Sunday 8 January 2017

ಸೋಗು

ಸೋಗು
ಭಾನುವಾರದ ಮುಂಜಾನೆಯಲ್ಲಿ ಮನೆಯ ಮುಂದಿದ್ದ ಉದ್ಯಾನದಲ್ಲಿ,ಉಯ್ಯಾಲೆಯಲ್ಲಿ ತೂಗುತ್ತಾ,ಕಾಫಿ ಹೀರುತ್ತಾ ಕುಳಿತಿದ್ದ ಭಾಸ್ಕರ,ಅದಾಗ ತಾನೇ ಮಾಲಿ ತಂದುಕೊಟ್ಟಿದ್ದ ಇಂಗ್ಲೀಷ್ ಪೇಪರ್‍ನ ಮೇಲೆ ಕಣ್ಣಾಡಿಸುತ್ತಿದ್ದ.ದಿನಕ್ಕೆ ಸರಿಸುಮಾರು ಹದಿನಾಲ್ಕು ಗಂಟೆ ದುಡಿಯುವ ಭಾಸ್ಕರನಿಗೆ ಭಾನುವಾರ ಮಾತ್ರವೇ ಬಿಡುವಿನ ದಿನ.ಅದಾಗಲೇ ಆತ ಪ್ರಾರಂಭಿಸಿದ್ದ ಒಂದು ಕಂಪನಿಯನ್ನು ಬಹುರಾಷ್ಟ್ರೀಯ ಕಂಪನಿಯೊಂದು ಭಾರಿ ಮೊತ್ತಕ್ಕೆ ಖರೀದಿಸಿತ್ತು.ವಾರದ ಎಲ್ಲಾ ದಣಿವನ್ನು ಆರಿಸುವ ರೀತಿಯಲ್ಲಿ ಆ ಉದ್ಯಾನದಲ್ಲಿ ಗಾಳಿ ಬೀಸುತ್ತಿತ್ತು.ಚಿಲಿಪಿಲಿ ಎನ್ನುತ್ತಿದ್ದ ಹಕ್ಕಿಗಳ ಸದ್ದು ಮನಸ್ಸಿನ ಸಂಭ್ರಮಕ್ಕೆ ಇನ್ನಷ್ಟು ಇಂಬು ನೀಡುತ್ತಿತ್ತು.
"ಭಾಸ್ಕರ...." ಮೃದುವಾದ ಪ್ರೀತಿಯ ದನಿಯೊಂದು ಭಾಸ್ಕರನನ್ನು ತಾನಿದ್ದ ಪ್ರಪಂಚದಿಂದ ಎಚ್ಚರಿಸಿತು.
"ಓ...ಅಪ್ಪಾ...ಬನ್ನಿ ಕೂತುಕೊಳ್ಳಿ..." ಎಂದು ತಾನು ಕುಳಿತಿದ್ದ ಉಯ್ಯಾಲೆಯಲ್ಲಿಯೇ ಅಪ್ಪನಿಗೊಂದು ಜಾಗ ಮಾಡಿಕೊಟ್ಟ ಭಾಸ್ಕರ.ರಾಯರು ಮಗನ ಪಕ್ಕದಲ್ಲಿಯೇ ಕುಳಿತರು."ಕಾಫಿ ಕುಡಿದ್ರಾ ಅಪ್ಪಾ...." ಎಂದು ಭಾಸ್ಕರ ಅಪ್ಪನನ್ನು ವಿಚಾರಿಸಿದನು.ರಾಯರು "ಆಗಲೇ ಆಯ್ತು...ನಿಂಗೆ ಈಗ ಬೆಳಗಾಗಿದೆ...ನನಗೆ ಸೂರ್ಯ ಹುಟ್ಟುವುದಕ್ಕೂ ಮುಂಚೆಯೇ ಎಚ್ಚರವಾಗುತ್ತೆ.." ಎಂದು ತಮ್ಮ ಮುಪ್ಪಿನ ಸಮಸ್ಯೆಯನ್ನು ಹೇಳಿ ನಕ್ಕರು ರಾಯರು."ಇನ್ನು ನಿದ್ದೆ ಸಮಸ್ಯೆ ಸರಿ ಆಗಿಲ್ವಾ...?ತಡಿ ಈಗಲೇ ಡಾಕ್ಟರ್‍ಗೆ ಪೋನ್ ಮಾಡ್ತೀನಿ" ಎನ್ನುತ್ತಾ ತನ್ನ ಪೋನ್ ತೆಗೆದನು ಭಾಸ್ಕರ."ಬೇಡ ಪುಟ್ಟಾ....ನಂಗೇನು ನಲವತ್ತು-ಐವತ್ತು ವರ್ಷವೇ ಡಾಕ್ಟರ್ ಹತ್ರ ಹೋಗಕ್ಕೆ?ನಂಗೂ ವಯಸ್ಸಾಯ್ತು...ಎಪ್ಪತ್ತು ದಾಟಿದೆ....ಬದುಕಿನ ಎಲ್ಲಾ ಆಸೆಗಳನ್ನು ಮಗನಾಗಿ ನೀನು ಪೂರೈಸಿದ್ದಿ.ಇನ್ನು ಬದುಕುವ ಆಸೆ ಇಲ್ಲಾ ನಂಗೆ...." ಎನ್ನುತ್ತಿದ್ದಂತೆ "ಯಾಕಪ್ಪಾ ಹಾಗೆಲ್ಲಾ ಮಾತಾಡ್ತೀಯಾ..??ನೀನು ಇನ್ನು ಒಂದಷ್ಟು ಕಾಲ ನನ್ನ ಜೊತೆಗೆ ಇರಬೇಕು..." ಎಂದಾಗ ಮಗನ ಪ್ರೀತಿಗೆ ಕಟ್ಟುಬಿದ್ದು ರಾಯರು ಮಾತು ಮುಂದುವರಿಸಲಿಲ್ಲ.
"ಮತ್ತೆ ಏನಪ್ಪಾ ಸಮಾಚಾರ??" ಭಾಸ್ಕರ ಅಪ್ಪನನ್ನು ಪ್ರಶ್ನಿಸಿದ.ಒಂದೇ ಮನೆಯಲ್ಲಿ ಇದ್ದರೂ,ಅಪ್ಪ ಮಗ ಜೊತೆಗೆ ಕುಳಿತು ಮಾತನಾಡಲು ವಾರದ ಆರು ದಿನಗಳು ಕಷ್ಟ.ಆದರೆ ಭಾನುವಾರ ಮಾತ್ರ ತಂದೆ-ಮಗ ಒಂದಿಷ್ಟು ಹರಟುತ್ತಿದ್ದರು.ಇದನ್ನು ಕಂಡು ರಾಯರ ಹೆಂಡತಿ ಸೊಸೆಯನ್ನು ಕುರಿತು "ಶುರುವಾಯ್ತು ನಿನ್ನ ಗಂಡಂದು,ನನ್ನ ಗಂಡಂದು ಮೀಟಿಂಗ್..." ಎಂದು ನಗುತ್ತಿದ್ದರು.
ತಾನು ತಂದಿದ್ದ ದಿನಪತ್ರಿಕೆಯ ಒಳಗಿನಿಂದ ಅಹ್ವಾನ ಪತ್ರಿಕೆಯೊಂದನ್ನು ತಗೆದು ರಾಯರು ತಮ್ಮ ಮುದ್ದಿನ ಮಗನ ಮುಂದಿಟ್ಟರು.ತುಂಬಾ ಐಷಾರಾಮಿ ಎಂಬಂತೆ ಇದ್ದ ಆ ವಿವಾಹಪತ್ರಿಕೆಯ ವಿನ್ಯಾಸ ಆಕರ್ಷಕವಾಗಿತ್ತು."ಭಾಸ್ಕರ....",ರಾಯರು ಮಾತು ಪ್ರಾರಂಭಿಸುತ್ತಿದ್ದಂತೆ,ತನ್ನ ಕಾಪಿ ಕಪ್‍ಅನ್ನು ಟೇಬಲ್ ಮೇಲೆ ಇಡುತ್ತಿದ್ದ ಭಾಸ್ಕರನ ಕಣ್ಣು ರಾಯರು ಇಟ್ಟಿದ್ದ ಆ ಪತ್ರಿಕೆಯ ಮೇಲೆ ಬಿದ್ದಿತು.ವಿಖ್ಯಾತ ವ್ಯಕ್ತಿಯಾಗಿದ್ದ ಆತನಿಗೆ ದಿನಕ್ಕೆ ಏನಿಲ್ಲವೆಂದರೂ ಮೂರರಿಂದ ನಾಲ್ಕು ಪತ್ರಿಕೆಗಳಂತೂ ಬಂದೇ ಬರುತಿತ್ತು.ಆದರೆ ಆತ ಕೆಲವನ್ನು ಮಾತ್ರ ನೋಡುತ್ತಿದ್ದ.ಕಣ್ಣ ಮುಂದೆ ಸುಂದರವಾಗಿ ಕಾಣುತ್ತಿದ್ದ ಆ ಪತ್ರಿಕೆಯನ್ನು ಕೈಗೆತ್ತಿಕೊಂಡ ಆತನಿಗೆ ವಿಷಯ ತಿಳಿಸಲು ಇದೇ ಸರಿಯಾದ ಸಮಯ ಎಂದುಕೊಂಡ ರಾಯರು "ನಿನ್ನ ಚಿಕ್ಕಪ್ಪನೇ ಬಂದು ಕೊಟ್ಟು ಹೋದ್ರು....ಜೊತೆಗೆ ಸ್ತುತಿ ಕೂಡ ಬಂದಿದ್ದಳು....ಅಷ್ಟೇ ಅಲ್ಲ ನಿನ್ನ ಚಿಕ್ಕಮ್ಮ ಕೂಡ ಬಂದ್ದಿದ್ದರು...ಸುಮನ್ ಕೂಡಾ ಬಂದಿದ್ದ..".ಇಷ್ಟು ಹೊತ್ತು ಆ ಪತ್ರಿಕೆ ನೋಡಲು ಭಾಸ್ಕರನಿಗೆ ಇದ್ದ ಕುತೂಹಲ ಅಪ್ಪನ ಮಾತುಗಳು ಕೇಳಿದ ನಂತರ ಇಲ್ಲವಾಯಿತು.ಅದನ್ನು ಸಂಪೂರ್ಣವಾಗಿ ನೋಡುವ ಮನಸ್ಸಿಲ್ಲದೆ,ಹಾಗೆಯೇ ಇಟ್ಟುಬಿಟ್ಟ.
ಮಗನ ಮನಸ್ಸನ್ನು ಚೆನ್ನಾಗಿಯೇ ತಿಳಿದಿದ್ದ ರಾಯರು ಮಾತು ಮುಂದುವರೆಸಿದರು "ಭಾನುವಾರ ಧಾರೆ...ಒಂದು ವಾರದ ಮುಂಚೆನೇ ಬರೋದಕ್ಕೆ ಹೇಳಿದ..ನಂಗೆ ಒಂದು ಒಳ್ಳೆ ರೇಷ್ಮೆ ಪಂಚೆ-ಷರ್ಟ್,ನಿನ್ನ ಅಮ್ಮನಿಗೆ ಮತ್ತೆ ಲಾವಣ್ಯನಿಗೆ ಸೀರೆ,ಜೊತೆಗೆ ನಿಂಗೆ ಒಂದು ಸೂಟ್ ಕೊಟ್ಟು ಹೋಗಿದ್ದಾರೆ...ಒಂದೆರಡು ದಿನ ಬಿಡುವು ಮಾಡ್ಕೋ..ಎಲ್ಲರೂ ಹೋಗಿ ಬರೋಣ.ಮತ್ತೆ........" ರಾಯರು ಮಾತು ಮುಗಿಸುವ ಮುನ್ನವೇ ಭಾಸ್ಕರ "ನಾನು ಬರಲ್ಲ..." ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದ."ಚಿಕ್ಕಪ್ಪ ಸಂಬಂಧಕ್ಕೆ ಬೆಲೆ ಕೊಡ್ತಾ ಇಲ್ಲ...ಬದಲಿಗೆ ಸವಲತ್ತುಗಳಿಗೆ ಬೆಲೆ ಕೊಡ್ತಾ ಇದ್ದಾರೆ...ನಾನು ಬರಲ್ಲ ಅಷ್ಟೇ...." ಎಂದು ಮತ್ತೊಮ್ಮೆ ತನ್ನ ನಿರ್ಧಾರವನ್ನು ಗಟ್ಟಿಯಾಗಿಯೇ ಹೇಳಿದನು ಭಾಸ್ಕರ.
"ಪುಟ್ಟ..ಹಾಗೆಲ್ಲ ಅನ್ನಬಾರ್ದು....ಇದು ನಿನ್ನ ತಂಗಿಯ ಮದುವೆ....ಜೊತೆಗೆ ನಮ್ಮ ಕುಟುಂಬದ ಕೊನೆಯ ಮದುವೆ....ನೀನು ಅವಳಗೆ ಅಣ್ಣ..ಮದುವೆಯಲ್ಲಿ ಓಡಾಡಬೇಕು...ಅದು ಅಲ್ಲದೇ ಕುಟುಂಬ ಸಮೇತ ಬಂದು ಹೇಳಿ ಹೋಗಿದ್ದಾರೆ...ಹೋಗದೆ ಇದ್ದರೆ ಚೆನ್ನಾಗಿರುತ್ತಾ...?ಅದೂ ಅಲ್ಲದೇ ನಿನ್ನ ಚಿಕ್ಕಪ್ಪ ಈಗ ಮೊದಲಿನ ಹಾಗೇ ಇಲ್ಲ...ಬದಲಾಗಿದ್ದಾನೆ...ನಾನು ಅಂದ್ರೆ ಎಷ್ಟು ಪ್ರೀತಿ ಗೊತ್ತಾ ಅವನಿಗೆ..." ಮತ್ತೊಮ್ಮೆ ರಾಯರು ಮಾತು ಮುಗಿಸುವ ಮುನ್ನ ಭಾಸ್ಕರ "ಸಂಬಂಧಗಳಿಗಲ್ಲ ಬೆಲೆ..ಸವಲತ್ತುಗಳಿಗೆ...ಬಾಂಧವ್ಯಕ್ಕೆ ಅಲ್ಲ ಬೆಲೆ ಬದುಕಿನ ರೀತಿಗೆ...ಹತ್ತು ವರ್ಷಗಳಲ್ಲಿ ಎಷ್ಟು ಬದಲಾವಣೆ ಅಲ್ವ ಅಪ್ಪ...ನಾವು ಅವರ ಬಂಧುಗಳು ಆಗಿದ್ದೇ ಅವಮಾನ ಅಂದುಕೊಂಡವರು,ನಾವು ಅವರ ಮನೆಯ ವಿಶೇಷಗಳಿಗೆ ಬರಬಾರದು ಅಂತ ಅಂದುಕೊಳ್ತಾ ಇದ್ದವರು..ಇವತ್ತು ನಾವು ಬರಲೇಬೇಕು ಅಂತಿದ್ದಾರೆ...ನಿನ್ನ ಹೆಸರು ಹಾಕಿಸಿದ್ದಾರೆ ಪತ್ರಿಕೆಯಲ್ಲಿ..." ಎಂದು ನಗೆಯೊಂದನ್ನು ಬೀರಿದನು ಭಾಸ್ಕರ.
"ನಾನು ಬರಲ್ಲ...ನೀನು,ಅಮ್ಮ ಹೋಗಿ ಬನ್ನಿ...ಬೇಕಿದ್ರೆ ಲಾವಣ್ಯನ್ನು ಕರ್ಕೊಂಡು ಹೋಗಿ...ಬೇರೆ ಯಾರ ಮನೆಯ ವಿಶೇಷಕ್ಕೆ ಆದರೂ ಬರ್ತಿದ್ದೆ...ಆದ್ರೆ ಇದಕ್ಕೆ ಮಾತ್ರ ಒತ್ತಾಯ ಮಾಡಬೇಡಿ..ಪ್ಲೀಸ್.." ಎಂದು ಕೈಮುಗಿದನು ಭಾಸ್ಕರ.ಇನ್ನು ಮಾತನಾಡಿ ಮಗನ ಮನಸ್ಥಿತಿಯನ್ನು ಹಾಳು ಮಾಡುವುದು ಬೇಡ ಎಂದುಕೊಂಡ ರಾಯರು "ಪುಟ್ಟ..ನೀನು ಬರದಿದ್ರೆ ಅವನಿಗೆ ಬೇಜಾರು ಆಗುತ್ತೋ ಇಲ್ಲವೋ...ಆದರೆ ನನಗಂತೂ ಬೇಜಾರಾಗುತ್ತೆ.." ಎಂದು ಮೃದುವಾಗಿಯೇ ತಮ್ಮ ಮನದ ಆಸೆಯನ್ನು ಮಗನ ಮುಂದಿಟ್ಟು ಅಲ್ಲಿಂದ ಹೊರಟರು ರಾಯರು.
ತಾನು ಅರ್ಧ ಮುಗಿಸಿದ್ದ ಓದನ್ನು ಮುಂದುವರೆಸಲು ದಿನಪತ್ರಿಕೆಯನ್ನು ಕೈಗೆತ್ತಿಕೊಂಡನು ಭಾಸ್ಕರ.ಆದರೂ ಅದೇಕೋ ತನ್ನ ಚಿಕ್ಕಪ್ಪನ ಮಗಳ ಮದುವೆಯ ಆಹ್ವಾನ ಪತ್ರಿಕೆಯನ್ನು ಮತ್ತೊಮ್ಮೆ ನೋಡಬೇಕೆನಿಸಿತು.ತೆಗೆದು ನೋಡುತ್ತಿದ್ದಂತೆ "ಶ್ರೀಮತಿ ಮತ್ತು ಶ್ರೀಅನಂತ ರಾವ್ ಮಾಡುವ ವಿಜ್ಞಾಪನೆಗಳು" ಎಂದು ತನ್ನ ತಂದೆಯ ಹೆಸರನ್ನು ಕಂಡನು.ಮತ್ತೆ ಮತ್ತೆ ಅದನ್ನೇ ನೋಡಿದ ಭಾಸ್ಕರನ ಮನಸ್ಸು ಹಳೆಯದನ್ನು ನೆನಪಿಸಿಕೊಳ್ಳುವಂತೆ ಮಾಡಿತು.
    ***************************************************************
ಅದಾಗ ತಾನೇ ಭಾಸ್ಕರ ಪಿಯುಸಿ ಮುಗಿಸಿದ್ದ.ಅನಂತ ರಾಯರಿಗೆ ಹೇಳಿಕ್ಕೊಳ್ಳುವಷ್ಟು ಆದಾಯವಿರಲಿಲ್ಲ.ಕೊಡಿಟ್ಟ ಹಣವೆಲ್ಲ ಮಗಳ ಮದುವೆಗೆ ಖರ್ಚಾಗಿ ಹೋಗಿತ್ತು.ಹಾಗಾಗಿ ಇದ್ದುದ್ದರಲ್ಲಿಯೇ ಜೀವನ ತೂಗಿಸುವುದು ಅನಿವಾರ್ಯವಾಗಿತ್ತು.ಒಂದಿಷ್ಟು ವ್ಯವಹಾರಗಳಿಗೆ ಕೈಹಾಕಿ ಇದ್ದುದನ್ನೆಲ್ಲಾ ಕಳೆದುಕೊಂಡಿದ್ದರು ರಾಯರು.ಇದ್ದ ಒಬ್ಬ ತಮ್ಮನಿಗೆ ಶ್ರೀಮಂತಿಕೆ ಇದ್ದುದ್ದರಿಂದ ಆತನಿಗೆ ಅಣ್ಣನನ್ನು ಕಂಡರೆ ಅಷ್ಟಕಷ್ಟೆ.ರಾಯರು ಆ ಬಗ್ಗೆ ತಲೆ ಕೆಡಿಸಿಕ್ಕೊಳ್ಳುತ್ತಿರಲಿಲ್ಲ.
ಒಂದು ದಿನ ರಾಯರ ಮನೆಗೆ ಆಮಂತ್ರಣ ಪತ್ರಿಕೆಯೊಂದು ಬಂದಿತು.ತನ್ನ ತಮ್ಮನ ಮನೆ ಗೃಹಪ್ರವೇಶದ ಆಹ್ವಾನ ಪತ್ರಿಕೆ ಅದಾಗಿತ್ತು.ಸ್ವಂತ ಅಣ್ಣನನ್ನು ಕರೆಯುವಷ್ಟು ಸೌಜನ್ಯವೂ ಇಲ್ಲದೆ ಬರೀ ಕಾಗದವನ್ನಷ್ಟೇ ಕಳುಹಿಸಿದ್ದ.ಅಲ್ಲದೇ ತಾನು ಮನೆ ಕಟ್ಟಿಸಿರುವ ವಿಷಯವನ್ನೂ ಕೂಡ ತಿಳಿಸಿರಲಿಲ್ಲ.ಆದರೂ ರಾಯರು ತಮ್ಮ ಹೆಂಡತಿಯ ವಿರೋಧದ ನಡುವೆಯೂ ಮಡದಿ-ಮಗನನ್ನು ಕರೆದುಕೊಂಡು ಹೊರಟರು.
ತನ್ನ ಅಂತಸ್ತಿಗೆ ತಕ್ಕವರನ್ನೆಲ್ಲಾ ಕರೆದಿದ್ದ ರಾಯರ ತಮ್ಮನ ಮನೆ ಭವ್ಯ ಬಂಗಲೆಯಂತ್ತಿತ್ತು.ವಿಶಾಲವಾದ ಸೈಟಿನಲ್ಲಿ ಆ ದಿನ ಅದೆಷ್ಟು ಐಷಾರಾಮಿ ಕಾರುಗಳು ನಿಂತಿದ್ದವೋ ಗೊತ್ತಿಲ್ಲ.ಅಲ್ಲಿಗೆ ಬಂದವರ ವೇಷಭೂಷಣಗಳೂ ಸಹ ಅವರೆಲ್ಲರೂ ಸಿರಿವಂತರು ಎಂಬುದನ್ನು ನಿರೂಪಿಸುತ್ತಿತ್ತು.ರಾಯರ ಅಂತಸ್ತು ಯಾವ ರೀತಿಯಿಂದ ನೋಡಿದರೂ ಅಲ್ಲಿಗೆ ಬಂದವರ ಕಾಲು ಭಾಗದಷ್ಟೂ ಇರಲಿಲ್ಲ.ಬಹುಶಃ ರಾಯರ ಆಗಮನವನ್ನು ಆವರ ತಮ್ಮ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತದೆ.ಬಂದ ಶ್ರೀಮಂತರಿಗೆಲ್ಲಾ ಸ್ವಾಗತ ಕೋರುತ್ತಿದ್ದ ಆತ,ಕುಟುಂಬ ಸಮೇತ ಬಂದಿದ್ದ ರಾಯರನ್ನು ಗಮನಿಸದಂತೆ ಮಾಡಿದ.ಇಡೀ ಗೃಹಪ್ರವೇಶದ ಔತಣಕೂಟ ಮುಗಿದರೂ,ಸೌಜನ್ಯಕ್ಕೂ ಒಂದೆರಡು ಮಾತುಗಳನ್ನು ಆಡಲಿಲ್ಲ ಆತ.ಆತನ ಹೆಂಡತಿಯಂತೂ ಕತ್ತೆತ್ತಿ ಇವರೆಡೆಗೆ ನೋಡಲೂ ಇಲ್ಲ.ಅಷ್ಟೇ ಅಲ್ಲದೆ ಅಲ್ಲಿ ನೆರೆದಿದ್ದ ಕೆಲವು ಬಂಧುಗಳೆನಿಸಿಕೊಂಡವರೂ ಕೂಡ ತಮ್ಮ ಅಂತಸ್ತಿಗೆ ತಕ್ಕವರೊಡನೆ ಮಾತುಕತೆಯಲ್ಲಿ ನಿರತರಾಗಿದ್ದರು.ಇದೆಲ್ಲವನ್ನೂ ನೋಡಿದ ರಾಯರಿಗೆ ಬಂದದ್ದೇ ತಪ್ಪು ಎನ್ನಿಸಿಬಿಟ್ಟಿತು.ಊಟವನ್ನೂ ಸರಿಯಾಗಿ ಮಾಡಲಾಗಲಿಲ್ಲ.ರಾಯರ ಹೆಂಡತಿಯಂತೂ,ದಾರಿಯುದ್ದಕ್ಕೂ ಬೈದುಕೊಂಡೇ ಬಂದರು.ಅಂದೇ ಕೊನೆ ರಾಯರು ತಮ್ಮ ಕುಟುಂಬದವರ ಯಾವ ವಿಶೇಷ ಸಮಾರಂಭಕ್ಕೂ ಹೋಗುತ್ತಿರಲಿಲ್ಲ.
          ********************************************************
ಹಳೆಯ ನೆನಪು ಮತ್ತೆ ಭಾಸ್ಕರನ ಮುಖದ ಮಂದಸ್ಮಿತಕ್ಕೆ ಕಾರಣವಾಯಿತು.ಯಾವ ಬಳಗ ತಮ್ಮ ಇರುವಿಕೆಯನ್ನು ಅವಮಾನ ಎಂದು ಭಾವಿಸುತ್ತಿದ್ದರೋ,ಅವರೇ ಈ ದಿನ ಕುಟುಂಬ ಸಮೇತ ಬಂದು ಆಹ್ವಾನ ಕೊಡುತ್ತಿದ್ದಾರೆ.ಅಷ್ಟಕ್ಕೂ ಬದಲಾಗಿರುವುದು ಏನು? ಎಂಬ ಆಲೋಚನೆ ಆತನಲ್ಲಿ ಬಂದಿತು.ಮುಂಚೆ ಆಟೋಗಳಲ್ಲಿ,ಬಸ್ಸುಗಳಲ್ಲಿ ಹೋಗುತ್ತಿದ್ದವರು ಇಂದು ಐಷಾರಾಮಿ ಕಾರಿನಲ್ಲಿ ಪಯಣಿಸುತ್ತಿದ್ದರು.ಹಂಚಿನ ಮನೆಯ ಜಾಗದಲ್ಲಿ ಅರಮನೆಯಂತ ಮಹಲು ಬಂದಿದೆ.ಬಯಕೆಗಳಿಗೆ ಕಡಿವಾಣ ಹಾಕುವ ಅವಶ್ಯಕತೆಯಿಲ್ಲ.ಬಯಸಿದ್ದನ್ನೆಲ್ಲಾ ಕೊಳ್ಳುವಷ್ಟು ಕಾಸಿದೆ.ಈ ಬದಲಾವಣೆಯೇ ತನ್ನ ಚಿಕ್ಕಪ್ಪನಲ್ಲಿಯೂ ತಮ್ಮ ಮೇಲಿನ ಪ್ರೀತಿಗೆ ಕಾರಣವಾಗಿರಬಹುದು ಎಂದುಕೊಂಡು ಮತ್ತೊಮ್ಮೆ ನಕ್ಕನು ಭಾಸ್ಕರ."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ..ಬರೀ ಸೋಗು.." ಮನಸ್ಸೊಳಗಿನ ಈ ಮಾತು ಮತ್ತೆ ಆತನ ನಗುವಿಗೆ ಕಾರಣವಾಯಿತು.
ರಾತ್ರಿ ಸುಮಾರು ಹತ್ತು ಗಂಟೆಯ ಸಮಯ.ಸೋಫಾದ ಮೇಲೆ ತನ್ನ ಲ್ಯಾಪ್‍ಟಾಪ್‍ನೊಂದಿಗೆ ತಲ್ಲೀನನಾಗಿದ್ದ ಭಾಸ್ಕರನ ಬಳಿ ರಾಯರು ಬಂದು "ಭಾಸ್ಕರ..." ಎಂದು ಕರೆದರು."ಅಪ್ಪಾ.." ಎಂದುಕೊಂಡು ಭಾಸ್ಕರ ತನ್ನ ಲ್ಯಾಪ್‍ಟಾಪ್‍ಅನ್ನು ಪಕ್ಕಕ್ಕೆ ಇಟ್ಟು ಮಾತಿಗೆ ಕುಳಿತನು.
"ಏನಪ್ಪಾ..?" ಎನ್ನುತ್ತಿದ್ದಂತೆ ರಾಯರು "ಏನಿಲ್ಲ ಪುಟ್ಟ...ನಾನೊಂದು ಮಾತು ಹೇಳಬೇಕಿತ್ತು..ನೀನು ಬೇಜಾರು ಮಾಡಿಕೊಳ್ಳಬಾರದು...." ಎನ್ನುತ್ತಿದ್ದಂತೆ ರಾಯರು ಯಾವ ವಿಷಯದ ಬಗ್ಗೆ ಮಾತನಾಡಲು ಬಂದಿದ್ದರು ಎಂಬ ಅರಿವಿತ್ತು.ಆದರೂ ತನ್ನ ತಂದೆಗೆ ಬೇಸರವಾಗಬಾರದೆಂಬ ಕಾರಣದಿದಂದ "ಹೇಳಪ್ಪಾ..." ಎಂದನು.
"ಮದುವೆಗೆ ನೀನು ಬರ್ತೀಯಾ ಅಲ್ವಾ....?!ಹಿಂದೆ ಆಗಿದ್ದೆಲ್ಲಾ ಮರೆತುಬಿಡೋಣ...ಎಷ್ಟೇ ಆಗಲಿ ನಾವೆಲ್ಲ ಒಂದೇ ಬಳ್ಳಿಯ ಹೂಗಳು..." ಎಂದರು.
"ಆ ಪರಿಜ್ಞಾನ ನಿನ್ನ ತಮ್ಮನಿಗೂ ಇರಬೇಕು ಅಲ್ಲವಾ ಅಪ್ಪ...!ನಿಂಗೆ ಯಾಕೆ ಅರ್ಥ ಆಗ್ತಾ ಇಲ್ಲ...ಅವರು ನಮ್ಮ ಶ್ರೀಮಂತಿಕೆಗೆ ಕೊಡುತ್ತಿರೋ ಬೆಲೆ ಇದು...ಈಗ ನಿನಗೂ ಸಮಾಜದಲ್ಲಿ ಒಂದು ಸ್ಥಾನ ಇದೆ..ಹಾಗಾಗಿ ನೀನು ಅವರ ಅಂತಸ್ತಿಗೆ ಸರಿಸಮಾನ ಆಗಿದ್ದೀಯಾ ಅದಕ್ಕೆ ನಿನ್ನನ್ನು ಮದುವೆಗೆ ಕರೀತಾ ಇದ್ದಾರೆ...ಅದೇ ನೀನು ಬಡತನದಲ್ಲಿಯೇ ಇದ್ದಿದ್ದರೆ,ಖಂಡಿತವಾಗಲೂ ಅವರು ನಿಮ್ಮನ್ನ ಮದುವೆಗೆ ಕರೆಯುವ ಮನಸ್ಸು ಮಾಡ್ತಾ ಇರಲಿಲ್ಲ...ಬೆಲೆ ನಿಮಗಲ್ಲ...ವಸ್ತುಗಳಿಗೆ...ಬಿಡಿ ಆ ಬಗ್ಗೆ ಯಾಕೆ ಮಾತಾಡೋದು?....ನಾನು ಬರಲ್ಲ ಅಷ್ಟೇ..." ಮತ್ತೆ ತನ್ನ ನಿರ್ಧಾರವನ್ನು ಸ್ಪಷ್ಟವಾಗಿ ಹೇಳಿದನು ಭಾಸ್ಕರ."ಪುಟ್ಟ...ನೀನು ಹೇಳಿದ್ದೆಲ್ಲ ನಿಜಾನೇ ಇರಬಹುದು...ಆದರೆ ಅದನ್ನೆಲ್ಲಾ ಆಲೋಚನೆ ಮಾಡುವ ಶಕ್ತಿ,ಆಸಕ್ತಿ ಎರಡೂ ನನಗಿಲ್ಲ..ಇರುವಷ್ಟು ದಿನ ಖುಷಿಯಾಗಿ ಇರಬೇಕು ಅಂತ ಆಸೆ...ಹಾಗಾಗಬೇಕು ಅಂತಾದರೆ ನೀನು ನನ್ನ ಜೊತೆ ಮದುವೆಗೆ ಬರಬೇಕು...ಒಂದು ದಿನ ರಜೆ ತೊಗೋ ಸಾಕು..." ಎಂದು ಮಗನ ಹೆಗಲನ್ನು ತಟ್ಟಿ ಅಲ್ಲಿಂದ ನಿರ್ಗಮಿಸಿದರು ರಾಯರು.
               **************************************************************
ಸುಮಾರು ವರ್ಷಗಳ ನಂತರ ತನ್ನ ಬಳಗದವರ ಸಂತೋಷಕೂಟವೊಂದರಲ್ಲಿ ಸೇರಿಕ್ಕೊಳ್ಳಲಿದ್ದಾನೆ ಭಾಸ್ಕರ.ಅರವತ್ತು ಲಕ್ಷದ ಕಾರಿನಲ್ಲಿ ತನ್ನ ತಂದೆ ತಾಯಿ ಹಾಗೂ ಮಡದಿಯೊಡನೆ ತನ್ನ ಚಿಕ್ಕಪ್ಪನ ಮಗಳ ಮದುವೆಗೆ ಹೋಗುತ್ತಿದ್ದ ಅವನ ಮನಸ್ಸು ಕೇವಲ ತನ್ನ ತಂದೆಯ ಸಂತೋಷಕ್ಕಾಗಿ ಮಾತ್ರ ಒಪ್ಪಿಕೊಂಡಿತ್ತು.ಹಲವು ಬಾರಿ ಹೋಗುವುದು ಬೇಡವೆಂದುಕೊಂಡಿದ್ದರೂ,ಕಡೆಯಲ್ಲಿ ಆತನಿಗೆ ಒಲ್ಲೆ ಎನ್ನಲಾಗಲಿಲ್ಲ.
ಅತಿ ದೊಡ್ಡ ಕಲ್ಯಾಣಮಂಟಪವೊಂದರಲ್ಲಿ ಮದುವೆ ಸಮಾರಂಭ ಏರ್ಪಟಾಗಿತ್ತು.ಕಾರಿನಿಂದ ರಾಯರು ಇಳಿಯುತ್ತಿದ್ದಂತೆ ರಾಯರ ತಮ್ಮ ಹಾಗೂ ಆತನ ಹೆಂಡತಿ ಇಬ್ಬರೂ ರಾಯರ ಕುಟುಂಬವನ್ನು ಸ್ವಾಗತಿಸಿದರು.ಕಾರಿನಲ್ಲಿ ಬಂದದ್ದಕ್ಕೆ ಈ ಯೋಗ ಇರಬಹುದು ಎಂದುಕೊಂಡು ಭಾಸ್ಕರ ಮನಸಿನೊಳಗೆ ನಕ್ಕನು.ತನ್ನ ಬೀಗರಿಗೆ ಹೆಮ್ಮೆಯಿಂದ ಅಣ್ಣನನ್ನು ಪರಿಚಯಿಸಿದ್ದ ರಾಯರ ತಮ್ಮ.
ಮದುವೆಯ ಸಮಾರಂಭದ ವ್ಯವಸ್ಥೆ ಅತ್ಯಂತ ವೈಭವಯುತವಾಗಿಯೇ ಏರ್ಪಾಡಾಗಿತ್ತು.ಒಂದಷ್ಟು ವರ್ಷದ ಕೆಳಗೆ ಯಾವ ಬಳಗದವರೂ ಮಾತನಾಡಲು ಇಷ್ಟ ಪಡದ ರಾಯರ ಸುತ್ತಲೂ ಅದೆಷ್ಟು ಜನ.ಅದೆಷ್ಟು ಹರಟೆ.ರಾಯರ ಪತ್ನಿಯು ಸಹ ಮಾತುಕತೆಯಲ್ಲಿ ನಿರತರಾಗಿದ್ದರು.ಇದನ್ನೆಲ್ಲ ನೋಡುತ್ತಿದ್ದ ಭಾಸ್ಕರನಿಗೆ ಮತ್ತೊಮ್ಮೆ ಇದೆಲ್ಲಾ ಸೋಗು ಎನಿಸತೊಡಗಿತು."ಸಂಬಂಧಗಳಿಗಲ್ಲ ಬೆಲೆ...ಸವಲತ್ತುಗಳಿಗೆ...." ಮತ್ತೊಮ್ಮೆ ಆತನ ಮನಸ್ಸು ನಕ್ಕಿತು.ತನ್ನ ಬಳಗದವರ ಮಧ್ಯದಿಂದ ರಾಯರು ಮಗನನ್ನೊಮ್ಮೆ ನೋಡಿದರು.ತಂದೆ-ಮಗ ಇಬ್ಬರೂ ನಕ್ಕರು.