ ಮಾತು ಕೇಳುತ್ತಾ ಕುಳಿತುಬಿಟ್ಟಳು.
"ಬದುಕಿನಲ್ಲಿ ಯಾಂತ್ರಿಕತೆ ಬೇಕು...ಆದರೆ ಬದುಕೇ ಯಂತ್ರಿಕವಾದರೆ??ಅರ್ಥವಿರೋಲ್ಲ ಅಲ್ವ....."
ಕ್ಷಿಪ್ರಳಿಗೆ ಉತ್ತರ ತೋಚಲಿಲ್ಲ.ಮನಸ್ಸಿನಲ್ಲಿ ಏನೋ ತಳಮಳ.ತಿಂಗಳಿಗೆ ಆರಂಕಿಯ ಸಂಬಳ,ವಾಸಕ್ಕೆ ಒಂದು ಪ್ಲಾಟ್,ಆದರೂ ಬದುಕು ತುಂಬ ಸಣ್ಣದು ಎಂಬ ವಿಚಾರ ಅವಳನ್ನು ಸದಾ ಕಾಡುತ್ತಿತ್ತು.
"ಆದರೆ ಈಗಿನ ಬದುಕೇ ಹೀಗೆ ಅಪ್ಪ....ಯಾವಾಗಲೂ ಚುರುಕಾಗಿ ಇರಬೇಕು....ಸ್ವಲ್ಪ ನಿಧಾನವಾದರೂ ಹಿಂದೆ ಉಳಿದು ಬಿಡುತ್ತೇವೆ...." ಮಗಳ ಸಮರ್ಥನೆ.
"ಎಲ್ಲರಿಗೂ ತಾವೇ ಶ್ರೇಷ್ಠ ಅನ್ನೋ ಭಾವನೆ.....ಬೇರೆಯವರ ಭಾವನೆಗಳನ್ನು ಗೌರವಿಸಬೇಕು ಅನ್ನೋ ಕನಿಷ್ಠ ಸೌಜನ್ಯವು ಇಲ್ಲದವರು....ನಗರದ ಬದುಕು ನಾಗರೀಕರ ಬದುಕು" ಮತ್ತೆ ನಕ್ಕರು ರಾಯರು. "ನಮ್ಮಲ್ಲಿ ಇರುವ ಜ್ಞಾನ ಬೇರೆಯವರಲ್ಲಿ ಅಜ್ಞಾನ ಇದೆ ಅನ್ನೋದಕ್ಕೆ ಉಪಯೋಗವಾಗಬಾರದು....ಬದಲಿಗೆ ಅವರಲ್ಲಿ ಇರುವ ಅಜ್ಞಾನದ ಪೊರೆ ಕಳಚುವುದಕ್ಕೆ ಉಪಯೋಗವಾಗಬೇಕು...."
ಅಪ್ಪನ ಈ ಮತುಗಳು ಮಗಳಿಗೆ ತಪ್ಪು ಎನ್ನಲಾಗಲಿಲ್ಲ."ಆದರೆ....." ಸಮರ್ಥಿಸಿಕೊಳ್ಳಬೇಕು ಎಂದೆನಿಸಿದರು ಮಾತುಗಳು ಬರಲಿಲ್ಲ.
"ಒಂದೇ ಅಪಾರ್ಟ್‍ಮೆಂಟಿನಲ್ಲಿ ಇದ್ದರೂ ಪಕ್ಕದಲ್ಲಿ ಯಾರು ಇದ್ದಾರೆ ಅಂತಾನೆ ಗೊತ್ತಿರಲ್ಲ.....ಜಾಗತೀಕರಣದ ಮಾತು ಆಡುತ್ತೇವೆ.....ಆದರೆ ಜೀವನ ಎಷ್ಟು ಸಂಕುಚಿತವಾಗಿದೆ ಅಲ್ವ.....ಮನಸ್ಸಿನ ಭಾವನೆಗಳನ್ನು ಭಿತ್ತರಿಸುವುದಕ್ಕೆ ನೆರವಾಗುವ ಸಾಮಾಜಿಕ ಜಾಲತಾಣಗಳು,ಅದರ ಮೂಲಕವೇ ಆ ಭಾವನೆಗಳಿಗೆ ಪ್ರತಿಕ್ರಿಯೆಯೂ ಬಂದುಬಿಡುತ್ತದೆ....ಎಂತಹ ಸೋಜಿಗ ಅಲ್ಲವಾ..??" ಪ್ರಜ್ಞಾನಂದರಾಯರ ಪ್ರಜ್ಞೆಯ ಮಾತುಗಳು ಧಾವಂತದ ಬದುಕಿನಲ್ಲಿ ವಿಲೀನಳಾಗಿದ್ದ ಕ್ಷಿಪ್ರಳಿಗೆ ಯೋಚಿಸುವಂತೆ ಮಾಡಿತ್ತು.
"ಹೌದು ಅಪ್ಪಾ ಇಲ್ಲಿ ಎಲ್ಲಾ ಹೀಗೆ.....ಯಾರಿಗೂ ಸಮಯ ಇಲ್ಲ ಇದ್ದರೂ ತಾಳ್ಮೆ ಇಲ್ಲ..ತಂತ್ರಜ್ಞಾನ ಇಷ್ಟು ಮುಂದುವರಿದಿದೆ...ಹಾಗಾಗಿ ಆ ತಂತ್ರಜ್ಞಾನದ ಉಪಯೋಗ ಆಗುತ್ತಾ ಇದೆ ಅಷ್ಟೇ...." ಮಗಳ ಸಮರ್ಥನೆ.
"ಬರೀ ನಾಗರೀಕತೆ...ವಿಕಾಸ ಇಲ್ಲ.....ನಮ್ಮ ಹೊರಗೆ ಆಗುವುದು ನಾಗರೀಕತೆ....ಅದೇ ನಮ್ಮ ಒಳಗೆ ಆಗುವುದು ವಿಕಾಸ....ಹೊರಗೆ ಎಷ್ಟೇ ಝಗಮಗಿಸುವ ಬೆಳಕು ಇದ್ದರೂ ಮನಸ್ಸಲ್ಲಿ ಕತ್ತಲೆ ಇದ್ದರೆ ಅದು ಹಾಗೆ ಉಳಿದುಬಿಡುತ್ತೆ....ಅದೇ ಮನಸ್ಸು ಬೆಳಕಿನಲ್ಲಿ ಇದ್ದರೆ ಹೊರಗೆ ಕತ್ತಲಿದ್ದರೂ ಅಳಿಸುವ ಪ್ರಯತ್ನ ಮಾಡಬಹುದು....." ಉತ್ತರ ಕೊಡಲು ಕಷ್ಟವಾಗುವ ಪ್ರಶ್ನೆಗಳಿಗೆ ಕ್ಷಿಪ್ರಾಳ ಬಳಿ ಉತ್ತರವಿಲ್ಲ.
"ಆದರೆ ಇದಕ್ಕೆಲ್ಲಾ ಏನು ಪರಿಹಾರ ಅಪ್ಪ...ಬದಲಾವಣೆ ಆಗುವುದಾದರೂ ಹೇಗೆ??" ಏನೂ ತೋಚದ ಮಗಳು ಅಪ್ಪನ ಮಾತುಗಳು ಸರಿಯೆನಿಸಿ ಉತ್ತರದ ಮೊರೆ ಹೋದಳು.
"ಗೊತ್ತಿಲ್ಲ ಪುಟ್ಟಾ....ಇದು ಒಳ್ಳೆಯ ಬೆಳವಣಿಗೆ ಅಂತೂ ಅಲ್ಲ.....ಜಗಳವಾದರೆ ಅದನ್ನು ಚಿತ್ರೀಕರಿಸಿ ನಾಲ್ಕು ಜನರಿಗೆ ತೋರಿಸಿ ಪ್ರಶಂಸೆ ಗಿಟ್ಟಿಸಿಕೊಳ್ಳುವ ಮನೋಭಾವ ಹೋಗಬೇಕು....ವಿಕೃತಿ ಹೋಗಬೇಕು.....ವಿಕಾಸವಾಗಬೇಕು.....ಮನುಷ್ಯ ಮನುಷ್ಯನಾಗಿಯೇ ಉಳಿಯಬೇಕು....ಯಂತ್ರಗಳನ್ನು ತಯಾರು ಮಾಡುವ ಭರದಲ್ಲಿ ಮನುಷ್ಯನೇ ಯಂತ್ರವಾದರೆ ಕಷ್ಟ....ಬಹಳ ಕಷ್ಟ.......ನಗರದ ಬದುಕು...ನಾಗರೀಕರ ಬದುಕು" ಎಂದು ನಗುತ್ತಾ ರಾಯರು ನಿಟ್ಟುಸಿರುಬಿಟ್ಟರು.
ಆದರೆ ಕ್ಷಿಪ್ರಾಳ ತಳಮಳ ಹಾಗೆಯೇ ಉಳಿದುಬಿಟ್ಟಿತು.

Tuesday 8 September 2015

ಮಹಾ-ಮಳೆ

ಮಹಾ-ಮಳೆ

ಮಳೆ-ಮಹಾನಗರಗಳಲ್ಲಿ ವಾಸಿಸುವ ಬಹುತೇಕರಿಗೆ ಭಯ ಹುಟ್ಟಿಸುವ ಪದ.ಮಳೆ ಬಂತೆಂದರೆ ನೋಡಿದಲ್ಲೆಲ್ಲಾ ನೀರು.ನೀರು ಸಂಗ್ರಹವಾಗಲು ರಸ್ತೆಯ ಹೊಂಡಗಳು ಸಹಕಾರಿ.ತಗ್ಗು ಪ್ರದೇಶದ ಮನೆಗಳಿಗೆ ನೀರು ಕರೆಯದೆ ಬಂದ ಅತಿಥಿಗಳಂತೆ.ಕತ್ತಲಾದ ಮೇಲೆ ಮಳೆ ಬಂದರಂತೂ ರಾತ್ರಿ ಇಡೀ ನೀರು ಹೊರಗೆ ಹಾಕುವುದರಲ್ಲಿಯೇ ಕಳೆದುಹೋಗುತ್ತದೆ.ಕಾಂಕ್ರೀಟ್ ಕಾಡಿನಲ್ಲಿ ನೀರು ಹೋಗಲು ಜಾಗವಾದರೂ ಹೇಗೆ ಬರಬೇಕು?!.
ಮಹಾನಗರಗಳಲ್ಲಿ ಮಳೆಯ ಜೊತೆಗೆ ಬಳುವಳಿಯಾಗಿ ಸಿಗುವುದು ಟ್ರಾಫಿಕ್ ಜಾಮ್.ಮಳೆಯಾದಾಗ ಒಂದು ಮೈಲಿ ಹೋಗಲು ಒಂದು ಗಂಟೆ ಬೇಕಾಗುವ ಹಲವಾರು ಉದಾಹರಣೆಗಳು ಸಿಗುತ್ತವೆ.ಟ್ರಾಫಿಕ್ ಜಾಮ್‍ನಿಂದ ಎಲ್ಲಾ ರೀತಿಯ ಜನರೂ ಪೇಚಿಗೆ ಸಿಲುಕುತ್ತಾರೆ.ಆದರೆ ತುಂಬಾ ಒದ್ದಾಟ ನೆಡೆಸುವವರು ಕಾರಿನಲ್ಲಿ ಹೋಗುವವರು.ಟ್ರಾಫಿಕ್ ಜಾಮ್‍ಗಳು ಮಹಾನಗರಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂಗತಿ.ಆಮೆಗತಿಯಲ್ಲಿ ಸಾಗುವ ವಾಹನಗಳ ಸಾಲು ಮಳೆ ಬಂದಾಗ ಬಸವನ ಹುಳುವಿನಂತೆ ಸಾಗುತ್ತವೆ.
     ಬಸ್ಸಿನಲ್ಲಿ ಚಲಿಸುವ ಜನರಿಗೆ ಮಳೆ ಬಂದರೆ ಬೆಚ್ಚಗಿನ ಅನುಭವ.ತುಂಬಿದ ಬಸ್ಸುಗಳು ಬೇರೆ ದಿನಗಳಲ್ಲಿ ಕಿರಿಕಿರಿ ಉಂಟುಮಾಡಿದರೂ ಮಳೆ ಬಂದಾಗ ಬೆಚ್ಚಗಿನ ಅನುಭವ ನೀಡುವುದಂತೂ ಸತ್ಯ.ಎಂದಿನಂತೆ ಕೂರಲು ಸೀಟ್ ಸಿಕ್ಕಿದವರು ಆರಾಮಾಗಿ ಮಳೆಯ ಮಜಾವನ್ನು ಅನುಭವಿಸಿದರೆ,ನಿಂತ ಕೆಲವರು ಹಸಿದ ತೋಳಗಳು ಉಳಿದ ಮಾಂಸಕ್ಕೆ ಕಾಯುವಂತೆ,ಯಾರದರೂ ಸೀಟಿನಲ್ಲಿ ಕುಳಿತವರು ಏಳುತ್ತಾರಾ ಎಂದು ಕಾಯುತ್ತಾರೆ.ಮತ್ತೆ ಕೆಲವರು ಇಯರ್ ಪೋನನ್ನು ಕಿವಿಗೆ ಇರಿಸಿಕೊಂಡು ತಮ್ಮಿಷ್ಟದ ಹಾಡುಗಳನ್ನೋ,ಎಫ್‍ಎಂ ಸ್ಟೇಷನ್ ಕೇಳಿಕೊಂಡು ಮಳೆಯ ಪರಿಯೇ ಇಲ್ಲದಂತೆ ಪ್ರಯಾಣಿಸುತ್ತಾರೆ.ಎಲ್ಲಾದರೂ ತುಂಬಾ ಟ್ರಾಫಿಕ್ ಜಾಮ್ ಎನಿಸಿದರೆ,ಬಸ್ಸಿನಿಂದ ಇಳಿದು ಆರಾಮಾಗಿ ಮಳೆಯಲ್ಲಿ ನೆನೆದುಕೊಂಡು ಅಥವಾ ಓಡಿಕೊಂಡು ಬಸ್ಸಿಗಿಂತ ಮುಂಚೆಯೇ ತಮ್ಮ ಮನೆ ಸೇರಿರುತ್ತಾರೆ.
ಬೈಕ್ ಅಥವಾ ಟೂ ವೀಲರ್ ಇಟ್ಟುಕೊಂಡಿರುವವರು ಸಂದಿಗಳಲ್ಲಿ ನುಸುಳಿ ಹೇಗೋ ಬಸ್ಸಿಗಿಂತಾ ಮೊದಲೇ ತಮ್ಮ ಮನೆಗಳನ್ನು ತಲುಪುತ್ತಾರೆ.ಮಳೆಯು ವಿಪರೀತವಾಗಿ ತಾಳ್ಮೆ ಕೆದಕಿದರೆ ಗಾಡಿಯನ್ನು ಬದಿಗೆ ಹಾಕಿ ಸ್ವಲ್ಪ ತಾಳ್ಮೆ ತಂದುಕೊಂಡು ಮಳೆ ಕೊಂಚ ಕಡಿಮೆಯಾದ ನಂತರ ತಮ್ಮ ಗಾಡಿಗಳನ್ನು ಏರಿ ಮತ್ತೆ ಪಯಣ ಮುಂದುವರಿಸುತ್ತಾರೆ.
ಬಸ್ಸು ಮತ್ತು ಬೈಕ್‍ಗಳಲ್ಲಿ ಹೋಗುವವರು ಮಳೆ ಬಂದಾಗ ಮಾತ್ರ ಕಾರು ಹೊಂದಿದವರಿಗಿಂತಾ ಅದೃಷ್ಟವಂತರಾಗಿರುತ್ತಾರೆ.ಕಾರು ಹೊಂದಿದವರು ಟ್ರಾಫಿಕ್ ಜಾಮ್‍ಗಳಲ್ಲಿ ಸಿಕ್ಕಿಬಿದ್ದರೆ ಕಥೆ ಮುಗಿದಂತೆಯೇ.ಕಾರಿನಲ್ಲಿಯೇ ಕುಳಿತು ಸಿಗ್ನಲ್ ಗ್ರೀನ್ ಆಗುವವರೆಗೆ ಕಾಯುವುದು.ಸ್ವಲ್ಪ ಮುಂದೆ ಹೋದ ನಂತರ ಮತ್ತೊಂದು ವಾಹನಗಳ ಸರತಿಯಲ್ಲಿ ಹೋಗಿ ನಿಲ್ಲುವುದು.ಆಗ ಇವರ ಸಹಾಯಕ್ಕೆ ಬರುವುದು ರೇಡಿಯೋ ಜಾಕಿಗಳ ಮಾತುಗಳು.ತಮಗಿಷ್ಟದ ರೇಡಿಯೋ ಚಾನೆಲ್ ಅನ್ನು ಟ್ಯೂನ್ ಮಾಡಿ ರೇಡಿಯೋ ಜಾಕಿಗಳ ಮಾತುಗಳನ್ನು ಕೇಳಿಕೊಂಡು ಹೇಗೋ ಕಾಲ ಕಳೆಯುತ್ತಾರೆ,ಆರ್‍ಜೆಗಳು ಕೊಡುವ ಟ್ರಾಫಿಕ್ ಅಪ್‍ಡೇಟ್‍ಗಳನ್ನು ಕೇಳಿದಾಗ ಮನಸ್ಸಿಗೆ ಏನೋ ಸಮಾಧಾನ,ಮಳೆಯ ಅವಾಂತರದಿಂದ ಉಂಟಾದ ಟ್ರಾಫಿಕ್ ಜಾಮ್‍ನಲ್ಲಿ ಪೇಚಿಗೆ ಸಿಲುಕಿದವರು ತಮ್ಮಂತೆಯೇ ಅನೇಕರು ಇದ್ದಾರೆ ಎಂಬುದೇ ಆ ಸಮಾಧಾನಕ್ಕೆ ಕಾರಣ.ಕಾರು ಚಲಾಯಿಸಿಕೊಂಡು ಮನೆ ತಲುಪುವುದರಲ್ಲಿ ಸಾಕುಸಾಕಾಗಿ ಹೋಗುತ್ತದೆ.
ಮುಂದೆ ಇರುವ ವಾಹನಗಳನ್ನು ಎಚ್ಚರಿಸಲು ಕೆಲವು ವಾಹನ ಸವಾರರು ರಣಕಹಳೆಯನ್ನು ಊದುತ್ತಾರೆ.ಕರ್ಕಶವಾದ ಸದ್ದು ಹಲವರಿಗೆ ಕಿರಿಕಿರಿ ಉಂಟುಮಾಡುವುದಂತೂ ಸತ್ಯ.ಇನ್ನು ಪಾದಚಾರಿಗಳ ಮೇಲೆ ನೀರನ್ನು ಹಾರಿಸಿಕೊಂಡು ಹೋಗುವ ವಾಹನಗಳು ಯಾವುದೋ ಅಮ್ಯುಸ್‍ಮೆಂಟ್ ಪಾರ್ಕಿನ ಅನುಭವ ಕೊಡುವುದು ಖಂಡಿತ.ಮನೆಗೆ ತಲುಪಿದ ಕೂಡಲೇ ಸ್ನಾನ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಬಹುದು.ಇನ್ನು ರಸ್ತೆಗಳಲ್ಲಿ ನಿಂತ ರಾಶಿ ನೀರಿನ ಮೇಲೆ ವಾಹನಗಳು ಹೋದರೆ ಆ ನೀರು ಸಮುದ್ರದ ಅಲೆಗಳು ದಡಕ್ಕೆ ಅಪ್ಪಳಿಸಿ ಮತ್ತೆ ಹಿಂದಕ್ಕೆ ಹೋಗುವಂತೆ,ಪುಟ್‍ಪಾತ್‍ನ ಕಂಪೌಂಡ್‍ಗಳಿಗೆ ತಾಗಿ ಮತ್ತೆ ವಾಪಸ್ ಬರುತ್ತವೆ.
ಜನರೇ ಓಡಾಡಲು ಕಷ್ಟವಾಗುವ ಮಹಾನಗರಗಳಲ್ಲಿ ನೀರು ಎಲ್ಲಿ ತಾನೇ ಹೋಗಲು ಸಾಧ್ಯ?ಸಿಕ್ಕ ಸಿಕ್ಕ ಸಂದಿಗಳಲ್ಲಿ ತೋರಲು ಮಳೆಯ ನೀರಿಗೂ ಸ್ವಲ್ಪ ಸಮಯ ಬೇಕಾಗುವುದು ಸತ್ಯವೇ ಸರಿ.ಒಟ್ಟಿನಲ್ಲಿ ಮಹಾ-ಮಳೆ(ಮಹಾನಗರಗಳಲ್ಲಿ ಬೀಳುವ ಮಳೆ)ಸೃಷ್ಟಿಸುವ ಅವಾಂತರ ಅದನ್ನು ಅನುಭವಿಸಿದವರಿಗೆ ಗೊತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕುವ ನಾಗರೀಕರಿಗೆ ಮಳೆ ಎಂದರೆ ಸಣ್ಣಗೆ ನಡುಕ ಬರುವುದಂತೂ ಸತ್ಯ.