Wednesday 26 July 2017

ವ್ಯಾಕುಲ

ವ್ಯಾಕುಲ
"ಮೂಕಾಂಬಿಕಾ......",ಹಿರಿಯ ವ್ಯವಸ್ಥಾಪಕಿ ಸುನಂದ ಕರೆದಾಗ ಸರತಿ ಸಾಲಿನಲ್ಲಿ ಕುಳಿತಿದ್ದ ನಾಲ್ಕಾರು ಯುವತಿಯರಲ್ಲಿ ಒಬ್ಬಳು ಆಕೆಯ ಕೋಣೆಗೆ ಹೋದಳು.ಕೋಣೆಯಲ್ಲಿ ಹಾಕಿದ್ದ ಕುರ್ಚಿಯ ಮೇಲೆ ಕುಳಿತಿದ್ದ ಶ್ರೀಮಂತ ದಂಪತಿಯ ಎದುರಿಗೆ ಹೋಗಿ ತನ್ನ ಎರಡು ಕೈಗಳನ್ನು ಜೋಡಿಸಿ ನಮಸ್ಕಾರ ಮಾಡಿದಳು."ಇವಳು ಮೂಕಾಂಬಿಕಾ.....ಈಕೆಯದೇ ನಿಮ್ಮ ಮಗುವನ್ನು ಹೆರಬಹುದಾದ ಸೂಕ್ತ ಗರ್ಭ....ಒಪ್ಪಿಗೆಯಿದ್ದಲ್ಲಿ ಮುಂದಿನದನ್ನು ಮಾತನಾಡೋಣ.." ಎಂಬ ಸುನಂದಾಳ ಮಾತಿಗೆ,ಮೂಕಾಂಬಿಕೆಯನ್ನೊಮ್ಮೆ ನೋಡಿದ ಸಿರಿವಂತರು ಒಪ್ಪಿಗೆ ಎಂಬಂತೆ 'ಆಲಯ' ದ ವ್ಯವಸ್ಥಾಪಕಿಯ ಕಡೆಗೆ ತಿರುಗಿ ತಲೆಯಲ್ಲಾಡಿಸಿದರು."ನೀನಿನ್ನು ಹೋಗಬಹುದು..." ಎಂದ ಸುನಂದಾ "ಹಾಗೆಯೇ ನಿನ್ನ ಗೆಳತಿಯರನ್ನು ಅವರವರ ಕೋಣೆಗೆ ಹೋಗೋದಕ್ಕೆ ಹೇಳು.." ಎಂದೂ ಸೇರಿಸಿದಳು.
ಮೂಕಾಂಬಿಕೆ,ಸುಮಾರು ಇಪ್ಪತ್ತಾರು ವರ್ಷದ ಹೆಣ್ಣುಮಗಳು.ಎಣ್ಣೆಗಪ್ಪು ಮೈಬಣ್ಣ,ಆಕರ್ಷಕವಾದ ಕಣ್ಣುಗಳು,ತುಂಬಿಕೊಂಡ ಕೆನ್ನೆಗಳು ಇವೆಲ್ಲಕ್ಕೂ ಮುಕುಟವೇನೋ ಎಂಬಂತಹ ಆಕೆಯ ಮುಗ್ದವಾದ ಮುಗುಳುನಗೆ.ಇದೆಲ್ಲಕ್ಕಿಂತ ಹೆಚ್ಚಾಗಿ ಫಲವತ್ತಾದ ಆರೋಗ್ಯಕರ ಗರ್ಭ.ಆಕೆಯಲ್ಲಿ ಅದಾಗಲೇ ಹುಟ್ಟಿದ್ದ ಎರಡು ಸಿರಿವಂತರ ಜೀವಗಳು ಗಟ್ಟಿಮುಟ್ಟಾಗಿದ್ದವು.'ಆಲಯ' ದಲ್ಲಿ ಇದ್ದ ಬಾಡಿಗೆ ತಾಯಂದಿರಲ್ಲಿ ಒಬ್ಬಳು.ಮೇಲಾಗಿ ಬಹುಬೇಡಿಕೆಯ ಹಾಗೂ ಸ್ವಲ್ಪ ಹೆಚ್ಚೇ ದುಬಾರಿಯೆಂದೆನಿಸುವ ತಾಯಿ.
ಮೂರು ವರ್ಷಕ್ಕೆ ಒಂದು ಮಗುವನ್ನು ಹೆರುತ್ತಿದ್ದಳು ಮೂಕಾಂಬಿಕೆ.ಸದಾ ಅಂತರ್ಮುಖಿ.ಯಾರೊಡನೆಯೂ ಹೆಚ್ಚು ಮಾತಿಲ್ಲ.ಗರ್ಭ ಧರಿಸಿ ಮೂರು ತಿಂಗಳ ಅನಂತರದ ಒಂದು ವರ್ಷಗಳ ಕಾಲ,ಆಕೆಗೆ ರಾಜಾತಿಥ್ಯ.ಹುಟ್ಟುವ ಮಗು ಆರೋಗ್ಯವಾಗಿರಬೇಕು ಎಂಬ ಉದ್ದೇಶದಿಂದ ಆಕೆಗೆ ಬಸಿರಿನ ಕಾಲದಲ್ಲಿ ಹಣ್ಣು ಹಂಪಲನ್ನು ಯಥೇಚ್ಛವಾಗಿ ಕೊಡುತ್ತಿದ್ದರು.ಮಗುವಿನ ಜನನದ ನಂತರ ಮತ್ತದೇ ರೀತಿಯ ಉಪಚಾರ.ಆದರೆ ಈ ಬಾರಿ ಮೊಲೆಯಲ್ಲಿ ಯಥೇಚ್ಛವಾಗಿ ಹಾಲು ದೊರೆಯಬೇಕೆಂಬ ಉದ್ದೇಶದಿಂದ.ಎರಡೂ ಹಂತದಲ್ಲಿ ಪ್ರಧಾನವಾದದ್ದು ಆಕೆಯ ಗರ್ಭವೇ ಹೊರತು ಆಕೆಯಲ್ಲ.ಮಿಥುನದ ಸುಖವೇ ಇಲ್ಲದೆ ತಾಯ್ತನದ ತಿಳಿಯಾದ ಆನಂದವನ್ನು ಅನುಭವಿಸುತ್ತಿದ್ದಳು ಮೂಕಾಂಬಿಕೆ.ಸುಮಾರು ಎಂಟು ತಿಂಗಳು ತನ್ನ ರಕ್ತವನ್ನು ಹಾಲಾಗಿ ಬಸಿದು ಎಳೆ ಕಂದಮ್ಮಗಳ ಹೊಟ್ಟೆ ತುಂಬಿಸಿ,ಒಂಬತ್ತನೆ ತಿಂಗಳು ಆ ಎಳೆ ಜೀವವನ್ನು ಅದರ ನಿಜವಾದ ವಾರಸುದಾರರಿಗೆ ಕೊಡುವಾಗ,ಆಕೆಯ ಕರುಳು ಕಿತ್ತು ಬರುತ್ತಿತ್ತು.ಆದರೆ ಅದು ತನ್ನ ಕರ್ತವ್ಯ ಎಂದುಕೊಂಡು ಆಕೆ ಒಬ್ಬಳೆ ಮರುಗಿ ಸುಮ್ಮನಾಗುತ್ತಿದ್ದಳು.
'ಆಲಯ'ದಲ್ಲಿ ಬಾಡಿಗೆ ತಾಯಿಯಾಗಿದ್ದವರು ಒಮ್ಮೆ ಮಗುವನ್ನು ಹೆತ್ತು ಕೊಟ್ಟ ಮೇಲೆ ಮತ್ತೆ ಆ ಮಗುವಿನ ಮುಖ ನೋಡಬಾರದೆಂಬ ಷರತ್ತನ್ನು ಹೊಂದಿದ ಲಿಖಿತ ಅಗ್ರಿಮೆಂಟೊಂದನ್ನು ಸಹಿ ಮಾಡಬೇಕಿತ್ತು.ಅದರಲ್ಲಿ ಇನ್ನು ಎಷ್ಟೋ ಷರತ್ತುಗಳು ಇದ್ದವಂತೆ,ಆದರೆ ಮೂಕಾಂಬಿಕೆಗೆ ಇಷ್ಟು ಮಾತ್ರ ಹೇಳಲಾಗಿತ್ತು.ಓದು-ಬರಹ ಬರದ ಆಕೆ,ತನ್ನ ಬೆರಳಚ್ಚನ್ನು ಅಂತಹ ಕಾಗದಗಳಿಗೆ ಸಹಿಯ ರೂಪದಲ್ಲಿ ನೀಡುತ್ತಿದ್ದಳು.
ಹೆರಿಗೆಯ ನೋವನ್ನು ಅನುಭವಿಸುವ ಧೈರ್ಯವಿಲ್ಲದೆಯೋ,ಅಥವಾ ಮಗು ಹೆರಲು ಸಮಯವಿಲ್ಲದೆಯೋ ಏನೋ,ತಮ್ಮ ಮಗುವನ್ನು ಬೇರೆಯವರ ಗರ್ಭದಲ್ಲಿ ಬೆಳೆಸುವ ಸಿರಿವಂತರ ಪಾಲಿನ ತಾಯಿ ಮೂಕಾಂಬೆ.ಆಕೆಗೆ ತನ್ನ ತಂದೆ-ತಾಯಿಯರು ಮೂಕಾಂಬೆ ಎಂಬ ಹೆಸರನ್ನು ಯಾಕಾಗಿ ಇಟ್ಟರೋ ಗೊತ್ತಿಲ್ಲ.ಆದರೆ ಆಕೆಗೆ ಮಾತ್ರ ಆ ಹೆಸರು ಅನ್ವರ್ಥವೇನೋ ಎಂಬಂತೆ ಇತ್ತು.ಯಾರೊಡನೆಯು ಹೆಚ್ಚು ಮಾತಿಲ್ಲ.ಎಲ್ಲಿಯೂ ತನ್ನ ಭಾವನೆಗಳನ್ನು ವ್ಯಕ್ತಪಡಿಸುತ್ತಿರಲಿಲ್ಲ.ಪ್ರತಿ ಬಾರಿ ಬಸುರಿಯಾದಾಗಲೂ,ಅದು ತನ್ನದೇ ಮಗು ಎಂಬಂತಹ ಅವ್ಯಕ್ತ ಭಾವ.ಕೋಗಿಲೆಯು ತನ್ನ ಮರಿಯನ್ನು ಪೋಷಿಸುವ ಮನಸ್ಸಿಲ್ಲದೆ ಅದನ್ನು ಕಾಗೆಯ ಗೂಡಿನಲ್ಲಿ ಇಡುವುದಂತೆ.ಇದನ್ನು ಅರಿಯದ ಕಾಗೆ ಅದು ತನ್ನದೆ ಮೊಟ್ಟೆ ಎಂದು ಅರಿತು ಕಾವು ಕೊಟ್ಟು ಮರಿ ಮಾಡುವುದಂತೆ,ಅದೇ ರೀತಿ ಮೂಕಾಂಬಿಕೆಯ ಪರಿಸ್ಥಿತಿಯೂ ಕೂಡ.ಆದರೆ ಈಕೆಗೆ ಅದು ತನ್ನ ಮಗುವಲ್ಲ ಎಂಬ ಅರಿವು ಸ್ಪಷ್ಟವಾಗಿತ್ತು.
***************************************
ತಾನು ದುಡಿದ ದುಡ್ಡನ್ನೆಲ್ಲ ಸಾರಾಯಿ ಅಂಗಡಿಗೆ ಹಾಕಿ ಕುಡಿದು ಬರುತ್ತಿದ್ದ ಮೂಕಾಂಬಿಕೆಯ ತಂದೆ ಬೀರಣ್ಣ.ಕುಡಿದ ಮತ್ತಿನಲ್ಲಿ ತನ್ನ ಹೆಂಡತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ,ಹೆಣ್ಣು ಹೆತ್ತಿದ್ದಕ್ಕಾಗಿ ಹೊಡೆಯುತ್ತಿದ್ದ.ಆಕೆಯ ತಾಯಿ ದ್ಯಾಮವ್ವ ಪೆಟ್ಟನ್ನು ಸಹಿಸಿಕ್ಕೊಳ್ಳುವಷ್ಟು ಸಹಿಸಿಕೊಂಡು ಆಮೇಲೆ ಮೂಲೆಯಲ್ಲಿದ್ದ ಪೊರಕೆಯನ್ನು ತೆಗೆದುಕೊಂಡು ಬಾಸುಂಡೆ ಬರುವಂತೆ ಗಂಡನಿಗೆ ಬಾರಿಸುತ್ತಿದ್ದಳು."ನಾನೇನು ಸತಿ ಸಾವಿತ್ರಿ ಅಲ್ಲ ತಿಳ್ಕ....ನಂಗೆ ಹೊಡಿತೀಯ ಬೇವರ್ಸಿ...." ಎಂದು ಸಿಕ್ಕಸಿಕ್ಕದ್ದರಲ್ಲಿ ಆತನ ಕುಡಿದ ನಶೆ ಇಳಿಯುವಂತೆ ಹೊಡೆಯುತ್ತಿದ್ದಳು.ಓದು-ಬರಹ ಬಾರದ ತಂದೆ-ತಾಯಿಯರಿಗೆ ಇದ್ದ ಒಬ್ಬ ಮಗಳನ್ನು ಓದಿಸುವ ಮನಸ್ಸು ಇಲ್ಲ.ಬೇರೆಯವರ ಮನೆಯ ಮುಸುರೆ ತಿಕ್ಕುವ ಹುಡುಗಿಯನ್ನು ಶಾಲೆಗೆ ಕಳುಹಿಸುವುದು ಹಾದರ ಮಾಡಿದಂತೆ ಎಂದು ನಂಬುತ್ತಿದ್ದವರು ದ್ಯಾಮವ್ವ ಹಾಗೂ ಬೀರಣ್ಣ.
ಅದೊಂದು ದಿನ ಕೂಲಿ ಕೆಲಸದಿಂದ ಬಂದ ತಾಯಿ-ಮಗಳು ನೋಡಿದಾಗ,ಬೀರಣ್ಣ ರಕ್ತ ಕಾರಿಕೊಂಡು ಸತ್ತು ಬಿದ್ದಿದ್ದ.ಅದೆಲ್ಲಿಯ ಕಳ್ಳಭಟ್ಟಿಯನ್ನು ಕುಡಿದು ಬಿದ್ದಿದ್ದನೋ ಗೊತ್ತಿಲ್ಲ.ಇದ್ದೊಂದು ಪೀಡೆ ತೊಲಗಿತು ಎಂಬ ಭಾವ ದ್ಯಾಮವ್ವನಿಗೆ.ಅಪ್ಪನನ್ನು ಅಷ್ಟಾಗಿ ಹಚ್ಚಿಕ್ಕೊಳ್ಳದ ಮೂಕಾಂಬೆಗೂ ಏನೂ ಅನಿಸಲಿಲ್ಲ.ಕಾಲಕ್ರಮೇಣ ದ್ಯಾಮವ್ವ ಆ ಊರ ಜಮೀನ್ದಾರನಿಗೆ ಸುಖ ಕೊಡುವ ಸರಕಾದಳು.ಆತ ಕೊಡುತ್ತಿದ್ದ ಅಷ್ಟಿಷ್ಟು ಕಾಸಿನಲ್ಲಿ ತಾಯಿ ಮಗಳು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದರು.ಆದರೆ ಜಮೀನ್ದಾರ ಒಂದು ದಿನ ಮೂಕಾಂಬೆಯ ಮೇಲೂ ಕಣ್ಣು ಹಾಕಿದ್ದ.ಈ ವಿಷಯ ದ್ಯಾಮವ್ವನಿಗೆ ತಿಳಿದಿದ್ದರು ಆಕೆಯದು ಜಾಣ ಕುರುಡುತನ.ತನ್ನ ತಾಯಿಯ ಹಾದಿ ಹಿಡಿಯಲು ಬಯಸದ ಮೂಕಾಂಬೆ,ರಾತ್ರೋರಾತ್ರಿ ಊರು ಬಿಟ್ಟು ಬಂದಿದ್ದಳು.ಹಾಗೆ ಊರು ಬಿಟ್ಟು ಬಂದ ಮೂಕಾಂಬೆಗೆ ಸೂರಾಗಿದ್ದು 'ಆಲಯ'.
  *******************************************
'ಮೂಕವ್ವ.....",ಎಂದು ಬಾಣಂತನದ ಆರೈಕೆಯಲ್ಲಿದ್ದ ಹುಡುಗಿಯೊಬ್ಬಳು ಕರೆದಾಗ,ಪಕ್ಕದ ಕೋಣೆಯಿಂದ ಮೂಕಾಂಬೆ ಓಡಿ ಬಂದಳು.ಸುಮಾರು ಎಂಟು ಮಕ್ಕಳನ್ನು ಹೆತ್ತ ಮೂಕಾಂಬಿಕೆ ಈಗ ಬಾಡಿಗೆ ತಾಯಿಯ ಹುದ್ದೆಯಿಂದ ನಿವೃತ್ತಿ ಪಡೆದ್ದಿದ್ದಾಳೆ.ನಿವೃತ್ತಿ ಪಡಿದ್ದಿದ್ದಾಳೆ ಅನ್ನುವುದಕ್ಕಿಂತ,ಆಕೆಯನ್ನು ಆ ಹುದ್ದೆಯಿಂದ ಮೊಟಕುಗೊಳಿಸಿದ್ದಾರೆ.ಇದೀಗ ಆಕೆ ಬಾಡಿಗೆ ತಾಯಂದಿರನ್ನು ನೋಡಿಕೊಳ್ಳುವ ಹಿರಿಯ ಸೇವಕಿ.ವಯಸ್ಸು ನಲವತ್ತೈದರ ಸಮೀಪವಿರಬಹುದು.ಆದರೂ ಆಕೆಯ ಮುಖ ನೋಡಿದರೆ ವಯಸ್ಸಿಗಿಂತ ಹತ್ತು ವರ್ಷ ದೊಡ್ಡವಳಂತೆ ಕಾಣುತ್ತಿದ್ದಳು.ಎರಡು ಬಾಡಿಗೆ ತಾಯಂದಿರ ಜವಬ್ದಾರಿ ಹೊತ್ತ ಮೂಕವ್ವನಿಗೆ 'ಆಲಯ'ದಲ್ಲಿ ಜಾಗವಿಲ್ಲ.ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರರವರೆಗೆ ಕೆಲಸ.ಆ ನಂತರ ಒಂದೆರಡು ಮೈಲಿ ನೆಡೆದು ಹೋಗಿ ತನ್ನ ಬಾಡಿಗೆ ಕೋಣೆ ಸೇರುತ್ತಿದ್ದಳು.ವಾರದಲ್ಲಿ ಒಂದು ದಿನ ರಜೆ.
ಮೂಕಾಂಬಿಕೆಗೆ ಇತ್ತೀಚೆಗೆ ಮನಸ್ಸಿನಲ್ಲಿ ಅದೇನೋ ತಲ್ಲಣ.ಒಂದು ರೀತಿಯ ವ್ಯಾಕುಲತೆ ಆಕೆಯ ಮನಸ್ಸನ್ನು ಆವರಿಸಿತ್ತು.ಆಕೆಯ ಬದುಕಿನಲ್ಲಿ ಎಲ್ಲೂ ಆಕೆಯ ಭಾವನೆಗಳಿಗೆ ಬೆಲೆ ಇರಲಿಲ್ಲ,ಆಸೆಗಳಿಗೆ ಪುರಸ್ಕಾರವಿರಲಿಲ್ಲ.ಸುಪ್ತ ಮನಸ್ಸಿನಲ್ಲಿ ಅಡಗಿದ್ದ ನಿರ್ದಯಿ ಭಾವಗಳು ಇದೀಗ ಪ್ರಕಟಗೊಂಡು ಅವಳನ್ನು ಹಿಂಡುತ್ತಿದ್ದವು.ಆಕೆಗೆ ಆಕೆಯ ಬದುಕಿನ ರೀತಿಯ ಬಗೆಗೆ ಸಂಶಯ.ತಾಯ್ತನವನ್ನು ಪೂರ್ಣವಾಗಿ ಅನುಭವಿಸಬೇಕೆನ್ನುವ ಹಂಬಲ ಬಹಳವಾಗಿ ಕಾಡುತ್ತಿದೆ.ದಾರಿಯಲ್ಲಿ ಹೋಗುವ ಯುವಕ-ಯುವತಿಯರನ್ನು ನೋಡುತ್ತಾ ತನ್ನ ಹೊಟ್ಟೆಯಲ್ಲಿ ಹುಟ್ಟಿದವುಗಳು ಇಷ್ಟೇ ದೊಡ್ಡವರಾಗಿರಬಹುದು ಎಂದೆನಿಸುತ್ತಿತ್ತು.ತಾನು ಎಂಟು ಮಕ್ಕಳನ್ನು ಹೆತ್ತರೂ ಆ ಮಕ್ಕಳ ಬಾಲ್ಯವನ್ನು ತಾನು ಕಾಣಲಿಲ್ಲವಲ್ಲ ಎಂಬ ಯಾತನೆ.ಅದೇಕೆ ತನಗೆ ಈ ವಯಸ್ಸಿನಲ್ಲಿ ಈ ರೀತಿಯ ಚಿಂತೆಗಳು ಕಾಡುತ್ತಿವೆ ಎಂಬುದು ಸ್ವತಃ ಆಕೆಗೆ ತಿಳಿದಿಲ್ಲ.ಒಂದೊಮ್ಮೆಯಂತೂ ತಾನು ವ್ಯಭಿಚಾರ ಮಾಡಿಬಿಟ್ಟೆನೇನೋ ಎಂದೆನಿಸಿ "ಥೂ...." ಎಂದು ತನ್ನ ಬಗ್ಗೆ ತಾನೇ ಅಸಹ್ಯ ಪಡುತ್ತಿದ್ದಳು.ತನಗೂ ಒಂದು ಒಳ್ಳೆಯ ಕುಟುಂಬವಿದ್ದರೆ ಬಹುಶಃ ತಾನು ನಾಲ್ಕರು ಮಕ್ಕಳನ್ನು ಹೆತ್ತು ಮರ್ಯಾದೆಯ ಜೀವನ ಬದುಕಬಹುದಿತ್ತು.ಈ ರೀತಿಯ ಗರ್ಭವನ್ನು ಮಾರಿ ಬದುಕಿದ್ದು ಹೇಸಿಗೆ ಎನಿಸುತ್ತಿತ್ತು.ಆದರೆ ಮರುಕ್ಷಣದಲ್ಲಿಯೇ ತನ್ನ ಹೊಟ್ಟೆಯನ್ನು ಮುಟ್ಟಿಕೊಂಡು,ತಾನೊಬ್ಬ ಪವಿತ್ರವಾದ ತಾಯಿ ಎಂದೆನಿಸಿ ಮನಸ್ಸು ಸಂತೋಷಿಸುತ್ತಿತ್ತು.ಮುದ್ದು ಮುಖದ ಎಳೆಯ ಕಂದಮ್ಮಗಳು ಈಕೆಯ ಮೊಲೆಯ ಹಾಲನ್ನು ತೃಪ್ತಿಯಾಗುವಷ್ಟು ಉಂಡು ಕಣ್ಣು ಮುಚ್ಚಿ ಸುಖ ನಿದ್ರೆ ಮಾಡುತ್ತಿದ್ದ ಆ ನೆನಪುಗಳು ಜಾಗೃತವಾದಾಗ ಮೂಕಾಂಬೆಯ ಮನಸ್ಸು ಪ್ರಪುಲ್ಲವಾಗುತ್ತಿತ್ತು.ತಾನೊಂದು ಆನಾಥಶ್ರಮವನ್ನು ಸೇರಿ,ಅಲ್ಲಿರುವ ಎಳೆಯ ಕಂದಮ್ಮಗಳ ಬಾಲ್ಯವನ್ನು ಕಂಡು ಸಂಪೂರ್ಣ ಮಾತೃತ್ವವನ್ನು ಪಡೆಯುವ ಅದಾಗಲೇ ಚಿಗುರೊಡೆದ ಆಲೋಚನೆ ಇದೀಗ ಹೆಮ್ಮರವಾಗಿತ್ತು.ತಡ ಮಾಡದೇ 'ಆಲಯ'ಕ್ಕೆ ತಾನು ಬರುವುದಿಲ್ಲವೆಂಬ ತನ್ನ ನಿರ್ಧಾರವನ್ನು ಹೇಳಿದ್ದಳು.
ಸಂಜೆ ಆರರ ಸುಮಾರಿಗೆ,'ಆಲಯ' ದಲ್ಲಿಯ ತನ್ನ ಕಡೆಯ ದಿನವನ್ನು ಮುಗಿಸಿ ತನ್ನ ಪುಟ್ಟ ಮನೆಯತ್ತ ಹೆಜ್ಜೆ ಹಾಕಿದಳು.ಮನಸ್ಸು ತಿಳಿಯಾಗಿತ್ತು.ಮನೆಗೆ ಬಂದವಳೇ ಎಂದಿನಂತೆ ಕೈಕಾಲು ಮುಖ ತೊಳೆದು ದೇವರಿಗೆ ದೀಪ ಹಚ್ಚಿದಳು.ದೇವಿಯ ಮುಖವನ್ನೊಮ್ಮೆ ನೋಡಿದಾಗ ಆ ಪೋಟೋದಲ್ಲಿದ್ದ ಗಾಜಿನಲ್ಲಿ ತನ್ನದೇ ಮುಖ ಕಂಡಾಗ ಮೂಕಾಂಬಿಕೆ ಬೆಚ್ಚಿಬಿದ್ದಳು.ಮರುಕ್ಷಣದಲ್ಲಿಯೇ ತಾನೇ ಜಗವನ್ನು ಸಲಹುವ ಜಗನ್ಮಾತೆಯ ಸ್ವರೂಪ.ಮಾತೃತ್ವದ ಸ್ವರೂಪ.ತನ್ನದಲ್ಲದ ಮಗುವನ್ನು ತನ್ನ ಗರ್ಭದಲ್ಲಿ ರಕ್ಷಿಸಿದ್ದ ತಾನೊಂದು ಶಕ್ತಿ ಸ್ವರೂಪ ಎಂದೆನಿಸಿತು ಆಕೆಗೆ.ಮನದೊಳಗೆ ಹುದುಗಿದ್ದ ಭಾವಗಳು ಇದೀಗ ಸ್ಪಷ್ಟವಾಗಿತ್ತು.ತನ್ನ ಆನಾಥ ಮಕ್ಕಳ ಪಾಲನೆಯ ನಿರ್ಧಾರ ಆಕೆಗೆ ಹೆಮ್ಮೆ ಎಂದೆನಿಸಿತು.ಮರುದಿನವೇ ಯಾವುದಾದರೂ ಆನಾಥಾಶ್ರಮವನ್ನು ಸೇರಿ ತಾಯಿಯ ಪ್ರೀತಿ ಕಾಣದ ಮುದ್ದು ಮಕ್ಕಳಿಗೆ ತಾಯಿಯಾಗಬೇಕು.ಆಕೆಯ ಮನಸ್ಸಿನಲ್ಲಿ ಎದ್ದಿದ್ದ ಬಿರುಗಾಳಿ,ತಂಗಾಳಿಯಾಗಿ ಪರಿವರ್ತನೆಯಾಗಿದೆ. "ದ್ಯಾವಿ...." ಎಂದು ತನ್ನ ಹೊಟ್ಟೆಯನ್ನೊಮ್ಮೆ ಹಿಡಿದುಕೊಂಡಳು.ವಿಪರೀತ ನೋವು.ಸುಮಾರು ದಿನಗಳಿಂದ ಇಂತಹ ನೋವು ಆಕೆಯನ್ನು ಪದೇ ಪದೇ ಬಾಧಿಸುತ್ತಿತ್ತು.ಆದರೂ ಆಕೆ ಅದರೆಡಗೆ ಗಮನ ಕೊಡದೇ ಅದು ಯವುದೋ ನೋವುನಿವಾರಕ ಗುಳಿಗೆ ನುಂಗುತ್ತಿದ್ದಳು.ಆದರೆ ಈ ಬಾರಿ ವಿಪರೀತ ನೋವು.ತಾನು ಹೆತ್ತ ಎಂಟು ಮಕ್ಕಳಲ್ಲಿ ಯಾವ ಮಕ್ಕಳೂ ಹೊರಗೆ ಬರುವಾಗ ಇಂತಹ ನೋವುಂಡ ನೆನಪಿಲ್ಲ ಅಥವಾ ಅದನೊಂದು ಸುಖ ಎಂದುಕೊಂಡ ಆಕೆಗೆ ಆ ನೋವು ನಾಟಿರಲಿಲ್ಲ.ಆದರೆ ಇದು ಅಸಾಧ್ಯವಾದ ನೋವು."ಅಯ್ಯೋ........" ಎಂದು ಚೀರಿಕೊಂಡು ನೆಲದ ಮೇಲೆ ಕುಸಿದಳು.
ದೇವರ ಮುಂದೆ ಹಚ್ಚಿದ ದೀಪ ನಂದಿ ಹೋಯಿತು.ತಾನೊಂದು ಪರಿಪೂರ್ಣ ತಾಯಾಗಬೇಕು ಎಂದಿದ್ದ ಮೂಕಾಂಬಿಕೆಯ ಆಸೆ ಮೂಕಾವಾಗಿಯೆ ಆಕೆಯೊಡನೆ ಸಮಾಧಿಯಾಗಿತ್ತು

No comments:

Post a Comment