Saturday 30 April 2016

ಮಾಘ ಸ್ನಾನ

ಮಾಘ ಸ್ನಾನ

ಅಂಬಮ್ಮನಿಗೆ ವಯಸ್ಸು ಎಂಬತ್ತು ಆಗುತ್ತಾ ಬಂದರೂ ಮುಪ್ಪಿನ ಯಾವ ಕಾಯಿಲೆಗಳು ಅವಳನ್ನು ಭಾದಿಸುತ್ತಿಲ್ಲ.ಸಕ್ಕರೆ ಕಾಯಿಲೆ,ರಕ್ತದೊತ್ತಡ ಈ ರೀತಿಯ ಯಾವ ಕಾಯಿಲೆಗಳು ಅವಳಿಗೆ ಇಲ್ಲ.ಆದರೆ ಅವಳನ್ನು ಕಾಡುತ್ತಿರುವ ಸಮಸ್ಯೆಯೆಂದರೆ ಅದು ಬೆನ್ನು ನೋವು.ಅಂಬಮ್ಮನ ಬಳಿ ಆ ನೋವು ಬರುವುದಕ್ಕೂ ಕಾರಣವಿದೆ.ಆಕೆಯ ಬಾಣಂತನದ ಆರೈಕೆ ಸರಿಯಾಗಿ ಆಗದ ಕಾರಣ ಈ ಬೇನೆ ಈಗ ಅವಳ ಬೆನ್ನೇರಿ ಕೂತಿದೆ.
ಯಾರಾದರೂ "ಬೆನ್ನು ನೋವು ಹೇಗಿದೆ ಅಂಬಮ್ಮ??" ಎಂದು ಕೇಳಿದರೆ ಸಾಕು,"ಬಾಣಂತಿಯಾಗಿದ್ದಾಗ ನನಗೂ ಮಾಡಬೇಕಾದದ್ದು ಮಾಡಿದ್ರೆ....ನಂಗೆ ಈ ವಯಸ್ಸಲ್ಲಿ ಈ ನೋವು ಬರ್ತಾ ಇರಲಿಲ್ಲ...ನನ್ನ ಮದುವೆ ಮಾಡಿಕೊಟ್ಟು ನನ್ನ ಅಮ್ಮ ಸತ್ತಳು....ಇನ್ನು ನನ್ನ ಅತ್ತಿಗೆ ತನಗೆ ಬಾಣಂತನ ಮಾಡೋದಕ್ಕೆ ಆಗೋದೇ ಇಲ್ಲ ಅಂದುಬಿಟ್ಟಳು...ಇನ್ನು ನನ್ನ ಅತ್ತೆ,ಪಾಪ ಮುದುಕಿ...ಆಗುವ ಅಷ್ಟು ಮಾಡಿತು...ಅದರಲ್ಲೂ ತಿನ್ನೋದಕ್ಕೆ ಆದ್ರು ಇದ್ಯ...ಇಲ್ಲ ಬಡತನ...ಅದೇನೋ ಗಸಗಸೆ ಲೇಹ ತಿನ್ನಬೇಕು ಅಂತ ಪಂಡಿತರು ಹೇಳಿದ್ರು....ತಿನ್ನುವುದು ಇರಲಿ,ನೋಡಲಿಕ್ಕೂ ದುಡ್ಡಿರಲಿಲ್ಲ....ನಾನು ಬಡತನದ ಬಾಣಂತಿ...." ಎಂದು ತನ್ನ ಬಡತನದ ದಿನಗಳನ್ನು ಹೇಳಿಕೊಂಡು ನಗುತ್ತಿದ್ದಳು ಅಂಬಮ್ಮ.
ಅಂಬಮ್ಮನಿಗೆ ಆಗ ಬಡತನವಿದ್ದರೂ ಈಗ ಏನೂ ಕೊರತೆ ಇಲ್ಲ.ತನ್ನ ವೃದ್ದಾಪ್ಯದ ದಿನಗಳನ್ನು ಮಗನೊಡನೆ ಕಳೆಯುತ್ತಿದ್ದಳು ಅಂಬಮ್ಮ.ಒಳ್ಳೆಯ ಸೊಸೆ,ಮೊಮ್ಮಕ್ಕಳು.ಜೊತೆಗೊಬ್ಬ ಮರಿಮಗ.ಅಂಬಮ್ಮ ತಾನು ಮೆಟ್ಟಿದ ಮನೆಯನ್ನು ಬಿಟ್ಟು ಬಂದು ಸುಮಾರು ಇಪ್ಪತ್ತು ವರ್ಷಗಳೇ ಆಗಿವೆ.ಮಗನ ಓದು,ಮಗಳ ಮದುವೆಗೆಂದು ಇದ್ದ ಆಸ್ತಿಯನ್ನೆಲ್ಲಾ ಮಾರಿಬಿಟ್ಟಿದಳು.ಆ ಬಗ್ಗೆ ಅವಳಿಗೆ ಚೂರು ನೋವಿಲ್ಲ.ಯಾರಾದರೂ "ಅಷ್ಟು ಒಳ್ಳೆ ಆಸ್ತಿ ಮಾರಿದ್ಯಲ್ಲಾ ಅಂಬುಮ್ಮ...!!" ಎಂದರೆ,"ಇಷ್ಟು ಒಳ್ಳೆ ಆಸ್ತಿ ಇರುವಾಗ..ಆ ಆಸ್ತಿ ಯಾವ ಲೆಕ್ಕ..." ಎಂದು ತನ್ನ ಮಗ-ಸೊಸೆಯನ್ನು ತೋರಿಸಿ ಹೇಳುತ್ತಿದ್ದಳು.
***********************************************************************
ಹದಿನಾರು ತುಂಬುವ ಹೊತ್ತಿಗೆ ಗಂಡನ ಮನೆ ಸೇರಿದ್ದಳು ಅಂಬಮ್ಮ.ಆಕೆಯ ಗಂಡನಿಗೆ ಸುಮಾರು ನಲವತ್ತರ ಆಸುಪಾಸು.ಆತನಿಗೆ ಅದು ಎರಡನೇ ಮದುವೆ.ಮೊದಲನೆ ಹೆಂಡತಿ ಕ್ಷಯ ರೋಗಕ್ಕೆ ತುತ್ತಾಗಿ ಹೋಗಿದ್ದಳು.ಆದರೆ ಕೆಲವರು ಆಕೆಗೆ ಮಕ್ಕಳಾಗದ ಕಾರಣ ಗಂಡ ಮತ್ತು ಅತ್ತೆ ಉಸಿರುಗಟ್ಟಿಸಿ ಕೊಂದು ಆಮೇಲೆ ಕ್ಷಯದ ನೆಪ ಒಡ್ಡಿದರು ಎಂದು ಏನೇನೋ ಅಂಬಮ್ಮನ ತಲೆಗೆ ತುಂಬುತ್ತಿದ್ದರು.ಆಕೆಗೆ ಇಪ್ಪತ್ತಾಗುವ ಹೊತ್ತಿಗೆ ಎರಡು ಮಕ್ಕಳಾಗಿದ್ದವು.ಮನೆಯಲ್ಲಿ ಬಡತನ.ಬೇಸಾಯ ಮಾಡಿ ಸಿಗುತ್ತಿದ್ದ ಆದಾಯ ಸಾಲುತ್ತಿರಲಿಲ್ಲ.ಬತ್ತಿ ಮಾಡಿ ಮಾರಿ ಜೊತೆಗೆ ಅವರಿವರ ಮನೆಯ ಅಡುಗೆ ಕೆಲಸ ಮಾಡಿ ಕುಟುಂಬವನ್ನು ತಕ್ಕ ಮಟ್ಟಿಗೆ ನೆಡೆಸಿಕೊಂಡು ಹೋಗುತ್ತಿದ್ದಳು ಅಂಬಮ್ಮ.ಇಪ್ಪತ್ತೈದು ತುಂಬುವ ಹೊತ್ತಿಗೆ ವಿಧವೆಯಾಗಿ ಬಿಟ್ಟಳು.ಎರಡು ಮಕ್ಕಳನ್ನು ಸಾಕಿ,ತಾನೂ ಬದುಕುವುದು ಈಗ ಅಂಬಮ್ಮನಿಗೆ ದೊಡ್ಡ ಸವಾಲಾಯಿತು.ತನ್ನೊಬ್ಬಳಿಗೆ ಬೇಸಾಯ ಮಾಡುವುದು ಕಷ್ಟವಾದಾಗ,ತನ್ನ ಜಮೀನನ್ನು ಬೇರೆಯವರಿಗೆ ಬಿಟ್ಟುಕೊಟ್ಟು ಅವರು ವರ್ಷಕ್ಕೆ ಇಂತಿಷ್ಟು ಎಂದು ಕೊಡುವ ಪಾಲಿನಲ್ಲಿ ಜೀವನ ನೆಡೆಸುವ ಪರಿಸ್ಥಿತಿ ಬಂದಿತು.ಅದೆಷ್ಟೋ ಸಲ ಅವಳಿಗೆ ಸಿಗಬೇಕಾದ ಪಾಲು ಸಿಗುತ್ತಲೇ ಇರಲಿಲ್ಲ.ಅದು ಇದು ಸಬೂಬು ಹೇಳಿ ಅವಳ ಜಮೀನನ್ನು ವಹಿಸಿಕೊಂಡು ವ್ಯವಸಾಯ ಮಾಡುತ್ತಿದ್ದವರು ಅವಳಿಗೆ ಮೋಸ ಮಾಡುತ್ತಿದ್ದರು.ಅದು ಆಕೆಗೂ ಗೊತ್ತಿತ್ತು.ಆದರೆ ಎದುರು ಮಾತನಾಡಿದರೆ ಬರುವ ಆದಾಯಕ್ಕೂ ಕುತ್ತು ಬೀಳಬಹುದೆಂಬ ಭಯದಿಂದ ಆಕೆ ಏನೂ ಮಾತನಾಡುತ್ತಿರಲಿಲ್ಲ.ಸಮಯ ಸಿಕ್ಕಿದಾಗ ಮಾತ್ರ ಮಾಡುತ್ತಿದ್ದ ಬತ್ತಿ ಮಾಡುವ,ಅಡುಗೆಯ ಕೆಲಸಗಳು ಈಗ ಹೊಟ್ಟೆ ಹೊರೆಯುವ ಮೂಲ ಸಾಧನಗಳಾದವು.
ಅಂಬಮ್ಮ ಅಂದು ಹೀಗೆ ಯಾರದೋ ಮನೆಯ ಅಡುಗೆ ಕೆಲಸಕ್ಕೆ ಹೋಗಿದ್ದಳು.ಅಲ್ಲಿ ಬಂದವರೆಲ್ಲಾ ಮಾಘ ಸ್ನಾನದ ಬಗ್ಗೆ ಮಾತನಾಡುತ್ತಿದ್ದರು.ಮಾಘ ಮಾಸದಲ್ಲಿ ಪವಿತ್ರ ಸ್ನಾನ ಮಾಡಿದರೆ ತೀರ್ಥ ಯಾತ್ರೆಯ ಪುಣ್ಯ ಲಭಿಸುವುದೆಂದೂ,ಅಲ್ಲದೆ ಕಷ್ಟಗಳೆಲ್ಲಾ ದೂರವಾಗುವುದೆಂದು ಹೀಗೆ ಮಾಘ ಸ್ನಾನದ ಮಹತ್ತ್ವವನ್ನು ಕುರಿತು ಚರ್ಚಿಸುತ್ತಿದ್ದರು.ಯಾವತ್ತೂ,ಯಾವುದೇ ಪುಣ್ಯ ಕ್ಷೇತ್ರಗಳ ದರ್ಶನ ಮಾಡದ ಅಂಬಮ್ಮನಿಗೂ ಮಾಘ ಸ್ನಾನ ಮಾಡುವ ಆಸೆಯಾಯಿತು.ಆದರೆ ತನ್ನ ಊರನ್ನು ಬಿಟ್ಟು ಬೇರೆ ಊರು ಕಾಣದ ಅಂಬಮ್ಮನಿಗೆ,ಸುಮಾರು ನಲವತ್ತು ಮೈಲು ದೂರವಿದ್ದ ಬ್ರಾಹ್ಮಿಪುರಕ್ಕೆ ಒಬ್ಬಳಿಗೆ ಹೋಗಲು ಭಯವಾಯಿತು.ಆಗ ಅವಳ ನೆರವಿಗೆ ಬಂದದ್ದು,ಪ್ರಭಕ್ಕ.ಆಕೆ ಪ್ರತಿ ವರ್ಷವೂ ಮಾಘ ಸ್ನಾನಕ್ಕೆ ಹೋಗುತ್ತಿದ್ದಳು.ಹಾಗಾಗಿ ಅಂಬಕ್ಕ ಪ್ರಭಕ್ಕನಿಗೆ,"ಪ್ರಭಕ್ಕ...ಇನ್ನೊಂದು ಸಲ ಮಾಘ ಸ್ನಾನಕ್ಕೆ ಹೋಗುವಾಗ ನಾನು ನಿಮ್ಮ ಜೊತೆ ಬರುತ್ತೇನೆ" ಎಂದಿದ್ದಳು.ಪ್ರತಿ ವರ್ಷವೂ ಅಂಬಮ್ಮ ಮತ್ತು ಪ್ರಭಕ್ಕ ಮಾಘ ಸ್ನಾನಕ್ಕೆ ಒಟ್ಟಿಗೆ ಹೋಗುತ್ತಿದ್ದರು.
ಬ್ರಾಹ್ಮಿಪುರಕ್ಕೆ ಇದ್ದ ಸುಮಾರು ಮೂವತ್ತೈದು ಮೈಲಿಯನ್ನು,ಮೂರು ಬಸ್ಸು ಬದಲಿಸಿ ಹೋಗಬೇಕು.ಉಳಿದ ಐದು ಮೈಲಿಯನ್ನು ನೆಡೆದೇ ಹೋಗಬೇಕು.ಸ್ವಲ್ಪ ದುಡ್ಡು ಕೊಟ್ಟರೆ ಎತ್ತಿನ ಗಾಡಿಯಲ್ಲಿಯೋ,ಕುದುರೆ ಗಾಡಿಯಲ್ಲಿಯೋ ಸಾಗಬಹುದು.ಆದರೆ ಇನ್ನುಳಿದ ಎರಡು ಮೈಲಿಗೆ ಯಾವುದೇ ತರಹದ ವಾಹನವಿಲ್ಲ ನೆಡೆದೇ ಸಾಗಬೇಕು.ಅಂಬಮ್ಮ ಮಾತ್ರ ಐದೂ ಮೈಲಿ ನೆಡೆದೇ ಸಾಗುತ್ತಿದ್ದಳು.ಎತ್ತಿನ ಗಾಡಿಗೆ ಕೊಡುವ ದುಡ್ಡಿನಲ್ಲಿ ತನ್ನ ಮಕ್ಕಳಿಗೆ ಪಂಚಕಜ್ಜಾಯ ತೆಗೆದುಕೊಂಡು ಹೋಗುತ್ತಿದ್ದಳು.ಸುಮಾರು ಒಂದು ಮೈಲಿ ದೂರದಿಂದಲೇ ಬ್ರಾಹ್ಮಿ ನದಿಯು ಹರಿಯುವ ಆ ಸದ್ದು ಕೇಳುತ್ತಿತ್ತು.
ಮಾಘ ಸ್ನಾನಕ್ಕೆಂದು ಸಾಕಷ್ಟು ಜನ ಬ್ರಾಹ್ಮಿಪುರಕ್ಕೆ ಬರುತ್ತಿದ್ದರು.ಉಕ್ಕಿ ಹರಿಯುವ ಬ್ರಾಹ್ಮಿಯಲ್ಲಿ ಮಿಂದು,ನದಿಯ ತಟದಲ್ಲಿ ನೆಲೆಯಾಗಿದ್ದ ದುರ್ಗೆಯ ದರ್ಶನ ಪಡೆಯುತ್ತಿದ್ದರು.ಅಂಬಮ್ಮ,ಬ್ರಾಹ್ಮಿಪುರಕ್ಕೆ ಮಾಘ ಸ್ನಾನಕ್ಕೆಂದು ಬರುವ ಜನರಲ್ಲಿ ಒಬ್ಬಳಾಗಿಬಿಟ್ಟಳು.ಸ್ನಾನ ಮುಗಿಸಿ ಮತ್ತೆ ಅದೇ ದಾರಿಯಲ್ಲಿ ನಡೆದು,ಮತ್ತೆ ಮೂರು ಬಸ್ಸು ಬದಲಿಸಿ ಮನೆ ಸೇರುವ ಹೊತ್ತಿಗೆ ಸಂಜೆ ಆರು ಗಂಟೆಯಾಗುತ್ತಿತ್ತು.ಅಂಬಮ್ಮ ಪ್ರತಿ ವರ್ಷವೂ ಒಂದು ಕಟ್ಟುನಿಟ್ಟಿನ ವ್ರತದಂತೆ ಮಾಘ ಸ್ನಾನ ಮಾಡುತ್ತಿದ್ದಳು.
**************************************************************************
ತನ್ನ ಊರನ್ನು ಬಿಟ್ಟು ವರ್ಷಗಳೇ ಆಗಿದ್ದ ಅಂಬಮ್ಮನಿಗೆ ಅದೇಕೋ ಬ್ರಾಹ್ಮಿ ನದಿಯಲ್ಲಿ ಮಾಘ ಸ್ನಾನ ಮಾಡಬೇಕೆಂದೆನಿಸಿತು.ತನ್ನ ಆಸೆಯನ್ನು ಮಗನಲ್ಲಿ ನಿವೇದಿಸಿಕೊಂಡಳು.ಮಗನಿಗೂ ಅರವತ್ತರ ಆಸುಪಾಸು.ತನ್ನ ತಾಯಿಗೆ ಬೇರೆ ಬಹಳ ವಯಸ್ಸಾಗಿದೆ.ತಾಯಿ ಎಂದೂ ಏನೂ ಕೇಳಿದವಳಲ್ಲ.ಈ ಆಸೆಗೆ ಇಲ್ಲ ಎನ್ನಬಾರದು ಎಂದು ಅವನ ಮನಸ್ಸು ಮಿಡಿಯುತ್ತಿದ್ದರೂ ಬುದ್ದಿ ಮಾತ್ರ ಒಲ್ಲೆ ಎನ್ನುತ್ತಿತ್ತು.ವಯಸ್ಸಾದ ತಾಯಿ ಆ ನದಿಯಲ್ಲಿ ಸ್ನಾನ ಮಾಡುವಾಗ ಏನಾದರೂ ಹೆಚ್ಚು ಕಮ್ಮಿ ಆದರೆ ಎಂಬ ಭಯ ಅವನಿಗೆ.ಆತ ನಯವಾಗಿಯೇ "ಅಮ್ಮ....ನೀನು ಆಗಲೇ ಗಂಗಾಸ್ನಾನ ಮಾಡಿದ್ದೀ....ಇನ್ನೂ ಯಾಕಮ್ಮ ಈ ಮಾಘ ಸ್ನಾನದ ಆಸೆ...ಬೇಡಮ್ಮ...ನಿನಗೂ ವಯಸ್ಸಾಗಿದೆ...ನನಗೂ ವಯಸ್ಸಾಗ್ತಾ ಇದೆ....ನಿನ್ನನ್ನ ಈ ವಯಸ್ಸಲ್ಲಿ ಅಷ್ಟು ದೂರ ಕರೆದುಕೊಂಡು ಹೋಗಬೇಕು ಅಂದ್ರೆ ನಂಗೂ ಕಷ್ಟ ಆಗುತ್ತೆ...." ಎಂದನು.ಮಗನಿಗೆ ಕಷ್ಟ ಆಗುವುದು ಎಂಬ ಒಂದೇ ಕಾರಣದಿಂದ ಅಂಬಮ್ಮ ತನ್ನ ಆಲೋಚನೆಯಿಂದ ದೂರ ಸರಿದಳು.
ರಾತ್ರಿ ಸುಮಾರು ಹತ್ತುವರೆ ಗಂಟೆಯಾಗಿತ್ತು.ಅಂಬಮ್ಮ ಮೆಲ್ಲಗೆ ತನ್ನ ಪ್ರೀತಿಯ ಮೊಮ್ಮಗ ವಾಸುವಿನ ಕೋಣೆಯ ಬಾಗಿಲು ತೆಗೆದು ಒಳಗೆ ಇಣುಕಿದಳು.ಆತ ತನ್ನ ಲ್ಯಾಪ್‍ಟಾಪ್‍ನೊಡನೆ ತಲ್ಲೀನನಾಗಿದ್ದ."ವಾಸು...ನೀನಿನ್ನೂ ಮಲಗಿಲ್ವಾ....??" ಅಂಬಮ್ಮ ಕೇಳಿದಳು.
"ಆ ಪ್ರಶ್ನೆ ನಾನು ನಿನ್ನನ್ನು ಕೇಳಬೇಕು...ನೀನಿನ್ನೂ ಮಲಗಿಲ್ವಾ..??" ಎಂದು ನಕ್ಕನು.ಅಂಬಮ್ಮಳು ನಕ್ಕಳು.
"ವಾಸು...ನಂಗೊಂದು ಆಸೆ ಇದೆ ಕಣೋ..." ಅಂಬಮ್ಮ ಹೇಳಿದಳು.
"ನನ್ನ ಮದುವೆ ವಿಷಯ ಆದ್ರೆ ಮಾತ್ರ ಹೇಳಬೇಡ...ಅಣ್ಣ ಮದ್ವೆ ಆಗಿದ್ದಾನೆ ತಾನೇ??...ಒಬ್ಬ ಮರಿಮಗ ಇದ್ದಾನೆ ತಾನೇ??..." ಎಂದು ಮತ್ತೊಮ್ಮೆ ನಕ್ಕನು.
"ಅದಲ್ವೋ ಮಾರಾಯ...ನಂಗೆ ಬ್ರಾಹ್ಮಿಪುರಕ್ಕೆ ಮಾಘ ಸ್ನಾನಕ್ಕೆ ಹೋಗಬೇಕು.." ಎಂದು ತನ್ನ ಆಸೆಯನ್ನು ವಿವರವಾಗಿ ಮೊಮ್ಮಗನಿಗೆ ಹೇಳಿದಳು.ಜೊತೆಗೆ ಆ ಊರಿಗೆ ಹೋಗಲು ಐದು ಮೈಲಿ ನೆಡೆಯಬೇಕು ಎಂದೂ ಹೇಳಿದಳು.
"ಅಷ್ಟೇನಾ...!!ನನ್ನ ಮದುವೆ ಬಿಟ್ಟು ನಿನ್ನ ಯಾವ ಆಸೆ ಆದ್ರು ಅದನ್ನ ನಾನು ಪೂರೈಸ್ತೀನಿ..." ಎಂದು ನಗುತ್ತಾ "ಯಾವ ಊರು ಅಂದೆ.." ಎಂದು ಕೇಳಿದನು.
"ಬ್ರಾಹ್ಮಿಪುರ...."ಖುಷಿಯಿಂದ ಹೇಳಿದಳು ಅಂಬಮ್ಮ.
ವಾಸು ತನ್ನ ಲ್ಯಾಪ್‍ಟ್ಯಾಪ್‍ನಲ್ಲಿ ಏನೋ ನೋಡಿದಂತೆ ಮಾಡಿ "ನೆಡೆಯೋದೇನು ಬೇಡ ಅಜ್ಜಿ...ದೇವಸ್ಥಾನದ ತನಕವೂ ಕಾರು ಹೋಗುತ್ತೆ...??" ಎಂದನು.
"ಇಲ್ಲ...ಇಲ್ಲ...ನಿಂಗೆ ಯಾರು ಹೇಳಿದ್ದು??ಐದು ಮೈಲಿ ನಡೀಬೇಕು...." ಎಂದಳು ಅಂಬಮ್ಮ.
"ಇಲ್ಲ ಅಜ್ಜಿ...ಇಲ್ಲಿ ನೋಡು..." ಎನ್ನುತ್ತಾ ತನ್ನ ಲ್ಯಾಪ್‍ಟ್ಯಾಪ್‍ನ ಪರದೆಯನ್ನು ಅಜ್ಜಿಯ ಕಡೆ ತೋರಿಸುತ್ತಾ ಹೇಳಿದನು.
"ಇದೆಲ್ಲಾ ನಂಗೆ ಗೊತ್ತಾಗುತ್ತಾ...??" ಎಂದಳು.
"ಸರಿ ಬಿಡು...ಯಾವಾಗ ಹೋಗಬೇಕು..??" ಎಂದು ಕೇಳಿದನು.
"ಈ ಭಾನುವಾರ...ಆದ್ರೆ ನಿನ್ನ ಅಪ್ಪ ಒಪ್ಪುತ್ತಾ ಇಲ್ಲಾ ಮಾರಾಯ..." ಎಂದು ತನ್ನ ತಳಮಳ ತೋಡಿಕೊಂಡಳು.
"ನಾನು ಒಪ್ಪಿಸ್ತೇನೆ....ನೀನು ಆರಾಮಾಗಿ ಹೋಗಿ ಮಲ್ಕೋ....." ಎಂದು ವಾಸು ಹೇಳಿದನು.
"ವಾಸಣ್ಣ ಅಂದ್ರೆ ವಾಸಣ್ಣ..." ಎನ್ನುತ್ತಾ ತನ್ನ ಮೊಮ್ಮಗನ ದೃಷ್ಟಿ ತೆಗೆದು ತನ್ನ ಕೋಣೆಯ ಕಡೆಗೆ ಹೆಜ್ಜೆ ಹಾಕಿದಳು ಅಂಬಮ್ಮ.
**********************************************************************************************************
"ಸರ್...ಇಲ್ಲಿಂದ ಸುಮಾರು ಒಂದು ಎರಡು ಕಿಲೋಮೀಟರ್ ಮುಂದೆ ಹೋಗಿ,ಅಲ್ಲಿ ಒಂದು ಕಮಾನು ಸಿಗುತ್ತೆ,ಅಲ್ಲಿಂದ ಎಂಟು ಕಿಲೋಮೀಟರ್ ಒಳಗೆ ಹೋದರೆ ಬ್ರಾಹ್ಮಿಪುರ ಸಿಗುತ್ತೆ.." ವಾಸು ಕೇಳಿದ ಪ್ರಶ್ನೆಗೆ ದಾರಿಹೋಕನೊಬ್ಬ ವಿವರ ನೀಡಿದನು.
ಅಜ್ಜಿಯನ್ನು ಕರೆದುಕೊಂಡು ಬಂದ ವಾಸು,ಬ್ರಾಹ್ಮಿಪುರಕ್ಕೆ ಕೆಲವೇ ಮೈಲುಗಳ ದೂರದಲ್ಲಿದ್ದ.
"ಐದು ಮೈಲಿ ನಡೀಬೇಕು....ನಿಂಗೆ ಆಗುತ್ತೊ ಇಲ್ವೋ??....ನಾನು ಹೋಗಿ ಬರ್ತೇನೆ..." ಎಂದು ಅಂಬಮ್ಮ ಅದೆಷ್ಟೋ ಬಾರಿ ಹೇಳಿದಳು.
"ಅಯ್ಯೋ ಅಜ್ಜಿ...ಅಲ್ಲಿ ತನಕನೂ ಕಾರು ಹೋಗುತ್ತೆ....ನೀನು ಸುಮ್ಮನೆ ಬಾ,ನಾನು ಕರೆದುಕೊಂಡು ಹೋಗುತ್ತೀನಿ...." ಎಂದು ವಾಸು ಪ್ರತಿ ಬಾರಿಯೂ ಹೇಳುತ್ತಿದ್ದನು.
ಅಂಬಮ್ಮ ಕಾರಿನ ಹೊರಗಿನ ಕಿಟಕಿಯಲ್ಲಿ ಇಣುಕುತ್ತಿದ್ದಳು.ತಾನು ನೆಡೆದು ಹೋಗುತ್ತಿದ್ದ ದಾರಿಯ ಕುರುಹು ಆಕೆಗೆ ಕಾಣಿಸುತ್ತಲೇ ಇರಲಿಲ್ಲ.
ಬರಿಯ ಮರಗಳೇ ಇದ್ದ ಆ ಕಾಡು ಈಗ ಮರಗಳೇ ಇಲ್ಲದ ನಾಡಾಗಿದೆ."ವಾಸು ದಾರಿ ತಪ್ಪಲಿಲ್ಲ ಅಲ್ಲಾ...??" ಎಂದು ಮೊಮ್ಮಗನನ್ನು ಪದೇ ಪದೇ ಕೇಳುತ್ತಿದ್ದಳು."ಇಲ್ಲಾ ಅಜ್ಜಿ...ನೀನು ಸುಮ್ಮನೆ ಬಾ...ಈಗ ದೇವಸ್ಥಾನದ ತನಕವೂ ರೋಡ್ ಆಗಿದೆ...." ಎಂದು ಹೇಳುತ್ತಿದ್ದನು."ಇನ್ನೊಂದು ಕಿಲೋಮೀಟರ್ ಅಷ್ಟೇ...ಬ್ರಾಹ್ಮಿಪುರ ಬಂದೇ ಬಿಡುತ್ತೆ..." ಎಂದನು ವಾಸು.
ಅಂಬಮ್ಮಳ ಕಿವಿ ನೆಟ್ಟಗಾಯಿತು.ಆಕೆ ಬ್ರಾಹ್ಮಿ ನದಿ ಹರಿಯುವ ಸದ್ದಿಗೆ ಕಿವಿಗೊಡುತ್ತಿದ್ದಳು.ಆದರೆ ಸದ್ದು ಕೇಳುತ್ತಲೇ ಇರಲಿಲ್ಲ.ಮತ್ತೊಮ್ಮೆ ಅವಳಿಗೆ ತಾವು ಸಾಗುತ್ತಿರುವ ದಾರಿಯ ಮೇಲೆ ಸಂಶಯ ಬಂದಿತು.ಆದರೆ ಮೊಮ್ಮಗನನ್ನು ಮತ್ತೊಮ್ಮೆ ಕೇಳುವುದು ಬೇಡವೆಂದು ಸುಮ್ಮನಾದಳು.
"ಬಂತು ನೋಡಜ್ಜಿ ನಿನ್ನ ಅಲ್ಲಲ್ಲಾ ನಮ್ಮ ಬ್ರಾಹ್ಮಿಪುರ...." ಎಂದು ಕಾರು ನಿಲ್ಲಿಸಿ ಅಂಬಮ್ಮಳನ್ನು ಕೆಳಗಿಳಿಸಿದನು ವಾಸು.
ಎಲ್ಲಿ ನೋಡಿದರಲ್ಲಿ ಜನ.ಎಲ್ಲರೂ ಮಾಘ ಸ್ನಾನಕ್ಕೆ ಬಂದವರು.ಆದರೆ ಅವರು ಯಾರು ಬ್ರಾಹ್ಮಿಯಲ್ಲಿ ಮುಳುಗುತ್ತಿರಲಿಲ್ಲ.ಬದಲಿಗೆ ಕೈಯಲ್ಲಿ ಕೊಡಪಾನವನ್ನು ಹಿಡಿದು ತಲೆಗೆ ನೀರು ಸುರಿದುಕೊಳ್ಳುತ್ತಿದ್ದರು.
"ಅಜ್ಜಿ...!!" ಮೊಮ್ಮಗನ ಕೂಗಿಗೆ ಅಂಬಮ್ಮ ಅವನೆಡೆಗೆ ತಿರುಗಿದಳು."ಎರಡು ಕೊಡ ಸಾಕಲ್ವಾ ಸ್ನಾನಕ್ಕೆ....??" ಎಂದು ಪ್ರಶ್ನಿಸಿದನು.
ಅಂಬಮ್ಮ ಅವನ ಮುಖವನ್ನು ಏನೂ ತೋಚದಂತೆ ನೋಡತೊಡಗಿದಳು.ಅವಳ ಸಂಶಯದ ಅರಿವಾಗಿ ವಾಸು,"ಅಜ್ಜಿ...ಈಗ ಈ ನದಿಯಲ್ಲಿ ನೀರು ಕಡಿಮೆ ಇದೆಯಂತೆ,ಅದಕ್ಕೆ ಕೊಡಪಾನದಲ್ಲಿ ನೀರು ಮಾರ್ತಾ ಇದ್ದಾರೆ...ಎರಡು ಕೊಡಪಾನ ಸಾಕಾ ಅಜ್ಜಿ??" ಎಂದು ಮತ್ತೊಮ್ಮೆ ಕೇಳಿದನು.
ಅಂಬಮ್ಮ ಸುತ್ತಲೂ ನೋಡಿದಳು.ಎಲ್ಲರೂ ನೀರು ಕೊಳ್ಳುವುದರಲ್ಲಿ,ಮಾರುವುದರಲ್ಲಿ ತಲ್ಲೀನರಾಗಿದ್ದರು.ಚಿಕ್ಕ ಕೊಡಪಾನದ ನೀರಿಗೆ ಒಂದು ಕ್ರಯವಾದರೆ,ದೊಡ್ಡ ಕೊಡಪಾನಕ್ಕೆ ಮತ್ತೊಂದು ಕ್ರಯ.ಸ್ವಚ್ಛ ನೀರಿನಲ್ಲಿ ಸ್ವಚ್ಛಂದವಾಗಿ ಮೀಯುತ್ತಿದ್ದ ಅಂಬಮ್ಮನಿಗೆ ಈ ಪದ್ದತಿ ಅದೇಕೋ ಸರಿ ಕಾಣಲಿಲ್ಲ.ಅರ್ಧ ನದಿ ಅದಾಗಲೇ ಮಾಯವಾಗಿ,ನೀರು ಮಾರುವ ಅಂಗಡಿಯ ಜಾಗವಾಗಿತ್ತು.ಇನ್ನುಳಿದ ಅರ್ಧ ನದಿಯಲ್ಲಿ ಒಂದು ಮುಳುಗು ಹಾಕುವಷ್ಟೂ ನೀರು ಇರಲಿಲ್ಲ.ಮನಸ್ಸಿಲ್ಲದ ಮನಸ್ಸಿನಿಂದ ಕೊಡಪಾನದ ನೀರನ್ನು ತಲೆಯ ಮೇಲೆ ಸುರಿದುಕೊಂಡಳು ಅಂಬಮ್ಮ.ಅದೇಕೋ ಅವಳಿಗೆ ಒಂದೆ ಕೊಡಪಾನದ ನೀರು ಸಾಕೆನಿಸಿತು.ಅಜ್ಜಿ,ಮೊಮ್ಮಗ ದೇವರ ದರ್ಶನ ಮಾಡಿ ಮನೆಯ ದಾರಿ ಹಿಡಿದರು.
"ಅಜ್ಜಿ ಖುಷಿ ಆಯ್ತಾ...ಇನ್ನು ನನ್ನನ್ನು ಮದುವೆ ಆಗು ಅಂತ ಹೇಳಬೇಡ..." ಎಂದು ನಕ್ಕನು ವಾಸು.ಆದರೆ ಈ ಬಾರಿ ಅಂಬಮ್ಮ ನಗಲಿಲ್ಲ.
"ಯಾಕಜ್ಜಿ ಖುಷಿ ಆಗಲಿಲ್ವಾ.....??" ಎಂದು ಕೇಳಿದನು.
"ವಾಸಣ್ಣಾ.....ಈ ದಾರಿಯಲ್ಲೆಲ್ಲಾ ಎಷ್ಟು ಹಸಿರಿತ್ತು ಗೊತ್ತಾ??ಒಂದು ಮೈಲಿ ಹಿಂದಿನಿಂದಲೇ ಬ್ರಾಹ್ಮಿಯ ಸದ್ದು ಹಾಗೆ ಕಿವಿಗೆ ಬಡಿತಿತ್ತು...ಮೂರು ಬಸ್ಸು ಬದಲಾಯಿಸಿ,ಐದು ಮೈಲಿ ನೆಡೆದು ಬಂದು ಸ್ನಾನ ಮಾಡಿ ಹೋಗ್ತಾ ಇದ್ದೆ ಪ್ರತಿ ವರ್ಷ.....ಬಹಳ ತ್ರಾಸು ಮಾಡಿಕೊಂಡು ಬಂದರೂ ಈ ಪ್ರಕೃತಿಯ ಆಡಂಬರದಲ್ಲಿ ಸುಸ್ತು ಹೋಗಿ,ಆರಾಮಾಗಿ ಹೋಗ್ತಾ ಇದ್ದೆ....ಆದ್ರೆ ಈಗ....." ಎಂದು ಮಾತು ಮುಂದುವರೆಸಲಿಲ್ಲ ಅಂಬಮ್ಮ.
"ಈಗ ಆರಾಮಾಗಿ ಬಂದಿದ್ದೀಯಲ್ಲಾ ಅಜ್ಜಿ....ಅಷ್ಟು ಕಷ್ಟ ಪಡೋದೆ ಬೇಡ ಅಲ್ಲವಾ....??" ಎಂದನು ವಾಸು.
"ಆರಾಮಾಗಿ ಬಂದು...ತ್ರಾಸಿನಲ್ಲಿ ಹೋಗ್ತಾ ಇದ್ದೀನಿ...." ಎಂದಳು ಅಂಬಮ್ಮ.
"ಸುಸ್ಸಾಯ್ತಾ ಅಜ್ಜಿ....!!" ಎಂದು ಪ್ರೀತಿಯಿಂದ ಕೇಳಿದನು ವಾಸು.
"ಹೌದು....ದೇಹಕ್ಕಲ್ಲ....ಮನಸ್ಸಿಗೆ...ಮನುಷ್ಯನಿಗೆ ಆರಾಮಾದಷ್ಟೂ ಪ್ರಕೃತಿಗೆ ಕಷ್ಟ.....ಎಲ್ಲಾ ಬದಲಾಗಿದೆ....ಎಲ್ಲವೂ ವ್ಯವಹಾರವಾಗಿದೆ....ಸ್ವತಂತ್ರವಾಗಿ ಹರಿಯುವ ನೀರಿಗೂ ದುಡ್ಡು ಕೊಡುವ ಪರಿಸ್ಥತಿ.....ಬೇಡ ಇತ್ತು ನಂಗೆ ಇಂತಹ ಮಾಘ ಸ್ನಾನ.....ನೋವಾಗುತ್ತೆ ನಂಗೆ ಬ್ರಾಹ್ಮಿ ನದಿಯನ್ನ,ಬ್ರಾಹ್ಮಿಪುರವನ್ನ,ಬ್ರಾಹ್ಮಿಪುರದ ದುರ್ಗಾ ಪರಮೇಶ್ವರಿಯನ್ನ ನೋಡಿದರೆ...." ಎಂದಾಗ ವಾಸುವಿಗೆ ಏನೂ ಹೇಳಬೇಕೋ ತಿಳಿಯದೆ ತಾನು ಚಲಿಸುತ್ತಿದ್ದ ಕಾರಿಗೆ ಬ್ರೇಕ್ ಹಾಕಿದನು.

No comments:

Post a Comment