"ತೀರ್ಥರೂಪು ತಂದೆಯವರಿಗೆ ನಮಸ್ಕಾರಗಳು..ನಾವು ಕ್ಷೇಮ..ನಿಮ್ಮ ಕ್ಷೇಮಕ್ಕಾಗಿ ಪತ್ರ ಬರೆಯಿರಿ" ಎಂಬಲ್ಲಿಂದ ಆರಂಭವಾಗಿ, "ನಿಮ್ಮ ಪತ್ರದ ನಿರೀಕ್ಷೆಯಲ್ಲಿ" ಎಂಬುವಲ್ಲಿಗೆ ಪತ್ರ ಕೊನೆಗೊಳ್ಳುತ್ತಿತ್ತು. ಅಪ್ಪ ಅವರ ತಂದೆಗೆ ಅಂದರೆ ನನ್ನಜ್ಜನಿಗೆ ವಾರಕ್ಕೊಂದರಂತೆ ಪತ್ರ ಬರೆಯುತ್ತಿದ್ದರು. ನೀಲಿ ಬಣ್ಣದ ಇಂಗ್ಲ್ಯಾಂಡ್ ಲೆಟರ್ ನ (ಅದು ಇನ್ ಲ್ಯಾಂಡ್ ಲೆಟರ್ ಆದರೂ ರೂಢಿಯಿಂದ ಬಂದಂತೆ ಅದು ನನಗೆ ಇಂಗ್ಲ್ಯಾಂಡ್ ಲೆಟರ್) ತುದಿಯಿಂದ, ಲೆಟರ್ ನ ಕೊನೆಯವರೆಗೆ ಒಂದಷ್ಟು ವರ್ತಮಾನಗಳನ್ನು ತುಂಬುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಮನೆ ಮಂದಿಯ ಯೋಗಕ್ಷೇಮ, ವ್ಯಾಪಾರದ ವಿಚಾರಗಳು ಇರುತ್ತಿತ್ತು.
ಇದಕ್ಕೆ ಪ್ರತಿಯಾಗಿ ಅಜ್ಜ ಉತ್ತರ ರೂಪದಲ್ಲಿ ಕಾಗದ ಬರೆಯುತ್ತಿದ್ದರು. ಅದರ ಒಕ್ಕಣೆಯಲ್ಲಿ ಊರಿನ ಪರಿಚಯದವರ ಮನೆಯ ಶುಭ ಅಶುಭ ಸುದ್ದಿಗಳ ಜೊತೆಗೆ ದೈವದ ಮನೆಯ ಹಬ್ಬ, ಯಾವುದಾದರೂ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಉತ್ಸವ ಹೀಗೆ ಹಲವಾರು ವಿಷಯಗಳು ಇರುತ್ತಿತ್ತು. ಇದರೊಂದಿಗೆ ಮಳೆ ಬೆಳೆಯ ವಿಚಾರ. ಕೃಷಿಯನ್ನೇ ಪ್ರಧಾನವಾಗಿ ನಂಬಿದ್ದ ಅಜ್ಜಯ್ಯ ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳನ್ನು ಅತ್ಯಂತ ಕ್ಲುಪ್ತವಾಗಿ ಬರೆಯುತ್ತಿದ್ದರು. ಇದರೊಂದಿಗೆ ದೊಡ್ಡಮ್ಮನ ಕಾಲು ನೋವು, ತಮಗಿದ್ದ ಉಬ್ಬಸದ ವಿಷಯವೂ ಇರುತ್ತಿತ್ತು. ಒಟ್ಟಿನಲ್ಲಿ ಹೋದ ಪತ್ರದಿಂದ ಈಗ ಬರೆಯುತ್ತಿದ್ದ ಪತ್ರದ ಮಧ್ಯಭಾಗದಲ್ಲಿ ಊರಿನಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಚಿತ್ರಣವಿರುತ್ತಿತ್ತು.
ಹೀಗೆ ಅಜ್ಜಯ್ಯನಿಂದ ಬಂದ ಪತ್ರಗಳನ್ನು ನಮ್ಮ ಮನೆಯ ಕ್ಯಾಲೆಂಡರ್ ನೇತು ಹಾಕುತಿದ್ದ ಮೊಳೆಗೆ ಸಿಕ್ಕಿಸಿದ ತಂತಿಯೊಂದರ ತುದಿಯಲ್ಲಿ ಪೇರಿಸಿಡಲಾಗುತ್ತಿತ್ತು. ಹಾಗೆಯೇ ಇಲ್ಲಿಂದ ಹೋದ ಕಾಗದಗಳು ಅಜ್ಜನ ಮನೆಯ ಹೊರ ಕೋಣೆಯಲ್ಲಿದ್ದ ದಳಿಯೊಂದಕ್ಕೆ ಸಿಕ್ಕಿಸಿದ್ದ ತಂತಿ ಸೇರುತ್ತಿತ್ತು.
ಕೆಲವೊಮ್ಮೆ ನಂಗೆ ಇಂಗ್ಲೆಂಡ್ ಲೆಟರ್ ತರುವುದು ಬಹು ಇಷ್ಟದ ಕೆಲಸ. ಒಂದು ಲೆಟರ್ ಗೆ 1.50 ಪೈಸೆ ಇದ್ದ ನೆನಪು. ಅಪ್ಪ ಹೆಚ್ಚಿನ ಸಲ ಐದು ರೂಪಾಯಿ ಕೊಟ್ಟು ಮೂರು ಲೆಟರ್ ತರಲು ಹೇಳುತ್ತಿದ್ದರು. ಆಗೆಲ್ಲಾ ಅದರಲ್ಲಿ ಉಳಿದ ಚಿಲ್ಲರೆ ಐವತ್ತು ಪೈಸೆಯನ್ನು ಒಲ್ಲದ ಮನಸ್ಸಿನಿಂದ ಅಪ್ಪನಿಗೆ ಕೊಡಲು ಮುಂದಾಗುತ್ತಿದ್ದೆ.
ಮನಸ್ಸಿನಲ್ಲಿ ನೆನಸಿದ್ದನ್ನ ತಿಳಿಯುವ ದೇವರಂತೆ ಅಪ್ಪ "ಇರ್ಲಿ ಇಟ್ಕೋ..ಅದು ನಿಂಗೆ" ಎಂದು ಬೆನ್ನು ತಟ್ಟಿ ಕಳುಹಿಸುತ್ತಿದ್ದರು. ಆದರೆ ನನ್ನ ಅದೃಷ್ಟ ಕೈಕೊಟ್ಟಾಗ ಆರು ರೂಪಾಯಿ ಕೊಡುತ್ತಿದ್ದರು. ಅದಕ್ಕೆ ನಾಲ್ಕು ಲೆಟರ್ ಗಳು ಬರುತ್ತಿದ್ದವು ಮತ್ತು ಯಾವುದೇ ಚಿಲ್ಲರೆ ಉಳಿಯುತ್ತಿರಲಿಲ್ಲ. ಇದನ್ನು ಮನಗಂಡ ನಾನು ಪೋಸ್ಟ್ ಆಫೀಸಿನ ಕಡೆಗೆ ಅರೆಮನಸ್ಸಿನಿಂದ ಹೆಜ್ಜೆ ಹಾಕಿ, ಭಾರ ಹೊತ್ತಂತೆ ನಾಲ್ಕು ಲೆಟರ್ ಗಳನ್ನು ಹೇಗೋ ತಂದು ಕೊಡುತ್ತಿದ್ದೆ.
ನಾನು ಪತ್ರ ಬರೆಯುವುದನ್ನು ಕಲಿಯಬೇಕು ಎಂದೋ ಏನೋ, ಕೆಲವೊಮ್ಮೆ ಅಪ್ಪ ನನಗೆ ಪತ್ರ ಬರೆಯಲು ಹೇಳುತ್ತಿದ್ದರು. ಅವರು ಹೇಳುತ್ತಾ ಹೋದಂತೆ ನಾನು ಬರೆಯಬೇಕು. ನನಗೋ ದೀರ್ಘಾಕ್ಷರ, ಒತ್ತಕ್ಷರಗಳ ಬಗ್ಗೆ ಬಹಳಷ್ಟು ಸಂಶಯ. ಆಗೆಲ್ಲಾ ಧೀರ್ಘ ಕೊಡಬೇಕಾ, ನ ಕೆ ಯ ಒತ್ತಾ ಎಂದೆಲ್ಲಾ ಕೇಳುತ್ತಿದ್ದೆ. ಅಪ್ಪ ಅಚ್ಚುಕಟ್ಟಾಗಿ ಪತ್ರ ಬರೆಯುತ್ತಿದ್ದರು. ಪ್ರತಿ ಸಾಲುಗಳ ನಡುವೆ ಸಮಾನ ಅಂತರ, ಚೊಕ್ಕವಾದ ಅಕ್ಷರಗಳು, ಒಂದಿಷ್ಟೂ ಜಾಗವನ್ನ ಪೋಲು ಮಾಡದ ಹಾಗೆ ಇಡೀ ಪತ್ರದ ತುಂಬಾ ವಿಷಯ ತುಂಬುತ್ತಿದ್ದರು. ಆದರೆ ನನ್ನದೋ ಚಿಕ್ಕಮಗಳೂರಿನಲ್ಲಿ ಶುರುವಾದರೆ ಕುಂದಾಪುರದ ವರೆಗೆ ಅಕ್ಷರಗಳು ಹೋಗುತ್ತಿದ್ದವು. ಗೆರೆಯಿಲ್ಲದ ಖಾಲಿ ಹಾಳೆಗಳಲ್ಲಿ ಬರೆಯುವುದು ನನಗೀಗಲೂ ಸವಾಲಿನ ವಿಷಯ. ಬರೆಯುವಾಗ ಆಗಾಗ ಪತ್ರ ಇಣುಕುತ್ತಿದ್ದ ಅಪ್ಪ ಆಗೇನೂ ಹೇಳುತ್ತಿರಲಿಲ್ಲ. ನಾನೋ ಅವರು ಪೂರ್ಣ ವಿಷಯವನ್ನು ಮುಗಿಸುವ ಮುನ್ನವೇ "ಇನ್ನು ಜಾಗ ಇಲ್ಲ" ಎಂದು ಬಿಡುತ್ತಿದ್ದೆ. ಪತ್ರ ವಿನಿಮಯದಲ್ಲಿ ಪಳಗಿದ್ದ ಅಪ್ಪನಿಗೆ ಒಂದು ಲೆಟರ್ ನಲ್ಲಿ ಎಷ್ಟು ವಿಷಯ ಬರೆಯಬಹುದು ಎಂಬುದರ ಅಂದಾಜಿತ್ತು. ಹಾಗಾಗಿ ಇನ್ನು ಜಾಗವಿಲ್ಲ ಎಂದಾಕ್ಷಣ ಆಶ್ಚರ್ಯವಾಗಿ ಪತ್ರ ಇಣುಕಿದರೆ, ಹಕ್ಕಿಯ ಹಿಕ್ಕೆಯಂತೆ ಎಲ್ಲೋ ಶುರುವಾದ ಅಕ್ಷರ ಅದೇ ಸಾಲಿನ ಕೊನೆ ಮುಟ್ಟದೆ ಮತ್ಯಾವುದೋ ಸಾಲಿನ ಕೊನೆ ಮುಟ್ಟುತ್ತಿತ್ತು. ಜೊತಗೆ ಸಾಲುಗಳ ನಡುವೆ ಹೆಚ್ಚಿನ ಅಂತರವಿದ್ದು, ಹೆಚ್ಚು ಜಾಗ ನಷ್ಟವಾಗುತ್ತಿತ್ತು. ಅದನ್ನು ನೋಡಿದ ಅಪ್ಪ "ಹೀಗೆ ಬರೆದ್ರೆ..ಅಜ್ಜಯ್ಯಂಗೆ ವಾರಕ್ಕೆ ಮೂರು ಕಾಗದ ಹಾಕಬೇಕು" ಎಂದು ನಕ್ಕು, ಎಲ್ಲೆಲ್ಲೆ ಅಂತರ ಹೆಚ್ಚಿದೆಯೋ ಅದನ್ನೆಲ್ಲಾ ತಿಳಿಸಿ ಹೇಳುತ್ತಿದ್ದರು.
ನನಗೆ ಪತ್ರ ಬರೆಯಲು ಹೇಳಿದಾಗಲೆಲ್ಲಾ ಅಪ್ಪನಿಗೆ ಹೆಚ್ಚಿನ ಕೆಲಸ. ಪತ್ರ ಮುಗಿದ ಮೇಲೆ ಅದನ್ನು ಪರಿಷ್ಕರಿಸಿ ತಪ್ಪುಗಳನ್ನು ತಿದ್ದಬೇಕಿತ್ತು. ಧೀರ್ಘ ಬಿಟ್ಟು ಹೋಗಿದ್ದರೆ ಅಕ್ಷರಕ್ಕೆ ತೇಪೆ ಹಚ್ಚಿ ಅಲ್ಲೇ ಧೀರ್ಘ ಸೇರಿಸಿಬಿಡುತ್ತಿದ್ದರು. ಅದೇ ಏನಾದರೂ ಇಡೀ ಪದವೇ ತಪ್ಪಾಗಿದ್ದರೇ ಅದನ್ನು ಹೊಡೆದು ಹಾಕಿ, ಅದರ ಮೇಲೆ ಸರಿಯಾದ ಪದ ಬರೆಯುತ್ತಿದ್ದರು. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸಾಕಷ್ಟು ಅಂತರ ಕೊಟ್ಟು ಬರೆಯುತ್ತಿದ್ದ ಕಾರಣ, ತಪ್ಪನ್ನು ಹೊಡೆದು ಹಾಕಿ ಸರಿ ಪದವನ್ನು ಬರೆಯುವಷ್ಟು ಜಾಗವನ್ನು ನನ್ನ ಬರವಣಿಗೆ ದಯಪಾಲಿಸುತ್ತಿತ್ತು.
ನಾನಂತೂ ಅಪ್ಪನಿಗೆ ಒಂದೂ ಪತ್ರ ಬರೆಯುವ ಅವಕಾಶ ಸಿಗಲಿಲ್ಲ. ನಾವೆಲ್ಲಾ ಊರು ಬಿಡುವಾಗ ಪೋನುಗಳು ಪರಿಪೂರ್ಣವಾಗಿ ವ್ಯಾಪಿಸಿ ಬಿಟ್ಟಿದ್ದವು. ಎಣಿಸಿದವರ ಜೊತೆ ತಕ್ಷಣಕ್ಕೆ ಮಾತಾಡುವ ಅವಕಾಶಗಳನ್ನು ಪೋನುಗಳು ಕೊಟ್ಟಿವೆ. ಆದರೆ ಪತ್ರ ಬರೆದ ಮೇಲೆ ಅದರ ಉತ್ತರಕ್ಕೆ ಕಾಯುವ, ಜೊತೆಗೆ ಪತ್ರವೊಂದು ಕೈಸೇರಿದಾಗ ಅದನ್ನು ಒಡೆದು ಓದುವವರೆಗೆ ಇರುವ ಕುತೂಹಲ ಎರಡೂ ಪೋನುಗಳಿಂದ ಕಳೆದು ಹೋಗಿದೆ.
No comments:
Post a Comment