ನನ್ನ ಅಜ್ಜ(ಅಪ್ಪನ ಅಪ್ಪ)ನ ಮನೆಯಲ್ಲಿ ಸಮೃದ್ಧವಾಗಿ ಹಣ್ಣು ಬಿಡುವ ಮಾವಿನ ಮರವೊಂದಿತ್ತು. ನಮ್ಮ ಮನೆಯ ಅಂಗಳದಲ್ಲಿ ಬೇರು ಬಿಟ್ಟಿದ್ದ ಅದು ಪಕ್ಕದ ಗದ್ದೆಗೆ ಚಾಚಿಕೊಂಡಿತ್ತು. ಪ್ರತಿ ವರ್ಷ ಯುಗಾದಿಯ ಹೊತ್ತಿಗೆ ಅದರಲ್ಲಿ ರಾಶಿ ರಾಶಿ ಹಣ್ಣುಗಳು ಬಿಡುತ್ತಿದ್ದವು. ಅಷ್ಟು ಸಿಹಿಯಲ್ಲದ ಆದರೆ ಅಧಿಕ ರಸವಿರುವ ಹಣ್ಣುಗಳು. ಒಂದು ದೊಡ್ಡ ಬಿದಿರಿನ ಕೋಲಿಗೆ ಕೊಕ್ಕೆ ಸಿಕ್ಕಿಸಿ ಅದನ್ನು ಕುಯ್ಯಲಾಗುತ್ತಿತ್ತು. ನೆಲಕ್ಕೆ ಬಿದ್ದ ಹಣ್ಣುಗಳಿಗೆ ಪೆಟ್ಟಾಗಬಾರದೆಂಬ ಕಾರಣಕ್ಕೆ ನೇಯ್ದ ತೆಂಗಿನಗರಿಗಳನ್ನ ಅಲ್ಲಲ್ಲಿ ಹಾಸಲಾಗುತ್ತಿತ್ತು.
ಬೆಳೆದ ಮಾವಿನ ಕಾಯಿಗಳನ್ನು ಕೊಯ್ದ ನಂತರ ಅದನ್ನು ಬೇರ್ಪಡಿಸುವ ಪ್ರಕ್ರಿಯೆ ನೆಡೆಯುತ್ತಿತ್ತು. ಹಿಂಡಿ, ಚಟ್ನಿ ಮತ್ತು ಕಾಯಿರಸಕ್ಕೆ ಒಂದಷ್ಟು ಬೆಳದ ಕಾಯಿಗಳನ್ನು ಆರಿಸಿಟ್ಟು, ಉಳಿದದ್ದನ್ನು ಒಣಹುಲ್ಲು ತುಂಬಿದ ಕುಕ್ಕೆಗಳಲ್ಲಿ ಇಡಲಾಗುತ್ತಿತ್ತು. ಅವುಗಳ ಸಂಗ್ರಹಣೆ ಆಗುತ್ತಿದ್ದುದು ಅಂಗಳಕ್ಕೆ ಹೊಂದಿಕೊಂಡ ಹಾಗಿದ್ದ ಹೊರ ಕೋಣೆಯಲ್ಲಿ. ಮಾವಿನ ಹಣ್ಣಿನ ಕಾಲದಲ್ಲಿ ಆ ಕೋಣೆಯೊಳಗೆ ರಾಶಿ ರಾಶಿ ಹಣ್ಣುಗಳದ್ದೆ ಕಾರುಬಾರು. ದಿನಕ್ಕೆರಡು ಬಾರಿ ವ್ರತ ಹಿಡಿದಂತೆ ದೊಡ್ಡಮ್ಮ ( ಅಜ್ಜಿಯನ್ನು ದೊಡ್ಡಮ್ಮ ಎಂದೇ ಕರೆಯುವುದು) ಕೋಣೆ ಹೊಕ್ಕು ಹಣ್ಣಾದ ಮಾವುಗಳನ್ನು ಬೇರ್ಪಡಿಸುತ್ತಿದ್ದರು. ಇನ್ನೇನು ಹಣ್ಣಾಗಲಿದೆ ಎನ್ನುವ ಮಾವುಗಳನ್ನು ನೆಲದಲ್ಲಿ ಬಿಡಿಸಿಡುತ್ತಿದ್ದರು. ತೀರಾ ಹಣ್ಣಾದವುಗಳಲ್ಲಿ ರಸಾಯನ ಮಾಡುತ್ತಿದ್ದರು. ಮಾವಿನ ಹಣ್ಣಿನ ತಿರುಳನ್ನು ಹಿಂಡಿ, ಅದಕ್ಕೆ ಬೆಲ್ಲ, ಕಾಯಿಹಾಲು ಬೆರೆಸಿ, ದೊಡ್ಡ ಪಾತ್ರೆಯಲ್ಲಿ ತಯಾರು ಮಾಡಿ ಇಟ್ಟರೆ ಇಡೀ ದಿನ ಅದರದೇ ಸಮಾರಾಧನೆ. ಬೇಸಿಗೆಯ ದಿನಗಳಾದ್ದರಿಂದ ಹುಳಿ ಬರಬಾರದು ಎಂಬ ಕಾರಣದಿಂದ ರಸಾಯನದ ಪಾತ್ರೆಯನ್ನು ನೀರು ತುಂಬಿದ ತಟ್ಟೆಯ ಅಥವಾ ಪಾತ್ರೆಯ ಮೇಲೆ ಇಡುತ್ತಿದ್ದರು. ಪ್ರಿಡ್ಜ್ ಇರದ ಆ ಕಾಲದಲ್ಲಿ ಯಾವುದಾದರೂ ಪದಾರ್ಥ ಹುಳಿ ಬರಬಾರದು ಅಥವಾ ಕೆಡಬಾರದು ಎಂದಾಗ ಈ ಮಾರ್ಗ ಅನುಸರಿಸಲಾಗುತ್ತಿತ್ತು. ದೋಸೆ, ಕಡುಬು ಹೀಗೆ ಯಾವ ತಿಂಡಿ ಮಾಡಿದರೂ ಅದನ್ನು ರಸಾಯನದೊಂದಿಗೆ ತಿನ್ನುವುದು. ಅಲ್ಲದೇ ಕೆಲವೊಮ್ಮೆ ಸಂಜೆಯ ಚಹಾಕ್ಕೆ ಬದಲಾಗಿಯೂ ರಸಾಯನವನ್ನೇ ಕುಡಿಯಲಾಗುತ್ತಿತ್ತು.
ಬೇಸಿಗೆಯಲ್ಲಿ ಮನೆಗೆ ಯಾರಾದರೂ ಅತಿಥಿ ಅಭ್ಯಾಗತರು ಬಂದರೆ, ಅವರಿಗೆ ಮಾವಿನಹಣ್ಣಿನ ಪಾಯಸವೇ ವಿಶೇಷದ ಅಡುಗೆ. ಅಲ್ಲದೇ ಅವರುಗಳ ಮನೆಗಳಿಗೂ ಸಾಕಷ್ಟು ಮಾವಿನ ಕಾಯಿ/ಹಣ್ಣುಗಳನ್ನು ಕೊಟ್ಟು ಕಳುಹಿಸಲಾಗುತ್ತಿತ್ತು.
ಬೇಸಿಗೆಯ ರಜೆಗೆ ಅಜ್ಜನ ಮನೆಗೆ ಹೋದಾಗ, ನಮಗಿದ್ದ ಒಂದೇ ಕೆಲಸವೆಂದರೆ, ಹಣ್ಣಾದ ಮಾವುಗಳನ್ನು ಬಾವಿಕಟ್ಟೆಗೆ ತೆಗೆದುಕೊಂಡು ಹೋಗಿ ಅದನ್ನು ತೊಳೆದು ತಿನ್ನುವುದು. ಯಾವುದೇ ಕೃತಕತೆ ಇರದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳಾದ್ದ ಕಾರಣ, ಅಲ್ಲದೇ ದುಡ್ಡು ಕೊಟ್ಟು ತರಬೇಕಾದ ಪ್ರಮೇಯವಿಲ್ಲದ ಕಾರಣ ಬೇಕಾದಷ್ಟು ಹಣ್ಣುಗಳನ್ನು ತಿನ್ನಬಹುದಿತ್ತು. ಹೀಗೆ ತಿಂದ ಹಣ್ಣುಗಳ ಗೊರಟನ್ನು ದೂರದಲ್ಲೆಲ್ಲೊ ಎಸೆದು "ಬರುವ ವರ್ಷ ನಾ ಬಿಸಾಕಿದ ಗೊರಟಿನಿಂದ ಅಲ್ಲೊಂದು ಗಿಡ ಹುಟ್ಟಿದ್ರೂ ಹುಟ್ಟಬಹುದು" ಅಂತಂದು ಕೊಳ್ಳುತ್ತಿದ್ದೆವು. ಈ ಮಾವಿನಹಣ್ಣಿನ ಕಲೆ ಬಹಳ ಕೆಟ್ಟದ್ದು. ಒಂದು ವೇಳೆ ಅಂಗಿಯ ಮೇಲೆ ಅದರ ರಸ ಚೆಲ್ಲಿದರೆ, ಜಪ್ಪಯ್ಯ ಎಂದರೂ ಹೋಗುವುದಿಲ್ಲ. ಹಾಗಾಗಿ "ಅಂಗಿ ಮೇಲೆ ಹಾಕೋಬೇಡ..ಮತ್ತೆ ಕಲೆ ಹೋಗಲ್ಲ.." ಎಂಬ ಸೂಚನೆಗಳೂ ಸಿಗುತ್ತಿತ್ತು.
ಮನುಷ್ಯನಿಗೆ ಬದಲಾವಣೆ ಅಗತ್ಯ ಹಾಗೂ ಅನಿವಾರ್ಯ. ಇಂದು ಸಲ್ಲುವ ವಿಷಯ ಎಲ್ಲಾ ಕಾಲದಲ್ಲೂ ಸಲ್ಲಬೇಕೆಂಬ ನಿಯಮವಿಲ್ಲ. ಹಾಗೇ ನಮ್ಮ ಅಂಗಳದ ಮಾವಿನ ಮರವನ್ನು ಕಡಿಯಬೇಕಾದ ಪ್ರಸಂಗ ಬಂದಿತು. ನನಗೆ ನೆನಪಿರುವಂತೆ, ಯಾವುದೋ ಮಳೆಗಾಲದಲ್ಲಿ ಅದಕ್ಕೆ ಸಿಡಿಲು ಬಡಿದ ಕಾರಣ ಮರ ತನ್ನ ಜೀವ ಸತ್ವ ಕಳೆದುಕೊಂಡು ಅರೆಜೀವವಾಯಿತು. ತದನಂತರದಲ್ಲಿ ಅದರಲ್ಲಿ ಯಾವುದೇ ಕಾಯಿ ಹುಟ್ಟಲಿಲ್ಲ. ಯಾವಾಗಲೂ ಸೊನೆ ಸೋರುತ್ತಿದ್ದ ಕಾರಣ ಅಂಗಳದ ತುಂಬೆಲ್ಲಾ ಕಪ್ಪು ಕಪ್ಪು ಕಲೆಗಳಾಗುತ್ತಿತ್ತು. ಹಾಗಾಗಿ ಅದನ್ನು ಕಡಿದು ದಿನನಿತ್ಯದ ಅಗತ್ಯಕ್ಕಾಗಿ ಪೇರಿಸಿಟ್ಟ ಕಟ್ಟಿಗೆಯ ರಾಶಿಗೆ ಸೇರಿಸಲಾಯಿತು.
ಈಗಲೂ ಅಜ್ಜನ ಮನೆಗೆ ಹೋದಾಗ ಅಂಗಳದ ಮಾವಿನ ಮರ, ಬಾವಿಕಟ್ಟೆಯಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುತ್ತಿದ್ದ ಮಾವಿನಹಣ್ಣು, ಅಂಗಳಕ್ಕೆ ಅಂಟಿಕೊಂಡ ಕೋಣೆಯಲ್ಲಿ ಪೇರಿಸಿಡುತ್ತಿದ್ದ ರಾಶಿ ರಾಶಿ ಹಣ್ಣುಗಳ ಚಿತ್ರಣ ಕಣ್ಣ ಮುಂದೆ ಬರುವುದು.
ತುಂಬಾ ಚೆನ್ನಾಗಿದೆ ಬರಹ. ನಾನು ಸಣ್ಣಲ್ಲಿದ್ದಾಗ ನಮ್ಮ ಮನೆಯ ಎದುರು ಸಹ ಒಂದು ವಿಶೇಷ ಜಾತಿಯ ಮಾವಿನಹಣ್ಣಿನ ಮರವಿತ್ತು. ಹಣ್ಣಾಗುವ ಕಾಲದಲ್ಲಿ ದೊಪ್ ದೊಪ್ ಎಂದು ಅಂಗಳಕ್ಕೆ ಬಿದ್ದಾಗಲೆಲ್ಲಾ ನಾವೂ ಓಡಿ ಹೋಗಿ ನಂಗೆ ನಂಗೆ ಎಂದು ಒಂದೇ ಬಾಯಿಗೆ ತಿನ್ನುತ್ತಿದ್ದುವೆ. ಅಂಗಡಿಯಲ್ಲಿ ಎಷ್ಟೇ ದುಡ್ಡು ಕೊಟ್ಟು ತಂದರೂ ಸಹ ಆ ಹಣ್ಣುಗಳ ರುಚಿಯ ಮುಂದೆ ಇವೆಲ್ಲಾ ಏನೂ ಇಲ್ಲ ಬಿಡಿ. ನೆನಪಿನ ದೋಣಿಯಲ್ಲಿ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದ!
ReplyDelete