Tuesday 6 June 2017

ಮಿಡಿ ಉಪ್ಪಿನಕಾಯಿ ಪುರಾಣ

ಮಿಡಿ ಉಪ್ಪಿನಕಾಯಿ ಪುರಾಣ
ಊಟದ ಜೊತೆಗೆ ಉಪ್ಪಿನಕಾಯಿ ಇರಬೇಕು ಎಂಬ ನಿಯಮವೇನೂ ಇಲ್ಲದ್ದಿದ್ದರೂ,ಉಪ್ಪಿನಕಾಯಿ ಇದ್ದರಂತೂ ಊಟದ ಮಜವೇ ಬೇರೆ.ಅದರಲ್ಲೂ ತನ್ನ ಪರಿಮಳದಿಂದಲೇ ಹೆಸರುವಾಸಿಯಾಗಿರುವ ಅಪ್ಪೆ ಮಿಡಿಯ ಉಪ್ಪಿನಕಾಯಿ ಇದ್ದರಂತೂ ಊಟದ ಗಮ್ಮತ್ತೇ ಬೇರೆ.ಆ ಪರಿಮಳಕ್ಕೆ ಒಂದೆರಡು ತುತ್ತು ಅನ್ನ ಜಾಸ್ತಿಯೇ ಸೇರುತ್ತದೆ.ಮಲೆನಾಡಿನ ನಿತ್ಯಹರಿದ್ವರ್ಣದ ಕಾಡುಗಳಲ್ಲಿಯೇ ಹೆಚ್ಚಾಗಿ ಬೆಳೆಯುವ ಈ ಅಪ್ಪೆ ಮಿಡಿಯ ಸೊಗಸನ್ನು,ಸೊಬಗನ್ನು ಬಲ್ಲವನೇ ಬಲ್ಲ.ಅಪ್ಪೇ ಮಿಡಿಯಲ್ಲಿ ಸಾಕಷ್ಟು ಖಾದ್ಯಗಳನ್ನು ತಯಾರಿಸಬಹುದಾದರೂ ಈ ಮಿಡಿಯ ಉಪ್ಪಿನಕಾಯಿಗೆ ಹೆಚ್ಚು ಪ್ರಾಶಸ್ತ್ಯ.
ಬಾಲ್ಯದ ಬೇಸಿಗೆಯಲ್ಲಿ ಅಜ್ಜಿಯ ಮನೆಗೆ ಹೋದಾಗ ಬೇಲಿಯ ಬದಿಯ ಕಾಟು ಮಾವಿನ ಎಳೆಯ ಕಾಯಿಗಳನ್ನು ಹೆಕ್ಕಿ ಅದನ್ನು ಅಪ್ಪೆ ಮಿಡಿಯೆಂದು ಭಾವಿಸಿ ಮನೆಗೆ ತಂದಾಗ,ಅದು ಯಾವುದೋ ಕಾಟು ಮಿಡಿ ಎಂದು ಅಮ್ಮ ಹಾಗೂ ಅಜ್ಜಿ ಇಬ್ಬರೂ ಅದನ್ನು ತೆಂಗಿನ ಕಟ್ಟೆಗೆ ಬಿಸಾಡುತ್ತಿದ್ದುದ್ದನ್ನು ನೆನಪಿಸಿಕೊಂಡರೆ,ಈಗ ನಗು ಬರುತ್ತದೆ.ಅಷ್ಟೇ ಅಲ್ಲದೆ ಬೇಲಿಗಳಲ್ಲಿ ಸಂಚರಿಸಿದ್ದಕ್ಕಾಗಿ ಮಂಗಳಾರತಿಯು ಆಗುತ್ತಿತ್ತು.ಜೊತೆಗೆ ಬೇಲಿ ಬದಿಯಲ್ಲಿ ಹಾವುಗಳು ಇರುತ್ತದೆ,ಸತ್ತವರು ಪ್ರೇತಗಳಾಗಿ ಓಡಾಡುತಿರುತ್ತಾರೆ ಎಂದೆಲ್ಲ ಹೆದರಿಸುವ ಪ್ರಯತ್ನಗಳು ನೆಡೆಯುತ್ತಿದ್ದವು.ಇಷ್ಟೆಲ್ಲಾ ಮಾತುಗಳನ್ನು ಕೇಳಬೇಕಾದದ್ದು ಅಪ್ಪೇ ಮಿಡಿಯ ಬಗೆಗೆ ನಮಗಿದ್ದ ಆಸೆಯಿಂದಲೇ ಆಗಿತ್ತು.
ಅಪ್ಪೆ ಮಿಡಿಯ ಉಪ್ಪಿನಕಾಯಿಯನ್ನು ಮಾಡುವುದು ಸಂರಕ್ಷಿಸುವುದು ಎರಡೂ ಕೂಡ ಬಾಣಂತಿಯರನ್ನು ನೋಡಿಕೊಂಡಂತೆ.ಸಾಕಷ್ಟು ನಿಯಮಗಳನ್ನು ಹೊಂದಿದ ಒಂದು ಕಠಿಣ ವ್ರತದಂತೆ ಮಿಡಿ ಉಪ್ಪಿನಕಾಯಿಯ ತಯಾರಿ ನೆಡೆಯುತ್ತಿತ್ತು.ಬಂದ ರಾಶಿ ಮಿಡಿಗಳಲ್ಲಿಯ ಎಲೆಗಳನ್ನು ತೆಗೆಯುವುದು ಮಾತ್ರ ನಮ್ಮ ಕೆಲಸ.ಕೆಲವೊಮ್ಮೆ ಹಾಳಾದ ಮಿಡಿಗಳನ್ನು ಬೇರ್ಪಡಿಸುವುದನ್ನೂ ಮಾಡುತ್ತಿದ್ದೆವು.ಆಗ ಮಾತ್ರ ನನ್ನ ಅಜ್ಜಿಯನ್ನು ಸಾವಿರ ಪ್ರಶ್ನೆ ಕೇಳುತ್ತಿದ್ದೆವು."ಇದು ಸರಿವುಂಟಾ...?" ಎಂದು ಹತ್ತು ಮಿಡಿಗಳಿಗೆ ಒಮ್ಮೆಯಾದರೂ ಕೇಳುತ್ತಿದ್ದೆವು.ಇದಾದ ಮೇಲೆ ಅದನ್ನು ಒಂದಷ್ಟು ದಿನ ಉಪ್ಪಿನಲ್ಲಿ ಒತ್ತಿ ಇಟ್ಟು,ತದನಂತರ ಅದಕ್ಕೆ ಬೇಕಾದ ಮಸಾಲೆಯನ್ನು ರುಬ್ಬಿ,ನೀರು ತಾಗದಂತೆ ಕಾಪಾಡಿಕೊಂಡ ಮಿಡಿಗಳಿಗೆ ಅವುಗಳನ್ನು ಬೆರೆಸಿ ಉಪ್ಪಿನಕಾಯಿ ತಯಾರಿಸಲಾಗುತ್ತಿತ್ತು.ಹಾಗೆ ತಯಾರಿಸಿದ ಉಪ್ಪಿನಕಾಯಿ ಮರುವರ್ಷದಿಂದ ಬಳಕೆಗೆ ಜಾರಿಯಾಗುತ್ತಿತ್ತು.ಹೀಗೆ ಮಾಡಿಟ್ಟ ಉಪ್ಪಿನಕಾಯಿಯನ್ನು ದೊಡ್ಡ ಪಿಂಗಾಣಿ ಭರಣಿಗಳಲ್ಲಿ ಗಾಳಿ-ನೀರು ತಾಗದಂತೆ ಇಡಲಾಗುತ್ತಿತ್ತು.ಹೀಗೆ ಒಂದಕ್ಕಿಂತ ಹೆಚ್ಚು ವರ್ಷ ಕತ್ತಲ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸಿದ ಉಪ್ಪಿನಕಾಯಿ ಮಾತ್ರ ಬಳಕೆಗೆ ಯೋಗ್ಯ.
ಕೆಲವೊಮ್ಮೆ ನೀರಿನ ಕೈಯಲ್ಲಿ ಮುಟ್ಟಿದರೆ ಉಪ್ಪಿನಕಾಯಿಯಲ್ಲಿ ಹುಳ ಬರುವುದೂ ಉಂಟು.ಹೀಗೆ ಒಂದೊಮ್ಮೆ ನಮ್ಮ ನೆರೆಮನೆಯ ಚಿಕ್ಕ ಹುಡುಗ ಆಟದಿಂದ ಬಂದವನೇ ಕೈ ಸರಿಯಾಗಿ ಒರೆಸಿಕ್ಕೊಳ್ಳದೇ ಮಿಡಿ ತಿನ್ನುವ ತೊಡುವಿನಲ್ಲಿ,ಜಾಡಿಗೆ ಕೈ ಹಾಕಿದ್ದಾನೆ.ಪರಿಣಾಮ ಒಂದು ತಿಂಗಳಲ್ಲೇ ಜಾಡಿಯೊಳಗೆ ಹುಳ.ಪಾಪ ಹುಡುಗನ ತಾಯಿ ಉಪ್ಪಿನಕಾಯಿ ಹಾಳಾಯಿತೆಂದು ರೋದಿಸಿದ್ದು ಅಷ್ಟಿಷ್ಟಲ್ಲ.ಮಗನಿಗೆ ಸರಿಯಾಗಿ ಬೈದು ಹೊಡೆದು ಮಾಡಿದರೂ ಹಾಳಾಗಿದ್ದ ಉಪ್ಪಿನಕಾಯಿ ವಾಪಸ್ಸು ಬರುವುದೇ??ಕಡೆಗೆ ಅದನ್ನು ನೀರಿನಲ್ಲಿ ಸುರಿದು ಮಿಡಿಗಳನ್ನು ಬೇರ್ಪಡಿಸುವ ಪ್ರಯತ್ನವಾದರೂ ಅದು ಅಷ್ಟು ಯಶಸ್ವಿಯಾಗದೇ,ಅದನ್ನು ತೆಂಗಿನ ಮರದ ಬುಡಕ್ಕೆ ಹಾಕುವಾಗ ಆಕೆಗೆ ಹೇಳತೀರದ ಸಂಕಟ.ಉಪ್ಪಿನಕಾಯಿ ತೆಗೆಯಲು ಬಳಸುವ ಸೌಟನ್ನು ಸಹ ನೀರ ಪಸೆ ಆರಬೇಕೆಂದು ಬಿಸಿ ಮಾಡಲಾಗುತ್ತದೆ.ಹಾಗಾಗಿಯೇ ಉಪ್ಪಿನಕಾಯಿಗೆ ಬಾಣಂತಿಯಷ್ಟೇ ಆರೈಕೆ.ಈಗಲೂ ಜ್ವರ ಬಂದಾಗ ಗಂಜಿಯೊಡನೆ,ಅಜ್ಜಿ ಮಾಡಿದ ಅಪ್ಪೆ ಮಿಡಿ ಉಪ್ಪಿನಕಾಯಿ ಇದ್ದರೆ ನಾಲಗೆ ಕಹಿಯಲ್ಲಿಯೂ ಊಟ ಸೇರುತ್ತದೆ.ಈಗಲೂ ಅಪ್ಪೆ ಮಿಡಿಯ ಹೆಸರು ಕಿವಿಗೆ ಬಿದ್ದಾಗಲೆಲ್ಲಾ, ಮನಸ್ಸು ಬಾಲ್ಯದ ಬೇಸಿಗೆಯ ದಿನಗಳನ್ನು ನೆನೆದು ಪ್ರಪುಲ್ಲವಾಗುವುದು.

No comments:

Post a Comment