Sunday, 29 September 2024

ಪತ್ರ ಪುರಾಣ

   "ತೀರ್ಥರೂಪು ತಂದೆಯವರಿಗೆ ನಮಸ್ಕಾರಗಳು..ನಾವು ಕ್ಷೇಮ..ನಿಮ್ಮ ಕ್ಷೇಮಕ್ಕಾಗಿ ಪತ್ರ ಬರೆಯಿರಿ" ಎಂಬಲ್ಲಿಂದ ಆರಂಭವಾಗಿ, "ನಿಮ್ಮ ಪತ್ರದ ನಿರೀಕ್ಷೆಯಲ್ಲಿ" ಎಂಬುವಲ್ಲಿಗೆ ಪತ್ರ ಕೊನೆಗೊಳ್ಳುತ್ತಿತ್ತು. ಅಪ್ಪ ಅವರ ತಂದೆಗೆ ಅಂದರೆ ನನ್ನಜ್ಜನಿಗೆ ವಾರಕ್ಕೊಂದರಂತೆ ಪತ್ರ ಬರೆಯುತ್ತಿದ್ದರು.  ನೀಲಿ ಬಣ್ಣದ ಇಂಗ್ಲ್ಯಾಂಡ್ ಲೆಟರ್ ನ (ಅದು ಇನ್ ಲ್ಯಾಂಡ್ ಲೆಟರ್ ಆದರೂ ರೂಢಿಯಿಂದ ಬಂದಂತೆ ಅದು ನನಗೆ ಇಂಗ್ಲ್ಯಾಂಡ್ ಲೆಟರ್) ತುದಿಯಿಂದ, ಲೆಟರ್ ನ ಕೊನೆಯವರೆಗೆ ಒಂದಷ್ಟು ವರ್ತಮಾನಗಳನ್ನು ತುಂಬುತ್ತಿದ್ದರು. ಅದರಲ್ಲಿ ಹೆಚ್ಚಾಗಿ ಮನೆ ಮಂದಿಯ ಯೋಗಕ್ಷೇಮ, ವ್ಯಾಪಾರದ ವಿಚಾರಗಳು ಇರುತ್ತಿತ್ತು.

   ಇದಕ್ಕೆ ಪ್ರತಿಯಾಗಿ ಅಜ್ಜ ಉತ್ತರ ರೂಪದಲ್ಲಿ ಕಾಗದ ಬರೆಯುತ್ತಿದ್ದರು. ಅದರ ಒಕ್ಕಣೆಯಲ್ಲಿ ಊರಿನ ಪರಿಚಯದವರ ಮನೆಯ ಶುಭ ಅಶುಭ ಸುದ್ದಿಗಳ ಜೊತೆಗೆ ದೈವದ ಮನೆಯ ಹಬ್ಬ, ಯಾವುದಾದರೂ ದೇವಸ್ಥಾನದ ಜೀರ್ಣೋದ್ಧಾರ ಅಥವಾ ಉತ್ಸವ ಹೀಗೆ ಹಲವಾರು ವಿಷಯಗಳು ಇರುತ್ತಿತ್ತು. ಇದರೊಂದಿಗೆ ಮಳೆ ಬೆಳೆಯ ವಿಚಾರ. ಕೃಷಿಯನ್ನೇ ಪ್ರಧಾನವಾಗಿ ನಂಬಿದ್ದ ಅಜ್ಜಯ್ಯ ತಮ್ಮ ದಿನನಿತ್ಯದ ಕೃಷಿ ಚಟುವಟಿಕೆಗಳನ್ನು ಅತ್ಯಂತ ಕ್ಲುಪ್ತವಾಗಿ ಬರೆಯುತ್ತಿದ್ದರು. ಇದರೊಂದಿಗೆ ದೊಡ್ಡಮ್ಮನ‌ ಕಾಲು ನೋವು, ತಮಗಿದ್ದ ಉಬ್ಬಸದ ವಿಷಯವೂ ಇರುತ್ತಿತ್ತು. ಒಟ್ಟಿನಲ್ಲಿ ಹೋದ ಪತ್ರದಿಂದ ಈಗ ಬರೆಯುತ್ತಿದ್ದ ಪತ್ರದ ಮಧ್ಯಭಾಗದಲ್ಲಿ ಊರಿನಲ್ಲಿ ನಡೆಯುತ್ತಿದ್ದ ಆಗು ಹೋಗುಗಳ ಚಿತ್ರಣವಿರುತ್ತಿತ್ತು.

   ಹೀಗೆ ಅಜ್ಜಯ್ಯನಿಂದ ಬಂದ ಪತ್ರಗಳನ್ನು ನಮ್ಮ ಮನೆಯ ಕ್ಯಾಲೆಂಡರ್ ನೇತು ಹಾಕುತಿದ್ದ ಮೊಳೆಗೆ ಸಿಕ್ಕಿಸಿದ ತಂತಿಯೊಂದರ ತುದಿಯಲ್ಲಿ ಪೇರಿಸಿಡಲಾಗುತ್ತಿತ್ತು. ಹಾಗೆಯೇ ಇಲ್ಲಿಂದ ಹೋದ ಕಾಗದಗಳು ಅಜ್ಜನ ಮನೆಯ ಹೊರ ಕೋಣೆಯಲ್ಲಿದ್ದ ದಳಿಯೊಂದಕ್ಕೆ ಸಿಕ್ಕಿಸಿದ್ದ ತಂತಿ ಸೇರುತ್ತಿತ್ತು.

   ಕೆಲವೊಮ್ಮೆ ನಂಗೆ ಇಂಗ್ಲೆಂಡ್ ಲೆಟರ್ ತರುವುದು ಬಹು ಇಷ್ಟದ ಕೆಲಸ. ಒಂದು ಲೆಟರ್ ಗೆ 1.50 ಪೈಸೆ ಇದ್ದ ನೆನಪು. ಅಪ್ಪ ಹೆಚ್ಚಿನ ಸಲ ಐದು ರೂಪಾಯಿ ಕೊಟ್ಟು ಮೂರು ಲೆಟರ್ ತರಲು ಹೇಳುತ್ತಿದ್ದರು. ಆಗೆಲ್ಲಾ ಅದರಲ್ಲಿ ಉಳಿದ ಚಿಲ್ಲರೆ ಐವತ್ತು ಪೈಸೆಯನ್ನು ಒಲ್ಲದ ಮನಸ್ಸಿನಿಂದ ಅಪ್ಪನಿಗೆ ಕೊಡಲು ಮುಂದಾಗುತ್ತಿದ್ದೆ.

   ಮನಸ್ಸಿನಲ್ಲಿ ನೆನಸಿದ್ದನ್ನ ತಿಳಿಯುವ ದೇವರಂತೆ ಅಪ್ಪ "ಇರ್ಲಿ ಇಟ್ಕೋ..ಅದು ನಿಂಗೆ" ಎಂದು ಬೆನ್ನು ತಟ್ಟಿ ಕಳುಹಿಸುತ್ತಿದ್ದರು. ಆದರೆ ನನ್ನ ಅದೃಷ್ಟ ಕೈಕೊಟ್ಟಾಗ ಆರು ರೂಪಾಯಿ ಕೊಡುತ್ತಿದ್ದರು. ಅದಕ್ಕೆ ನಾಲ್ಕು ಲೆಟರ್ ಗಳು ಬರುತ್ತಿದ್ದವು ಮತ್ತು ಯಾವುದೇ ಚಿಲ್ಲರೆ ಉಳಿಯುತ್ತಿರಲಿಲ್ಲ. ಇದನ್ನು ಮನಗಂಡ ನಾನು ಪೋಸ್ಟ್ ಆಫೀಸಿನ ಕಡೆಗೆ ಅರೆಮನಸ್ಸಿನಿಂದ ಹೆಜ್ಜೆ ಹಾಕಿ, ಭಾರ ಹೊತ್ತಂತೆ ನಾಲ್ಕು ಲೆಟರ್ ಗಳನ್ನು ಹೇಗೋ ತಂದು ಕೊಡುತ್ತಿದ್ದೆ.

    ನಾನು ಪತ್ರ ಬರೆಯುವುದನ್ನು ಕಲಿಯಬೇಕು ಎಂದೋ ಏನೋ, ಕೆಲವೊಮ್ಮೆ ಅಪ್ಪ ನನಗೆ ಪತ್ರ ಬರೆಯಲು ಹೇಳುತ್ತಿದ್ದರು. ಅವರು ಹೇಳುತ್ತಾ ಹೋದಂತೆ ನಾನು ಬರೆಯಬೇಕು. ನನಗೋ ದೀರ್ಘಾಕ್ಷರ, ಒತ್ತಕ್ಷರಗಳ ಬಗ್ಗೆ ಬಹಳಷ್ಟು ಸಂಶಯ. ಆಗೆಲ್ಲಾ ಧೀರ್ಘ ಕೊಡಬೇಕಾ, ನ ಕೆ‌ ಯ ಒತ್ತಾ ಎಂದೆಲ್ಲಾ ಕೇಳುತ್ತಿದ್ದೆ. ಅಪ್ಪ ಅಚ್ಚುಕಟ್ಟಾಗಿ ಪತ್ರ ಬರೆಯುತ್ತಿದ್ದರು. ಪ್ರತಿ ಸಾಲುಗಳ ನಡುವೆ ಸಮಾನ ಅಂತರ, ಚೊಕ್ಕವಾದ ಅಕ್ಷರಗಳು, ಒಂದಿಷ್ಟೂ ಜಾಗವನ್ನ ಪೋಲು ಮಾಡದ ಹಾಗೆ ಇಡೀ ಪತ್ರದ ತುಂಬಾ ವಿಷಯ ತುಂಬುತ್ತಿದ್ದರು. ಆದರೆ ನನ್ನದೋ ಚಿಕ್ಕಮಗಳೂರಿನಲ್ಲಿ ಶುರುವಾದರೆ ಕುಂದಾಪುರದ ವರೆಗೆ ಅಕ್ಷರಗಳು ಹೋಗುತ್ತಿದ್ದವು. ಗೆರೆಯಿಲ್ಲದ ಖಾಲಿ ಹಾಳೆಗಳಲ್ಲಿ ಬರೆಯುವುದು ನನಗೀಗಲೂ ಸವಾಲಿನ ವಿಷಯ. ಬರೆಯುವಾಗ ಆಗಾಗ ಪತ್ರ ಇಣುಕುತ್ತಿದ್ದ ಅಪ್ಪ ಆಗೇನೂ ಹೇಳುತ್ತಿರಲಿಲ್ಲ. ನಾನೋ ಅವರು ಪೂರ್ಣ ವಿಷಯವನ್ನು ಮುಗಿಸುವ ಮುನ್ನವೇ "ಇನ್ನು ಜಾಗ ಇಲ್ಲ" ಎಂದು ಬಿಡುತ್ತಿದ್ದೆ. ಪತ್ರ ವಿನಿಮಯದಲ್ಲಿ ಪಳಗಿದ್ದ ಅಪ್ಪನಿಗೆ ಒಂದು ಲೆಟರ್ ನಲ್ಲಿ ಎಷ್ಟು ವಿಷಯ ಬರೆಯಬಹುದು ಎಂಬುದರ ಅಂದಾಜಿತ್ತು. ಹಾಗಾಗಿ ಇನ್ನು ಜಾಗವಿಲ್ಲ ಎಂದಾಕ್ಷಣ ಆಶ್ಚರ್ಯವಾಗಿ ಪತ್ರ ಇಣುಕಿದರೆ, ಹಕ್ಕಿಯ ಹಿಕ್ಕೆಯಂತೆ ಎಲ್ಲೋ ಶುರುವಾದ ಅಕ್ಷರ ಅದೇ ಸಾಲಿನ ಕೊನೆ ಮುಟ್ಟದೆ ಮತ್ಯಾವುದೋ ಸಾಲಿನ ಕೊನೆ ಮುಟ್ಟುತ್ತಿತ್ತು. ಜೊತಗೆ ಸಾಲುಗಳ ನಡುವೆ ಹೆಚ್ಚಿನ ಅಂತರವಿದ್ದು, ಹೆಚ್ಚು ಜಾಗ ನಷ್ಟವಾಗುತ್ತಿತ್ತು. ಅದನ್ನು ನೋಡಿದ ಅಪ್ಪ "ಹೀಗೆ ಬರೆದ್ರೆ..ಅಜ್ಜಯ್ಯಂಗೆ ವಾರಕ್ಕೆ ಮೂರು ಕಾಗದ ಹಾಕಬೇಕು" ಎಂದು ನಕ್ಕು, ಎಲ್ಲೆಲ್ಲೆ ಅಂತರ ಹೆಚ್ಚಿದೆಯೋ ಅದನ್ನೆಲ್ಲಾ ತಿಳಿಸಿ ಹೇಳುತ್ತಿದ್ದರು. 

   ನನಗೆ ಪತ್ರ ಬರೆಯಲು ಹೇಳಿದಾಗಲೆಲ್ಲಾ ಅಪ್ಪನಿಗೆ ಹೆಚ್ಚಿನ ಕೆಲಸ. ಪತ್ರ ಮುಗಿದ ಮೇಲೆ ಅದನ್ನು ಪರಿಷ್ಕರಿಸಿ ತಪ್ಪುಗಳನ್ನು ತಿದ್ದಬೇಕಿತ್ತು. ಧೀರ್ಘ ಬಿಟ್ಟು ಹೋಗಿದ್ದರೆ ಅಕ್ಷರಕ್ಕೆ ತೇಪೆ ಹಚ್ಚಿ ಅಲ್ಲೇ ಧೀರ್ಘ ಸೇರಿಸಿಬಿಡುತ್ತಿದ್ದರು. ಅದೇ ಏನಾದರೂ ಇಡೀ ಪದವೇ ತಪ್ಪಾಗಿದ್ದರೇ ಅದನ್ನು ಹೊಡೆದು ಹಾಕಿ, ಅದರ ಮೇಲೆ ಸರಿಯಾದ ಪದ ಬರೆಯುತ್ತಿದ್ದರು. ಒಂದು ಸಾಲಿನಿಂದ ಇನ್ನೊಂದು ಸಾಲಿಗೆ ಸಾಕಷ್ಟು ಅಂತರ ಕೊಟ್ಟು ಬರೆಯುತ್ತಿದ್ದ ಕಾರಣ, ತಪ್ಪನ್ನು ಹೊಡೆದು ಹಾಕಿ ಸರಿ ಪದವನ್ನು ಬರೆಯುವಷ್ಟು ಜಾಗವನ್ನು ನನ್ನ ಬರವಣಿಗೆ ದಯಪಾಲಿಸುತ್ತಿತ್ತು.

   ನಾನಂತೂ ಅಪ್ಪನಿಗೆ ಒಂದೂ ಪತ್ರ ಬರೆಯುವ ಅವಕಾಶ  ಸಿಗಲಿಲ್ಲ. ನಾವೆಲ್ಲಾ ಊರು ಬಿಡುವಾಗ ಪೋನುಗಳು ಪರಿಪೂರ್ಣವಾಗಿ ವ್ಯಾಪಿಸಿ ಬಿಟ್ಟಿದ್ದವು. ಎಣಿಸಿದವರ ಜೊತೆ ತಕ್ಷಣಕ್ಕೆ ಮಾತಾಡುವ ಅವಕಾಶಗಳನ್ನು ಪೋನುಗಳು ಕೊಟ್ಟಿವೆ. ಆದರೆ ಪತ್ರ ಬರೆದ ಮೇಲೆ ಅದರ ಉತ್ತರಕ್ಕೆ ಕಾಯುವ, ಜೊತೆಗೆ ಪತ್ರವೊಂದು ಕೈಸೇರಿದಾಗ ಅದನ್ನು ಒಡೆದು ಓದುವವರೆಗೆ ಇರುವ ಕುತೂಹಲ ಎರಡೂ ಪೋನುಗಳಿಂದ ಕಳೆದು ಹೋಗಿದೆ. 

Friday, 24 May 2024

ರಸಾಯನ

 ನನ್ನ ಅಜ್ಜ(ಅಪ್ಪನ ಅಪ್ಪ)ನ ಮನೆಯಲ್ಲಿ ಸಮೃದ್ಧವಾಗಿ ಹಣ್ಣು ಬಿಡುವ ಮಾವಿನ ಮರವೊಂದಿತ್ತು. ನಮ್ಮ ಮನೆಯ ಅಂಗಳದಲ್ಲಿ ಬೇರು ಬಿಟ್ಟಿದ್ದ ಅದು ಪಕ್ಕದ ಗದ್ದೆಗೆ ಚಾಚಿಕೊಂಡಿತ್ತು. ಪ್ರತಿ ವರ್ಷ ಯುಗಾದಿಯ ಹೊತ್ತಿಗೆ ಅದರಲ್ಲಿ ರಾಶಿ ರಾಶಿ ಹಣ್ಣುಗಳು ಬಿಡುತ್ತಿದ್ದವು. ಅಷ್ಟು ಸಿಹಿಯಲ್ಲದ ಆದರೆ ಅಧಿಕ ರಸವಿರುವ ಹಣ್ಣುಗಳು. ಒಂದು ದೊಡ್ಡ ಬಿದಿರಿನ ಕೋಲಿಗೆ ಕೊಕ್ಕೆ ಸಿಕ್ಕಿಸಿ ಅದನ್ನು ಕುಯ್ಯಲಾಗುತ್ತಿತ್ತು. ನೆಲಕ್ಕೆ ಬಿದ್ದ ಹಣ್ಣುಗಳಿಗೆ ಪೆಟ್ಟಾಗಬಾರದೆಂಬ ಕಾರಣಕ್ಕೆ ನೇಯ್ದ ತೆಂಗಿನಗರಿಗಳನ್ನ ಅಲ್ಲಲ್ಲಿ ಹಾಸಲಾಗುತ್ತಿತ್ತು.

ಬೆಳೆದ ಮಾವಿನ ಕಾಯಿಗಳನ್ನು ಕೊಯ್ದ ನಂತರ ಅದನ್ನು ಬೇರ್ಪಡಿಸುವ ಪ್ರಕ್ರಿಯೆ ನೆಡೆಯುತ್ತಿತ್ತು. ಹಿಂಡಿ, ಚಟ್ನಿ ಮತ್ತು ಕಾಯಿರಸಕ್ಕೆ ಒಂದಷ್ಟು ಬೆಳದ ಕಾಯಿಗಳನ್ನು ಆರಿಸಿಟ್ಟು, ಉಳಿದದ್ದನ್ನು ಒಣಹುಲ್ಲು ತುಂಬಿದ ಕುಕ್ಕೆಗಳಲ್ಲಿ ಇಡಲಾಗುತ್ತಿತ್ತು.  ಅವುಗಳ ಸಂಗ್ರಹಣೆ ಆಗುತ್ತಿದ್ದುದು ಅಂಗಳಕ್ಕೆ ಹೊಂದಿಕೊಂಡ ಹಾಗಿದ್ದ ಹೊರ ಕೋಣೆಯಲ್ಲಿ. ಮಾವಿನ ಹಣ್ಣಿನ ಕಾಲದಲ್ಲಿ ಆ ಕೋಣೆಯೊಳಗೆ ರಾಶಿ ರಾಶಿ ಹಣ್ಣುಗಳದ್ದೆ ಕಾರುಬಾರು. ದಿನಕ್ಕೆರಡು ಬಾರಿ ವ್ರತ ಹಿಡಿದಂತೆ ದೊಡ್ಡಮ್ಮ ( ಅಜ್ಜಿಯನ್ನು ದೊಡ್ಡಮ್ಮ ಎಂದೇ ಕರೆಯುವುದು) ಕೋಣೆ ಹೊಕ್ಕು ಹಣ್ಣಾದ ಮಾವುಗಳನ್ನು ಬೇರ್ಪಡಿಸುತ್ತಿದ್ದರು. ಇನ್ನೇನು ಹಣ್ಣಾಗಲಿದೆ ಎನ್ನುವ ಮಾವುಗಳನ್ನು ನೆಲದಲ್ಲಿ ಬಿಡಿಸಿಡುತ್ತಿದ್ದರು. ತೀರಾ ಹಣ್ಣಾದವುಗಳಲ್ಲಿ ರಸಾಯನ ಮಾಡುತ್ತಿದ್ದರು. ಮಾವಿನ ಹಣ್ಣಿನ ತಿರುಳನ್ನು ಹಿಂಡಿ, ಅದಕ್ಕೆ ಬೆಲ್ಲ, ಕಾಯಿಹಾಲು ಬೆರೆಸಿ, ದೊಡ್ಡ ಪಾತ್ರೆಯಲ್ಲಿ ತಯಾರು ಮಾಡಿ ಇಟ್ಟರೆ ಇಡೀ ದಿನ ಅದರದೇ ಸಮಾರಾಧನೆ. ಬೇಸಿಗೆಯ ದಿನಗಳಾದ್ದರಿಂದ ಹುಳಿ ಬರಬಾರದು ಎಂಬ ಕಾರಣದಿಂದ ರಸಾಯನದ ಪಾತ್ರೆಯನ್ನು ನೀರು ತುಂಬಿದ ತಟ್ಟೆಯ ಅಥವಾ ಪಾತ್ರೆಯ ಮೇಲೆ ಇಡುತ್ತಿದ್ದರು. ಪ್ರಿಡ್ಜ್ ಇರದ ಆ ಕಾಲದಲ್ಲಿ ಯಾವುದಾದರೂ ಪದಾರ್ಥ ಹುಳಿ ಬರಬಾರದು ಅಥವಾ ಕೆಡಬಾರದು ಎಂದಾಗ ಈ ಮಾರ್ಗ ಅನುಸರಿಸಲಾಗುತ್ತಿತ್ತು. ದೋಸೆ, ಕಡುಬು ಹೀಗೆ ಯಾವ ತಿಂಡಿ ಮಾಡಿದರೂ ಅದನ್ನು ರಸಾಯನದೊಂದಿಗೆ ತಿನ್ನುವುದು. ಅಲ್ಲದೇ ಕೆಲವೊಮ್ಮೆ ಸಂಜೆಯ ಚಹಾಕ್ಕೆ ಬದಲಾಗಿಯೂ ರಸಾಯನವನ್ನೇ ಕುಡಿಯಲಾಗುತ್ತಿತ್ತು.

ಬೇಸಿಗೆಯಲ್ಲಿ ಮನೆಗೆ ಯಾರಾದರೂ ಅತಿಥಿ ಅಭ್ಯಾಗತರು ಬಂದರೆ, ಅವರಿಗೆ ಮಾವಿನಹಣ್ಣಿನ ಪಾಯಸವೇ ವಿಶೇಷದ ಅಡುಗೆ. ಅಲ್ಲದೇ ಅವರುಗಳ ಮನೆಗಳಿಗೂ ಸಾಕಷ್ಟು ಮಾವಿನ ಕಾಯಿ/ಹಣ್ಣುಗಳನ್ನು ಕೊಟ್ಟು ಕಳುಹಿಸಲಾಗುತ್ತಿತ್ತು.

ಬೇಸಿಗೆಯ ರಜೆಗೆ ಅಜ್ಜನ ಮನೆಗೆ ಹೋದಾಗ, ನಮಗಿದ್ದ ಒಂದೇ ಕೆಲಸವೆಂದರೆ, ಹಣ್ಣಾದ ಮಾವುಗಳನ್ನು ಬಾವಿಕಟ್ಟೆಗೆ ತೆಗೆದುಕೊಂಡು ಹೋಗಿ ಅದನ್ನು ತೊಳೆದು ತಿನ್ನುವುದು. ಯಾವುದೇ ಕೃತಕತೆ ಇರದೇ ನೈಸರ್ಗಿಕವಾಗಿ ಬೆಳೆದ ಹಣ್ಣುಗಳಾದ್ದ ಕಾರಣ, ಅಲ್ಲದೇ ದುಡ್ಡು ಕೊಟ್ಟು ತರಬೇಕಾದ ಪ್ರಮೇಯವಿಲ್ಲದ ಕಾರಣ ಬೇಕಾದಷ್ಟು ಹಣ್ಣುಗಳನ್ನು ತಿನ್ನಬಹುದಿತ್ತು. ಹೀಗೆ ತಿಂದ ಹಣ್ಣುಗಳ ಗೊರಟನ್ನು ದೂರದಲ್ಲೆಲ್ಲೊ ಎಸೆದು "ಬರುವ ವರ್ಷ ನಾ ಬಿಸಾಕಿದ ಗೊರಟಿನಿಂದ ಅಲ್ಲೊಂದು ಗಿಡ ಹುಟ್ಟಿದ್ರೂ ಹುಟ್ಟಬಹುದು" ಅಂತಂದು ಕೊಳ್ಳುತ್ತಿದ್ದೆವು. ಈ ಮಾವಿನಹಣ್ಣಿನ ಕಲೆ ಬಹಳ ಕೆಟ್ಟದ್ದು. ಒಂದು ವೇಳೆ ಅಂಗಿಯ ಮೇಲೆ ಅದರ ರಸ ಚೆಲ್ಲಿದರೆ, ಜಪ್ಪಯ್ಯ ಎಂದರೂ ಹೋಗುವುದಿಲ್ಲ. ಹಾಗಾಗಿ "ಅಂಗಿ ಮೇಲೆ ಹಾಕೋಬೇಡ..ಮತ್ತೆ ಕಲೆ ಹೋಗಲ್ಲ.." ಎಂಬ ಸೂಚನೆಗಳೂ ಸಿಗುತ್ತಿತ್ತು.

ಮನುಷ್ಯನಿಗೆ ಬದಲಾವಣೆ ಅಗತ್ಯ ಹಾಗೂ ಅನಿವಾರ್ಯ. ಇಂದು ಸಲ್ಲುವ ವಿಷಯ ಎಲ್ಲಾ ಕಾಲದಲ್ಲೂ ಸಲ್ಲಬೇಕೆಂಬ ನಿಯಮವಿಲ್ಲ. ಹಾಗೇ ನಮ್ಮ ಅಂಗಳದ ಮಾವಿನ ಮರವನ್ನು ಕಡಿಯಬೇಕಾದ ಪ್ರಸಂಗ ಬಂದಿತು. ನನಗೆ ನೆನಪಿರುವಂತೆ, ಯಾವುದೋ ಮಳೆಗಾಲದಲ್ಲಿ ಅದಕ್ಕೆ ಸಿಡಿಲು ಬಡಿದ ಕಾರಣ ಮರ ತನ್ನ ಜೀವ ಸತ್ವ ಕಳೆದುಕೊಂಡು ಅರೆಜೀವವಾಯಿತು. ತದನಂತರದಲ್ಲಿ ಅದರಲ್ಲಿ ಯಾವುದೇ ಕಾಯಿ ಹುಟ್ಟಲಿಲ್ಲ. ಯಾವಾಗಲೂ ಸೊನೆ ಸೋರುತ್ತಿದ್ದ ಕಾರಣ ಅಂಗಳದ ತುಂಬೆಲ್ಲಾ ಕಪ್ಪು ಕಪ್ಪು ಕಲೆಗಳಾಗುತ್ತಿತ್ತು. ಹಾಗಾಗಿ ಅದನ್ನು ಕಡಿದು ದಿನನಿತ್ಯದ ಅಗತ್ಯಕ್ಕಾಗಿ ಪೇರಿಸಿಟ್ಟ ಕಟ್ಟಿಗೆಯ ರಾಶಿಗೆ ಸೇರಿಸಲಾಯಿತು.

ಈಗಲೂ ಅಜ್ಜನ ಮನೆಗೆ ಹೋದಾಗ ಅಂಗಳದ ಮಾವಿನ ಮರ, ಬಾವಿಕಟ್ಟೆಯಲ್ಲಿ ಹೊಟ್ಟೆ ಬಿರಿಯುವಂತೆ ತಿನ್ನುತ್ತಿದ್ದ ಮಾವಿನಹಣ್ಣು, ಅಂಗಳಕ್ಕೆ ಅಂಟಿಕೊಂಡ ಕೋಣೆಯಲ್ಲಿ ಪೇರಿಸಿಡುತ್ತಿದ್ದ ರಾಶಿ ರಾಶಿ ಹಣ್ಣುಗಳ ಚಿತ್ರಣ ಕಣ್ಣ  ಮುಂದೆ ಬರುವುದು.