Tuesday 8 March 2016

ಪತ್ರೋಡೆ

ಪತ್ರೋಡೆ
(ಪತ್ರೋಡೆ-ಇದು ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಕೆಸು ಎಲೆಯಿಂದ ಮಾಡುವ ಖಾರದ ತಿಂಡಿ)
ಹತ್ತನೆ ತರಗತಿಯಾದ್ದರಿಂದ ಪ್ರದೀಪ ಬರುವುದು ಆ ದಿನ ಎಂದಿನಂತೆಯೇ ತಡವಾಗಿತ್ತು.ಜೀವನದ ಅತ್ಯಂತ ದೊಡ್ಡ ಮೈಲಿಗಲ್ಲು ಹತ್ತನೇ ತರಗತಿ ಎಂದೆಲ್ಲಾ ಹೇಳಿ ಆತನ ಶಿಕ್ಷಕರು ಹೆಚ್ಚಿನ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.ಆದ್ದರಿಂದ ಐದು ಗಂಟೆಗೆ ತರಗತಿಗಳು ಮುಗಿದಿದ್ದರು,ಸ್ಪೆಷಲ್ ಕ್ಲಾಸ್‍ನ ದೆಸೆಯಿಂದಾಗಿ ಆತ ಬರುವುದು ಏನಿಲ್ಲವೆಂದರೂ ಸುಮಾರು ಏಳು ಗಂಟೆ ಆಗಿರುತಿತ್ತು.ಹಸಿವಿನಿಂದ ಮಗ ಬರುವುದನ್ನು ತಿಳಿದ ತುಳಸಿ ಆತನಿಗಾಗಿ ನಿತ್ಯವೂ ಏನಾದರೂ ಮಾಡಿ ಇಡುತ್ತಿದ್ದಳು.ಆತ ಬದುವುದನ್ನೇ ಕಾಯುತ್ತಿದ್ದ ಆಕೆ,ಮನೆಯ ಮುಂಬಾಗಿಲಿನ ಗೇಟಿನ ಸದ್ದಾದೊಡನೆ,ಮಾಡಿದ ತಿಂಡಿಯನ್ನು ಪ್ಲೇಟಿಗೆ ಹಾಕಿ,ಅತನ ಎದುರಿಗೆ ತಂದಿಟ್ಟಳು.
"ಇವತ್ತೂ ಪತ್ರೋಡೆನಾ...??" ಪ್ರದೀಪನ ರಾಗ. "ಸುಮಾರು ದಿನ ಆಯ್ತಲ್ಲಾ ಮಾರಾಯ ಮಾಡದೇ....ಆ ತೋಟದ ಮನೆಯ ಆಂಟಿ ಇದ್ದಾರಲ್ಲ ಅವರು ಇವತ್ತು ತೋಟಕ್ಕೆ ಹೋಗಿದ್ದರಂತೆ...ಪಾಪ,ನಮ್ಮ ಮನೆಗೆ ಅಂತಾ ಹೇಳಿ ಕೆಸು ತಂದು ಕೊಟ್ಟರು....ಹಸಿ ಹಸಿ ಇತ್ತು ಎಲೆ...ಆದ್ದರಿಂದ ಇವತ್ತೆ ಏನಾದರೂ ಮಾಡಬೇಕು ಅಂತಾ ಪತ್ರೋಡೆ ಮಾಡಿದೆ..." ಎಂದು ಮಗ ಕೇಳಿದ ಪ್ರಶ್ನೆಗೆ ಪತ್ರೋಡೆಯ ವೃತ್ತಾಂತವನ್ನೇ ವಿವರಿಸಿದಳು ತುಳಸಿ.
"ಅಯ್ಯೋ...ಇದನ್ನೆಲ್ಲಾ ಯಾಕೆ ಹೇಳ್ತಿದ್ದೀಯಾ...??ಮೊದಲೇ ಇವತ್ತು ಸೋಷಿಯಲ್ ಸ್ಪೆಷಲ್ ಕ್ಲಾಸ್ ಇದ್ದಿದ್ದು....ಆ ಪುರಾಣ ಕೇಳೆ ಸಾಕಾಗಿದೆ....ಇನ್ನು ನೀನೂ ಈ ಪತ್ರೋಡೆ ಪುರಾಣ ಹೇಳಬೇಡ...ನಂಗೆ ಕೇಳಕ್ಕೆ ಆಗಲ್ಲ...ಇದು ನಂಗೆ ಬೇಡ..." ಎಂದು ತನ್ನ ಎದುರಿನ ಟೇಬಲ್ ಮೇಲೆ ಇದ್ದ ಪ್ಲೇಟನ್ನು ದೂರ ಸರಿಸಿದನು ಪ್ರದೀಪ್."ಚೂರು ತಿನ್ನೋ ಪುಟ್ಟ...ಅಪ್ಪ ಚೆನ್ನಾಗಿದೆ ಅಂತ ಇನ್ನೊಂದು ಸಲ ಹಾಕೊಂಡು ತಿಂದ್ರು...ಒಂದು ಚೂರು ತಿಂದು ನೋಡು...ಚೆನ್ನಾಗಿಲ್ಲ ಅಂದ್ರೆ ಬಿಡು..ಆಮೇಲೆ ನಿಂಗೆ ಒತ್ತಾಯ ಮಾಡಲ್ಲ..." ಎಂದು ಹೇಳುತ್ತಾ ಟೇಬಲ್ ಮೇಲಿದ್ದ ಪ್ಲೇಟನ್ನು ಕೈಗೆತ್ತಿಕೊಂಡು ಮತ್ತೆ ಮಗನ ಬಳಿಗೆ ತಂದಳು ತುಳಸಿ.
"ನಂಗೆ ಬೇಡಾ......"ಈ ಬಾರಿ ಆತನ ರಾಗ ಜೋರಾಗಿಯೇ ಇತ್ತು."ನಂಗೆ ಇದು ತಿಂದ್ರೆ ಗಂಟಲು ತುರಿಸುತ್ತೆ...." ತಿನ್ನಲು ಮನಸ್ಸಿಲ್ಲದ ಪ್ರದೀಪನಿಗೆ ಹೇಳಲು ತೋಚಿದ್ದು ಅದೊಂದೇ ಕಾರಣ."ಇದು ಒಳ್ಳೆ ಕೆಸು ಮಾರಾಯಾ...ಸರೀ ಹುಣಸೆಹಣ್ಣು ಹಾಕಿದ್ದೀನಿ....ಗಂಟಲು ತುರಿಸಲ್ಲ...ಚೂರು..." "ಅಮ್ಮಾ...ಪ್ಲೀಸ್...ಬೇಡ ಅಂದ್ರೆ ಬೇಡ...." ತಾಯಿ ಮಾತು ಮುಗಿಸುವ ಮುನ್ನವೇ ಖಾರವಾಗಿ ನುಡಿದು ತನ್ನ ರೂಮಿನ ಕಡೆಗೆ ಹೆಜ್ಜೆ ಹಾಕಿದನು ಪ್ರದೀಪ.
"ಹಾಗದರೆ ಬೇರೆ ಏನಾದರು ಮಾಡಿ ಕೊಡ್ಲಾ....ನೀರು ದೋಸೆ ತಿಂತೀಯಾ??" ಎಂದು ಮಮತೆಯಿಂದಲೆ ಕೇಳಿದಳು ತುಳಸಿ.
"ಅಬ್ಬಾ...!!" ಮುಖವನ್ನು ಸಣ್ಣಗೆ ಮಾಡುತ್ತಾ "ಯಾರಿಗೆ ಬೇಕು ಆ ನೀರುದೋಸೆ?!" ಮತ್ತೊಮ್ಮೆ ಬೇಸರದಿಂದ ಹೇಳಿದನು ಪ್ರದೀಪ.
"ಸರಿ ಅವಲಕ್ಕಿ ತಿಂತೀಯಾ??ಬೇಡ ಅಂದ್ರೆ ಚಪಾತಿ ಮಾಡ್ತೇನೆ" ಎಂದು ಎರಡು ಆಯ್ಕೆಗಳನ್ನು ಜೊತೆಯಾಗಿಯೇ ಇಟ್ಟಳು ತುಳಸಿ.
"ಪತ್ರೋಡೆ,ಅವಲಕ್ಕಿ,ಚಪಾತಿ,ದೋಸೆ....ಇದು ಯಾವುದೂ ನಂಗೆ ಬೇಡ...ನಂಗೆ ಇಪ್ಪತ್ತು ರೂಪಾಯಿ ಕೊಡು...ನಾನು ಹೊರಗೆ ಹೋಗಿ ಏನಾದರೂ ತಿಂದು ಬರ್ತೀನಿ" ಎಂದು ಹಣಕ್ಕಾಗಿ ತಾಯಿಯ ಬಳಿ ಬೇಡಿಕೆ ಇಟ್ಟನು.
"ದಿನ ಹೊರಗಿನದ್ದು ತಿಂತೀಯಾ....ಆರೋಗ್ಯಕ್ಕೆ ಒಳ್ಳೆದಲ್ಲಾ ನೋಡು....ಊಟನೂ ಸರಿಯಾಗಿ ಮಾಡಲ್ಲ.."ಎಂದು ಹೇಳುತ್ತಲೇ ಇಪ್ಪತ್ತು ರೂಪಾಯಿಗಳನ್ನು ಮಗನ ಕೈಗೆ ಇಟ್ಟಳು ತುಳಸಿ.ಖುಷಿಯಿಂದ ಹೊರಗೆ ಹೋಗುತ್ತಿದ್ದ ಮಗನನ್ನು ತಡೆದು "ಈ ಹೂವನ್ನ ಹಾಗೆ ಆ ತೋಟದ ಮನೆಯ ಆಂಟಿಗೆ ಕೊಟ್ಟು ಹೋಗು...ಇಲ್ಲದಿದ್ರೆ ನಾನು ಇದಕ್ಕೋಸ್ಕರವೇ ಅವರ ಮನೆಗೆ ಹೋಗಬೇಕು...ಹೋದ್ರೆ ಸುಮಾರು ಹೊತ್ತು ಆಗುತ್ತೆ..." ಎನ್ನುತಿರುವಂತೆಯೇ ಆತ ತಾಯಿಯ ಕೈಯಲ್ಲಿದ್ದ ಹೂವಿನ ಕವರನ್ನು ತೆಗೆದುಕೊಂಡು ಖುಷಿಯಿಂದ ಹೊರಗೆ ಹೋದ.ತನ್ನಿಷ್ಟದ ತಿಂಡಿಯನ್ನು ತಿಂದು ವಾಪಾಸ್ ಬಂದ.
ಮನೆಯವರೆಲ್ಲಾ ಊಟಕ್ಕೆ ಕುಳಿತ್ತಿದ್ದರು.ತುಳಸಿ ಎಲ್ಲರಿಗೂ ಬಡಿಸುತ್ತಿದ್ದಳು.ಅಷ್ಟು ಹೊತ್ತಿಗೆ ಮನೆಯ ಪೋನ್ ರಿಂಗಣಿಸಿತು.
"ಹಲೋ ತುಳಸಿ ನಾನು....ಕೆಸು ಚೆನ್ನಾಗಿರಲಿಲ್ವಾ??" ಆ ಕಡೆಯಿಂದ ಅನಿರೀಕ್ಷಿತವಾಗಿ ಬಂದ ಪ್ರಶ್ನೆಗೆ ತುಳಸಿ ಅವಕ್ಕಾದಳು.
"ಚೆನ್ನಾಗಿತ್ತು...ಹಸಿ ಹಸಿ ಇತ್ತಲ್ಲಾ...ಇವತ್ತು ಪತ್ರೋಡೆ ಮಾಡಿದ್ದೆ...ಇನ್ನು ಸ್ವಲ್ಪ ಇದೆ...ನಾಳೆ ಏನಾದರೂ ಮಾಡ್ತೇನೆ..." ಎಂದು ವಿವರಣೆ ನೀಡಿದಳು.
"ಹೌದಾ..!!ಮತ್ತೆ ನಿಮ್ಮ ಮಗ ಹೇಳಿದ 'ಕೆಸು ಗಂಟಲು ತುರಿಸುತ್ತೆ, ಆದ್ದರಿಂದ ಇನ್ನು ಮೇಲೆ ಕೆಸು ಬೇಡವಂತೆ ಅಂತ ಅಮ್ಮ ಹೇಳಿದಳು' " ಎಂದು ಆ ಕಡೆಯಿಂದ ತೋಟದ ಮನೆಯ ಆಂಟಿಯ ವಿವರಣೆ.
ಈ ಮಾತು ಕೇಳುತ್ತಿದ್ದಂತೆಯೇ ತುಳಸಿಗೆ ಮಗನ ಹುಡುಗಾಟದ ಕೆಲಸದ ಅರಿವಾಯಿತು."ಸುಳ್ಳು ಹೇಳಿದ್ದಾನೆ...ಅವನಿಗೆ ಪತ್ರೋಡೆ ಆಗಲ್ಲ...ಕಳ್ಳ ಹಾಗಾಗಿ ನೀವು ಕೆಸು ಕೊಡದೇ ಬೇಡ ಅಂತಾ ನಿಮ್ಮ ಹತ್ರ ಸುಳ್ಳು ಹೇಳಿದ್ದಾನೆ....ಹಾಗೆನಾದ್ರು ಬೇಡ ಅಂತ ಆಗಿದ್ರೆ ನಾನೇ ನಿಮ್ಮ ಹತ್ರ ಹೇಳ್ತಾ ಇದ್ದೆ..." ಎಂದು ತುಳಸಿ ಸ್ಪಷ್ಟನೆ ನೀಡಿದಳು.
"ಅದೇ ಅಂದುಕೊಂಡೆ...ಊಟ ಆಯ್ತಾ ತುಳಸಿ" ಎಂದು ಮತ್ತೆ ಸ್ನೇಹಿತೆಯರ ಹರಟೆ ಪೋನಿನಲ್ಲಿಯೇ ಪ್ರಾರಂಭವಾಯಿತು.
"ಅಮ್ಮ....ಉಪ್ಪಿನಕಾಯಿ..." ಎಂದು ಡೈನಿಂಗ್ ಹಾಲ್‍ನಿಂದ ಬಂದ ದನಿ ಸ್ನೇಹಿತೆಯರ ಹರಟೆಗೆ ತಡೆಯಾಯಿತು.ಮನಸ್ಸಿಲ್ಲದ ಮನಸ್ಸಿನಿಂದ ಸಂಭಾಷಣೆಯನ್ನು ಮೊಟಕುಗೊಳಿಸಿ ಉಪ್ಪಿನಕಾಯಿ ಬಡಿಸಲು ಮಗನ ಕಡೆಗೆ ಬಂದಳು ತುಳಸಿ.
"ಏಯ್ ಮಂಗ...ಆ ಆಂಟಿ ಹತ್ರ 'ಇನ್ನು ಮೇಲೆ ಕೆಸು ಬೇಡ ಅಂತ ಅಮ್ಮ ಹೇಳಿದಳೆ' ಅಂತ ಹೇಳಿದ್ದೀಯಾ " ಎಂದಾಗ ಪ್ರದೀಪ ತಲೆಬಗ್ಗಿಸಿ ನಗಲಾರಂಭಿಸಿದನು."ಬರಿ ತರ್ಲೆ ಕೆಲಸನೇ ಮಾಡದು...ಇನ್ನು ಮೇಲೆ ಪತ್ರೋಡೆ ಮಾಡಲ್ಲ...ಮಾಡಿದ್ರು ನಿಂಗೆ 'ಬೇಕಾ..??' ಅಂತ ಸಹ ಕೇಳಲ್ಲ..." ಎಂದು "ಸಾಕಾ...ಉಪ್ಪಿನಕಾಯಿ.." ಎನ್ನುತ್ತಾ ಉಪ್ಪಿನಕಾಯಿಯನ್ನು ಮಗನ ತಟ್ಟೆಗೆ ಹಾಕಿದಳು ತುಳಸಿ.
ಅಬ್ಬಾ ಪತ್ರೋಡೆ ರಗಳೆ ತಪ್ಪಿತಲ್ಲಾ ಎಂದು ನಿಟ್ಟುಸಿರು ಬಿಟ್ಟನು ಪ್ರದೀಪ.
*********************************************************************************************************
ಕೆಲಸ ಸಿಕ್ಕಿದ ಮೂರೇ ವರ್ಷಗಳಲ್ಲಿ ಪ್ರದೀಪನಿಗೆ ವಿದೇಶ ಯೋಗ ಪ್ರಾಪ್ತವಾಗಿತ್ತು.ಆತನನ್ನು ಕ್ಯಾಂಪಸ್ ಇಂಟರ್‍ವ್ಯೂನಲ್ಲಿ ಆಯ್ಕೆ ಮಾಡಿಕೊಂಡ ಕಂಪನಿ,ಮೂರೇ ವರ್ಷಗಳಲ್ಲಿ ಆತನ ಸಂಬಳದಲ್ಲಿ ಬಾರಿ ಜಿಗಿತವನ್ನು ನೀಡಿ,ಆತನನ್ನು ಅಮೆರಿಕೆಯ ತನ್ನ ಬ್ರಾಂಚ್‍ಗೆ ಕಳುಹಿಸಿತ್ತು.ಈಗ ಆತನ ಸಂಬಳ ಅದೆಷ್ಟೋ ಡಾಲರ್‍ಗಳು.ಮೊದಲಿಂದಲೂ ವಿದೇಶದ ಬಗ್ಗೆ ಸ್ವಲ್ಪ ಹೆಚ್ಚಿನ ವ್ಯಾಮೋಹವೇ ಇದ್ದದ್ದರಿಂದ ಪ್ರದೀಪನಿಗೆ ಈಗ ಸ್ವರ್ಗಕ್ಕೆ ಮೂರೇ ಗೇಣು.
ಅಂದು ಅದೇಕೋ ಪ್ರದೀಪನಿಗೆ ಪತ್ರೋಡೆ ತಿನ್ನಬೇಕು ಎಂದು ಬಹಳ ಆಸೆ ಆಯಿತು.ಬಾಲ್ಯದಲ್ಲಿ ಪತ್ರೋಡೆ ಎಂದರೆ ಮೂಗು ಮುರಿಯುತ್ತಿದ್ದ ಆತನಿಗೆ ತನ್ನ ಮನೆಯಿಂದ ಸಾವಿರಾರು ಮೈಲಿ ಬಂದ ಮೇಲೆ ಅದೇಕೆ ಆ ಆಸೆ ಬಂದಿತು ಎಂದರೆ ಆತನಿಗೆ ಉತ್ತರ ಗೊತ್ತಿಲ್ಲ.ಆತ ಪತ್ರೋಡೆ ಸಿಗುವ ಹೋಟೆಲ್‍ಗಾಗಿ ಆನ್‍ಲೈನ್‍ನಲ್ಲಿ ಹುಡುಕಲು ಪ್ರಾರಂಭಿಸಿದ.ಎಷ್ಟು ಹುಡುಕಿದರೂ ಆತನಿಗೆ ತನ್ನ ಊರಿನ ಪತ್ರೋಡೆ ಸಿಗುವ ಹೋಟೆಲ್ ಸಿಗಲಿಲ್ಲ.
ಕ್ಷಣಾರ್ಧದಲ್ಲಿ ತಮಗೆ ಬೇಕಾದನ್ನು ಆರ್ಡರ್ ಮಾಡಿ,ಆರ್ಡರ್ ಮಾಡಿದ ಕೆಲವೇ ಗಂಟೆಗಳಲ್ಲಿ ಅಥವಾ ಒಂದೆರಡು ದಿನಗಳಲ್ಲಿ ಮನೆ ಬಾಗಿಲಿಗೆ ವಸ್ತುಗಳು  ಬರುವ ಈ ಕ್ಷಿಪ್ರಯುಗದಲ್ಲಿ ತಾನು ಬಯಸುತ್ತಿರುವ ಪತ್ರೋಡೆ ಸಿಗುತಿಲ್ಲವಲ್ಲ ಎಂದು ಪ್ರದೀಪನಿಗೆ ತುಂಬಾ ಬೇಸರವಾಯಿತು.ಹಾಗೆ ನೋಡಿದರೆ,ಆನ್‍ಲೈನ್‍ನಲ್ಲಿ ಸಿಗುವ ಹಲಾವಾರು ದುಬಾರಿ ವಸ್ತುಗಳಿಗೆ ಹೋಲಿಸಿದರೆ ಪತ್ರೋಡೆ ಒಂದು ಲೆಕ್ಕವೇ ಅಲ್ಲ.ಆದರೂ ಅದು ಸಿಗುತ್ತಿಲ್ಲ ಎಂದಾಗ ಅದು ಆತನಿಗೆ ನುಂಗಲಾರದ ತುತ್ತಾಯಿತು.ಅಮ್ಮನನ್ನು ಕೇಳಿದ್ದರೆ ಅದೆಷ್ಟು ಬೇಗ ಮಾಡಿಕೊಡುತಿದ್ದಳೋ ಎಂದುಕೊಳ್ಳುತ್ತಾ ತನ್ನ ಹುಡುಕಾಟ ಮುಂದುವರೆಸಿದ.ಆದರೂ ಆತನಿಗೆ ತನ್ನ ಇಷ್ಟದ ಪತ್ರೋಡೆ ದೊರೆಯಲೇ ಇಲ್ಲ.
ತನಗಿಂತಾ ಮೊದಲೇ ವಿದೇಶಕ್ಕೆ ಬಂದು ನೆಲೆಸಿದ್ದ ತನ್ನ ಕೆಲವು ಸ್ನೇಹಿತರಲ್ಲಿಯೂ ತನ್ನ ಪತ್ರೋಡೆಯ ಬಯಕೆಯನ್ನು ತಿಳಿಸಿದನು ಪ್ರದೀಪ.
"ಅಲ್ಲಾ ಲೇ ಪ್ರದೀಪ...ಇಲ್ಲಿ ನಮಗೆ ನಮ್ಮ ದೇಶದ ಊಟ ಸಿಕ್ಕೋದೆ ಕಷ್ಟ...ಇನ್ನು ಪತ್ರೋಡೆ ಕೇಳ್ತಾ ಇದ್ದೀಯಲ್ಲಾ....ಇಲ್ಲಿ ಅದೆಲ್ಲಾ ಸಿಗಲ್ವೋ...ಸಿಕ್ಕಿದರೂ ನಿನ್ನ ಅಮ್ಮ ಮಾಡುವಷ್ಟು ರುಚಿಯಾಗಿಯಂತು ಇರಲ್ಲಾ..." ಎಂದು ಒಬ್ಬ ಹೇಳಿದರೆ, "ಹೋಗಿ ಬರ್ಗರ್ ಶಾಪಲ್ಲಿ ಬರ್ಗರ್ ತಿನ್ನು...ಅದರ ಮಧ್ಯೆ ಎಲೆ ಇಟ್ಟಿರ್ತಾರಲ್ಲಾ...ಅದನ್ನೇ ಕೆಸು ಎಲೆ ಅಂದುಕೋ...ಪತ್ರೋಡೆ ಅಂದುಕೊಂಡು ಕಣ್ಣು ಮುಚ್ಚಿಕ್ಕೊಂಡು ಅದನ್ನೇ ಪತ್ರೋಡೆ ಅಂದುಕೊಂಡು ತಿಂದುಬಿಡು..." ಎಂದು ತಮಾಷೆ ಮಾಡಿ ನಕ್ಕವನು ಇನ್ನೊಬ್ಬ."ಇಲ್ಲಾ ಅಂದ್ರೆ ಇನ್ನೊಂದು ಎಂಟು ತಿಂಗಳು ಕಾಯಬೇಕು...ಹೇಗಿದ್ರು ಅಷ್ಟು ಹೊತ್ತಿಗೆ ಡಿಸೆಂಬರ್ ಬರುತ್ತೆ...ಆಗ ಹೇಗಿದ್ರು ನೀನು ಊರಿಗೆ ಹೋಗ್ತಿಯಲ್ಲಾ...ಆಗ ನಿನ್ನ ಅಮ್ಮನ ಕೈಯಲ್ಲಿ ಪತ್ರೋಡೆ ಮಾಡಿಸಿಕೊಂಡು ತಿನ್ನು..." ಎಂದು ಮತ್ತೊಬ್ಬ ಹೇಳಿದ.
ಪ್ರದೀಪನಿಗೆ ತನ್ನ ಹಿರಿಯ ಸ್ನೇಹಿತರೆಲ್ಲರೂ ಹೇಳಿದ ಮಾತು ಬೇಸರ ತರಿಸಿತು.ಎಷ್ಟೋ ಜನರ ಕನಸಿನ ದೇಶದಲ್ಲಿ ತಾನಿದ್ದರೂ,ಅಲ್ಲದೇ ತಂತ್ರಜ್ಞಾನದ ಉಪಯೋಗವನ್ನು ಯಥೇಚ್ಚವಾಗಿ ಮಾಡಿಕೊಂಡಿದ್ದ ತಾನಿದ್ದ ದೇಶದಲ್ಲಿ ತನ್ನೂರಿನ ಒಂದು ತಿಂಡಿ ಸಿಗುವುದಿಲ್ಲವಲ್ಲಾ ಎನ್ನುವುದೇ ಆತನಿಗೆ ಜೀರ್ಣಿಸಿಕೊಳ್ಳಲಾಗದ ವಿಷಯವಾಗಿತ್ತು.ಆತನ ಆ ಕ್ಷಣದ ಧ್ಯೇಯ ಹೇಗಾದರೂ ಮಾಡಿ ಪತ್ರೋಡೆ ತಿನ್ನುವುದಾಗಿತ್ತು.ಹಾಗೂ ಹೀಗೂ ಮಾಡಿ ಪತ್ರೋಡೆ ಸಿಗುವ ಹೋಟೆಲ್ ಒಂದನ್ನು ಗೊತ್ತುಮಾಡಿದನು ಪ್ರದೀಪ.
ಪತ್ರೋಡೆ ತಿನ್ನಲೆಂದೇ ತಾನಿದ್ದ ಸ್ಥಳದಿಂದ ಸುಮಾರು ಎರಡು ತಾಸಿನ ಪ್ರಯಾಣ ನೆಡೆಸಿದ್ದ ಪ್ರದೀಪ.ದಾರಿಯುದ್ದಕ್ಕೂ ಆತನಿಗೆ ಪತ್ರೋಡೆಯ ನೆನಪು.ಅಲ್ಲೇ ಒಂದಿಷ್ಟು ತಿಂದು,ಮತ್ತೊಂದಷ್ಟನ್ನು ಕಟ್ಟಿಸಿಕೊಂಡು ಮನೆಗೆ ತಂದು ಪ್ರಿಡ್ಜನಲ್ಲಿ ಇಟ್ಟು,ಬೇಕುಬೇಕೆನಿಸಿದಾಗ ಒವೆನ್‍ನಲ್ಲಿ ಬಿಸಿ ಮಾಡಿ ಒಂದೆರಡು ದಿನ ತಿನ್ನಬಹುದು ಎಂದೆಲ್ಲಾ ಯೋಚಿಸುತ್ತಿದ್ದ ಪ್ರದೀಪ.ಅಂತೂ ಇಂತೂ ತಾನು ಕಾಯುತ್ತಿದ್ದ ಹೋಟೆಲ್ ಬಂದೇ ಬಿಟ್ಟಿತು.
"ಒನ್ ಪ್ಲೇಟ್ ಪತ್ರೋಡೆ...." ಎಂದು ಆರ್ಡರ್ ಹೇಳಿ ಅಲ್ಲದೇ "ಹೌ ಮಚ್ ಟೈಮ್ ಇಟ್ ವಿಲ್ ಟೇಕ್.." ಎಂದೂ ಕೇಳಿದ್ದ.ತಾನು ಆರ್ಡರ್ ಮಾಡಿದ್ದ ಹತ್ತು ನಿಮಿಷಗಳಲ್ಲಿ ತಾನು ಬಯಸಿದ್ದ ಪತ್ರೋಡೆ ತನ್ನೆದುರೇ ಇದ್ದದ್ದನ್ನು ಕಂಡು ಪ್ರದೀಪನಿಗೆ ತುಂಬಾ ಖುಷಿಯಾಯಿತು.ಆದರೆ ಅದು ನೋಡಲು ಸಾಮಾನ್ಯವಾಗಿ ಮಾಡುವ ಪತ್ರೋಡೆಯಂತೆ ಕಾಣಲಿಲ್ಲ.ಆದರೂ ತನ್ನ ಆಸೆ ತೀರಿತಲ್ಲಾ ಎಂದುಕೊಳ್ಳುತ್ತಾ ತುತ್ತೊಂದನ್ನು ಬಾಯಿಗೆ ಇಟ್ಟನು.
ತನ್ನ ಅಮ್ಮನ ನೆನಪು ಹಾಗೆಯೇ ಆಕೆ ತನ್ನ ಪ್ರೀತಿಯನ್ನು ಸೇರಿಸಿ ಮಾಡುತ್ತಿದ್ದ ಪತ್ರೋಡೆಯ ನೆನಪಾಗಿ,ಆತನಿಗೆ ಅದೇಕೋ ಇನ್ನೊಂದು ತುತ್ತನ್ನು ಬಾಯಿಗಿಡಲು ಮನಸ್ಸಾಗಲೇ ಇಲ್ಲ.

4 comments: