Tuesday 8 March 2016

ಪತ್ರೋಡೆ

ಪತ್ರೋಡೆ
(ಪತ್ರೋಡೆ-ಇದು ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೆಸು ಎಲೆಯಿಂದ ಮಾಡುವ ಖಾರದ ತಿಂಡಿ)
ಹತ್ತನೆ ತರಗತಿಯಾದ್ದರಿಂದ ಪ್ರದೀಪ ಬರುವುದು ಆ ದಿನ ಎಂದಿನಂತೆಯೇ ತಡವಾಗಿತ್ತು.ಜೀವನದ ಅತ್ಯಂತ ದೊಡ್ಡ ಮೈಲಿಗಲ್ಲು ಹತ್ತನೇ ತರಗತಿ ಎಂದೆಲ್ಲಾ ಹೇಳಿ ಆತನ ಶಿಕ್ಷಕರು ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ಆದ್ದರಿಂದ ಐದು ಗಂಟೆಗೆ ತರಗತಿಗಳು ಮುಗಿದಿದ್ದರು,ಸ್ಪೆಷಲ್ ಕ್ಲಾಸ್‍ನ ದೆಸೆಯಿಂದಾಗಿ ಆತ ಬರುವುದು ಏನಿಲ್ಲವೆಂದರೂ ಸುಮಾರು ಏಳು ಗಂಟೆ ಆಗಿರುತಿತ್ತು.ಹಸಿವಿನಿಂದ ಮಗ ಬರುವುದನ್ನು ತಿಳಿದ ತುಳಸಿ ಆತನಿಗಾಗಿ ನಿತ್ಯವೂ ಏನಾದರೂ ಮಾಡಿ ಇಡುತ್ತಿದ್ದಳು.ಆತ ಬದುವುದನ್ನೇ ಕಾಯುತ್ತಿದ್ದ ಆಕೆ,ಮನೆಯ ಮುಂಬಾಗಿಲಿನ ಗೇಟಿನ ಸದ್ದಾದೊಡನೆ,ಮಾಡಿದ ತಿಂಡಿಯನ್ನು ಪ್ಲೇಟಿಗೆ ಹಾಕಿ,ಅತನ ಎದುರಿಗೆ ತಂದಿಟ್ಟಳು.
"ಇವತ್ತೂ ಪತ್ರೋಡೆನಾ...??" ಪ್ರದೀಪನ ರಾಗ. "ಸುಮಾರು ದಿನ ಆಯ್ತಲ್ಲಾ ಮಾರಾಯ ಮಾಡದೇ....ಆ ತೋಟದ ಮನೆಯ ಆಂಟಿ ಇದ್ದಾರಲ್ಲ ಅವರು ಇವತ್ತು ತೋಟಕ್ಕೆ ಹೋಗಿದ್ದರಂತೆ...ಪಾಪ,ನಮ್ಮ ಮನೆಗೆ ಅಂತಾ ಹೇಳಿ ಕೆಸು ತಂದು ಕೊಟ್ಟರು....ಹಸಿ ಹಸಿ ಇತ್ತು ಎಲೆ...ಆದ್ದರಿಂದ ಇವತ್ತೆ ಏನಾದರೂ ಮಾಡಬೇಕು ಅಂತಾ ಪತ್ರೋಡೆ ಮಾಡಿದೆ..." ಎಂದು ಮಗ ಕೇಳಿದ ಪ್ರಶ್ನೆಗೆ ಪತ್ರೋಡೆಯ ವೃತ್ತಾಂತವನ್ನೇ ವಿವರಿಸಿದಳು ತುಳಸಿ.
"ಅಯ್ಯೋ...ಇದನ್ನೆಲ್ಲಾ ಯಾಕೆ ಹೇಳ್ತಿದ್ದೀಯಾ...??ಮೊದಲೇ ಇವತ್ತು ಸೋಷಿಯಲ್ ಸ್ಪೆಷಲ್ ಕ್ಲಾಸ್ ಇದ್ದಿದ್ದು....ಆ ಪುರಾಣ ಕೇಳೆ ಸಾಕಾಗಿದೆ....ಇನ್ನು ನೀನೂ ಈ ಪತ್ರೋಡೆ ಪುರಾಣ ಹೇಳಬೇಡ...ನಂಗೆ ಕೇಳಕ್ಕೆ ಆಗಲ್ಲ...ಇದು ನಂಗೆ ಬೇಡ..." ಎಂದು ತನ್ನ ಎದುರಿನ ಟೇಬಲ್ ಮೇಲೆ ಇದ್ದ ಪ್ಲೇಟನ್ನು ದೂರ ಸರಿಸಿದನು ಪ್ರದೀಪ್."ಚೂರು ತಿನ್ನೋ ಪುಟ್ಟ...ಅಪ್ಪ ಚೆನ್ನಾಗಿದೆ ಅಂತ ಇನ್ನೊಂದು ಸಲ ಹಾಕೊಂಡು ತಿಂದ್ರು...ಒಂದು ಚೂರು ತಿಂದು ನೋಡು...ಚೆನ್ನಾಗಿಲ್ಲ ಅಂದ್ರೆ ಬಿಡು..ಆಮೇಲೆ ನಿಂಗೆ ಒತ್ತಾಯ ಮಾಡಲ್ಲ..." ಎಂದು ಹೇಳುತ್ತಾ ಟೇಬಲ್ ಮೇಲಿದ್ದ ಪ್ಲೇಟನ್ನು ಕೈಗೆತ್ತಿಕೊಂಡು ಮತ್ತೆ ಮಗನ ಬಳಿಗೆ ತಂದಳು ತುಳಸಿ.
"ನಂಗೆ ಬೇಡಾ......"ಈ ಬಾರಿ ಆತನ ರಾಗ ಜೋರಾಗಿಯೇ ಇತ್ತು."ನಂಗೆ ಇದು ತಿಂದ್ರೆ ಗಂಟಲು ತುರಿಸುತ್ತೆ...." ತಿನ್ನಲು ಮನಸ್ಸಿಲ್ಲದ ಪ್ರದೀಪನಿಗೆ ಹೇಳಲು ತೋಚಿದ್ದು ಅದೊಂದೇ ಕಾರಣ."ಇದು ಒಳ್ಳೆ ಕೆಸು ಮಾರಾಯಾ...ಸರೀ ಹುಣಸೆಹಣ್ಣು ಹಾಕಿದ್ದೀನಿ....ಗಂಟಲು ತುರಿಸಲ್ಲ...ಚೂರು..." "ಅಮ್ಮಾ...ಪ್ಲೀಸ್...ಬೇಡ ಅಂದ್ರೆ ಬೇಡ...." ತಾಯಿ ಮಾತು ಮುಗಿಸುವ ಮುನ್ನವೇ ಖಾರವಾಗಿ ನುಡಿದು ತನ್ನ ರೂಮಿನ ಕಡೆಗೆ ಹೆಜ್ಜೆ ಹಾಕಿದನು ಪ್ರದೀಪ.
"ಹಾಗದರೆ ಬೇರೆ ಏನಾದರು ಮಾಡಿ ಕೊಡ್ಲಾ....ನೀರು ದೋಸೆ ತಿಂತೀಯಾ??" ಎಂದು ಮಮತೆಯಿಂದಲೆ ಕೇಳಿದಳು ತುಳಸಿ.
"ಅಬ್ಬಾ...!!" ಮುಖವನ್ನು ಸಣ್ಣಗೆ ಮಾಡುತ್ತಾ "ಯಾರಿಗೆ ಬೇಕು ಆ ನೀರುದೋಸೆ?!" ಮತ್ತೊಮ್ಮೆ ಬೇಸರದಿಂದ ಹೇಳಿದನು ಪ್ರದೀಪ.
"ಸರಿ ಅವಲಕ್ಕಿ ತಿಂತೀಯಾ??ಬೇಡ ಅಂದ್ರೆ ಚಪಾತಿ ಮಾಡ್ತೇನೆ" ಎಂದು ಎರಡು ಆಯ್ಕೆಗಳನ್ನು ಜೊತೆಯಾಗಿಯೇ ಇಟ್ಟಳು ತುಳಸಿ.
"ಪತ್ರೋಡೆ,ಅವಲಕ್ಕಿ,ಚಪಾತಿ,ದೋಸೆ....ಇದು ಯಾವುದೂ ನಂಗೆ ಬೇಡ...ನಂಗೆ ಇಪ್ಪತ್ತು ರೂಪಾಯಿ ಕೊಡು...ನಾನು ಹೊರಗೆ ಹೋಗಿ ಏನಾದರೂ ತಿಂದು ಬರ್ತೀನಿ" ಎಂದು ಹಣಕ್ಕಾಗಿ ತಾಯಿಯ ಬಳಿ ಬೇಡಿಕೆ ಇಟ್ಟನು.
"ದಿನ ಹೊರಗಿನದ್ದು ತಿಂತೀಯಾ....ಆರೋಗ್ಯಕ್ಕೆ ಒಳ್ಳೆದಲ್ಲಾ ನೋಡು....ಊಟನೂ ಸರಿಯಾಗಿ ಮಾಡಲ್ಲ.."ಎಂದು ಹೇಳುತ್ತಲೇ ಇಪ್ಪತ್ತು ರೂಪಾಯಿಗಳನ್ನು ಮಗನ ಕೈಗೆ ಇಟ್ಟಳು ತುಳಸಿ.ಖುಷಿಯಿಂದ ಹೊರಗೆ ಹೋಗುತ್ತಿದ್ದ ಮಗನನ್ನು ತಡೆದು "ಈ ಹೂವನ್ನ ಹಾಗೆ ಆ ತೋಟದ ಮನೆಯ ಆಂಟಿಗೆ ಕೊಟ್ಟು ಹೋಗು...ಇಲ್ಲದಿದ್ರೆ ನಾನು ಇದಕ್ಕೋಸ್ಕರವೇ ಅವರ ಮನೆಗೆ ಹೋಗಬೇಕು...ಹೋದ್ರೆ ಸುಮಾರು ಹೊತ್ತು ಆಗುತ್ತೆ..." ಎನ್ನುತಿರುವಂತೆಯೇ ಆತ ತಾಯಿಯ ಕೈಯಲ್ಲಿದ್ದ ಹೂವಿನ ಕವರನ್ನು ತೆಗೆದುಕೊಂಡು ಖುಷಿಯಿಂದ ಹೊರಗೆ ಹೋದ.ತನ್ನಿಷ್ಟದ ತಿಂಡಿಯನ್ನು ತಿಂದು ವಾಪಾಸ್ ಬಂದ.
ಮನೆಯವರೆಲ್ಲಾ ಊಟಕ್ಕೆ ಕುಳಿತ್ತಿದ್ದರು.ತುಳಸಿ ಎಲ್ಲರಿಗೂ ಬಡಿಸುತ್ತಿದ್ದಳು.ಅಷ್ಟು ಹೊತ್ತಿಗೆ ಮನೆಯ ಪೋನ್ ರಿಂಗಣಿಸಿತು.
"ಹಲೋ ತುಳಸಿ ನಾನು....ಕೆಸು ಚೆನ್ನಾಗಿರಲಿಲ್ವಾ??" ಆ ಕಡೆಯಿಂದ ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ತುಳಸಿ ಅವಕ್ಕಾದಳು.
"ಚೆನ್ನಾಗಿತ್ತು...ಹಸಿ ಹಸಿ ಇತ್ತಲ್ಲಾ...ಇವತ್ತು ಪತ್ರೋಡೆ ಮಾಡಿದ್ದೆ...ಇನ್ನು ಸ್ವಲ್ಪ ಇದೆ...ನಾಳೆ ಏನಾದರೂ ಮಾಡ್ತೇನೆ..." ಎಂದು ವಿವರಣೆ ನೀಡಿದಳು.
"ಹೌದಾ..!!ಮತ್ತೆ ನಿಮ್ಮ ಮಗ ಹೇಳಿದ 'ಕೆಸು ಗಂಟಲು ತುರಿಸುತ್ತೆ, ಆದ್ದರಿಂದ ಇನ್ನು ಮೇಲೆ ಕೆಸು ಬೇಡವಂತೆ ಅಂತ ಅಮ್ಮ ಹೇಳಿದಳು' " ಎಂದು ಆ ಕಡೆಯಿಂದ ತೋಟದ ಮನೆಯ ಆಂಟಿಯ ವಿವರಣೆ.
ಈ ಮಾತು ಕೇಳುತ್ತಿದ್ದಂತೆಯೇ ತುಳಸಿಗೆ ಮಗನ ಹುಡುಗಾಟದ ಕೆಲಸದ ಅರಿವಾಯಿತು."ಸುಳ್ಳು ಹೇಳಿದ್ದಾನೆ...ಅವನಿಗೆ ಪತ್ರೋಡೆ ಆಗಲ್ಲ...ಕಳ್ಳ ಹಾಗಾಗಿ ನೀವು ಕೆಸು ಕೊಡದೇ ಬೇಡ ಅಂತಾ ನಿಮ್ಮ ಹತ್ರ ಸುಳ್ಳು ಹೇಳಿದ್ದಾನೆ....ಹಾಗೆನಾದ್ರು ಬೇಡ ಅಂತ ಆಗಿದ್ರೆ ನಾನೇ ನಿಮ್ಮ ಹತ್ರ ಹೇಳ್ತಾ ಇದ್ದೆ..." ಎಂದು ತುಳಸಿ ಸ್ಪಷ್ಟನೆ ನೀಡಿದಳು.
"ಅದೇ ಅಂದುಕೊಂಡೆ...ಊಟ ಆಯ್ತಾ ತುಳಸಿ" ಎಂದು ಮತ್ತೆ ಸ್ನೇಹಿತೆಯರ ಹರಟೆ ಪೋನಿನಲ್ಲಿಯೇ ಪ್ರಾರಂಭವಾಯಿತು.
"ಅಮ್ಮ....ಉಪ್ಪಿನಕಾಯಿ..." ಎಂದು ಡೈನಿಂಗ್ ಹಾಲ್‍ನಿಂದ ಬಂದ ದನಿ ಸ್ನೇಹಿತೆಯರ ಹರಟೆಗೆ ತಡೆಯಾಯಿತು.ಮನಸ್ಸಿಲ್ಲದ ಮನಸ್ಸಿನಿಂದ ಸಂಭಾಷಣೆಯನ್ನು ಮೊಟಕುಗೊಳಿಸಿ ಉಪ್ಪಿನಕಾಯಿ ಬಡಿಸಲು ಮಗನ ಕಡೆಗೆ ಬಂದಳು ತುಳಸಿ.
"ಏಯ್ ಮಂಗ...ಆ ಆಂಟಿ ಹತ್ರ 'ಇನ್ನು ಮೇಲೆ ಕೆಸು ಬೇಡ ಅಂತ ಅಮ್ಮ ಹೇಳಿದಳೆ' ಅಂತ ಹೇಳಿದ್ದೀಯಾ " ಎಂದಾಗ ಪ್ರದೀಪ ತಲೆಬಗ್ಗಿಸಿ ನಗಲಾರಂಭಿಸಿದನು."ಬರಿ ತರ್ಲೆ ಕೆಲಸನೇ ಮಾಡದು...ಇನ್ನು ಮೇಲೆ ಪತ್ರೋಡೆ ಮಾಡಲ್ಲ...ಮಾಡಿದ್ರು ನಿಂಗೆ 'ಬೇಕಾ..??' ಅಂತ ಸಹ ಕೇಳಲ್ಲ..." ಎಂದು "ಸಾಕಾ...ಉಪ್ಪಿನಕಾಯಿ.." ಎನ್ನುತ್ತಾ ಉಪ್ಪಿನಕಾಯಿಯನ್ನು ಮಗನ ತಟ್ಟೆಗೆ ಹಾಕಿದಳು ತುಳಸಿ.
ಅಬ್ಬಾ ಪತ್ರೋಡೆ ರಗಳೆ ತಪ್ಪಿತಲ್ಲಾ ಎಂದು ನಿಟ್ಟುಸಿರು ಬಿಟ್ಟನು ಪ್ರದೀಪ.
*********************************************************************************************************
ಕೆಲಸ ಸಿಕ್ಕಿದ ಮೂರೇ ವರ್ಷಗಳಲ್ಲಿ ಪ್ರದೀಪನಿಗೆ ವಿದೇಶ ಯೋಗ ಪ್ರಾಪ್ತವಾಗಿತ್ತು.ಆತನನ್ನು ಕ್ಯಾಂಪಸ್ ಇಂಟರ್‍ವ್ಯೂನಲ್ಲಿ ಆಯ್ಕೆ ಮಾಡಿಕೊಂಡ ಕಂಪನಿ,ಮೂರೇ ವರ್ಷಗಳಲ್ಲಿ ಆತನ ಸಂಬಳದಲ್ಲಿ ಬಾರಿ ಜಿಗಿತವನ್ನು ನೀಡಿ,ಆತನನ್ನು ಅಮೆರಿಕೆಯ ತನ್ನ ಬ್ರಾಂಚ್‍ಗೆ ಕಳುಹಿಸಿತ್ತು.ಈಗ ಆತನ ಸಂಬಳ ಅದೆಷ್ಟೋ ಡಾಲರ್‍ಗಳು.ಮೊದಲಿಂದಲೂ ವಿದೇಶದ ಬಗ್ಗೆ ಸ್ವಲ್ಪ ಹೆಚ್ಚಿನ ವ್ಯಾಮೋಹವೇ ಇದ್ದದ್ದರಿಂದ ಪ್ರದೀಪನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು.
ಅಂದು ಅದೇಕೋ ಪ್ರದೀಪನಿಗೆ ಪತ್ರೋಡೆ ತಿನ್ನಬೇಕು ಎಂದು ಬಹಳ ಆಸೆ ಆಯಿತು.ಬಾಲ್ಯದಲ್ಲಿ ಪತ್ರೋಡೆ ಎಂದರೆ ಮೂಗು ಮುರಿಯುತ್ತಿದ್ದ ಆತನಿಗೆ ತನ್ನ ಮನೆಯಿಂದ ಸಾವಿರಾರು ಮೈಲಿ ಬಂದ ಮೇಲೆ ಅದೇಕೆ ಆ ಆಸೆ ಬಂದಿತು ಎಂದರೆ ಆತನಿಗೆ ಉತ್ತರ ಗೊತ್ತಿಲ್ಲ.ಆತ ಪತ್ರೋಡೆ ಸಿಗುವ ಹೋಟೆಲ್‍ಗಾಗಿ ಆನ್‍ಲೈನ್‍ನಲ್ಲಿ ಹುಡುಕಲು ಪ್ರಾರಂಭಿಸಿದ.ಎಷ್ಟು ಹುಡುಕಿದರೂ ಆತನಿಗೆ ತನ್ನ ಊರಿನ ಪತ್ರೋಡೆ ಸಿಗುವ ಹೋಟೆಲ್ ಸಿಗಲಿಲ್ಲ.
ಕ್ಷಣಾರ್ಧದಲ್ಲಿ ತಮಗೆ ಬೇಕಾದನ್ನು ಆರ್ಡರ್ ಮಾಡಿ,ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಮನೆ ಬಾಗಿಲಿಗೆ ವಸ್ತುಗಳು  ಬರುವ ಈ ಕ್ಷಿಪ್ರಯುಗದಲ್ಲಿ ತಾನು ಬಯಸುತ್ತಿರುವ ಪತ್ರೋಡೆ ಸಿಗುತಿಲ್ಲವಲ್ಲ ಎಂದು ಪ್ರದೀಪನಿಗೆ ತುಂಬಾ ಬೇಸರವಾಯಿತು.ಹಾಗೆ ನೋಡಿದರೆ,ಆನ್‍ಲೈನ್‍ನಲ್ಲಿ ಸಿಗುವ ಹಲಾವಾರು ದುಬಾರಿ ವಸ್ತುಗಳಿಗೆ ಹೋಲಿಸಿದರೆ ಪತ್ರೋಡೆ ಒಂದು ಲೆಕ್ಕವೇ ಅಲ್ಲ.ಆದರೂ ಅದು ಸಿಗುತ್ತಿಲ್ಲ ಎಂದಾಗ ಅದು ಆತನಿಗೆ ನುಂಗಲಾರದ ತುತ್ತಾಯಿತು.ಅಮ್ಮನನ್ನು ಕೇಳಿದ್ದರೆ ಅದೆಷ್ಟು ಬೇಗ ಮಾಡಿಕೊಡುತಿದ್ದಳೋ ಎಂದುಕೊಳ್ಳುತ್ತಾ ತನ್ನ ಹುಡುಕಾಟ ಮುಂದುವರೆಸಿದ.ಆದರೂ ಆತನಿಗೆ ತನ್ನ ಇಷ್ಟದ ಪತ್ರೋಡೆ ದೊರೆಯಲೇ ಇಲ್ಲ.
ತನಗಿಂತಾ ಮೊದಲೇ ವಿದೇಶಕ್ಕೆ ಬಂದು ನೆಲೆಸಿದ್ದ ತನ್ನ ಕೆಲವು ಸ್ನೇಹಿತರಲ್ಲಿಯೂ ತನ್ನ ಪತ್ರೋಡೆಯ ಬಯಕೆಯನ್ನು ತಿಳಿಸಿದನು ಪ್ರದೀಪ.
"ಅಲ್ಲಾ ಲೇ ಪ್ರದೀಪ...ಇಲ್ಲಿ ನಮಗೆ ನಮ್ಮ ದೇಶದ ಊಟ ಸಿಕ್ಕೋದೆ ಕಷ್ಟ...ಇನ್ನು ಪತ್ರೋಡೆ ಕೇಳ್ತಾ ಇದ್ದೀಯಲ್ಲಾ....ಇಲ್ಲಿ ಅದೆಲ್ಲಾ ಸಿಗಲ್ವೋ...ಸಿಕ್ಕಿದರೂ ನಿನ್ನ ಅಮ್ಮ ಮಾಡುವಷ್ಟು ರುಚಿಯಾಗಿಯಂತು ಇರಲ್ಲಾ..." ಎಂದು ಒಬ್ಬ ಹೇಳಿದರೆ, "ಹೋಗಿ ಬರ್ಗರ್ ಶಾಪಲ್ಲಿ ಬರ್ಗರ್ ತಿನ್ನು...ಅದರ ಮಧ್ಯೆ ಎಲೆ ಇಟ್ಟಿರ್ತಾರಲ್ಲಾ...ಅದನ್ನೇ ಕೆಸು ಎಲೆ ಅಂದುಕೋ...ಪತ್ರೋಡೆ ಅಂದುಕೊಂಡು ಕಣ್ಣು ಮುಚ್ಚಿಕ್ಕೊಂಡು ಅದನ್ನೇ ಪತ್ರೋಡೆ ಅಂದುಕೊಂಡು ತಿಂದುಬಿಡು..." ಎಂದು ತಮಾಷೆ ಮಾಡಿ ನಕ್ಕವನು ಇನ್ನೊಬ್ಬ."ಇಲ್ಲಾ ಅಂದ್ರೆ ಇನ್ನೊಂದು ಎಂಟು ತಿಂಗಳು ಕಾಯಬೇಕು...ಹೇಗಿದ್ರು ಅಷ್ಟು ಹೊತ್ತಿಗೆ ಡಿಸೆಂಬರ್ ಬರುತ್ತೆ...ಆಗ ಹೇಗಿದ್ರು ನೀನು ಊರಿಗೆ ಹೋಗ್ತಿಯಲ್ಲಾ...ಆಗ ನಿನ್ನ ಅಮ್ಮನ ಕೈಯಲ್ಲಿ ಪತ್ರೋಡೆ ಮಾಡಿಸಿಕೊಂಡು ತಿನ್ನು..." ಎಂದು ಮತ್ತೊಬ್ಬ ಹೇಳಿದ.
ಪ್ರದೀಪನಿಗೆ ತನ್ನ ಹಿರಿಯ ಸ್ನೇಹಿತರೆಲ್ಲರೂ ಹೇಳಿದ ಮಾತು ಬೇಸರ ತರಿಸಿತು.ಎಷ್ಟೋ ಜನರ ಕನಸಿನ ದೇಶದಲ್ಲಿ ತಾನಿದ್ದರೂ,ಅಲ್ಲದೇ ತಂತ್ರಜ್ಞಾನದ ಉಪಯೋಗವನ್ನು ಯಥೇಚ್ಚವಾಗಿ ಮಾಡಿಕೊಂಡಿದ್ದ ತಾನಿದ್ದ ದೇಶದಲ್ಲಿ ತನ್ನೂರಿನ ಒಂದು ತಿಂಡಿ ಸಿಗುವುದಿಲ್ಲವಲ್ಲಾ ಎನ್ನುವುದೇ ಆತನಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿತ್ತು.ಆತನ ಆ ಕ್ಷಣದ ಧ್ಯೇಯ ಹೇಗಾದರೂ ಮಾಡಿ ಪತ್ರೋಡೆ ತಿನ್ನುವುದಾಗಿತ್ತು.ಹಾಗೂ ಹೀಗೂ ಮಾಡಿ ಪತ್ರೋಡೆ ಸಿಗುವ ಹೋಟೆಲ್ ಒಂದನ್ನು ಗೊತ್ತುಮಾಡಿದನು ಪ್ರದೀಪ.
ಪತ್ರೋಡೆ ತಿನ್ನಲೆಂದೇ ತಾನಿದ್ದ ಸ್ಥಳದಿಂದ ಸುಮಾರು ಎರಡು ತಾಸಿನ ಪ್ರಯಾಣ ನೆಡೆಸಿದ್ದ ಪ್ರದೀಪ.ದಾರಿಯುದ್ದಕ್ಕೂ ಆತನಿಗೆ ಪತ್ರೋಡೆಯ ನೆನಪು.ಅಲ್ಲೇ ಒಂದಿಷ್ಟು ತಿಂದು,ಮತ್ತೊಂದಷ್ಟನ್ನು ಕಟ್ಟಿಸಿಕೊಂಡು ಮನೆಗೆ ತಂದು ಪ್ರಿಡ್ಜನಲ್ಲಿ ಇಟ್ಟು,ಬೇಕುಬೇಕೆನಿಸಿದಾಗ ಒವೆನ್‍ನಲ್ಲಿ ಬಿಸಿ ಮಾಡಿ ಒಂದೆರಡು ದಿನ ತಿನ್ನಬಹುದು ಎಂದೆಲ್ಲಾ ಯೋಚಿಸುತ್ತಿದ್ದ ಪ್ರದೀಪ.ಅಂತೂ ಇಂತೂ ತಾನು ಕಾಯುತ್ತಿದ್ದ ಹೋಟೆಲ್ ಬಂದೇ ಬಿಟ್ಟಿತು.
"ಒನ್ ಪ್ಲೇಟ್ ಪತ್ರೋಡೆ...." ಎಂದು ಆರ್ಡರ್ ಹೇಳಿ ಅಲ್ಲದೇ "ಹೌ ಮಚ್ ಟೈಮ್ ಇಟ್ ವಿಲ್ ಟೇಕ್.." ಎಂದೂ ಕೇಳಿದ್ದ.ತಾನು ಆರ್ಡರ್ ಮಾಡಿದ್ದ ಹತ್ತು ನಿಮಿಷಗಳಲ್ಲಿ ತಾನು ಬಯಸಿದ್ದ ಪತ್ರೋಡೆ ತನ್ನೆದುರೇ ಇದ್ದದ್ದನ್ನು ಕಂಡು ಪ್ರದೀಪನಿಗೆ ತುಂಬಾ ಖುಷಿಯಾಯಿತು.ಆದರೆ ಅದು ನೋಡಲು ಸಾಮಾನ್ಯವಾಗಿ ಮಾಡುವ ಪತ್ರೋಡೆಯಂತೆ ಕಾಣಲಿಲ್ಲ.ಆದರೂ ತನ್ನ ಆಸೆ ತೀರಿತಲ್ಲಾ ಎಂದುಕೊಳ್ಳುತ್ತಾ ತುತ್ತೊಂದನ್ನು ಬಾಯಿಗೆ ಇಟ್ಟನು.
ತನ್ನ ಅಮ್ಮನ ನೆನಪು ಹಾಗೆಯೇ ಆಕೆ ತನ್ನ ಪ್ರೀತಿಯನ್ನು ಸೇರಿಸಿ ಮಾಡುತ್ತಿದ್ದ ಪತ್ರೋಡೆಯ ನೆನಪಾಗಿ,ಆತನಿಗೆ ಅದೇಕೋ ಇನ್ನೊಂದು ತುತ್ತನ್ನು ಬಾಯಿಗಿಡಲು ಮನಸ್ಸಾಗಲೇ ಇಲ್ಲ.

Wednesday 2 March 2016

ಪುಂಗವ

ಪುಂಗವ
ಐದು ವರ್ಷಗಳ ಕೆಳಗೆ ಹೇಗಿತ್ತೋ ಈಗಲೂ ಹಾಗೆ ಇದ್ದ ತನ್ನ ಊರನ್ನು ಕಂಡು ವಿಶ್ವೇಶ್‍ಗೆ ಅದೇನೋ ಸಂತೋಷ.ಕಾಂಕ್ರೀಟಿಕರಣದ ಜಂಜಾಟಕ್ಕೆ ಬಲಿಬೀಳದೆ ಇನ್ನೂ ತನ್ನ ಸ್ವಂತಿಕೆಯನ್ನು ಇಟ್ಟುಕೊಂಡಿದ್ದ ಕೆಲವೇ ಊರುಗಳಲ್ಲಿ ವಿಶ್ವೇಶ್‍ನ ಊರು ಒಂದಾಗಿತ್ತು.ಅದೇ ತೆಂಗು,ಅಡಿಕೆಯ ತೋಟ.ಅಲ್ಲಲ್ಲಿ ಕಾಣುವ ಬಾಳೆಯ ಗಿಡಗಳು.ಮೊಬೈಲ್ ಟವರ್‍ಗಳ ಆಕ್ರಮಣಕ್ಕೆ ಸಿಲುಕದೆ ಇನ್ನೂ ತನ್ನ ಅಸ್ಥಿತ್ವವನ್ನು ಉಳಿಸಿಕೊಂಡಿರುವ ಗುಬ್ಬಚ್ಚಿಗಳು.ಅವುಗಳ ಆಶ್ರಯಕ್ಕೆ ನೆರವಾಗಿರುವ ಹಂಚಿನ ಮನೆಗಳು.ಹೀಗೆ ನಗರದ ಬದುಕಿನಲ್ಲಿ ಕಳೆದು ಹೋಗಿದ್ದ ವಿಶ್ವೇಶ್‍ಗೆ ಬೇರೆಯ ಪ್ರಪಂಚಕ್ಕೆ ಕಾಲಿಟ್ಟಂತೆಯೇ ಆಯಿತು.
ವಿಶ್ವೇಶ್‍ನ ನಿಜವಾದ ಹೆಸರು ವಿಶ್ವನಾಥ,ಆದರೆ ಇಂಜಿನಿಯರಿಂಗ್ ಮಾಡಿ ಕರ್ಪೋರೇಟ್ ಜಗತ್ತಿಗೆ ಕಾಲಿಟ್ಟ ವಿಶ್ವನಾಥನಿಗೆ ಜಗತ್ತೇ ಗೆದ್ದ ಅನುಭವ.ಹಾವ-ಭಾವ,ವೇಷ,ಭಾಷೆ ಎಲ್ಲಾ ಬದಲಾಯಿತು.ಅದಕ್ಕೆ ವಿಶ್ವನಾಥ ತನ್ನ ಹೆಸರನ್ನು ವಿಶ್ವೇಶ್ ಎಂದು ಬದಲಿಸಿಕೊಂಡಿದ್ದ.ಬೆಂಗಳೂರಿಗೆ ಹೋದ ಮೇಲಂತೂ ಅವನು ಊರಿಗೆ ಬರುವುದೇ ಅಪರೂಪವಾಗಿತ್ತು.ಕಾಂಕ್ರೀಟ್ ಕಾಡಿನಲ್ಲಿ ಬದುಕು ಕಟ್ಟಿಕೊಂಡಿದ್ದ ಅವನಿಗೆ ತನ್ನ ಊರನ್ನು ಒಮ್ಮೆ ಭೇಟಿ ಮಾಡಲು ಸುಮಾರು ಎಂಟು ವರ್ಷಗಳು ಬೇಕಾಯಿತು.ಅದಕ್ಕಾಗಿಯೇ ಹಸಿರ ಕಾಡು ಅವನಿಗೆ ಸ್ವರ್ಗದ ಅನುಭವ ನೀಡಿತು.
ಊರಿನ ಬೀದಿಗಳಲ್ಲಿ ಹೋಗುವಾಗ,ಹಳೆಯ ನೆನಪುಗಳು ಆತನ ಮೆದುಳಿನಲ್ಲಿ ಪ್ರವಹಿಸತೊಡಗಿದವು.ತಾನು ಓಡಾಡುತ್ತಿದ್ದ ಬೀದಿಗಳು,ತಾನು ಕಲಿತ ಶಾಲೆ ಹೀಗೆ ಒಂದೊಂದೆ ನೆನಪುಗಳು ತಲೆಯಲ್ಲಿ ಚಲಿಸತೊಡಗಿದವು.ಆತನ ಮೂವತ್ತು ಲಕ್ಷದ ಕಾರು ಮಾತ್ರ ಆ ಊರಿನ ಅರೆಕಾಂಕ್ರೀಟಿನ ರಸ್ತೆಗೆ ಅಷ್ಟಾಗಿ ಒಗ್ಗಿಕೊಳ್ಳಲಿಲ್ಲ.ಒಂದಷ್ಟು ಊರು ಸುತ್ತಿದ ಮೇಲೆ ಕಾರನ್ನು ಮನೆಯೊಂದರ ಮುಂದೆ ನಿಲ್ಲಿಸಿ ಕಾರಿನಿಂದ ಇಳಿದ.
"ಚಿದಾನಂದ....ಚಿದಾನಂದ...." ಹೆಸರು ಕೂಗುತ್ತಾ ತೆರೆದ ಬಾಗಿಲ ಒಳಗೆ ಹೋದ ವಿಶ್ವೇಶ್."ಯಾರು?" ಹೆಂಗಸೊಬ್ಬಳು ತನ್ನ ಕೈಯನ್ನು ಸೀರೆಗೆ ಒರೆಸಿಕೊಳ್ಳುತ್ತಾ ಬಂದಳು.
"ಚಿದಾನಂದ ಇಲ್ವಾ??ನಾನು ವಿಶ್ವೇಶ್ ಸಾರಿ ವಿಶ್ವನಾಥ ಅಂತಾ ಅವನ ಸ್ನೇಹಿತ..." ವಿಶ್ವೇಶ್ ಹೇಳಿದ.
"ನಮಸ್ಕಾರ...ಅವ್ರು ಇಲ್ಲ ತೋಟಕ್ಕೆ ಹೋಗಿದ್ದಾರೆ....ನೀವು ಕೂತುಕೊಳ್ಳಿ.." ಎಂದು ಸೋಫಾದತ್ತಾ ಬೆರಳು ಮಾಡಿ ತೋರಿಸಿದಳು."ಬಾಯಾರಿಕೆಗೆ ಏನು ಮಾಡ್ಲಿ?ಶರಬತ್ತಾ...??ಮಜ್ಜಿಗೆಯಾ...??" ಎಂದು ಮುಂದುವರೆಸಿದಳು."ಪರವಾಗಿಲ್ಲ...ಏನು ಬೇಡ.." ಎಂದ ವಿಶ್ವೇಶ್.
"ಸ್ವಲ್ಪ ಮಜ್ಜಿಗೆ ತರ್ತೀನಿ....ಬಿಸಿಲಿನ ದಣಿವು ಆರುತ್ತೆ..." ಎಂದು ಹೇಳುತ್ತಾ ಉತ್ತರಕ್ಕೆ ಕಾಯದೆ ಅಡುಗೆ ಮನೆಯ ಕಡೆಗೆ ಓಡಿದಳು.ವಿಶ್ವೇಶ್ ಸುತ್ತಲೂ ನೋಡಿದ.ಹಳೆಯ ಮನೆ.ಜಾಗಕ್ಕೆ ಬರವಿಲ್ಲದಷ್ಟು ವಿಶಾಲ.ದೊಡ್ಡ ದೊಡ್ಡ ಕಂಬಗಳು.ಅದಾಗಲೇ ಆತನ ನಗರದ ಒಂದು ಕೋಟಿಯ ಪ್ಲಾಟ್ ಆ ಮನೆಯ ಎದುರು ನಗಣ್ಯವಾದಂತೆ ಕಂಡಿತು.
"ತೊಗೊಳ್ಳಿ....ಅವರು ಇನ್ನೇನು ಬರಬಹುದು....ಹೇಳಿ ಕಳುಹಿಸಿದ್ದೀನಿ...." ಎಂದು ದೊಡ್ಡ ಸ್ಟೀಲ್ ಲೋಟವನ್ನು ವಿಶ್ವೇಶ್‍ಗೆ ಕೊಟ್ಟಳು ಅನಸೂಯ.ತಣ್ಣಗಿನ ಮಜ್ಜಿಗೆಯನ್ನು ಹೀರುತ್ತಾ ವಿಶ್ವೇಶ್ ಕೇಳಿದ "ತಾವು..??" "ನಾನು ಅನಸೂಯ....ಚಿದಾನಂದ ಅವರ ಹೆಂಡತಿ..." ಎಂದಳು.
"ಮದುವೆಯಲ್ಲಿ ನೋಡಿದ್ದು...ಹಾಗಾಗಿ ಮುಖ ಅಷ್ಟು ನೆನಪಿಲ್ಲ...." ಎನ್ನುವಾಗಲೇ "ವಿಶ್ವ...ವಿಶ್ವನಾಥ..." ಬಾಗಿಲಿನಿಂದ ದನಿಯೊಂದು ಕೇಳಿತು.
"ಹಾಯ್...ಚಿದಾನಂದ...ಹೇಗಿದ್ದೀಯಾ??" ಬಹು ವರ್ಷಗಳ ನಂತರ ಸಿಕ್ಕಿದ ಸ್ನೇಹಿತರು ಆಲಿಂಗಿಸಿಕೊಂಡರು."ನಾನು ಆರಾಮಿದ್ದೀನಿ...ನೀನು??" ಎಂದು ಪ್ರಶ್ನೆಯೊಂದಿಗೆ ಉತ್ತರ ಸೇರಿಸಿ ಕೇಳಿದ ವಿಶ್ವೇಶ್.ಹೀಗೆ ಉಭಯಕಶಲೋಪರಿಯ ಒಂದಷ್ಟು ಮಾತುಗಳ ನಂತರ "ಸರಿ...ಎಷ್ಟು ಜನ ಮಕ್ಕಳು ನಿಂಗೆ??" ವಿಶ್ವೇಶ್‍ನ ಪ್ರಶ್ನೆ.
"ಇಬ್ಬರು...ಒಂದು ಹೆಣ್ಣು...ಒಂದು ಗಂಡು...ನಿನಗೆ?" ಎಂದು ಪ್ರಶ್ನೆ ಇಟ್ಟ ಚಿದಾನಂದ."ಒಬ್ಬ ಮಗ...ಅಂಕುಶ್..." ಎಂದು ಹೇಳುವಾಗಲೇ,"ಅಪ್ಪಾ...
ಎಷ್ಟು ಹೊತ್ತಿಗೆ ಹೊರಡೋದು ಅಂತಾ ಅಮ್ಮ ಕೇಳ್ತಾ ಇದ್ದಾಳೆ..." ಎನ್ನುತ್ತಾ ಬಂದಳು ಸೌಪರ್ಣಿಕ."ಪುಟ್ಟಿ..ಬಾ ಇಲ್ಲಿ..ಈ ಮಾವನ ಹೆಸರು ವಿಶ್ವನಾಥ...ನನ್ನ ಗೆಳೆಯ..." ಎಂದು ಮಗಳಿಗೆ ಹೇಳುತ್ತಾ "ಇವಳು ನನ್ನ ಮಗಳು ಸೌಪರ್ಣಿಕ"ಎಂದು ವಿಶ್ವೇಶ್‍ಗೆ ತನ್ನ ಮಗಳನ್ನು ಪರಿಚಯಿಸಿದನು ಚಿದಾನಂದ.
"ಬಾಳೆಹಣ್ಣು ನಾಲ್ಕು ಗೊನೆ ತಂದು ಹೊರಗೆ ಇಟ್ಟಿದ್ದಾರೆ...ಹೊರಡುವಾಗ ಕಾರಿಗೆ ಹಾಕಿದರೆ ಸಾಕಲ್ಲ ಅಪ್ಪಾ.." ಎಂದು ಮಗ ಆತ್ರೇಯ ಚಿದಾನಂದನನ್ನು ಕೇಳಿದ."ಹಾ!!ಸಾಕು..." ಎಂದು ಹೇಳುತ್ತಾ "ಇವನು ನನ್ನ ಕೀರುತಿಗೆ....ಆತ್ರೇಯ..." ಎಂದು ಹೇಳುತ್ತಾ "ಇವನು ನನ್ನ ಸ್ನೇಹಿತ...ವಿಶ್ವನಾಥ" ಎಂದು ಪರಸ್ವರ ಪರಿಚಯಿಸಿದನು ಚಿದಾನಂದ.
  ಮಾತುಗಳ ನಡುವೆ ಪೋನ್ ರಿಂಗಣಿಸಿತು."ಎಕ್ಸಕ್ಯೂಸ್ ಮಿ.." ಎನ್ನುತ್ತಾ ವಿಶ್ವೇಶ್ ಇನ್ನ ಕಿಸೆಯಿಂದ ಅರವತ್ತು ಸಾವಿರದ ಸ್ಮಾರ್ಟ್‍ಪೋನ್ ತೆಗೆದು ಮಾತನಾಡಲಾರಂಭಿಸಿದನು.
"ನೋ...ನೋ...ಆಗಲ್ಲ...ಒಂದುವರೆ ಕೋಟಿ ಕಮ್ಮಿ ಒಂದು ರೂಪಾಯಿನೂ ಆಗಲ್ಲ....ಐ ಯಾಮ್ ಸಾರಿ..." ಎನ್ನುತ್ತಾ ತನ್ನ ಕರೆಯನ್ನು ಕಟ್ ಮಾಡಿ ಪೋನನ್ನು ಮತ್ತೆ ತನ್ನ ಕಿಸೆಯಲ್ಲಿ ಇಟ್ಟುಕೊಂಡನು.
"ಆಗಲ್ಲ ಅಂತ ಹೇಳಿದ್ರು..ಮತ್ತೆ ಮತ್ತೆ ತಲೆ ತಿಂತಾರೆ..." ಎಂದು ಗೊಣಗಿದ ವಿಶ್ವೇಶ್. "ಏನಾಯ್ತು??ಏನಾದರು ಸಮಸ್ಯೆನಾ??" ಎಂದು ಚಿದಾನಂದ ವಿಶ್ವೇಶ್‍ನ ಗೊಣಗಾಟದ ಕಾರಣಕ್ಕಾಗಿ ಪ್ರಶ್ನಿಸಿದ.
"ಏನಿಲ್ಲಾ...ನಾನು ಊರಿಗೆ ಬಂದಿದ್ದೆ ನಮ್ಮ ಆಸ್ತಿಯನ್ನೆಲ್ಲಾ ಮಾರಿ ಹೋಗಲಿಕ್ಕೆ.....ಸುಮಾರು ಒಂದೂವರೆ ಕೋಟಿ ಬೆಲೆಬಾಳೋ ಆಸ್ತಿ....ಅದನ್ನ ಕಡಿಮೆಗೆ ಕೊಡಿ ಅಂತಾ ಕೇಳ್ತಾರೆ....." ವಿಶ್ವೇಶ್ ತನ್ನ ಸಿಟ್ಟಿನ ಕಾರಣ ವಿವರಿಸಿದ.
"ಏನು ಊರಿನ ಆಸ್ತಿಯೆಲ್ಲಾ ಮಾರ್ತೀಯಾ...??" ಎಂದು ಚಿದಾನಂದ ಆಶ್ಚರ್ಯದಿಂದ ಕೇಳಿದ.
"ಹೌದು...ನನಗಂತೂ ಬೆಂಗಳೂರಲ್ಲಿ ಒಂದು ವಿಲ್ಲಾ ಇದೆ....ತಿಂಗಳಿಗೆ ಮೂರು ಲಕ್ಷ ಸಂಬಳ....ನನ್ನ ಮುಂದಿನ ಜೀವನವನ್ನು ಅಲ್ಲೇ ಕಳೆಯೋಣ ಅಂತಾ....ಈಗ ಊರಿಗೆ ಬಂದು ಇರೋದು ಅಂದ್ರೆ ಸ್ವಲ್ಪ ಕಷ್ಟ...ಅದಕ್ಕೆ ಊರಿನ ಆಸ್ತಿ ಮಾರಿ ಆರಾಮಾಗಿ ಇರೋಣ ಅಂತಾ...." ಎಂದು ತನ್ನ ನಿರ್ಧಾರವನ್ನು ಬಲಪಡಿಸಿಕೊಂಡೆ ಹೇಳಿದ ವಿಶ್ವೇಶ್.
"ಓ...ಹಾಗಾ...." ಚಿದಾನಂದ ಹೀಗೆನ್ನುವಾಗ."ರೀ...ಅಡಿಗೆ ರೆಡಿ....ಹೊರಡೋಣ ಅಂದರೆ ನಾನು ಬೇಗ ರೆಡಿ ಆಗ್ತೀನಿ.." ಎಂದು ಅನಸೂಯಳ ಸ್ವರ ಬಂದಿತು."ಸರಿ ಬೇಗ ಹೊರಡು....ಈಗ ಹೊರಟರೆ ಸರಿ ಆಗುತ್ತೆ..." ಎಂದ ಚಿದಾನಂದ.
"ಏನೋ ಕುಟುಂಬ ಸಮೇತ ಎಲ್ಲೋ ಹೊರಟ ಹಾಗೆ ಇದೆ....ಏನು ಔಟಿಂಗಾ??" ಎಂದು ವಿಶ್ವೇಶ್ ಕೇಳಿದ.
"ಇಲ್ಲಾ ಇಲ್ಲಾ ಹಾಗೇನು ಅಲ್ಲ...ಇವತ್ತು ನಮ್ಮ ಪುಟ್ಟಿ ಬರ್ತಡೇ...ಹಾಗಾಗಿ..."ಮಾತು ಮುಗಿಸುವ ಮುನ್ನವೇ "ಓಹ!ನೈಸ್...ಹ್ಯಾಪಿ ಬರ್ತ್‍ಡೇ ಸೌಪರ್ಣಿಕ..." ಎನ್ನುತ್ತಾ ಆ ಪುಟ್ಟ ಹುಡುಗಿಯ ಪುಟ್ಟ ಕೈ ಕುಲುಕುತ್ತಾ ಚೀರಿದನು ವಿಶ್ವೇಶ್. "ಎಷ್ಟು ವರ್ಷ ಪುಟ್ಟಿ..??" ಎಂದಾಗ "ಒಂಭತ್ತು.." ಎಂದಳು ಸೌಪರ್ಣಿಕ.
ಜೇಬಿನಿಂದ ತನ್ನ ಪರ್ಸನ್ನು ತೆಗೆದು ಸಾವಿರದ ಒಂದಷ್ಟು ನೋಟುಗಳನ್ನು ಆ ಹುಡುಗಿಯ ಕೈಯಲ್ಲಿ ಇಟ್ಟು "ಏನು ಬೇಕೋ ಅದು ತೊಗೋ" ಎಂದನು ವಿಶ್ವೇಶ್.
"ಗಿಪ್ಟ್ ನೀನು ಕೊಟ್ಟಿದ್ದೀಯಾ....ಪಾರ್ಟಿ ನಾವು ಕೊಡಿಸ್ತೀವಿ....ಇವತ್ತು ನಮ್ಮೆಲ್ಲರ ಊಟ ಹೊರಗೆ.." ಎನ್ನುತ್ತಾ ತಾವು ಹೋಗುತ್ತಿದ್ದ ಜಾಗಕ್ಕೆ ಹೃದಯತುಂಬಿ ಆಹ್ವಾನಿಸಿದನು ಚಿದಾನಂದ.
************************************************************************************
ಸುಮಾರು ಆರು ಮೈಲು ಸಾಗಿದರೂ ಇನ್ನು ಬಾರದ ಆ ಜಾಗವನ್ನು ಕಂಡು ವಿಶ್ವೇಶ್‍ಗೆ ಗೊಂದಲವಾಯಿತು.ಅದಾಗಲೇ ಆತ ಚಿದಾನಂದನ ಬಳಿ ಯಾವ ಸ್ಥಳಕ್ಕೆ ತಾವು ಹೋಗುತ್ತಿದ್ದೇವೆ ಎಂದು ಸಾಕಷ್ಟು ಬಾರಿ ಕೇಳಿದ್ದ."ಎಲ್ಲಿಗೆ ಹೋಗ್ತಿದ್ದೀವಿ??ರೆಸಾರ್ಟ್,ಮಾಲ್,ಹೋಟೆಲ್...ಯಾವ ಸ್ಥಳ ಅಂತನಾದ್ರು ಹೇಳು" ಎಂದು ವಿಶ್ವೇಶ್ ಮತ್ತೊಮ್ಮೆ ಕೇಳಿದ."ಇರು ಇನ್ನೇನು ಬಂದೆ ಬಿಟ್ಟಿತು..." ಎಂದು ಮತ್ತೊಮ್ಮೆ ಅದೇ ಉತ್ತರ ನೀಡಿದ ಚಿದಾನಂದ.
"ಬಂದೇ ಬಿಟ್ಟಿತು ನೋಡು..." ಎಂದು ತನ್ನ ಕಾರನ್ನು ನಿಲ್ಲಿಸಿದ ಚಿದಾನಂದ.
ವಿಶ್ವೇಶ್‍ನ ಕಾತರತೆ ಈಗ ಕೊನೆಯಾಗಿತ್ತು.ವಿಶಾಲವಾದ ಬಯಲಿನ ಮಧ್ಯದಲ್ಲಿ ಸುಮಾರು ಮೂರು ಅಂತಸ್ತಿನ ಮಳಿಗೆ.ಅಲ್ಲಲ್ಲಿ ಆಡುತ್ತಿರುವ ಪುಟ್ಟ ಪುಟ್ಟ ಮಕ್ಕಳು.ದೊಡ್ಡದಾದ ಬೋರ್ಡ್ ಒಂದರಲ್ಲಿ ಬರೆದು ಹಾಕಿದ್ದ "ವನಸುಮ" ಎಂಬ ಹೆಸರು ವಿಶ್ವೇಶ್‍ನ ಕಣ್ಣಿಗೆ ಬಿದ್ದಿತು.
    "ಏನೋ ಇದು ಸ್ಕೂಲಾ..??" ಎಂದು ವಿಶ್ವೇಶ್ ಪ್ರಶ್ನೆಯೊಂದನ್ನು ಮುಂದಿಟ್ಟ.
"ಅಲ್ಲವೋ..ಇದೊಂದು ಆಶ್ರಮ....ತಂದೆ-ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳು ಇಲ್ಲಿ ಬೆಳೀತಾರೆ...ನಾವು ಬರ್ತ್‍ಡೇ ಸೆಲಬ್ರೇಟ್ ಮಾಡದು..ಪಾರ್ಟಿ ಕೊಡಿಸೋದು ಎಲ್ಲಾ ಇಲ್ಲೇ..." ಎಂದು ತಾವು ತಂದಿದ್ದ ಒಂದೊಂದೇ ಸಾಮಾನುಗಳನ್ನು ಇಳಿಸುತ್ತಾ ಹೇಳಿದ ಚಿದಾನಂದ.
ನಗರದಲ್ಲಿ ತನ್ನ ಪ್ರತಿಷ್ಠಗೆ ಸರಿಹೊಂದುವರನ್ನು ಮಾತ್ರ ಕರದು,ಐಷಾರಾಮಿ ಜಾಗಗಳಲ್ಲಿ ಲೆಕ್ಕವಿಲ್ಲದಷ್ಟು ಹಣ ಚೆಲ್ಲುವುದನ್ನೇ ಆನಂದ,ಸಂತೋಷ ಎಂದು ಭಾವಿಸಿದ್ದ ವಿಶ್ವೇಶ್‍ನಿಗೆ ಏನೋ ಒಂದು ರೀತಿಯ ಆಶ್ಚರ್ಯ,ಜೊತೆಗೆ ತಳಮಳ.ಏನೂ ತೋಚದವನಂತಾಗಿ ಹಾಗೆ ನಿಂತುಬಿಟ್ಟ.
"ಅಪ್ಪಾ...ಇದು ತೊಗೋ ಅಂಕಲ್ ಕೊಟ್ಟ ದುಡ್ಡು....ಈ ಬರ್ತ್‍ಡೇ ಗೆ ನನ್ನ ಕಡೆಯಿಂದ ವನಸುಮಕ್ಕೆ..." ಎಂದು ಸೌಪರ್ಣಿಕ ಅಪ್ಪನಿಗೆ ವಿಶ್ವೇಶ್ ಕೊಟ್ಟ ಸಾವಿರದ ನೋಟುಗಳನ್ನು ಕೊಟ್ಟಳು.ಇದು ವಿಶ್ವೇಶ್‍ನಿಗೆ ಮತ್ತೊಂದು ಆಶ್ಚರ್ಯದ ಸಂಗತಿ.
ತನ್ನ ಮಗ ಯಾರಾದರು ನೀಡಿದ ಹಣವನ್ನು ಸ್ವಲ್ಪವೂ ಲೆಕ್ಕಿಸದೆ ತನಗೆ ಬೇಕು ಬೇಕಾದನ್ನು ಮನಬಂದಂತೆ ತೆಗೆದುಕೊಳ್ಳುತ್ತಿದ್ದ ತನ್ನ ಮಗನಿಗೂ ಈ ಹುಡುಗಿಗೂ ಅದೆಷ್ಟು ವ್ಯತ್ಯಾಸ.ಹಾಗೆ ನೋಡಿದರೆ ತನ್ನ ಮಗನೇ ಈಕೆಗಿಂತ ಎರಡು-ಮೂರು ವರ್ಷ ದೊಡ್ಡವನು.ಅದೇಕೆ ತನ್ನ ಮಗನಲ್ಲಿ ತಾನು ಇಂತಾ ದೊಡ್ಡ ಗುಣವನ್ನು ಕಾಣಲಿಲ್ಲ ಎಂದುಕೊಂಡು,ಅದು ಸರಿ ತನ್ನಲ್ಲಿ ಈ ಸಂಸ್ಕಾರ ಇದ್ದಿದ್ದರೆ ತನ್ನ ಮಗನಿಗೂ ಬರುತ್ತಿತ್ತು ಎಂದೆನಿಸಿ ಬೇಸರವಯಿತು.ಹಾಗೆ ಅಲ್ಲಿಯ ಮಕ್ಕಳನ್ನು ನೋಡುತ್ತಾ ನಿಂತುಬಿಟ್ಟ.
ಸಾಲುಸಾಲಗಿ ನಿಂತ ಆ ಮಕ್ಕಳನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದ ಚಿದಾನಂದ ವಿಶ್ವೇಶ್‍ಗೆ ಬದುಕನ್ನು ಸಮರ್ಥವಾಗಿ ನೆಡೆಸುತ್ತಿರುವ ಪುಂಗವನಂತೆ ಕಂಡನು.ಪ್ರೀತಿಯಿಂದ ತಾವು ತಂದಿದ್ದ ಊಟವನ್ನು ಕುಟುಂಬ ಸಮೇತ ಬಡಿಸುತ್ತಿದ್ದದನ್ನು ನೋಡಿ ತನ್ನ ಬದುಕು ಅದೆಷ್ಟೋ ವರ್ಷಗಳ ಹಿಂದೆಯೇ ಸ್ತಬ್ಧವಾದಂತೆ ಭಾಸವಾಯಿತು.ಹಾಗೆಯೇ ಚಿದಾನಂದನ ಮುಖ ನೋಡುತ್ತಾ ನಿಂತಿದ್ದ ಅವನಿಗೆ "ವಿಶ್ವ...ಇಲ್ಲಿ ಬಾರೋ...ಸ್ವೀಟ್ ಹಾಕುವಂತೆ" ಎಂಬ ಚಿದಾನಂದನ ದನಿ ಎಚ್ಚರಿಸಿತು.
"ಮಾಮ...ಇನ್ನೊಂದು ಹಾಕ್ತೀರಾ.." ಎಂದು ಸುಮಾರು ಮೂರು-ನಾಲ್ಕು ವರ್ಷದ ಬಾಲಕಿಯೊಬ್ಬಳು ಕೇಳಿದಾಗ  ವಿಶ್ವೇಶ್ ಅವಳಿಗೆ ಮತ್ತೊಂದು ಸ್ವೀಟ್ ಬಡಿಸಿದ.ಆಗ ಆಕೆಯ ಮುಖದಲ್ಲಿ ಆದ ಸಂತೋಷವನ್ನು ಕಂಡು ಆತನ ಕಣ್ಣು ತುಂಬಿ ಬಂತು.ತನ್ನ ಮನೆ,ಕಾರು,ಪ್ರತಿಷ್ಟೆ ಎಲ್ಲ ಸೇರಿಸಿದರೂ ಸಿಗದಷ್ಟು ಖುಷಿಯಾಯಿತು ಆತನಿಗೆ.ಹಾಗೆಯೇ ನಿಂತವನಿಗೆ ಮತ್ತೆ ಎಚ್ಚರವಾದದ್ದು ಆತನ ಸ್ಮಾರ್ಟ್‍ಪೋನ್ ರಿಂಗಣಿಸಿದಾಗಲೇ.
ಆ ಕಡೆಯಿಂದ ಅದೇನೂ ಹೇಳಿದರೋ ಗೊತ್ತಿಲ್ಲ ಆದರೆ ಈ ಕಡೆಯಿಂದ ಮಾತ್ರ ವಿಶ್ವೇಶ್ ಗದ್ಗದಿತನಾಗಿ "ನಾನು ಯಾವ ಆಸ್ತಿಯನ್ನು ಮಾರಲ್ಲ...ಇನ್ನು ನಂಗೆ ಕಾಲ್ ಮಾಡಬೇಡಿ.." ಎಂದು ನಿಖರವಾಗಿ ಹೇಳಿದನು.
ಇದನ್ನೆಲ್ಲಾ ನೋಡುತ್ತಿದ್ದ ಚಿದಾನಂದ "ಏನಾಯ್ತೋ....?ಮತ್ತೆ ನಿನ್ನ ಬೆಲೆಗೆ ಒಪ್ಪಲಿಲ್ವ??" ಎಂದಾಗ "ಇಲ್ಲ ಕಣೋ ಈ ಬಾರಿ ಸರಿಯಾಗಿ ನಿರ್ಧಾರ ಮಾಡಿದ್ದೀನಿ...ನಾನು ಆ ಆಸ್ತಿ ಮಾರಲ್ಲ.....ಬದಲಿಗೆ ಈ ವನಸುಮಕ್ಕೆ ಬರೆದು ಕೊಡ್ತೀನಿ.....ಇದು ಈ ಮಕ್ಕಳಿಗೆ ಈ ಅಲ್ಪ ಮಾಡುತ್ತಿರುವ ಅಳಿಲು ಸೇವೆ.." ಎಂದು ಹೇಳುತ್ತಾ ಚಿದಾನಂದನ್ನು ಗಟ್ಟಿಯಾಗಿ ತಬ್ಬಿಕೊಂಡನು.